Video: ನಿತ್ಯವೂ ಪಕ್ಕದ ಮನೆಯ ಗೆಳತಿಗೆ ಮುತ್ತಿಕ್ಕುವ ಗೋಲ್ಡನ್ ರಿಟ್ರೀವರ್‌ ಶ್ವಾನ!

ಪ್ರತಿ ದಿನ ಬೆಳಗ್ಗೆ ರೆಡ್‍ಳ ಮನೆಯ ಗಾರ್ಡನ್‍ನ ಗೋಡೆಯ ಬಳಿ ಓಡುವ ಬಾರ್ನೆ ಅದಕ್ಕೆ ಮುತ್ತಿಕ್ಕುತ್ತದೆ. ಟಿಕ್‍ಟಾಕ್‍ನಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಬಾರ್ನೆಯು ರೆಡ್‍ಳನ್ನು ನೋಡಲು ಆಕೆಯ ಮನೆಯ ಆವರಣ ಗೋಡೆಯನ್ನು ಹತ್ತುತ್ತಿರುವ ದೃಶ್ಯವಿದೆ.

Photo: Google

Photo: Google

  • Share this:

ನಾಯಿಗಳೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ, ಕೆಲವರು ನಾಯಿಗಳನ್ನು ಸಾಕಿ, ಅವುಗಳನ್ನು ಮನೆಯ ಸದಸ್ಯರಿಗಿಂತ ತುಸು ಹೆಚ್ಚೇ ಪ್ರೀತಿ ತೋರಿಸಿದರೆ, ಇನ್ನು ಕೆಲವರು ತಮ್ಮಿಷ್ಟದ ನಾಯಿಗಳನ್ನು ಕಂಡು ಮುದ್ದಾಡುವುದುಂಟು. ಅದರಲ್ಲೂ ತರಲೆ, ತುಂಟಾಟ ಅಥವಾ ಬುದ್ಧಿವಂತಿಕೆ ಪ್ರದರ್ಶನ ಮಾಡುವ ಇಲ್ಲವೇ ಯಾವುದಾದರೂ ಭಾವನಾತ್ಮಕ ಚಟುವಟಿಕೆಗಳನ್ನು ಮಾಡುವ ನಾಯಿಗಳಂತೂ ಬಹುಬೇಗ ಎಲ್ಲರ ಗಮನ ಸೆಳೆಯುತ್ತವೆ. ಅಂತದ್ದೇ ನಾಯಿಯೊಂದು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಎಲ್ಲರ ಮೆಚ್ಚುಗೆ ಪಡೆಯುತ್ತಿದೆ. ಅದೊಂದು ಗೋಲ್ಡನ್ ರಿಟ್ರೀವರ್ ಮರಿಯಾಗಿದ್ದು, ಅದು ತನ್ನ ನೆರೆಹೊರೆಯ ಗೆಳತಿಗೆ ಮುತ್ತಿಕ್ಕುವ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರ ಮನಗೆದ್ದಿದೆ.


ಈ ನಾಯಿಯ ಹೆಸರು ಬಾರ್ನೆ. ತನ್ನ ಪಕ್ಕದ ಮನೆಯ ರೆಡ್ ಎಂಬ ಹೆಸರಿನ ಒಂದು ನಾಯಿಯ ಮೇಲೆ ಬಾರ್ನೆಗೆ ಸಿಕ್ಕಾಪಟ್ಟೆ ಪ್ರೀತಿ ಮೂಡಿದೆ. ಬಾರ್ನೆಯದ್ದು ಎಂತಹ ಹುಚ್ಚು ಪ್ರೀತಿ ಎಂಬುವುದು ಅದರ ವಿಡಿಯೋಗಳನ್ನು ನೋಡಿದರೆ ತಿಳಿಯುತ್ತದೆ.


ಪ್ರತಿ ದಿನ ಬೆಳಗ್ಗೆ ರೆಡ್‍ಳ ಮನೆಯ ಗಾರ್ಡನ್‍ನ ಗೋಡೆಯ ಬಳಿ ಓಡುವ ಬಾರ್ನೆ ಅದಕ್ಕೆ ಮುತ್ತಿಕ್ಕುತ್ತದೆ. ಟಿಕ್‍ಟಾಕ್‍ನಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಬಾರ್ನೆಯು ರೆಡ್‍ಳನ್ನು ನೋಡಲು ಆಕೆಯ ಮನೆಯ ಆವರಣ ಗೋಡೆಯನ್ನು ಹತ್ತುತ್ತಿರುವ ದೃಶ್ಯವಿದೆ. ರೆಡ್‍ಳಿಗೂ ಬಾರ್ನೆಯನ್ನು ಕಂಡರೆ ಸಿಕ್ಕಾಪಟ್ಟೆ ಪ್ರೀತಿ ಇದೆ ಎಂಬುವುದು ಆ ವಿಡಿಯೋದಲ್ಲಿ ಎರಡೂ ನಾಯಿಗಳು ಒಂದನ್ನೊಂದು ನೋಡಿದಾಗ ತೋರುವ ಉತ್ಸಾಹವನ್ನು ಕಂಡು ಅರ್ಥ ಮಾಡಿಕೊಳ್ಳಬಹುದು.


ರೆಡ್ ಅಷ್ಟೊಂದು ಎತ್ತರವಿಲ್ಲದ ಪುಟ್ಟ ನಾಯಿ. ಹಾಗಾಗಿ ಬಾರ್ನೆ ಮುತ್ತಿಕ್ಕಲು ಬಂದಾಗ , ಅದರ ಮುಖವನ್ನು ತಲುಪಲು ರೆಡ್ ಎತ್ತರಕ್ಕೆ ನೆಗೆಯಲು ಪ್ರಯತ್ನಿಸುವುದನ್ನು ವಿಡಿಯೋದಲ್ಲಿ ಕಾಣಬಹುದು. ಬಾರ್ನೆ ಮತ್ತು ರೆಡ್ ನಾಯಿಗಳ ಈ ಮುದ್ದಾಟದ ವಿಡಿಯೋವನ್ನು ಟಿಕ್‍ಟಾಕ್ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದಾರೆ.






ಅವರಿಬ್ಬರ ಪ್ರಣಯದ ಭಾವನೆಯನ್ನು ಬಿಂಬಿಸಲು ವಿಡಿಯೋಗೆ ‘ನೆವರ್ ಫರ್ಗೆಟ್ ಯು’ ಹಾಡಿನ ಹಿನ್ನೆಲೆ ಸಂಗೀತವಿದೆ. ಆ ಎರಡೂ ನಾಯಿಯಗಳ ಪ್ರೀತಿಯ ವಿಡಿಯೋವನ್ನು ಹಿನ್ನಲೆ ಸಂಗೀತದ ಜೊತೆ ನೋಡಿದಾಗ, ಯಾವುದೋ ಡಿಸ್ನಿ ಸಿನಿಮಾ ದೃಶ್ಯ ನೋಡುತ್ತಿರುವೆವು ಎಂಬಂತೆ ಭಾಸವಾಗುತ್ತದೆ. ಈ ವಿಡಿಯೋ ಇದುವರೆಗೆ ಸುಮಾರು 45,000 ವೀಕ್ಷಣೆಗಳನ್ನು ಕಂಡಿದೆ.


ಬಾರ್ನೆ ಮತ್ತು ರೆಡ್‍ಗಾಗಿ ಒಂದು ‘ಡೇಟ್’ ಆಯೋಜಿಸಬೇಕೆಂದು ಬಹಳಷ್ಟು ವೀಕ್ಷಕರು , ಆ ನಾಯಿಗಳ ಮಾಲೀಕರಿಗೆ ಸಲಹೆ ನೀಡಿದ್ದಾರೆ. ತಾವು ಅದಕ್ಕಾಗಿ ಸಿದ್ಧತೆಗಳನ್ನು ನಡೆಸುತ್ತಿರುವುದಾಗಿ ನಾಯಿಗಳ ಮಾಲೀಕರು ಪ್ರತಿಕ್ರಿಯೆ ನೀಡಿದ್ದಾರೆ. ಈ ಎರಡೂ ಪ್ರೇಮಿ ಶ್ವಾನಗಳು ಜೀವನಪರ್ಯಂತ ಜೊತೆಯಾಗಿ ಇರಬೇಕು ಎಂದು ಬಹಳಷ್ಟು ಸಾಮಾಜಿಕ ಮಾಧ್ಯಮ ಬಕೆದಾರರು ಆಶಿಸಿದ್ದಾರೆ.


ನಾಯಿಗಳ ವಿಡಿಯೋಗಳು ವೈರಲ್ ಆಗುವುದು ಇದೇ ಮೊದಲೇನಲ್ಲ. ಹಿಂದೆಯೂ ಮುದ್ದಾದ ನಾಯಿಗಳ ಚಟುವಟಿಕೆಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇದೇ ವರ್ಷ ಮೇನಲ್ಲಿ ಟಕ್ಕರ್ ಎಂಬ ಹೆಸರಿನ ಗೋಲ್ಡನ್ ರಿಟ್ರೀವರ್ ನಾಯಿ ಸ್ನ್ಯಾಪ್ ಚಾಟ್ ಫೆಸ್ ಫಿಲ್ಟರ್‍ನಲ್ಲಿ ವಿವಿಧ ಮುಖಗಳನ್ನು ಮಾಡುವ ವಿಡಿಯೋಗಳು ವೈರಲ್ ಆಗಿದ್ದವು. ಟಕ್ಕರ್‌ನ ವಿವಿಧ ಅವತಾರಗಳನ್ನು ನೆಟ್ಟಿಗರು ಮೆಚ್ಚಿ, ಖುಷಿ ಪಟ್ಟಿದ್ದರು.

First published: