ಜಿರಾಫೆಯ (Jirafe) ಕತ್ತು ಉದ್ದವಾಗಿರುವುದರಿಂದ ಕೆಲವೊಮ್ಮೆ ಮರದ ಕೊಂಬೆಗೆ ಸಿಕ್ಕಿ ಸಾವನ್ನಪ್ಪುವ, ಅಥವಾ ಅದರದ್ದೇ ಮನೆಯ ಗೇಟ್‌ಗೆ ಕುತ್ತಿಗೆ ಸಿಕ್ಕಿಕೊಂಡು ನಂತರ ಸಾವನ್ನಪ್ಪಿರುವ ಘಟನೆಗಳು ಈ ಹಿಂದೆಯೂ ನಡೆದಿದೆ. ಪ್ರಸ್ತುತ ಇಂತಹದ್ದೇ ಒಂದು ಘಟನೆ ಯುಎಸ್‌ನ ಮೃಗಾಲಯದಲ್ಲಿ (Zoo) ನಡೆದಿದೆ. ಗೇಟ್‌ಗೆ ಕುತ್ತಿಗೆ ಸಿಕ್ಕಿ ಜಿರಾಫೆ ಸಾವು. ಯುನೈಟೆಡ್ ಸ್ಟೇಟ್ಸ್‌ನ (US) ಮೃಗಾಲಯವೊಂದರಲ್ಲಿ ಆರು ವರ್ಷದ ಜಿರಾಫೆಯು ಆವರಣದ ಗೇಟ್‌ಗೆ ಸಿಕ್ಕಿಕೊಂಡು ಕುತ್ತಿಗೆ ಮುರಿತಕ್ಕೊಳಗಾಗಿದೆ. ಕುತ್ತಿಗೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಜಿರಾಫೆ ಅಲ್ಲಿಯೇ ಪ್ರಾಣ ಬಿಟ್ಟಿದೆ. ನ್ಯೂಯಾರ್ಕ್‌ನ ರೋಚೆಸ್ಟರ್‌ನಲ್ಲಿರುವ ಸೆನೆಕಾ ಪಾರ್ಕ್ ಮೃಗಾಲಯದಲ್ಲಿ ಈ ದುರಂತ ಸಂಭವಿಸಿದ್ದು, ಗೇಟ್‌ಗೆ ಸಿಕ್ಕಿಕೊಂಡು ಮೃಗಾಲಯದ ಏಕೈಕ ಗಂಡು ಜಿರಾಫೆ ಸಾವನ್ನಪ್ಪಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಯುಎಸ್‌ಎ ಟುಡೇ ವರದಿ ಮಾಡಿದೆ.
ಪಾರ್ಕರ್ ಎಂಬ ಜಿರಾಫೆ ಸಾವು
ಪಾರ್ಕರ್ ಎಂಬ ಆರು ವರ್ಷದ ಜಿರಾಫೆಯನ್ನು ಮೃಗಾಲಯದ ಸಿಬ್ಬಂದಿ ಗಮನಿಸಿದಾಗ ಜಿರಾಫೆ ಪ್ರಜ್ಞೆ ಕಳೆದುಕೊಂಡ ಸ್ಥಿತಿಯಲ್ಲಿತ್ತು. ಕೂಡಲೇ ಮೃಗಾಲಯದ ಪಶುವೈದ್ಯಕೀಯ ಸಿಬ್ಬಂದಿಗೆ ಕರೆ ಮಾಡಿ ಬರಹೇಳಲಾಯಿತು.
ಸ್ಥಳಕ್ಕೆ ಕೂಡಲೇ ಧಾವಿಸಿದ ವೈದ್ಯರು ತಕ್ಷಣ ಚಿಕಿತ್ಸೆಯನ್ನು ಆರಂಭಿಸಿದರೂ ಸಹ ದುರದೃಷ್ಟವಶಾತ್ ಪಾರ್ಕರ್ ಜಿರಾಫೆ ಕೊನೆಯುಸಿರಿಳೆದಿದೆ. ಪಶುವೈದ್ಯಕೀಯ ಸಿಬ್ಬಂದಿ ತಕ್ಷಣವೇ ಬಂದು ಚಿಕಿತ್ಸೆ ಆರಂಭಿಸಿದರು. ಆದರೆ ಕುತ್ತಿಗೆ ಮುರಿದು ಹೋದ್ದರಿಂದ ಪಾರ್ಕರ್‌ನನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಮೃಗಾಲಯವು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಬೇಸರ ವ್ಯಕ್ತಪಡಿಸಿದ ಅಧಿಕಾರಿಗಳು
ಜಿರಾಫೆ ಇರುವಂತಹ ಆವರಣದ ಗೇಟ್‌ಗೆ ಸಿಲುಕಿ ಸತ್ತಿರುವುದು ನಿಜಕ್ಕೂ ಅಚ್ಚರಿಯೇ ಸರಿ. "ಈ ರೀತಿಯ ಘಟನೆ ಸಂಭವಿಸುವ ಸಾಧ್ಯತೆಯು ಅನಿರೀಕ್ಷಿತ" ಎಂದು ಮೃಗಾಲಯದ ಅಧೀಕ್ಷಕ ಸ್ಟೀವ್ ಲೇಸಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜಿರಾಫೆಯು ಗೇಟ್ ಮಧ್ಯೆ ಸಿಕ್ಕಿ ಕೊಂಡ ನಂತರ ತನ್ನನ್ನು ತಾನು ಬಿಡಿಸಿಕೊಳ್ಳಲು ಪ್ರಯತ್ನಿಸಿದೆ. ಆದರೆ ಈ ವೇಳೆ ಅದರ ಕುತ್ತಿಗೆ ಮುರಿದು ಹೋಗಿದೆ.
ಕುತ್ತಿಗೆ ಮರಿದ ನಂತರ ಪ್ರಜ್ಞೆ ಕಳೆದುಕೊಂಡ ಪಾರ್ಕರ್ ಸಾವನ್ನಪ್ಪಿದೆ. ವೈದ್ಯಕೀಯ ವರದಿಗಳು ಸಹ ಜಿರಾಫೆಯ ಕುತ್ತಿಗೆ ಮುರಿತದ ಬಗ್ಗೆ ದೃಢಪಡಿಸಿವೆ ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
2018 ರಲ್ಲಿ ಮೃಗಾಲಯದ ಆವರಣದಲ್ಲಿ ಸ್ಥಾಪಿಸಲಾದ ಗೇಟ್ ರಚನೆಯು ಪ್ರಮಾಣಿತ ಜಿರಾಫೆ ಆವರಣದ ವೈಶಿಷ್ಟ್ಯವಾಗಿದೆ ಮತ್ತು ಇದನ್ನು ದೇಶಾದ್ಯಂತ ಮಾನ್ಯತೆ ಪಡೆದ ಹಲವಾರು ಪ್ರಾಣಿಸಂಗ್ರಹಾಲಯಗಳಲ್ಲಿ ಬಳಸಲಾಗುತ್ತದೆ
ಗೇಟ್‌ನಲ್ಲಿ ಬದಲಾವಣೆ ತರಲು ಮುಂದಾದ ಮೃಗಾಲಯ
ಅವಘಡದ ಬಳಿಕ ಎಚ್ಚೆತ್ತುಕೊಂಡ ಮೃಗಾಲಯದ ಸಿಬ್ಬಂದಿ ಮುಂದೆ ಹೀಗಾಗದಂತೆ ಗೇಟ್‌ನಲ್ಲಿ ಬದಲಾವಣೆ ತರಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ಮರಗಳು 'ವುಡ್ ವೈಡ್ ವೆಬ್' ಮೂಲಕ ಸಂವಹನ ನಡೆಸುತ್ತಾ? ಸಂಶೋಧನೆ ಇದರ ಬಗ್ಗೆ ಏನು ಹೇಳುತ್ತೆ?
ದುರಂತದ ಬಗ್ಗೆ ಯುಎಸ್ ಕೃಷಿ ಇಲಾಖೆ ಮತ್ತು ಪ್ರಾಣಿಸಂಗ್ರಹಾಲಯಗಳು ಮತ್ತು ಅಕ್ವೇರಿಯಮ್‌ಗಳ ಸಂಘಕ್ಕೆ ಸೂಚನೆ ನೀಡಲಾಗಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
2018 ರಲ್ಲಿ ಸೆನೆಕಾ ಪಾರ್ಕ್ ಮೃಗಾಲಯಕ್ಕೆ ಬಂದಿದ್ದ ಪಾರ್ಕರ್
ಪಾರ್ಕರ್ ಗಂಡು ಜಿರಾಫೆಯನ್ನು 2018 ರಲ್ಲಿ ಸಾಂಟಾ ಬಾರ್ಬರಾ ಮೃಗಾಲಯದಿಂದ ಸೆನೆಕಾ ಪಾರ್ಕ್ ಮೃಗಾಲಯಕ್ಕೆ ಕರೆತರಲಾಗಿತ್ತು. ಪಾರ್ಕರ್ ಮೃಗಾಲಯದಲ್ಲಿ ಹೆಣ್ಣು ಮಸಾಯಿ ಜಿರಾಫೆಗಳಾದ ಕಿಪೆಂಜಿ ಮತ್ತು ಇಗ್ಗಿ ಜೊತೆಗೆ ಒಟ್ಟಿಗೆ ವಾಸಿಸುತ್ತಿತ್ತು.
ಕಳೆದ ವರ್ಷ ಏಪ್ರಿಲ್ 29 ರಂದು ಹೆಣ್ಣು ಜಿರಾಫೆ ಇಗ್ಗಿ ತನ್ನ ಮಗುವಿಗೆ ಜನ್ಮ ನೀಡಿತ್ತು. ಈ ಮಗುವಿಗೆ ಮೃಗಾಲಯದ ಸಿಬ್ಬಂದಿ ಓಲ್ಮ್ಸ್ಟೆಡ್ ಎಂದು ಹೆಸರಿಟ್ಟಿದ್ದರು.
ಕಳೆದ ಆರು ತಿಂಗಳಲ್ಲಿ ಎರಡು ಜಿರಾಫೆ ಸಾವು
ಸೆನೆಕಾ ಮೃಗಾಲಯದ ಪಶುವೈದ್ಯ ಕ್ರಿಸ್ ಮೆಕಿನ್ನಿ ಅವರು ಮತ್ತೆ ಇಂತಹ ಅವಘಡಗಳು ಸಂಭವಿಸದಂತೆ ನೋಡಿಕೊಳ್ಳಲು ಮೂರು ಉಳಿದ ಜಿರಾಫೆಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಕಳೆದ ಆರು ತಿಂಗಳಲ್ಲಿ ಯುಎಸ್‌ನ ಸೆನೆಕಾ ಮೃಗಾಲಯದಲ್ಲಿ ಸಾವನ್ನಪ್ಪಿದ ಎರಡನೇ ಜಿರಾಫೆ ಪಾರ್ಕರ್ ಆಗಿದೆ.
ಮರದ ಕೊಂಬೆ ಮಧ್ಯೆ ಸಿಲುಕಿ ಸತ್ತಿದ್ದ ಜಿರಾಫೆ
ಮರದ ಕೊಂಬೆಗಳ ಮಧ್ಯೆ ಕುತ್ತಿಗೆ ಸಿಲುಕಿ ಜಿರಾಫೆ ಸಾವನ್ನಪ್ಪಿರೋ ಘಟನೆ ಚೀನಾದ ಪ್ರಾಣಿ ಸಂಗ್ರಹಾಲಯದಲ್ಲಿ ಈ ಹಿಂದೆ ನಡೆದಿತ್ತು. ಮರದ ಕೊಂಬೆಗಳ ಮಧ್ಯೆ ಸಿಲುಕಿ ಒದ್ದಾಡುತ್ತಿದ್ದ ಜಿರಾಫೆಯನ್ನು ರಕ್ಷಿಸಲು ಮೃಗಾಲಯದ ಸಿಬ್ಬಂದಿ ಸತತ 5 ಗಂಟೆಗಳ ಕಾಲ ಹರಸಾಹಸಪಟ್ಟಿದ್ದರು.
ಕೊನೆಗೆ ಮರದ ಒಂದು ಕಡೆಯ ಕೊಂಬೆಯನ್ನು ತುಂಡರಿಸಿ ರಕ್ಷಣೆಗೆ ಮುಂದಾಗಿದ್ದರು. ಆದ್ರೆ ಜಿರಾಫೆ ಅದಾಗಲೇ ಮೃತಪಟ್ಟಿತ್ತು ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ