Naziha Salim: ವರ್ಣಚಿತ್ರಗಾರ್ತಿ, ಪ್ರಾಧ್ಯಾಪಕಿ, ವಿದ್ಯಾರ್ಥಿ ವೇತನ ಪಡೆದ ಮೊದಲ ಮಹಿಳೆ ನಾಜಿಹಾ ಸಲೀಂಗೆ ಗೂಗಲ್ ಡೂಡಲ್ ವಿಶೇಷ ಗೌರವ

ಇಂದಿನ ಡೂಡಲ್ ಕಲಾಕೃತಿಯು ಸಲೀಂ ಅವರ ಚಿತ್ರಕಲೆ ಶೈಲಿಗೆ ಒಂದು ಗೌರವವಾಗಿದ್ದು ಮತ್ತು ಕಲಾ ಜಗತ್ತಿಗೆ ಅವರು ನೀಡಿದ ಕೊಡುಗೆಗಳ ಆಚರಣೆಯಾಗಿದೆ.

ನಾಜಿಹಾ ಸಲೀಂ

ನಾಜಿಹಾ ಸಲೀಂ

  • Share this:
ಇಂದು ಗೂಗಲ್ (Google) ತನ್ನ ಡೂಡಲ್ (Google Doodle)ನಲ್ಲಿ ನಾಜಿಹಾ ಸಲೀಂ (Naziha Salim) ಅವರಿಗೆ ವಿಶೇಷ ಗೌರವ ಸಲ್ಲಿಸಿದೆ. ಇರಾಕ್  (Iraq) ಸಮಕಾಲೀನ ಕಲಾ ರಂಗದ ವರ್ಣಚಿತ್ರಗಾರ್ತಿ, ಪ್ರಾಧ್ಯಾಪಕಿ ಮತ್ತು ಅತ್ಯಂತ ಪ್ರಭಾವಶಾಲಿ ಕಲಾವಿದರಲ್ಲಿ (Most influential artists) ಒಬ್ಬರಾದ ನಾಜಿಹಾ ಸಲೀಂ ಅವರಿಗೆ ಗೌರವಾರ್ಥವಾಗಿ ಗೂಗಲ್ ನಮನ ಸಲ್ಲಿಸಿದೆ. ಏಪ್ರಿಲ್ 23 ಮಹತ್ವದ್ದಾಗಿದ್ದು, ಈ ದಿನವೇ ಸಲೀಮ್ ಅವರ ಚಿತ್ರಕಲೆಯು ಯುಎಇ ಮೂಲದ ಬಾರ್ಜೀಲ್ ಆರ್ಟ್ ಫೌಂಡೇಶನ್ನ (Barjeel Art Foundation) ಮಹಿಳಾ ಕಲಾವಿದರ ಕೃತಿಗಳ ಸಂಗ್ರಹದಲ್ಲಿ ಗಮನ ಸೆಳೆದಿತ್ತು. ಹೀಗಾಗಿ ಗೂಗಲ್ ಈ ದಿನವನ್ನು ಆಚರಿಸುತ್ತಿದ್ದು ಕಲಾ ಜಗತ್ತಿಗೆ ಅವರು ನೀಡಿದ ಕೊಡುಗೆಗಳ ಸ್ಮರಣಾರ್ಥಕವಾಗಿ ನಾಜಿಹಾ ಸಲೀಂ ಅವರು ಚಿತ್ರ ಬಿಡಿಸುತ್ತಿರುವ ಹಾಗೆ ಗೂಗಲ್ ಡೂಡಲ್ ರಚಿಸಿದೆ.

ಇಲ್ಲಿ ಎರಡು ಚಿತ್ರಗಳ ಮಿಶ್ರಣವಿದ್ದು, ಬ್ರಷ್‌ನೊಂದಿಗೆ ಸಲೀಂ ಮತ್ತು ಅವರ ಚಿತ್ರಕಲೆಯು ಯಾವಾಗಲೂ ದಪ್ಪ ಬ್ರಷ್ ಸ್ಟ್ರೋಕ್‌ಗಳು ಮತ್ತು ಎದ್ದುಕಾಣುವ ಬಣ್ಣಗಳ ಮೂಲಕ ಗ್ರಾಮೀಣ ಇರಾಕಿನ ಮಹಿಳೆಯರು ಹಾಗೂ ರೈತರ ಜೀವನವನ್ನು ತೋರಿಸುತ್ತದೆ.

ಚಿಕ್ಕ ವಯಸ್ಸಿನಲ್ಲಿಯೇ ಕಲೆ ಇಷ್ಟಪಡುತ್ತಿದ್ದ ನಾಜಿಹಾ ಸಲೀಂ

ಸಲೀಮ್ 1927ರಲ್ಲಿ ಟರ್ಕಿಯಲ್ಲಿ ಜನಿಸಿದರು. ಇರಾಕಿ ಕಲಾವಿದರ ಕುಟುಂಬದಲ್ಲಿ ಜನಿಸಿದ ಸಲೀಮ್ ಅವರ ತಂದೆ ವರ್ಣಚಿತ್ರಕಾರರಾಗಿದ್ದರು ಮತ್ತು ಅವರ ತಾಯಿ ನುರಿತ ಕಸೂತಿ ಕಲಾವಿದರಾಗಿದ್ದರು. ಗೂಗಲ್ ಪ್ರಕಾರ, ಇರಾಕ್ ನ ಅತ್ಯಂತ ಪ್ರಭಾವಶಾಲಿ ಶಿಲ್ಪಿಗಳಲ್ಲಿ ಒಬ್ಬರೆಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟಿರುವ ಜವಾದ್ ಸೇರಿದಂತೆ ಆಕೆಯ ಎಲ್ಲಾ ಮೂವರು ಸಹೋದರರು ಕಲೆಗೆ ತಮ್ಮನ್ನು ಅರ್ಪಿಸಿಕೊಂಡಿದ್ದರು. ಚಿಕ್ಕ ವಯಸ್ಸಿನಿಂದಲೂ ಈಕೆ ತನ್ನದೇ ಆದ ಕಲೆಯನ್ನು ಮಾಡಲು ಇಷ್ಟಪಡುತ್ತಿದ್ದಳು.

ಇದನ್ನೂ ಓದಿ:  World Book and Copyright Day 2022: ಇಂದು ವಿಶ್ವ ಪುಸ್ತಕ ದಿನ, ಈ ದಿನದ ಇತಿಹಾಸ, ಮಹತ್ವ, ಥೀಮ್; ಇಲ್ಲಿದೆ ಮಾಹಿತಿ

ವಿದ್ಯಾರ್ಥಿ ವೇತನ ಪಡೆದ ಮೊದಲ ಮಹಿಳೆ

ಸಲೀಂ ಅವರು ಚಿತ್ರಕಲೆ ಅಧ್ಯಯನ ಮಾಡಲು ಬಾಗ್ದಾದ್ ಫೈನ್ ಆರ್ಟ್ಸ್ ಇನ್ಸ್ಟಿಟ್ಯೂಟ್ ಗೆ ಸೇರಿಕೊಂಡರು. ಅಲ್ಲಿ ಅವರು ಚಿತ್ರಕಲೆ ಅಧ್ಯಯನ ಮಾಡಿದರು ಮತ್ತು ಡಿಸ್ಟಿಂಕ್ಷನ್ ನಲ್ಲಿ ಪದವಿ ಪಡೆದರು. ಅವರ ಕಠಿಣ ಪರಿಶ್ರಮ ಮತ್ತು ಕಲೆಯ ಮೇಲಿನ ಉತ್ಸಾಹದಿಂದಾಗಿ ಅವರು ಪ್ಯಾರಿಸ್ ನಲ್ಲಿ ಎಕೋಲ್ ನ್ಯಾಶನಲ್ ಸುಪೀರಿಯರ್ ಡೆಸ್ ಬ್ಯೂಕ್ಸ್-ಆರ್ಟ್ಸ್ ನಲ್ಲಿ ಅಧ್ಯಯನ ಮಾಡಲು ವಿದ್ಯಾರ್ಥಿ ವೇತನವನ್ನು ಪಡೆದರು. ಶಿಕ್ಷಣವನ್ನು ಮುಂದುವರಿಸಲು ವಿದ್ಯಾರ್ಥಿ ವೇತನವನ್ನು ಪಡೆದ ಮೊದಲ ಮಹಿಳೆಯರಲ್ಲಿ ಸಲೀಂ ಒಬ್ಬರು.

ಪ್ಯಾರಿಸ್ ನಲ್ಲಿದ್ದಾಗ, ಸಲೀಮ್ ಫ್ರೆಸ್ಕೊ ಮತ್ತು ಮ್ಯೂರಲ್ ಪೇಂಟಿಂಗ್‌ನಲ್ಲಿ ಪರಿಣತಿ ಹೊಂದಿದ್ದರು. ಪದವಿಯ ನಂತರ, ಅವರು ಹಲವಾರು ವರ್ಷಗಳನ್ನು ವಿದೇಶದಲ್ಲಿ ಕಳೆದರು, ಕಲೆ ಮತ್ತು ಸಂಸ್ಕೃತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

ಕೆಲವು ವರ್ಷಗಳ ನಂತರ ವಿದೇಶದಿಂದ ಮರಳಿದ ಸಲೀಂ ಫೈನ್ ಆರ್ಟ್ಸ್ ಇನ್ಸ್ಟಿಟ್ಯೂಟ್‌ನಲ್ಲಿ ಕೆಲಸ ಮಾಡಲು ಬಾಗ್ದಾದ್‌ಗೆ ಮರಳಿದರು. ಇಲ್ಲಿ ಅವರು ತಮ್ಮ ನಿವೃತ್ತಿಯಾಗುವವರೆಗೂ ಪ್ರಾಧ್ಯಾಪಕಿಯಾಗಿ ಕಲಿಸಿಕೊಡುತ್ತಿದ್ದರು.

ವಿದೇಶಿ-ಶಿಕ್ಷಿತ ಕಲಾವಿದರ ಸಮುದಾಯ ಸ್ಥಾಪನೆ

ಸಲೀಂ ಇರಾಕ್ ನ ಕಲಾ ಸಮುದಾಯದಲ್ಲಿ ಸಕ್ರಿಯರಾಗಿದ್ದರು ಮತ್ತು ವಿದೇಶದಲ್ಲಿ ಅಧ್ಯಯನ ಮಾಡುವ ಮತ್ತು ಯುರೋಪಿಯನ್ ಕಲಾ ತಂತ್ರಗಳನ್ನು ಇರಾಕಿನ ಸೌಂದರ್ಯದಲ್ಲಿ ಸಂಯೋಜಿಸುವ ಕಲಾವಿದರ ಸಮುದಾಯವಾದ ಅಲ್-ರುವ್ವಾದ್ ಎಂಬ ವಿದೇಶಿ-ಶಿಕ್ಷಿತ ಕಲಾವಿದರ ಸಮುದಾಯವನ್ನು ಸ್ಥಾಪಿಸಿದರು. ಇರಾಕ್: ಕಾಂಟೆಂಪರರಿ ಆರ್ಟ್ ಎಂಬ ಪುಸ್ತಕವನ್ನು ಸಹ ಬರೆದಿದ್ದಾರೆ, ಇದು ಇರಾಕ್‌ನ ಆಧುನಿಕ ಕಲಾ ಚಳುವಳಿಯ ಆರಂಭಿಕ ಬೆಳವಣಿಗೆಗೆ ಮಾಹಿತಿಯ ಪ್ರಮುಖ ಮೂಲವಾಗಿದೆ.

ಇದನ್ನೂ ಓದಿ:  Viral News: ಈ ಗ್ರಾಮದಲ್ಲಿ ಇಂದಿಗೂ ನಡೆಯುತ್ತೆ ಸ್ವಯಂವರ: ತಮ್ಮ ಸಂಗಾತಿಯನ್ನ ಯುವತಿಯರೇ ಆಯ್ಕೆ ಮಾಡಿಕೊಳ್ತಾರೆ

ಗೂಗಲ್ ಡೂಡಲ್ ಇಂದು ಏಕೆ ಆಚರಿಸುತ್ತಿದೆ?

2020ರಲ್ಲಿ ಈ ದಿನದಂದು ಸಲೀಮ್ ಅವರ ಚಿತ್ರಕಲೆಯು ಯುಎಇ ಮೂಲದ ಬಾರ್ಜೀಲ್ ಆರ್ಟ್ ಫೌಂಡೇಶನ್‌ನ ಮಹಿಳಾ ಕಲಾವಿದರ ಕೃತಿಗಳ ಸಂಗ್ರಹದಲ್ಲಿ ಗಮನಸೆಳೆದಿತ್ತು. ನಾಜಿಹಾ ಸಲೀಂ ಅವರ ಕಲಾಕೃತಿಯು ಶಾರ್ಜಾ ಆರ್ಟ್ ಮ್ಯೂಸಿಯಂ ಮತ್ತು ಮಾಡರ್ನ್ ಆರ್ಟ್ ಇರಾಕಿ ಆರ್ಕೈವ್‌ನಲ್ಲಿ ತೂಗುಹಾಕಲಾಗಿದೆ. ತೊಟ್ಟಿಕ್ಕುವ ಕುಂಚಗಳು ಮತ್ತು ಅಂಚುಕಟ್ಟಿದ ಕ್ಯಾನ್ವಾಸ್ ‌ಗಳಿಂದ ಅವರು ರಚಿಸಿದ ಚಿತ್ರಕಲೆಯನ್ನು ಅಲ್ಲಿ ನೋಡಬಹುದು.

ಇಂದಿನ ಡೂಡಲ್ ಕಲಾಕೃತಿಯು ಸಲೀಂ ಅವರ ಚಿತ್ರಕಲೆ ಶೈಲಿಗೆ ಒಂದು ಗೌರವವಾಗಿದ್ದು ಮತ್ತು ಕಲಾ ಜಗತ್ತಿಗೆ ಅವರು ನೀಡಿದ ಕೊಡುಗೆಗಳ ಆಚರಣೆಯಾಗಿದೆ.
Published by:Mahmadrafik K
First published: