ಕೆಲವೊಬ್ಬರು ತಮ್ಮ ಜೀವನದಲ್ಲಿ (Life) ತುಂಬಾನೇ ಚಿತ್ರ-ವಿಚಿತ್ರವಾದ ಅಭ್ಯಾಸಗಳನ್ನು ಬೆಳೆಸಿಕೊಂಡಿರುತ್ತಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಕೆಲವೊಬ್ಬರು ಸದಾ ತಮ್ಮ ಬೆರಳುಗಳ ಉಗುರುಗಳನ್ನು ಕಚ್ಚುತ್ತಾ ಇದ್ದರೆ, ಇನ್ನೂ ಕೆಲವರು ತಮ್ಮ ಕೂದಲನ್ನು (Hair) ತಾವೇ ಕೈಯಿಂದ ಕಿತ್ತುಕೊಳ್ಳುತ್ತಾ ಇರುತ್ತಾರೆ. ಹೀಗೆ ಅನೇಕರಿಗೆ ಬೇರೆ ಬೇರೆ ರೀತಿಯ ಕೆಟ್ಟ ಅಭ್ಯಾಸಗಳಿರುವುದನ್ನು (Bad Habit) ನಾವೆಲ್ಲಾ ದಿನನಿತ್ಯದ ಜೀವನದಲ್ಲಿ ನಮ್ಮ ಸುತ್ತಮುತ್ತಲೂ ನೋಡುತ್ತಿರುತ್ತೇವೆ.
ಆದರೆ ಯಾವುದೇ ಅಭ್ಯಾಸ ಒಂದು ಇತಿ ಮಿತಿಯಲ್ಲಿರಬೇಕು, ಅವು ಮಿತಿಯನ್ನು ದಾಟಿದರೆ ವ್ಯಕ್ತಿಯ ಜೀವನಕ್ಕೆ ಮುಳುವಾಗುತ್ತವೆ. ಇಲ್ಲಿಯೂ ಅದೇ ರೀತಿಯಾದ ಘಟನೆ ನಡೆದಿದೆ ನೋಡಿ.. ಚೀನಾದ ಈ 14 ವರ್ಷದ ಹದಿಹರೆಯದ ಯುವತಿಯೊಬ್ಬಳು ಅತಿಯಾಗಿ ತನ್ನ ಕೂದಲನ್ನು ಕೈಯಿಂದ ಕಿತ್ತು ಕೊಳ್ಳುವ ಮತ್ತು ಅದನ್ನು ಬಾಯಲ್ಲಿ ಹಾಕಿಕೊಂಡು ಅಗಿಯುವ ವಿಚಿತ್ರ ಅಭ್ಯಾಸವನ್ನು ಹೊಂದಿದ್ದಳು. ಅನೇಕ ವರ್ಷಗಳಲ್ಲಿ, ಅವಳು ಎಷ್ಟು ಕೂದಲನ್ನು ಅಗಿದಿರಬಹುದು ಅಂತ ನೀವು ಕೇಳಿದರೆ ಒಂದು ಕ್ಷಣ ಶಾಕ್ ಆಗುವುದಂತೂ ಗ್ಯಾರೆಂಟಿ.
ಹುಡುಗಿ ಹೊಟ್ಟೆಯಲ್ಲಿದ್ದುದ್ದು 3ಕೆಜಿ ಹೇರ್ ಬಾಲ್!
ಒಟ್ಟು ಅವಳು ಇದುವರೆಗೂ ತನ್ನ ಹೊಟ್ಟೆಯಲ್ಲಿ ಮೂರು ಕಿಲೋಗ್ರಾಂ ತೂಕದ ಭಾರಿ ಗಾತ್ರದ ಹೇರ್ ಬಾಲ್ ಅನ್ನು ಹೊಂದಿದ್ದಳು. ಎಂದರೆ ಆಕೆ ಅಗೆದು ನುಂಗಿದಂತಹ ಕೂದಲು ಹೊಟ್ಟೆಯೊಳಗೆ ಜಮೆಯಾಗಿದೆ. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ (ಎಸ್ಸಿಎಂಪಿ) ನ ಪ್ರಕಾರ, ಅಷ್ಟೇ ಅಲ್ಲದೆ ಅವಳು ತನ್ನ ಕೂದಲನ್ನು ಎಷ್ಟು ಎಳೆದಳೆದು ಕಿತ್ತುಕೊಂಡಿದ್ದಾಳೆ ಎಂದರೆ ಆಕೆಯ ತಲೆ ಬಹುತೇಕವಾಗಿ ಬೋಳಾಗಿ ಹೋಗಿದೆ.
ಆ ಹುಡುಗಿ ಆಹಾರ ಸೇವಿಸದೇ ತುಂಬಾ ಅಸ್ವಸ್ಥಳಾಗಿದ್ದಳು ಮತ್ತು ಆಸ್ಪತ್ರೆಗೆ ದಾಖಲಾದಳು, ಅಲ್ಲಿ ಶಸ್ತ್ರಚಿಕಿತ್ಸಕರು ಎರಡು ಗಂಟೆಗಳ ಸುದೀರ್ಘ ಶಸ್ತ್ರಚಿಕಿತ್ಸೆಯನ್ನು ಮಾಡಿ ಅವಳ ಹೊಟ್ಟೆ ಮತ್ತು ಕರುಳಿನಿಂದ ಇಟ್ಟಿಗೆಯ ಭಾರದ ಹೇರ್ ಬಾಲ್ ಒಂದನ್ನು ತೆಗೆದು ಹಾಕಿದರು. ಎಸ್ಸಿಎಂಪಿ ವರದಿಯ ಪ್ರಕಾರ, ಶಾಂಕ್ಸಿ ಪ್ರಾಂತ್ಯದ ಹುಡುಗಿ, ಪಿಕಾ ಎಂಬ ಸ್ಥಿತಿಯಿಂದ ಬಳಲುತ್ತಿದ್ದು, ಇದರಲ್ಲಿ ಜನರು ಕೊಳೆ, ಕಾಗದ, ಜೇಡಿಮಣ್ಣು ಮತ್ತು ಇತರ ತಿನ್ನಲಾಗದ ವಸ್ತುಗಳನ್ನು ಹೆಚ್ಚಾಗಿ ತಿನ್ನುತ್ತಾರೆ.
ಹುಡುಗಿಗೆ ಈ ಅಭ್ಯಾಸ ಅಂಟಿದ್ದು ಹೇಗೆ?
ಆ ಹುಡುಗಿಯ ಪೋಷಕರು ಕೆಲಸಕ್ಕಾಗಿ ಆಕೆಯಿಂದ ದೂರದ ಊರಿನಲ್ಲಿದ್ದುದ್ದರಿಂದ ಅವಳು ತನ್ನ ಅಜ್ಜ-ಅಜ್ಜಿಯ ಜೊತೆಯಲ್ಲಿ ಇದ್ದಳು. ಅವಳ ಅಜ್ಜಿ, ಆ ಹುಡುಗಿಯ ಅಸ್ವಸ್ಥತೆಯು ತುಂಬಾ ಗಂಭೀರವಾಗುವವರೆಗೂ ಅದನ್ನು ಗಮನಿಸಲೇ ಇಲ್ಲ ಎಂದು ವರದಿ ತಿಳಿಸಿದೆ. ತನ್ನ ಚಿಕಿತ್ಸೆಯ ಉಸ್ತುವಾರಿ ವಹಿಸಿಕೊಂಡಿರುವ ಕ್ಸಿಯಾನ್ ಡಾಕ್ಸಿಂಗ್ ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿಸ್ಟ್ ಶಿ ಹೈ ಅವರು "ಅವಳು ಆಹಾರವನ್ನು ತಿನ್ನಲು ಸಾಧ್ಯವಾಗದ ಕಾರಣ ಅವಳು ನಮ್ಮ ಬಳಿಗೆ ಬಂದಳು. ನಂತರ ನಾವು ಅವಳ ಹೊಟ್ಟೆಯಲ್ಲಿ ತುಂಬಾ ಕೂದಲು ತುಂಬಿರುವುದನ್ನು ಕಂಡುಕೊಂಡೆವು, ಆಹಾರಕ್ಕೆ ಅಲ್ಲಿ ಹೆಚ್ಚಿನ ಸ್ಥಳವಿಲ್ಲ, ಅವಳ ಕರುಳು ಕೂದಲಿಂದ ನಿರ್ಬಂಧಿಸಲ್ಪಟ್ಟಿತ್ತು" ಎಂದು ಹೇಳಿದರು.
ವೈದ್ಯರು ಹುಡುಗಿಯ ಪರಿಸ್ಥಿತಿಯ ಬಗ್ಗೆ ಹೇಳಿದ್ದೇನು?
"ಅವಳು ತನ್ನ ಅಜ್ಜ-ಅಜ್ಜಿಯರೊಂದಿಗೆ ವಾಸಿಸುತ್ತಾಳೆ, ಅವರು ಅವಳ ನಡವಳಿಕೆಯ ಬಗ್ಗೆ ಅಷ್ಟೊಂದು ಗಮನ ಹರಿಸಿಲ್ಲ. ಅವಳು ಅನೇಕ ವರ್ಷಗಳಿಂದ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾಳೆ. ಆದ್ದರಿಂದ ಪೋಷಕರು ತಮ್ಮ ಹೆಚ್ಚಿನ ಸಮಯವನ್ನು ಮಕ್ಕಳೊಂದಿಗೆ ಕಳೆಯಬೇಕು" ಎಂದು ಶಿ ಹೇಳಿದರು.
ಕೂದಲು ತಿನ್ನುವುದು ಮಾರಣಾಂತಿಕ
ಕೂದಲು ತಿನ್ನುವುದು ಮಾರಣಾಂತಿಕವೆಂದು ಸಾಬೀತಾದ ಪ್ರಕರಣಗಳೂ ಇವೆ. 2017 ರಲ್ಲಿ, ಯುಕೆಯಲ್ಲಿ 16 ವರ್ಷದ ವಿದ್ಯಾರ್ಥಿನಿಯೊಬ್ಬಳು ತನ್ನ ಹೊಟ್ಟೆಯಲ್ಲಿ ಹೇರ್ ಬಾಲ್ ನಿಂದಾಗಿ ಉಂಟಾದ ಸೋಂಕಿನಿಂದಾಗಿ ಇದ್ದಕ್ಕಿದ್ದಂತೆ ಸಾವನ್ನಪ್ಪಿದ್ದಾಳೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿತ್ತು. ಯುಎಸ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಪ್ರಕಾರ, ತಮ್ಮದೇ ಆದ ಕೂದಲನ್ನು ನುಂಗುವ ರೋಗಿಗಳು ಹೆಚ್ಚಾಗಿ ರಾಪುಂಜೆಲ್ ಸಿಂಡ್ರೋಮ್ ನಿಂದ ಬಳಲುತ್ತಿರುತ್ತಾರೆ, ಇದು ಟ್ರೈಕೋಫಾಜಿಯಾ ಎಂಬ ಮನೋವೈದ್ಯಕೀಯ ಅಸ್ವಸ್ಥತೆಯಿಂದ ಉಂಟಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ