• Home
  • »
  • News
  • »
  • trend
  • »
  • Noise Pollution: ಬೈಕ್ ಜಾಸ್ತಿ ಸೌಂಡ್ ಮಾಡಿದ್ರೂ ಬೀಳುತ್ತೆ ಕೇಸ್, ಅದಕ್ಕೆಂದೇ ಬಂದಿದೆ ವಿಶೇಷ ಕ್ಯಾಮೆರಾ

Noise Pollution: ಬೈಕ್ ಜಾಸ್ತಿ ಸೌಂಡ್ ಮಾಡಿದ್ರೂ ಬೀಳುತ್ತೆ ಕೇಸ್, ಅದಕ್ಕೆಂದೇ ಬಂದಿದೆ ವಿಶೇಷ ಕ್ಯಾಮೆರಾ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಭಾರತದ ಮಟ್ಟಿಗೆ ಹೇಳುವುದಾದರೆ ಈ ರೀತಿಯ ಕ್ಯಾಮೆರಾಗಳ ಅಳವಡಿಕೆ ಒಂದು ಕನಸು ಎಂದು ಹೇಳಬಹುದು

  • Share this:

ಮಹಾನಗರಗಳಲ್ಲಿ(Metropolitan areas) ಟ್ರಾಫಿಕ್ ಸಮಸ್ಯೆ (Traffic problem) ಸಾಮಾನ್ಯವಾಗಿ ಕಂಡುಬರುತ್ತದೆ. ಅಂಥದ್ದರಲ್ಲಿ ವಿಪರೀತವಾಗಿ ಸದ್ದು ಮಾಡುವ ಮೋಟರ್ ಸೈಕಲ್‌ಗಳು ಮೊದಲೇ ಟ್ರಾಫಿಕ್ ಸಮಸ್ಯೆಯಿಂದ ರೋಸಿ ಹೋಗಿರುವ ಜನರಿಗೆ ಮತ್ತಷ್ಟು ಕಿರಿಕಿರಿ ಉಂಟಾಗುವಂತೆ ಮಾಡುವುದರಲ್ಲಿ ಸಂದೇಹವೇ ಇಲ್ಲ. ಅಷ್ಟೆ ಅಲ್ಲದೆ, ಈ ಹೆಚ್ಚು ಸದ್ದು ಮಾಡುವ ಮೋಟರ್ ಸೈಕಲ್‌ಗಳು ಶಬ್ದ ಮಾಲಿನ್ಯವನ್ನು(Noise Pollution) ಸಹ ಉಂಟು ಮಾಡುತ್ತವೆ. ಟ್ರಾಫಿಕ್ ಪೊಲೀಸರಿಗೆ ಜನದಟ್ಟಣೆಯಲ್ಲಿ ಅತಿ ಹೆಚ್ಚು ಸದ್ದು ಮಾಡುವ ಮೋಟರ್ ಸೈಕಲ್‌ಗಳನ್ನು(Motorcycles) ಪತ್ತೆ ಮಾಡುವುದು ಒಂದು ಸವಾಲೇ ಹೌದು.


ಪ್ರಪ್ರಥಮ ಬಾರಿಗೆ 'ನಾಯ್ಸ್ ಕ್ಯಾಮೆರಾ
ಆದರೆ, ಇಂತಹ ಸಮಸ್ಯೆಯನ್ನು ನಿವಾರಿಸಲು ಫ್ರಾನ್ಸ್ ದೇಶದಲ್ಲಿ ಪ್ರಪ್ರಥಮ ಬಾರಿಗೆ 'ನಾಯ್ಸ್ ಕ್ಯಾಮೆರಾ' ಗಳನ್ನು ಅಳವಡಿಸಲಾಗಿದೆ. ಜನವರಿ 4ರಂದು ಅಧಿಕೃತವಾಗಿ ಈ ಕ್ಯಾಮೆರಾಗಳ ಕಾರ್ಯಾಚರಣೆಗೆ ಚಾಲನೆ ನೀಡಲಾಯಿತು. ಪ್ಯಾರಿಸ್ ನಗರದ ಪಶ್ಚಿಮ ಭಾಗದ ಸೇಂಟ್ ಲ್ಯಾಂಬರ್ಟ್ ಡೇಯ್ಸ್ ಬೊಯೀಸ್ ಪ್ರದೇಶದಲ್ಲಿ ಈ ಕ್ಯಾಮೆರಾಗಳನ್ನು ಉದ್ಘಾಟಿಸಲಾಯಿತೆಂದು ವರದಿಯಾಗಿದೆ.


ಈ ಕ್ಯಾಮೆರಾಗಳ ಅಳವಡಿಕೆಯ ಹಿಂದಿನ ಉದ್ದೇಶ ನಗರ ಪ್ರದೇಶದಲ್ಲಿ ಅನುಮತಿಸಲಾದ ಸದ್ದಿನ ಮಿತಿ ಮೀರಿ ಮೋಟರ್ ಸೈಕಲ್ ಚಲಾಯಿಸುವ ವ್ಯಕ್ತಿಗಳನ್ನು ನಿರಾಯಾಸವಾಗಿ ಪತ್ತೆಮಾಡಿ ಮತ್ತೆ ಅವರು ಈ ರೀತಿ ಮಾಡದಂತೆ ಅವರ ಮೇಲೆ ಕ್ರಮ ಜರುಗಿಸುವುದಾಗಿದೆ. ನಾಯ್ಸ್ ಕ್ಯಾಮೆರಾಗಳ ಅಳವಡಿಕೆಯು ಫ್ರಾನ್ಸ್ 2019ರಲ್ಲಿ ಅನುಮೋದಿಸಿದ ಮೊಬಿಲಿಟಿ ಓರಿಯಂಟೇಷನ್ ಕಾನೂನಿನ ಭಾಗವಾಗಿದೆ. ಫ್ರಾನ್ಸ್ ದೇಶವು ವಾಹನಗಳಿಂದುಂಟಾಗುವ ಶಬ್ದಮಾಲಿನ್ಯದ ತಡೆಯುವತ್ತ ತನ್ನ ಚಿತ್ತ ನೆಟ್ಟಿದೆ.


ಇದನ್ನೂ ಓದಿ: Royal Enfield​ ಪರಿಚಯಿಸಲಿದೆ ಹೊಸ 4 ಬೈಕ್​! ಮುಂದಿನ ವರ್ಷ ರಸ್ತೆಯಲ್ಲಿ ಧೂಳೆಬ್ಬಿಸೋದು ಪಕ್ಕಾ!


ಯಾಲೆ ಪ್ರದೇಶದ RD46 ರಸ್ತೆಯಲ್ಲಿ ಪ್ರಾಯೋಗಿಕ ಚಾಲನೆ
ಈ ಮುಂಚೆ ಈ ಕ್ಯಾಮೆರಾಗಳ ಕಾರ್ಯಕ್ಷಮತೆಯ ಕುರಿತು ಮೊದಲ ಹಂತದಲ್ಲಿ ಹಲವು ಪರೀಕ್ಷೆಗಳನ್ನು ನಡೆಸಲಾಗಿತ್ತು. ತದನಂತರ ಅಂತಿಮವಾಗಿ ಪಶ್ಚಿಮ ಪ್ಯಾರಿಸ್ ನ ಯಾಲೆ ಪ್ರದೇಶದ RD46 ರಸ್ತೆಯಲ್ಲಿ ಈ ಕ್ಯಾಮೆರಾಗಳನ್ನು ಅಳವಡಿಸಿ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿದೆ. ಹಂತ ಹಂತವಾಗಿ ನಗರದ ಇತರೆ ಪ್ರದೇಶಗಳಲ್ಲೂ ಈ ಕ್ಯಾಮೆರಾಗಳನ್ನು ಅಳವಡಿಸುವ ಕಾರ್ಯಯೋಜನೆ ಸಿದ್ಧಪಡಿಸಲಾಗಿದ್ದು ಅದರಂತೆ ಅಳವಡಿಸಲಾಗುತ್ತದೆ ಎಂದು ತಿಳಿದುಬಂದಿದೆ.


ಈ ಕ್ಯಾಮೆರಾಗಳಲ್ಲಿ ವಿಶೇಷವಾದ ವಸ್ತುವೊಂದನ್ನು ಅಭಿವೃದ್ಧಿಪಡಿಸಲಾಗಿದ್ದು ಇದು ಅನುಮತಿಸಿದಕ್ಕಿಂತ ಹೆಚ್ಚಿರುವ ಸದ್ದನ್ನು ರೆಕಾರ್ಡ್ ಮಾಡುತ್ತದೆ. ಕ್ಯಾಮೆರಾ 360 ಡಿಗ್ರಿ ತಿರುಗುವ ಸಾಮರ್ಥ್ಯ ಹೊಂದಿದ್ದು 4 ಮೈಕ್ರೋಫೋನ್‌ಗಳನ್ನು ಇದರಲ್ಲಿ ಅಳವಡಿಸಲಾಗಿದೆ ಎಂದು ತಿಳಿದುಬಂದಿದೆ. ಬ್ರೂಯಿಟ್ ಪಾರಿಫ್ ಅವರಿಂದ ನಿರ್ಮಿಸಲ್ಪಟ್ಟ ಈ ಕ್ಯಾಮೆರಾ ಜೆಲ್ಲಿ ಮೀನಿನಂತಿದ್ದು ಹೆಚ್ಚು ಸದ್ದು ಮಾಡುವ ಮೋಟರ್ ಸೈಕಲ್‌ಗಳನ್ನು ಅವುಗಳ ನೋಂದಣಿ ವಿವರಗಳೊಂದಿಗೆ ದಾಖಲಿಸುತ್ತದೆ ಹಾಗೂ ರಾತ್ರಿಯ ಸಮಯದಲ್ಲೂ ಇದು ಕೆಲಸ ಮಾಡುತ್ತದೆಂದು ಹೇಳಲಾಗಿದೆ.


135 ಯುರೋಗಳಷ್ಟು ದಂಡ
ಮೆಡ್ಯುಸ್ ಎಂದು ಕರೆಯಲಾಗಿರುವ ಈ ಕ್ಯಾಮೆರಾಗಳನ್ನು ಮೊದಲಿಗೆ ಆದ್ಯತೆಯ ಮೇರೆಗೆ, ವೇಗ ಮಿತಿ 50 ಕಿ.ಮೀ ಪ್ರತಿ ಗಂಟೆಗೆ ಅನುಮತಿಸಲಾದ ನಗರ ಪ್ರದೇಶಗಳಲ್ಲಿ ಅಳವಡಿಸಲಾಗುತ್ತದೆಂದು ಅಧಿಕಾರಿಗಳು ಹೇಳಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ. ಸದ್ಯಕ್ಕೆ ಈ ಕ್ಯಾಮೆರಾಗಳನ್ನು ಪ್ರಾಯೋಗಿಕ ಹಂತದಡಿಯಲ್ಲಿ ಅಳವಡಿಸಲಾಗಿದ್ದು ಯಾವುದೇ ರೀತಿಯ ದಂಡ ವಿಧಿಸಲಾಗುವುದಿಲ್ಲ. ಆದರೆ ದೀರ್ಘಾವಧಿಯಲ್ಲಿ ಅಧಿಕಾರಿಗಳೊಬ್ಬರ ಪ್ರಕಾರ ಈ ಕ್ಯಾಮೆರಾದಲ್ಲಿ ಸಿಲುಕಿ ಹಾಕಿಕೊಂಡ ಮೋಟರ್ ಸೈಕಲ್ ಮಾಲೀಕರು 135 ಯುರೋಗಳಷ್ಟು ದಂಡ ತೆರಬೇಕಾಗಬಹುದೆಂದು ಹೇಳಲಾಗಿದೆ.


ತಮ್ಮ ಮೋಟರ್ ಸೈಕಲ್ ಗಳ ಎಕ್ಸಾಸ್ಟ್ ಪೈಪುಗಳನ್ನು ಮಾರ್ಪಾಡು ಮಾಡಿಸಿ ಬೈಕ್ ಅತಿ ಹೆಚ್ಚು ಸದ್ದು ಮಾಡುವಂತೆ ಮಾಡಿಸಿಕೊಂಡ ವ್ಯಕ್ತಿಗಳನ್ನು ಪತ್ತೆ ಮಾಡುವುದೇ ಈ ಕ್ಯಾಮೆರಾಗಳ ಮುಖ್ಯ ಉದ್ದೇಶ ಎಂದು ಅಧಿಕಾರಿಗಳು ತಿಳಿಸಿದ್ದು ಹೆಚ್ಚು ಸದ್ದು ಮಾಡುವ ಕಾರುಗಳನ್ನೂ ಸಹ ಇದರ ಪರಿಧಿಯಲ್ಲಿ ತರಬಹುದಾದ ಸಾಧ್ಯತೆಯಿರುವುದಾಗಿ ಹೇಳಿದ್ದಾರೆಂದು ತಿಳಿದುಬಂದಿದೆ.


ಇದನ್ನೂ ಓದಿ: Bike Mileage: ಬೈಕ್ ಮೈಲೇಜ್ ಹೆಚ್ಚಾಗಬೇಕಾ? ಹಾಗಿದ್ರೆ ಈ ಟ್ರಿಕ್ ಅನುಸರಿಸಿ ನೋಡಿ


ಭಾರತದ ಮಟ್ಟಿಗೆ ಹೇಳುವುದಾದರೆ ಈ ರೀತಿಯ ಕ್ಯಾಮೆರಾಗಳ ಅಳವಡಿಕೆ ಒಂದು ಕನಸು ಎಂದು ಹೇಳಬಹುದು. ಆದರೂ ಬದಲಾಗುತ್ತಿರುವ ಈ ದಿನಮಾನಗಳಲ್ಲಿ ಭವಿಷ್ಯದಲ್ಲಿ ಭಾರತದ ಮಹಾನಗರಗಳಲ್ಲೂ ಈ ರೀತಿಯ ಕ್ಯಾಮೆರಾಗಳ ಅಳವಡಿಕೆ ಕಾರ್ಯಗತವಾದರೂ ಅಚ್ಚರಿ ಪಡಬೇಕಾಗಿಲ್ಲ.

Published by:vanithasanjevani vanithasanjevani
First published: