Rosa Bonheur: ಗೂಗಲ್ ತನ್ನ ಡೂಡಲ್ ಮೂಲಕ ಗೌರವ ನೀಡುತ್ತಿರುವ ರೋಸಾ ಬಾನ್ಹರ್ ಬಗ್ಗೆ ನಿಮಗೆ ತಿಳಿದಿದೆಯೇ..?

ಗೂಗಲ್ ತನ್ನ ಡೂಡಲ್ ಮೂಲಕ ಫ್ರೆಂಚ್ (French) ಕಲಾವಿದೆಯಾಗಿದ್ದ ರೋಸಾ ಬಾನ್ಹರ್ (Rosa Bonheur) ಅವರ 200ನೇ ಜಯಂತಿಯ ಗೌರವಾರ್ಥ ಸಮರ್ಪಿಸಿದೆ.

ರೋಸಾ ಬಾನ್ಹರ್

ರೋಸಾ ಬಾನ್ಹರ್

  • Share this:
ಜಗತ್ತಿನ ಅತಿ ದೊಡ್ಡ ಸರ್ಚ್ ಎಂಜಿನ್ ಖ್ಯಾತಿಯ ಗೂಗಲ್ (Google) ಸಾಮಾನ್ಯವಾಗಿ ಕಳೆದ ಕೆಲ ಸಮಯದಿಂದ ಆಗಾಗ ಜಗತ್ತಿನ ಅತಿ ವಿಶಿಷ್ಟ, ಅದಮ್ಯ ಸಾಧನೆ ಮಾಡಿರುವ ವ್ಯಕ್ತಿಗಳನ್ನು ಗುರುತಿಸಿ ಅವರ ಸ್ಮರಣಾರ್ಥ ತನ್ನದೇ ಆದ ರೀತಿಯಲ್ಲಿ ಗೌರವಾರ್ಪಣೆಯನ್ನು ಮಾಡುತ್ತಿರುತ್ತದೆ. ಇದನ್ನೇ ಸಾಮಾನ್ಯವಾಗಿ ಗೂಗಲ್ ಡೂಡಲ್ (Google Doodle) ಎಂದು ಕರೆಯಲಾಗುತ್ತದೆ. ಬುಧವಾರದಂದು ಗೂಗಲ್ ತನ್ನ ಡೂಡಲ್ ಮೂಲಕ ಫ್ರೆಂಚ್ (French) ಕಲಾವಿದೆಯಾಗಿದ್ದ ರೋಸಾ ಬಾನ್ಹರ್ (Rosa Bonheur) ಅವರ 200ನೇ ಜಯಂತಿಯ ಗೌರವಾರ್ಥ ಸಮರ್ಪಿಸಿದೆ. 1822ರಲ್ಲಿ ಫ್ರಾನ್ಸ್ ದೇಶದ ಬಾರ್ಡ್ಯೂಕ್ಸ್ ಎಂಬಲ್ಲಿ ಜನಿಸಿದ್ದ ರೋಸಾ ಅವರೊಬ್ಬರು ಖ್ಯಾತ ವರ್ಣಚಿತ್ರ ಕಲಾವಿದೆ. ಇವರು ಪ್ರಾಣಿಗಳ ವರ್ಣಚಿತ್ರಗಳಿಗಾಗಿ ಖ್ಯಾತಿಗಳಿಸಿದ್ದಾರೆ. ಅವರು ಹಲವು ಕಲಾಕೃತಿಗಳನ್ನು ರಚಿಸಿದ್ದು ಅವುಗಳ ಪೈಕಿ "ಪ್ಲಾವಿಂಗ್ ಇನ್ ನಿವರ್ನೈಸ್" ಹಾಗೂ "ದಿ ಹಾರ್ಸ್ ಫೇರ್" ಎಂಬ ಕಲಾಕೃತಿಗಳು ಹೆಚ್ಚಿನ ಜನಪ್ರಿಯತೆ ಗಳಿಸಿವೆ. 19ನೇ ಶತಮಾನದ ಅತಿ ಪ್ರಸಿದ್ಧ ಮಹಿಳಾ ವರ್ಣಚಿತ್ರಕಲಾವಿದರ ಪೈಕಿ ಬಾನ್ಹರ್ ಅವರನ್ನು ಒಬ್ಬರನ್ನಾಗಿ ಪರಿಗಣಿಸಲಾಗಿದೆ.

ಪ್ರಮುಖ ಮಹಿಳಾ ಚಿತ್ರಕಲಾವಿದೆ:

ರೋಸಾ ತಮ್ಮ ಕಾಲದಲ್ಲಿ ಒಬ್ಬ ಮಹಿಳಾ ಚಿತ್ರಕಲಾವಿದೆಯಾಗಿ ಪ್ರವರ್ಧಮಾನಕ್ಕೆ ಬಂದಿದ್ದು ಒಂದು ಸಾಧನೆ ಎಂದೇ ಹೇಳಬಹುದಾಗಿದೆ. ಏಕೆಂದರೆ ಅವರ ಜೀವಿತಾವಧಿಯ ಕಾಲದಲ್ಲಿ ಕಲಾವಿದ ವಲಯದಲ್ಲಿ ಮಹಿಳೆಯರು ಅಷ್ಟೊಂದಾಗಿ ಮುನ್ನುಡಿಗೆ ಬರುತ್ತಿರಲಿಲ್ಲ. ಆದರೂ, ಅವರಲ್ಲಿದ್ದ ಕಲಾಸಕ್ತಿಯನ್ನು ಗಮನಿಸಿದ್ದ ಅವರ ತಂದೆ ಅದನ್ನು ಪ್ರೋತ್ಸಾಹಿಸಿದ್ದರು. ಅವರು ಮೊದ ಮೊದಲು ಚಿತ್ರಕಲಾಕೃತಿಗಳನ್ನು ಆಸಕ್ತಿಯಿಂದ ಗಮನಿಸುತ್ತಿದ್ದರು, ಅದರ ಸ್ಕೆಚ್ ಬಿಡಿಸುತ್ತಿದ್ದರು. ಕ್ರಮೇಣ ಅವರಲ್ಲಿರುವ ಪ್ರತಿಭೆಯು ಹೊರ ಚಿಮ್ಮಲಾರಂಭಿಸಿದಾಗ ಕ್ಯಾನ್ವಾಸ್ ಬಳಸಿ ಅವರು ತಮ್ಮ ಚಿತ್ರಗಳನ್ನು ಬಿಡಿಸಲಾರಂಭಿಸಿದರು.

ಶಿಲ್ಪ ಕಲಾಕೃತಿಯಾಗಿಯೂ ಗುರುತಿಸಿಕೊಂಡರು:

ಅವರ ಕಲಾ ಕೃಷಿ ಕೇವಲ ಚಿತ್ರಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ. ಅವರು ಒಬ್ಬ ಜನಪ್ರಿಯ ಶಿಲ್ಪ ಕಲಾಕೃತಿ ಕಲಾವಿದೆಯಾಗಿಯೂ ಗುರುತಿಸಿಕೊಂಡಿದ್ದರು. 1841 ರಿಂದ 1853ರ ವರೆಗೆ ಫ್ರಾನ್ಸ್ ದೇಶದ ಪ್ಯಾರಿಸ್ ಸಲೋನ್ ಎಂಬ ಪ್ರದರ್ಶನೋತ್ಸವದಲ್ಲಿ ಅವರ ಕಲಾಕೃತಿಗಳನ್ನು ಪ್ರದರ್ಶಿಸಲಾಯಿತು. ಈ ಸಂದರ್ಭದಲ್ಲಿ ಬಹಳಷ್ಟು ಜನರು ಅವರ ಕಲಾಕೃತಿಗಳನ್ನು ಸಾಕಷ್ಟು ಮೆಚ್ಚಿ ಪ್ರಶಂಸಿಸಿದರು. 1849 ರಲ್ಲಿ ಪ್ರದರ್ಶಿತವಾದ ಅವರ "ಪ್ಲಾವಿಂಗ್ ಇನ್ ನಿರ್ವೈನಾಸ್" ಎಂಬ ಕಲಾಕೃತಿ ಸಾಕಷ್ಟು ಜನಮನ್ನಣೆ ಹಾಗೂ ಫ್ರೆಂಚ್ ಸರ್ಕಾರದಿಂದಲೂ ಮನ್ನಣೆಗಳಿಸಿತು. ಇದೇ ಸಂದರ್ಭದಲ್ಲಿ ಅವರು ಕಲಾ ಲೋಕದಲ್ಲಿ ಒಬ್ಬ ನುರಿತ ವೃತ್ತಿಪರ ಕಲಾವಿದೆಯಾಗಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು.

ಇದನ್ನೂ ಓದಿ: Father's Day 2020: ವಿಶ್ವ ಅಪ್ಪಂದಿರ ದಿನಾಚರಣೆಗೆ ಗೂಗಲ್​ ಡೂಡಲ್​​ನಿಂದ​ ವಿಶೇಷ ಗೌರವ

1853 ರಲ್ಲಿ ಪ್ರದರ್ಶಿತವಾದ ಅವರ ಇನ್ನೊಂದು ಮಾಸ್ಟರ್ ಪೀಸ್ ಎಂದೇ ಹೇಳಲಾಗುವ "ದಿ ಹಾರ್ಸ್ ಫೇರ್‌" ಎಂಬ ಕಲಾಕೃತಿಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರಿಗೆ ಖ್ಯಾತಿಯನ್ನು ತಂದುಕೊಟ್ಟಿತು. ಅದರಲ್ಲಿ ಅವರು ಪ್ಯಾರಿಸ್‌ನಲ್ಲಿ ನಡೆಯುತ್ತಿದ್ದ ಕುದುರೆ ಮಾರುಕಟ್ಟೆಯಲ್ಲಿ ಕಂಡುಬರುವ ಭಾವವನ್ನು ಕಣ್ಣಿಗೆ ಕಟ್ಟು ಕೊಡುವಂತೆ ಸೃಷ್ಟಿಸಿದ್ದರು. ಈ ಕಲಾಕೃತಿಯು ಎಷ್ಟೊಂದು ಜನಪ್ರಿಯತೆಗಳಿಸಿತೆಂದರೆ ಅದನ್ನು ನ್ಯೂಯಾರ್ಕ್‌ನಲ್ಲಿ ಸ್ಥಿತವಿರುವ ಪ್ರತಿಷ್ಠಿತ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್‌ನಲ್ಲಿ ಪ್ರದರ್ಶನಕ್ಕಾಗಿ ಇರಿಸಲಾಗಿದೆ.

ಲೀಜನ್ ಆಫ್ ಹಾನರ್ ಪ್ರಶಸ್ತಿ ವಿಜೇತೆ:

ಒಬ್ಬ ಮಹಿಳಾ ಕಲಾವಿದೆಯಾಗಿ ಅಂದಿನ ಸಮಯದಲ್ಲಿ ಅವರು ಮಾಡಿದ ಸಾಧನೆ, ಗಳಿಸಿದ ಖ್ಯಾತಿ ಅಷ್ಟಿಷ್ಟಲ್ಲ. ಅದಕ್ಕಾಗಿ ಅವರನ್ನು ಗೌರವಿಸುವ ಉದ್ದೇಶದಿಂದ ಫ್ರೆಂಚ್ ರಾಣಿ ಯುಜೆನ್ ಅವರು 1865 ರಲ್ಲಿ ಆಕೆಗೆ ದೇಶದ ಪ್ರತಿಷ್ಠಿತ ಗೌರವವಾದ "ಲೀಜನ್ ಆಫ್ ಹಾನರ್" ಎಂಬ ಗೌರವದಿಂದ ಸನ್ಮಾನಿಸಿದರು. ಹೀಗೆ ತಮ್ಮ ಕಲಾ ಪ್ರತಿಭೆಯ ಮೂಲಕ ಬಾನ್ಹರ್ ಆ ಕಾಲದಲ್ಲಿ ಪ್ರಸಿದ್ಧತೆಯ ಉತ್ತುಂಗಕೇರಿದ್ದರು. 19ನೇ ಶತಮಾನದಲ್ಲಿ ಪ್ರಸಿದ್ಧ ಕಲಾವಿದರಾಗಿ ಗುರುತಿಸಿಕೊಂಡಿದ್ದ ಅತಿ ಕಡಿಮೆ ಸಂಖ್ಯೆಯಲ್ಲಿರುವ ಮಹಿಳೆಯರ ಪೈಕಿ ಬಾನ್ಹರ್ ಸಹ ಒಬ್ಬರಾಗಿದ್ದಾರೆ.

ಇದನ್ನೂ ಓದಿ: Mother's Day 2020: ವಿಶೇಷ ಡೂಡಲ್​​ ರಚಿಸಿ 'ವಿಶ್ವ ಅಮ್ಮಂದಿರ ದಿನ'ವನ್ನು ಆಚರಿಸಿದ ಗೂಗಲ್​!

ಅವರು ತಮ್ಮ ಕೊನೆಯ ಸಮಯದಲ್ಲಿ ಫ್ರಾನ್ಸಿನ ಥಾಮೇರಿ ಎಂಬಲ್ಲಿ ದಿನಗಳನ್ನು ಕಳೆದರು. 1899 ರಲ್ಲಿ ಅವರು 77 ವರ್ಷದವರಾಗಿದ್ದಾಗ ಕೊನೆಯುಸಿರೆಳೆದರು. ಇಂದು ಅವರ 200ನೇ ಜನ್ಮ ದಿನವಾಗಿದ್ದು ಅವರಿಗೆ ಗೌರವ ನೀಡುವಾರ್ಥ ಗೂಗಲ್ ತನ್ನ ಡೂಡಲ್ ಮೂಲಕ ರೋಸಾ ಬಾನ್ಹರ್ ಅವರಿಗೆ ಸನ್ಮಾನ ಅರ್ಪಿಸಿರುವುದು ವಿಶೇಷವಾಗಿದೆ.
Published by:shrikrishna bhat
First published: