ಕೆಲವೊಮ್ಮೆ ಚಿತ್ರ ವಿಚಿತ್ರ ಜನರು ನಮಗೆ ನೋಡೋಕೆ ಸಿಗ್ತಾರೆ. ಅವರ ವರ್ತನೆಯಿಂದ ಇವರೆಂಥಾ ನಾಗರೀಕರಪ್ಪಾ ಅನ್ಸಿಬಿಡುತ್ತೆ. ಹೌದು, ದೊಡ್ಡವರೆನಿಸಿಕೊಂಡರೂ ಸಣ್ಣ ಬುದ್ಧಿ ತೋರುವ ಜನರು ನಮಗೆ ಅಲ್ಲಲ್ಲಿ ಕಾಣಸಿಗ್ತಾರೆ. ಹಾಗೆಯೇ ಇಲ್ಲಿಬ್ಬರು ಹೋಟೆಲ್ (Hotel) ನಲ್ಲಿ ಉಳಿದುಕೊಂಡು ಬರೋಬ್ಬರಿ 19 ಲಕ್ಷ ರೂ ಬಿಲ್ ಮಾಡಿ, ತಮ್ಮ ಕಾರ್ ಅನ್ನು ಹೋಟೆಲ್ ನಲ್ಲೇ ಬಿಟ್ಟು ಕಾಲ್ಕಿತ್ತಿದ್ದಾರೆ. ಇದೀಗ ಅವರ ಕಾರ್ ಅನ್ನು ಹರಾಜು ಮಾಡುವಂತೆ ಹೋಟೆಲ್ ಕೋರ್ಟ್ ಮೆಟ್ಟಿಲೇರಿದೆ. ಪ್ರಕರಣದ ಬಗ್ಗೆ ತಿಳಿಯೋದಾದ್ರೆ, 2018 ರಲ್ಲಿ ಮೇ (May) ತಿಂಗಳಲ್ಲಿ ಚಂಡೀಗಢ ಇಂಡಸ್ಟ್ರಿಯಲ್ ಮತ್ತು ಟೂರಿಸಂ ಡೆವಲಪ್ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ (CITCO) ನಲ್ಲಿ ಅಶ್ವನಿ ಚೋಪ್ರಾ ಹಾಗೂ ರಾಮಿಕ್ ಬನ್ಸಾಲ್ ಎಂಬುವವರು ತಂಗಿದ್ದರು.
ಸಿಟ್ಕೋ ಒಡೆತನದ ಹೋಟೆಲ್ ಶಿವಾಲಿಕ್ ವ್ಯೂ ನಲ್ಲಿ ಒಂದಲ್ಲ, ಎರಡಲ್ಲ, ಹಲವು ತಿಂಗಳುಗಳ ಕಾಲ ಅವರು ಉಳಿದುಕೊಂಡಿದ್ದರು. ಅಲ್ಲಿಯ ವಾಸ್ತವ್ಯ, ಊಟ, ಡ್ರಿಂಕ್ಸ್, ಲಾಂಡ್ರಿ ಹೀಗೆ ಹೋಟೆಲ್ ನೀಡುವ ಎಲ್ಲ ವ್ಯವಸ್ಥೆಗಳನ್ನು ಭರ್ಜರಿಯಾಗಿಯೇ ಉಪಯೋಗಿಸಿಕೊಂಡಿದ್ದರು.
ಅಶ್ವನಿ ಹಾಗೂ ರಾಮಿಕ್ ಹೋಟೆಲ್ ನಲ್ಲಿ ತಿಂಗಳುಗಟ್ಟಲೆ ಉಳಿದುಕೊಂಡಿದ್ದರಿಂದ ಅವರ ಉಪಚಾರಕ್ಕೆ ಬರೋಬ್ಬರಿ 19 ಲಕ್ಷ ರೂ. ಬಿಲ್ ಆಗಿದೆ. ಸಹಜವಾಗಿಯೇ ಹೋಟೆಲ್ ನವರು ಬಿಲ್ ಪಾವತಿಸುವಂತೆ ಇಬ್ಬರನ್ನೂ ಕೇಳಿಕೊಂಡಿದ್ದಾರೆ.
ಆದ್ರೆ ಇಬ್ಬರ ಬಳಿಯೂ ಹಣ ಇಲ್ಲ! ಏನೋ ಪ್ಲಾನ್ ಮಾಡಿ ಇಬ್ಬರೂ ತಲಾ 6 ಲಕ್ಷದ ಮೂರು ಚೆಕ್ ಗಳನ್ನು ಹೋಟೆಲ್ ನವರಿಗೆ ನೀಡಿದ್ದಾರೆ. ಆದ್ರೆ ಅದು ಬ್ಯಾಂಕ್ ನಿಂದ ಅಮಾನ್ಯಗೊಂಡ ಚೆಕ್ ಎಂದು ಹೋಟೆಲ್ ನವರಿಗೆ ಗೊತ್ತಾಗಿದೆ.
ಇದನ್ನೂ ಓದಿ: ಮೂರು ಆನೆಗಳ ಜೀವ ಉಳಿಸಿದ ಚಾಲಕರು! ವಿಡಿಯೋ ವೈರಲ್
ಹೀಗೆ ಚೆಕ್ ನೀಡಿ ತಪ್ಪಿಸಿಕೊಳ್ಳಬೇಕೆಂದುಕೊಂಡಿದ್ದ ಈ ಇಬ್ಬರ ಪ್ಲಾನ್ ಫ್ಲಾಪ್ ಆಗಿದೆ. ಹೀಗಾಗಿ ಹೋಟೆಲ್ ನವರು ಇಬ್ಬರನ್ನೂ ಹಣ ನೀಡುವಂತೆ ಒತ್ತಾಯಿಸಿದ್ದಾರೆ. ಕೊನೆಗೂ ಅಶ್ವನಿ ಹಾಗೂ ರಾಮಿಕ್ ಬನ್ಸಾಲ್ ತಮ್ಮ ಐಷಾರಾಮಿ ಆಡಿ ಕ್ಯೂ 3 ಕಾರ್ ಹಾಗೂ ಷೆವೆರ್ಲೆ ಕ್ರೂಜ್ ಕಾರ್ ಅನ್ನು ಹೋಟೆಲ್ ನವರಿಗೆ ಇಟ್ಟುಕೊಳ್ಳುವಂತೆ ಹೇಳಿದ್ದಾರೆ.
ಕಾರ್ ಕೀ ಗಳನ್ನು ಹಸ್ತಾಂತರಿಸಿ ಸದ್ಯಕ್ಕೆ ಕಾರ್ ಗಳನ್ನು ಇಟ್ಟುಕೊಳ್ಳಿ, ನಂತರ ಬಾಕಿ ಮೊತ್ತವನ್ನು ಪಾವತಿಸೋದಾಗಿ ವಿನಂತಿಸಿದ್ದಾರೆ. ಬಳಿಕ ಅಲ್ಲಿಂದ ಹೊರಟು ಹೋಗಿದ್ದಾರೆ.
ಕೋರ್ಟ್ ಮೊರೆ ಹೋದ ಹೋಟೆಲ್ !
ಇಷ್ಟೆಲ್ಲ ಆಗಿ ನಾಲ್ಕು ವರ್ಷ ಕಳೆದಿದೆ. ಆದ್ರೆ ಈ ಪ್ರಕರಣದಲ್ಲಿ ಹೋಟೆಲ್ ನಲ್ಲಿ ಉಳಿದುಕೊಂಡಿದ್ದ ಅಶ್ವನಿ ಚೋಪ್ರಾ ಹಾಗೂ ರಾಮಿಕ್ ಬನ್ಸಾಲ್ ಎಂಬುವವರು ಹೋಟೆಲ್ ಕಡೆ ತಲೆ ಹಾಕಿಲ್ಲ. ಬಾಕಿ ಮೊತ್ತವನ್ನು ಪಾವತಿಸಿಯೇ ಇಲ್ಲ.
ಹೀಗಾಗಿ ಕಳೆದ ನಾಲ್ಕು ವರ್ಷಗಳಿಂದ ಅವರ ಎರಡೂ ಕಾರುಗಳನ್ನು ಹೋಟೆಲ್ನ ಪಾರ್ಕಿಂಗ್ನಲ್ಲಿಯೇ ನಿಲ್ಲಿಸಲಾಗಿದೆ. ಹೋಟೆಲ್ ಅಧಿಕಾರಿಗಳು ಆಪಾದಿತ ಅತಿಥಿಗಳನ್ನು ಮುಖಾಮುಖಿಯಾಗಿ ಭೇಟಿ ಮಾಡಿ ವಿಷಯವನ್ನು ಇತ್ಯರ್ಥಪಡಿಸಲು ಸಾಕಷ್ಟು ಬಾರಿ ಪ್ರಯತ್ನಿಸಿದರು. ಆದ್ರೆ ಅವರ ಪ್ರಯತ್ನ ವ್ಯರ್ಥವಾಯಿತೇ ಹೊರತು ಕಾರ್ ಬಿಟ್ಟು ಹೋದ ಅತಿಥಿಗಳು ಅವರ ಕೈಗೇ ಸಿಗದೇ ತಪ್ಪಿಸಿಕೊಂಡಿದ್ದಾರೆ.
ಇಷ್ಟೆಲ್ಲ ಆದ ಮೇಲೆ ಇದೀಗ ಹತಾಶೆಗೊಂಡಿರುವ CITCO ಬಾಕಿ ಮೊತ್ತದ ಪಾವತಿ ಬಗ್ಗೆ ಕೋರ್ಟ್ ಮೊರೆ ಹೋಗಿದೆ. ಎರಡೂ ಕಾರುಗಳನ್ನು ಶೀಘ್ರದಲ್ಲೇ ಹರಾಜು ಮಾಡಬೇಕು ಎಂದು ಅದು ಆಗ್ರಹಿಸಿದೆ. ಈ ನಾಲ್ಕು ವರ್ಷಗಳಲ್ಲಿ ಬಡ್ಡಿಯೊಂದಿಗೆ ಬಾಕಿಗಳ ಅಸಲು ಮೊತ್ತವನ್ನು ಮರಳಿ ಕೊಡಿಸುವಂತೆ ವಿನಂತಿಸಿಕೊಂಡಿದೆ.
ಈ ಮಧ್ಯೆ ನ್ಯಾಯಾಲಯವು ಜನವರಿ 7, 2023 ರಂದು ಹರಾಜಿನ ವರದಿ ಭರ್ತಿ ಮಾಡಲು ನಿರ್ಧರಿಸಿದೆ. ಯಾರು ಹೆಚ್ಚು ಬಿಡ್ ಹಾಕುತ್ತಾರೋ ಅವರನ್ನು ಎರಡೂ ಹೈ ಎಂಡ್ ಕಾರುಗಳ ಮಾಲೀಕ ಎಂದು ಘೋಷಿಸಲಾಗುವುದು ಎಂದು ಹರಾಜು ಆದೇಶದಲ್ಲಿ ಹೇಳಲಾಗಿದೆ.
ಒಟ್ಟಾರೆ, ಕೋರ್ಟ್ ಆದೇಶದ ನಂತರವಾದರೂ ನಾಪತ್ತೆಯಾಗಿರುವ ಅತಿಥಿಗಳು ಮರಳಿ ಬರುತ್ತಾರೋ ಅಥವಾ ಹೋಟೆಲ್ ಗೆ ಬಾಕಿ ಮೊತ್ತ ಪಾವತಿಯಾಗುತ್ತದೋ ಅನ್ನೋದನ್ನು ಕಾದು ನೋಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ