ಒಲಿವಿಯಾ ಎಂಬ ಎಂಟು ವರ್ಷದ ಬಾಲಕಿ ಇದೀಗ ಹೊಸವರ್ಷ ವಿಶುವಿನ (ಕೇರಳದಲ್ಲಿ ಹೊಸವರ್ಷವನ್ನು ವಿಶು ಎಂಬ ಹೆಸರಿನಿಂದ ಬರಮಾಡಿಕೊಳ್ಳುತ್ತಾರೆ) ಚೈತನ್ಯಳಾಗಿದ್ದಾಳೆ. ಆಕೆಯ ಮುಗ್ಧ ಮನಸ್ಸಿನಲ್ಲಿರುವ ಮಾನವೀಯತೆ ನಿಜಕ್ಕೂ ಮಾದರಿಯಾಗಿದೆ. ಸಂಬಂಧಗಳ ಬೆಲೆಯೇ ಕಾಣೆಯಾಗುತ್ತಿರುವ ಈ ಜಗತ್ತಿನಲ್ಲಿ ಒಲಿವಿಯಾ ತನ್ನ ಪಕ್ಕದ ಮನೆಯ ಅಂಕಲ್‍ನ ಜೀವ ಉಳಿಸುವುದಕ್ಕಾಗಿ ರಸ್ತೆಯ ಬದಿಯಲ್ಲಿ ನಿಂತು ಹೂವು ಮಾರಿದ್ದಾಳೆ.
ಹೌದು, ಕೇರಳದ ಪಟ್ಟಿಕಾಡು ಎಂಬಲ್ಲಿ ವಾಸವಾಗಿರುವ ಒಲಿವಿಯಾಗೆ ನೆರೆಮನೆಯ ಅಂಕಲ್ ಸುನೀಲ್ ಕುಮಾರ್ (43 ವರ್ಷ) ಕಿಡ್ನಿ ಸಂಬಂಧಿತ ಕಾಯಿಲೆಯಿಂದ ಬಳಸಲುತ್ತಿದ್ದು ಹಣದ ಅವಶ್ಯಕತೆ ಇದೆ ಎಂದು ತಿಳಿಯುತ್ತದೆ. ಅಲ್ಲದೇ ಸ್ತನ ಕ್ಯಾನ್ಸರ್‍ನಿಂದ ಬಳಲುತ್ತಿದ್ದ ಅವರ ಪತ್ನಿ ಕೂಡ ಇತ್ತೀಚೆಗಷ್ಟೇ ಚೇತರಿಸಿಕೊಂಡಿದ್ದರು. ಆದರೆ ಅವರ ಡಯಾಲಿಸಿಸ್, ಆಸ್ಪತ್ರೆ ವೆಚ್ಚ, ಔಷಧೋಪಚಾರ ಸೇರಿದಂತೆ ಬಹಳಷ್ಟು ಹಣ ಖರ್ಚಾದ ಕಾರಣ ಕೈಚೆಲ್ಲಿ ಕುಳಿತಿದ್ದರು. ಈ ಎಲ್ಲಾ ವಿಷಯ ತಿಳಿದ ಒಲಿವಿಯಾ ಅವರ ಕುಟುಂಬದ ಸಹಾಯಕ್ಕೆ ನಿಲ್ಲುವ ನಿರ್ಧಾರ ತೆಗೆದುಕೊಂಡಳು.
ತನ್ನ ನಿರ್ಧಾರವನ್ನು ತಂದೆ ಜಾಬಿ ಚುವಣ್ಣಮಣ್ಣು ಅವರ ಬಳಿ ಚರ್ಚೆ ಮಾಡಿದಾಗ ತಂದೆ ಹಾಗೂ ಮಗಳಿಗೂ ಒಂದು ಯೋಚನೆ ಬರುತ್ತದೆ. ವಿಶು ಹಬ್ಬದಲ್ಲಿ ಕೇರಳದಲ್ಲಿ ಕಣಿಕೊಣ್ಣ ಎಂಬ ಹೂವಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಇದಕ್ಕೆ ಗೋಲ್ಡನ್ ರೈನ್ ಟ್ರೀ, ಗೋಲ್ಡನ್ ಶೋವರ್ ಟ್ರೀ ಹೀಗೆ ನಾನಾ ಹೆಸರಿನಿಂದ ಕರೆಯುತ್ತಾರೆ. ಇದು ಕೇರಳದಲ್ಲಿ ಈ ಹಬ್ಬದ ಅವಿಭಾಜ್ಯ ಘಟಕ ಎಂದೇ ಹೇಳಬಹುದು. ನಮ್ಮಲ್ಲಿ ಬೇವು ಹೇಗೋ ಅದೇ ರಿತಿಯಲ್ಲಿ ಕೇರಳದಲ್ಲಿ ಕಣಿಕೊಣ್ಣ ಎಂಬ ಹೂವು. ಹೀಗೆ ಈ ಎಲ್ಲಾ ಹೂವನ್ನು ಮನೆಮನೆಗೂ ಹೋಗಿ ಸಂಗ್ರಹಿಸುತ್ತಾಳೆ ಒಲಿವಿಯಾ.
ಇದನ್ನೂ ಓದಿ: Viral Video: ಕಚ್ಚೆ ಸೀರೆಯುಟ್ಟು ಯೋಗ ಮಾಡಿದ ಡ್ಯಾನ್ಸರ್ ರುಕ್ಮಿಣಿ, ಸೀರೆಯಲ್ಲೇ ಸ್ಟಂಟ್ ಮಾಡಿದ ಜಿಮ್ನಾಸ್ಟರ್; ವಿಡಿಯೋ ವೈರಲ್
ನಂತರ ರಸ್ತೆಯ ಬದಿಯಲ್ಲಿ ನಿಂತು ಕಣಿಕೊಣ್ಣ ಹೂವು ಮಾರಾಟಕ್ಕಿದೆ. ಇದರಿಂದ ಬಂದ ಹಣ ಕಿಡ್ನಿ ಸಂಬಂಧಿತ ರೋಗದಿಂದ ಬಳಲುತ್ತಿರುವವರಿಗೆ ಸಹಾಯವಾಗುವುದು ಎಂದು ಬೋರ್ಡ್ ಹಾಕಿ ಹೂವು ಮಾರಾಟ ಮಾಡುತ್ತಾಳೆ ಒಲಿವಿಯಾ. ಹೂವು ಮಾರಾಟದಿಂದ 1, 850 ರೂ. ಹಣವನ್ನು ಸಂಗ್ರಹಿಸುತ್ತಾಳೆ. ಸ್ವಲ್ಪವೇ ಹಣವಾದರೂ ಅವಳು ಸಹಾಯ ಮಾಡುವ ಮನಸ್ಸು ನಿಜವಾಗಿಯೂ ಬೆಲೆ ಕಟ್ಟಲಾಗದ್ದು.
ಒಲಿವಿಯಾಳ ಚಿಕ್ಕ ಪ್ರಯತ್ನದಿಂದ ಅಂಕಲ್ ಸುನೀಲ್ ಕುಮಾರ್‌ಗೆ ಸಾಕಷ್ಟು ಮಂದಿ ಸಹಾಯ ಮಾಡಿದರು. ಈ ಬಗ್ಗೆ ಹೇಳಿಕೊಂಡ ಒಲಿವಿಯಾ, ‘ಅಂಕಲ್‍ನ ಸಮಸ್ಯೆ ಅರಿತು ಸುಮಾರು ಮಂದಿ ಸಹಾಯಕ್ಕೆ ಮುಂದೆ ಬಂದರು. ನಾನು ಇದರ ಒಂದು ಭಾಗವಾಗುತ್ತಿರುವುದಕ್ಕೆ ಬಹಳ ಸಂತಸವಾಗುತ್ತಿದೆ’ ಎಂದು ಅಂಕಲ್‍ನ ಮೇಲಿರುವ ಪ್ರೀತಿಯನ್ನು ಹೊರಹಾಕುತ್ತಾಳೆ.
ಒಲಿವಿಯಾ ತಾನು ಸಂಗ್ರಹಿಸಿದ ಹಣವನ್ನು ವಿಶು ಹಬ್ಬದ ದಿನ ಅಂಕಲ್‍ಗೆ ನೀಡುತ್ತಾಳೆ. ಡಯಾಲಿಸಿಸ್, ಔಷಧಿಗಾಗಿ ಈ ಹಣ ಉಪಯೋಗವಾಗಲಿದೆ ಎಂಬ ಭರವಸೆ ಒಲಿವಿಯಾಗೆ ಇದೆ. ಒಲಿವಿಯಾಳ ತಾಯಿ ಬ್ಲೆಸ್ಸಿ ಇಸ್ರೇಲ್‍ನಲ್ಲಿ ಕಾರ್ಯನಿರ್ವಹಿಸುತ್ತಾರೆ. ತಂದೆ ಜಾಬಿ ಆಟೋ ಚಾಲಕ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ