ಸಂಸ್ಕೃತದಲ್ಲಿ ಗುರು ಎಂಬ ಪದದ ಅರ್ಥ ‘ಕತ್ತಲೆಯನ್ನು ದೂರ ಮಾಡುವುದು’. ಭಾರತೀಯ ಸಂಸ್ಕೃತಿ ಯಾವಾಗಲೂ ಗುರುಗಳನ್ನು ಗೌರವಿಸಿದೆ. ಗುರು ನಿಮಗೆ ಕಲಿಸುತ್ತಾರೆ, ಜ್ಞಾನೋದಯ ನೀಡುತ್ತಾರೆ ಮತ್ತು ಬೆಳಕಿನೆಡೆ ನಿಮ್ಮನ್ನು ನಡೆಸುತ್ತಾರೆ. ನಿಮಗೆ ಜ್ಞಾನದ ಬೆಳಕನ್ನು ನೀಡುವ ಮೂಲಕ ನಿಮ್ಮನ್ನು ದೇವರಿಗೆ ಇನ್ನಷ್ಟು ಹತ್ತಿರ ಆಗುವಂತೆ ಮಾಡುತ್ತಾರೆ. ಆಷಾಢ ತಿಂಗಳಲ್ಲಿ ಹುಣ್ಣಿಮೆಯ ದಿನದಂದು ಆಚರಿಸಲಾಗುವ ಗುರು ಪೂರ್ಣಿಮಾ ತಿಥಿ ಜುಲೈ 23 ರ ಬೆಳಿಗ್ಗೆ 10:43 ಕ್ಕೆ ಪ್ರಾರಂಭವಾಗಿ, ಜುಲೈ 24 ರ ಬೆಳಿಗ್ಗೆ 08:06 ಕ್ಕೆ ಕೊನೆಗೊಳ್ಳುತ್ತದೆ.
ಗುರು ಪೂರ್ಣಿಮೆಯ ಮಹತ್ವ
ಗುರುರ್ ಬ್ರಹ್ಮ
ಗುರುರ್ ವಿಷ್ಣು
ಗುರುರ್ ದೇವೋ ಮಹೇಶ್ವರಃ
ಗುರುರ್ ಸಾಕ್ಷಾತ್ ಪರಬ್ರಹ್ಮ
ತಸ್ಮೈ ಶ್ರೀ ಗುರುವೇ ನಮಹಃ
ಎಂಬ ಶ್ಲೋಕ ಹೇಳುವ ಮೂಲಕ ಗುರುವನ್ನು ಸ್ತುತಿಸುವ ಸಂಪ್ರದಾಯ ಅನಾದಿ ಕಾಲದಿಂದಲೂ ನಡೆದು ಬರುತ್ತಿದೆ.
ಅದರ ಅರ್ಥ:
ಗುರುವು ನಮ್ಮೊಳಗೆ ಜ್ಞಾನವನ್ನು ಹುಟ್ಟಿಸುವ ಬ್ರಹ್ಮನಂತೆ, ನಮ್ಮ ಮನಸ್ಸಿನ ಜ್ಞಾನವನ್ನು ಸರಿಯಾದ ದಾರಿಗೆ ಕೊಂಡೊಯ್ಯುವ ವಿಷ್ಣುವಿನಂತೆ, ನಮ್ಮ ಜ್ಞಾನಕ್ಕೆ ಅಂಟಿಕೊಂಡಿರುವ ತಪ್ಪು ಪರಿಕಲ್ಪನೆಗಳನ್ನು ನಾಶಪಡಿಸುವ ಶಿವನಂತೆ. ಹಾಗಾಗಿ ಗುರುವು ನಮಗೆ ಪರಮ ದೈವದಂತೆ ನಾವು ನಮ್ಮ ಗುರುವನ್ನು ಪೂಜಿನಬೇಕು ಮತ್ತು ಅವರಿಗೆ ಗೌರವ ನೀಡಬೇಕು.
ಗುರು ಪೂರ್ಣಿಮೆಯನ್ನು ಏಕೆ ಆಚರಿಸುತ್ತಾರೆ?
ಗುರು ಪೂರ್ಣಿಮೆಯನ್ನು , ಮಹಾ ಗುರು ಕೃಷ್ಣ ದ್ವೈಪಾಯನ ವೇದ ವ್ಯಾಸರ ಸ್ಮರಣೆ ಮತ್ತು ಗೌರವಾರ್ಥ ಆಚರಿಲಾಗುತ್ತದೆ. ಅವರ ಕೆಲಸಗಳು ಸದಾ ಅಜ್ಞಾನವನ್ನು ದೂರ ಮಾಡಿರುವುದರಿಂದ, ಹಿಂದೂಗಳು ಅವರಿಗೆ ಸದಾ ಋಣಿಗಳಾಗಿದ್ದಾರೆ. ಅವರು ನಾಲ್ಕು ವೇದಗಳ ಸಂಸ್ಥಾಪಕರು ಮಾತ್ರವಲ್ಲ, ಮಹಾಭಾರತ, ಶ್ರೀಮದ್ಭಾಗವತ ಮತ್ತು 18 ಪುರಾಣಗಳನ್ನು ರಚಿಸಿದ ಮಹಾನ್ ಗುರು ಕೂಡ. ವೇದವ್ಯಾಸರು , ಗುರುಗಳ ಗುರುವೆಂಬ ಗೌರವಕ್ಕೆ ಪಾತ್ರರಾಗಿರುವ ದತ್ತಾತ್ರೇಯರ ಗುರು ಕೂಡ.
ಹಿಂದೂಗಳು ಈ ದಿನವನ್ನು ಶಿವನಿಗೂ ಅರ್ಪಿಸುತ್ತಾರೆ. ವೇದ ಮತ್ತು ಪುರಾಣಗಳ ಜ್ಞಾನವನ್ನು ಸಪ್ತ ಋಷಿಗಳಿಗೆ ನೀಡಿದರು. ಹಾಗಾಗಿ ಭಗವಾನ್ ಶಿವನನ್ನು ಆದಿ ಗುರು , ಅಂದರೆ ಪ್ರಥಮ ಗುರು ಎಂದು ಕೂಡ ಕರೆಯುತ್ತಾರೆ.
ಬೌದ್ಧ ಧರ್ಮದಲ್ಲಿ , ಬುದ್ಧ ಭಗವಾನ್ ಸಾರನಾಥದಲ್ಲಿ ಪ್ರಪ್ರಥಮ ಬೋಧನೆ ನೀಡಿದ ದಿನವೆಂದು ಪರಿಗಣಿಸಲಾಗುತ್ತದೆ.
ಜೈನ ಧರ್ಮದಲ್ಲಿ ಗುರು ಪೂರ್ಣಿಮೆಯನ್ನು, ಭಗವಾನ್ ಮಹಾವೀರ ಅವರು ಗೌತಮ ಸ್ವಾಮಿಯನ್ನು ತಮ್ಮ ಪ್ರಥಮ ಶಿಷ್ಯನನ್ನಾಗಿ ಸ್ವೀಕರಿಸಿದ ದಿನವೆಂದು ಆಚರಿಸಲಾಗುತ್ತದೆ.
ರೈತರು ಮತ್ತು ತೋಟಗಾರರಿಗೆ ಈ ದಿನವು ಅತ್ಯಂತ ಪವಿತ್ರ. ಏಕೆಂದರೆ ಈ ದಿನವನ್ನು ಮಳೆಯ ಆಗಮನದ ದಿನವೆಂದು ಪರಿಗಣಿಸಲಾಗುತ್ತದೆ.
ಗುರು ಪೂರ್ಣಿಮೆಯ ದಿನ, ಸಮಯ ಮತ್ತು ಮಹೂರ್ತ
ಆಷಾಢ ತಿಂಗಳಿನ ಹುಣ್ಣಿಮೆಯನ್ನು ಗುರು ಪೂರ್ಣಿಮೆ ಎನ್ನಲಾಗುತ್ತದೆ. ಈ ವರ್ಷ ಅದು ಜುಲೈ 24ರಂದು ಆಚರಿಸಲ್ಪಡುತ್ತದೆ. ಪೂರ್ಣಿಮೆಯ ತಿಥಿ, ಜುಲೈ 23 ರಂದು ಬೆಳಗ್ಗೆ 10.43ಕ್ಕೆ ಆರಂಭವಾಗಿ ಜುಲೈ 24ರ ಬೆಳಗ್ಗೆ 8.06ಕ್ಕೆ ಕೊನೆಗೊಳ್ಳುತ್ತದೆ.
ಗುರು ಪೂರ್ಣಿಮೆಯ ಆಚರಣೆ ಹೇಗೆ?
ಆಯಾ ಪಂಗಡದವರು ತಮ್ಮದೇ ಆದ ರೀತಿಯಲ್ಲಿ ಗುರು ಪೂರ್ಣಿಮೆಯನ್ನು ಆಚರಿಸುತ್ತಾರೆ. ಆಧ್ಯಾತ್ಮದ ಆಕಾಂಕ್ಷಿಗಳು ವೇದ ವ್ಯಾಸರ ಪೂಜೆಯನ್ನು ಇಟ್ಟುಕೊಳ್ಳುತ್ತಾರೆ. ಗುರು ಪೂರ್ಣಿಮೆ ಚಾತುರ್ಮಾಸದ ಆರಂಭವನ್ನು ಸೂಚಿಸುತ್ತದೆ. ಹಿಂದೂ, ಬೌದ್ಧ ಮತ್ತು ಜೈನ ಧರ್ಮದವರು, ಬ್ರಹ್ಮ ಮುಹೂರ್ತದಲ್ಲಿ (ಬೆಳಗ್ಗಿನ ಜಾವ 4 ಗಂಟೆಗೆ) ಎದ್ದು ಗುರು ಪೂರ್ಣಿಮೆ ಆಚರಿಸುತ್ತಾರೆ. ಅವು ತಮ್ಮ ಗುರುವಿನ ಮಂತ್ರಗಳನ್ನು ಪಠಿಸುತ್ತಾರೆ ಮತ್ತು ಧ್ಯಾನ ಮಾಡುತ್ತಾರೆ. ಬಳಿಕ ಅವರು ಗುರುಗಳ ಪಾದ ಪೂಜೆ ಮಾಡುತ್ತಾರೆ.
ಈ ದಿನ ಸಾಧು ಸಂತರನ್ನು ಪೂಜಿಸಲಾಗುತ್ತದೆ ಮತ್ತು ಮಧ್ಯಾಹ್ನದ ಭೋಜನವನ್ನು ನೀಡಲಾಗುತ್ತದೆ. ದಿನವಿಡೀ ಸತ್ಸಂಗ ಇರುತ್ತದೆ. ಸನ್ಯಾಸ ತೆಗೆದುಕೊಳ್ಳಬಯಸುವವರು ಈ ದಿನವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಈ ದಿನ ಕೆಲವರು ತಮ್ಮ ಆಧ್ಯಾತ್ಮಿಕ ಜ್ಞಾನ ಮತ್ತು ಗುರಿಗಳನ್ನು ಮುಂದುವರೆಸಲು ಹೊಸ ನಿರ್ಣಯಗಳನ್ನು ಮತ್ತು ಕೆಲವರು ಉಪವಾಸ ಮಾಡಬಹುದು. ಕೆಲವರು ಮೌನ ವೃತ ಆಚರಿಸಿ, ಇಡೀ ದಿನವನ್ನು ಅಧ್ಯಾತ್ಮಿಕ ಮತ್ತು ಧಾರ್ಮಿಕ ಪುಸ್ತಕಗಳ ಅಧ್ಯಯನದಲ್ಲಿ ಕಳೆಯುತ್ತಾರೆ.
ತಮ್ಮ ಗುರುಗಳಿಗೆ ಧನ್ಯವಾದ ಹೇಳಿ , ಅವರ ಆಶೀರ್ವಾದ ಪಡೆಯುವ ಪುಣ್ಯ ದಿನವಿದು. ಈ ದಿನ ಯೋಗ, ಸಾಧನೆ ಮತ್ತು ಧ್ಯಾನದ ಅಭ್ಯಾಸಕ್ಕೂ ಸೂಕ್ತವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ