• Home
  • »
  • News
  • »
  • trend
  • »
  • ರಂಜಾನ್ ಉಪವಾಸ ಮಾಡುತ್ತಿದ್ದೀರಾ..? ಹಾಗಾದ್ರೆ, ಈ ಟಿಪ್ಸ್ ಪಾಲಿಸಿ, ಆರೋಗ್ಯವಾಗಿರಿ

ರಂಜಾನ್ ಉಪವಾಸ ಮಾಡುತ್ತಿದ್ದೀರಾ..? ಹಾಗಾದ್ರೆ, ಈ ಟಿಪ್ಸ್ ಪಾಲಿಸಿ, ಆರೋಗ್ಯವಾಗಿರಿ

Ramadan 2021

Ramadan 2021

Ramadan 2021: ಮುಂಜಾನೆಯಿಂದ ಹಿಡಿದು ಸೂರ್ಯಾಸ್ತದವರೆಗೆ ಇತರ ಸಮಯಗಳಲ್ಲಿ ಅನ್ನ, ಪಾನೀಯಗಳನ್ನು ಮತ್ತು ಕಾಮಾಸಕ್ತಿಯ ಚಟುವಟಿಕೆಗಳನ್ನು ತ್ಯಜಿಸುವುದನ್ನೇ ಇಸ್ಲಾಮಿನಲ್ಲಿ ಉಪವಾಸ ಅಥವಾ ವ್ರತಾಚರಣೆ ಎನ್ನಲಾಗಿದೆ.

  • Share this:

ಹಬ್ಬಗಳ ಮಡಿಲಾದ ಭಾರತದಲ್ಲಿ ಶ್ರಾವಣ ಬಂತೆಂದರೆ ಸಾಕು ಹಬ್ಬಗಳು ಸಂಭ್ರಮವೇ ಜೋರು. ವೈವಿಧ್ಯತೆಯಲ್ಲಿ ಏಕತೆ ಸಾರುತ್ತಿರುವ ದೇಶದಲ್ಲಿ ಹಬ್ಬಗಳು ಮನಸ್ಸಿಗೆ ಖುಷಿ ನೀಡುತ್ತದೆ. ಒಂದೊಂದು ಧರ್ಮಗಳ ವಿಶಿಷ್ಟತೆ, ವಿಶೇಷತೆ, ಆಚರಣೆಗಳನ್ನು ನೋಡುವುದೇ ಚಂದ. ಹಿಂದೂಗಳಲ್ಲಿ ದೀಪಾವಳಿ, ಕ್ರಿಶ್ಚಿಯನ್‍ರಲ್ಲಿ ಕ್ರಿಸ್‍ಮಸ್, ಮುಸ್ಲಿಮರಲ್ಲಿ ರಂಜಾನ್ ವಿಶೇಷ ಹಬ್ಬ. ಹಿಂದೂಗಳಲ್ಲಿ ಏಕಾದಶಿ, ದಸರಾ, ಕ್ರಿಶ್ಚಿಯನ್ನರು ಗುಡ್‍ಫ್ರೈಡೇ ಈ ದಿನಗಳಲ್ಲಿ ವ್ರತಾಚರಣೆ ಮಾಡಿದರೆ ಮುಸ್ಲಿಮರು ರಂಜಾನ್ ತಿಂಗಳಲ್ಲಿ ಉಪವಾಸ ಕೈಗೊಳ್ಳುತ್ತಾರೆ. ಇಸ್ಲಾಮ್‌ ಕ್ಯಾಲೆಂಡರ್‌ನಲ್ಲಿ ವರ್ಷದ ಒಂಭತ್ತನೇ ತಿಂಗಳು ಉಪವಾಸದ ತಿಂಗಳು ಬರುತ್ತದೆ. ಇವರು ಮಾಡುವ ಉಪವಾಸ ಬಹಳ ಕಟ್ಟುನಿಟ್ಟಾಗಿದ್ದು ಶ್ರೇಷ್ಠವಾದುದಾಗಿದೆ. ಈ ಉಪವಾಸ ತಿಂಗಳನ್ನು ಪವಿತ್ರ ಮಾಸ ಎಂದೇ ಪರಿಗಣಿಸಲಾಗುತ್ತದೆ.


ಮುಂಜಾನೆಯಿಂದ ಹಿಡಿದು ಸೂರ್ಯಾಸ್ತದವರೆಗೆ ಇತರ ಸಮಯಗಳಲ್ಲಿ ಅನ್ನ, ಪಾನೀಯಗಳನ್ನು ಮತ್ತು ಕಾಮಾಸಕ್ತಿಯ ಚಟುವಟಿಕೆಗಳನ್ನು ತ್ಯಜಿಸುವುದನ್ನೇ ಇಸ್ಲಾಮಿನಲ್ಲಿ ಉಪವಾಸ ಅಥವಾ ವ್ರತಾಚರಣೆ ಎನ್ನಲಾಗಿದೆ. ರಂಜಾನ್ ತಿಂಗಳ ಹಗಲಿನಲ್ಲಿ ತೊಟ್ಟು ನೀರೂ ಕುಡಿಯದೆ, ಕಠಿಣ ವ್ರತದ ಮೂಲಕ ಹಸಿವಿನ ಕಠಿಣತೆ ಅರಿತು, ವಿಶ್ವ ಮುಸ್ಲಿಮರೆಲ್ಲರು ಸಮಾನರೆನಿಸಿಕೊಳ್ಳುವ ಹಬ್ಬ ಇದಾಗಿದೆ. ಅಲ್ಲಿ ಬಡವ - ಶ್ರೀಮಂತರೆನ್ನುವ ಭೇದವಿಲ್ಲದೆ ವ್ರತಾಚರಣೆ ಕೈಗೊಳ್ಳುತ್ತಾರೆ. ನಂತರ ಅಲ್ಲಾನಿಗೆ ಶರಣಾಗಿ, ಬಡವರಿಗೆ ಬಟ್ಟೆದಾನ ಮಾಡಿ ಸಂಭ್ರಮದಿಂದ ಹಬ್ಬ ಆಚರಿಸುತ್ತಾರೆ.


ಸೂರ್ಯೋದಯದ ಊಟವನ್ನು ಸಹೂರ್ ಎಂದು ಕರೆದರೆ, ಸೂರ್ಯಾಸ್ತದ ಊಟವನ್ನು ಇಫ್ತಾರ್ ಎಂದು ಕರೆಯಲಾಗುತ್ತದೆ. ಈ ವರ್ಷ ಅಂದರೆ 2021 ರಲ್ಲಿ ಏಪ್ರಿಲ್ 14 ರಿಂದ ಪ್ರಾರಂಭವಾಗಿರುವ ಉಪವಾಸ ಮೇ ತಿಂಗಳ 13 ಅಂದರೆ 30 ದಿನಗಳ ಕಾಲ ಕೈಗೊಳ್ಳಲಾಗುತ್ತದೆ. ಬಿರು ಬೇಸಿಗೆಯಲ್ಲಿ ಉಪವಾಸ ಬಹಳ ಕಷ್ಟ. ಬಿಸಿಲ ಬೇಗೆ ದಾಹ, ನಿರ್ಜಲೀಕರಣ ಹೀಗೆ ಹಲವು ಸಮಸ್ಯೆಗಳು ಎದುರಾಗುವುದುಂಟು. ಆದರೆ ಕೆಲವು ಆಹಾರ ಪದ್ಧತಿಗಳು ಹಾಗೂ ಅಭ್ಯಾಸ ರೂಢಿಸಿಕೊಂಡರೆ ಉಪವಾಸ ಬಹಳ ಸುಲಭವಾಗುತ್ತದೆ.


ಟೀ ಮತ್ತು ಕಾಫಿ:


ಟೀ ಅಥವಾ ಕಾಫಿ ಇವೆರಡೂ ಪಾನೀಯಗಳು ಜನರ ಜೀವನದ ಅವಿಭಾಜ್ಯವಾಗಿದೆ. ಈ ಎರಡೂ ಪಾನೀಯಗಳಲ್ಲಿ ಕೆಫೀನ್ ಎಂಬ ಅಂಶವಿರುತ್ತದೆ. ಇದು ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಹಾಗಾಗಿ ಟೀ, ಕಾಫಿ ತ್ಯಜಿಸಿದರೆ ಒಳ್ಳೆಯದು. ಸಂಪೂರ್ಣವಾಗಿ ಬಿಟ್ಟುಕೊಡಲು ಸಾಧ್ಯವಾಗದಿದ್ದರೆ ನೀವು ಸೇವಿಸುವ ಪ್ರಮಾಣವನ್ನು ಕಡಿಮೆ ಮಾಡಲು ಪ್ರಯತ್ನಿಸಿ.


ಉಪ್ಪು ಭರಿತ ಆಹಾರಗಳು:


ಇಫ್ತಾರ್ ಕೂಟ ಇದು ಉಪವಾಸ ತಿಂಗಳ ವಿಶೇಷ ಕೂಟ. ಈ ವೇಳೆ ಉಪ್ಪು ಭರಿತ ಪದಾರ್ಥಗಳಾದ ಸಮೋಸ, ಪಕೋಡಗಳು ಆಹಾರ ಪಟ್ಟಿಯಲ್ಲಿ ಸ್ಥಾನ ಪಡೆದಿರುತ್ತದೆ. ಆದರೆ ಉಪವಾಸದ ವೇಳೆ ಆರೋಗ್ಯದ ದೃಷ್ಟಿಯಿಂದ ಇದು ಹಿತವಲ್ಲ. ಉಪ್ಪು ಭರಿತ ಆಹಾರ ಪದಾರ್ಥ ಸೇವಿಸಿದರೆ ಹೆಚ್ಚು ಬಾಯಾರಿಕೆ ಉಂಟಾಗುತ್ತದೆ. ಹಾಗಾಗಿ ಉಪವಾಸ ಮುಗಿದ ಬಳಿಕ ನೀರಿನಾಂಶ ಹೆಚ್ಚಾಗಿರುವ ತಾಜಾ ಹಣ್ಣುಗಳಾದ ಕಲ್ಲಂಗಡಿ, ಕರಬೂಜ ಹಣ್ಣು, ಸೌತೆಕಾಯಿ, ಟೊಮ್ಯಾಟೋ, ಕಿವಿ ಹಣ್ಣು, ಕಿತ್ತಳೆ ಸೇವಿಸಿದರೆ ಉತ್ತಮ. ಇದು ನಿರ್ಜಲೀಕರಣ ತಡೆಯುವುದು ಮಾತ್ರವಲ್ಲ ಯಾವುದೇ ರೀತಿಯ ಸೋಂಕು ಹರಡದಂತೆಯೂ ತಡೆಯುತ್ತದೆ.


ಸಕ್ಕರೆ ಭರಿತ ಆಹಾರ ಬೇಡ:


ಸಕ್ಕರೆ ಭರಿತ ಸಿಹಿ ಪದಾರ್ಥಗಳಾದ ಜಿಲೇಬಿ, ಜಾಂಗೀರ್ ಈ ರೀತಿಯ ಪದಾರ್ಥಗಳನ್ನು ತಿಂದರೆ ದೇಹದ ತೂಕ ಹೆಚ್ಚಾಗುತ್ತದೆ. ಹೆಚ್ಚು ಹೆಚ್ಚು ಸಿಹಿ ಪದಾರ್ಥಗಳು ಸೇವಿಸುವುದರಿಂದ ಹಸಿವನ್ನು ತಡೆಗಟ್ಟುವ ಸಾಧ್ಯತೆಯೂ ಇರುತ್ತದೆ. ಆದ್ದರಿಂದ ಇವುಗಳ ಬದಲು ಓಟ್ಸ್, ಮಿಲ್ಲೆಟ್ಸ್, ಮೊಟ್ಟೆಗಳನ್ನು ತಿನ್ನುವುದನ್ನು ರೂಢಿಸಿಕೊಳ್ಳಿ. ನೀವು ಸಿಹಿತಿಂಡಿಗಳನ್ನು ಇಷ್ಟಪಡುತ್ತಿದ್ದರೆ, ಪೋಷಕಾಂಶಗಳಿಂದ ಸಮೃದ್ಧವಾಗಿರುವ ಡೇಟ್ಸ್ ಮತ್ತು ಹಣ್ಣುಗಳು ಹಾಗೂ ಸಂಸ್ಕರಿಸಿದ ಸಕ್ಕರೆಯಂತಹ ಆಹಾರವನ್ನು ಸೇವಿಸಿ. ಇದು ಆರೋಗ್ಯವೃದ್ಧಿಗೆ ಸಹಾಯಕವಾಗಲಿದೆ.


ಯಥೇಚ್ಛವಾಗಿ ನೀರು ಕುಡಿಯದಿರಿ:


ಹಲವು ಮಂದಿಗೆ ಉಪವಾಸದ ಅವಧಿ ಮುಗಿದ ತಕ್ಷಣ ನೀರು ಕುಡಿಯುವ ಅಭ್ಯಾಸವಿರುತ್ತದೆ. ಹೆಚ್ಚಿನ ಪ್ರಮಾಣದ ನೀರಿನ ಸೇವನೆಯಿಂದಾಗಿ ಪೌಷ್ಠಿಕಾಂಶಯುಕ್ತ ಸಮೃದ್ಧ ಆಹಾರ ತಿನ್ನುವುದನ್ನು ತಡೆಯುತ್ತದೆ. ಹಾಗಾಗಿ ಆ ಅವಧಿಯಲ್ಲಿ ಕಡಿಮೆ ಪ್ರಮಾಣದಲ್ಲಿ ನೀರನ್ನು ಕುಡಿಯಿರಿ. ಸಣ್ಣ ಸಣ್ಣ ಪ್ರಮಾಣದಲ್ಲಿ ಸಣ್ಣ ಗ್ಯಾಪ್‌ ಕೊಟ್ಟು ನೀರು ಸೇವಿಸಬಹುದು.


ಬೇಗ ಮಲಗುವ, ಎದ್ದೇಳುವ ಅಭ್ಯಾಸ ರೂಢಿಸಿಕೊಳ್ಳಿ:


ಈ ಸಮಯದಲ್ಲಿ ಯಥೇಚ್ಛ ನಿದ್ರೆ ಅವಶ್ಯಕ. ಇಲ್ಲದಿದ್ದರೆ ದೇಹದ ದಣಿದ ಸ್ಥಿತಿಯಲ್ಲಿ ಇರುತ್ತದೆ. ಆದ ಕಾರಣ ಬೇಗ ಮಲಗುವ ಅಭ್ಯಾಸ ರೂಢಿಸಿಕೊಂಡರೆ ಬೇಗ ಎದ್ದೇಳುವುದಕ್ಕೂ ಅನುಕೂಲವಾಗುತ್ತದೆ. ಆಗ ದೇಹ ಮತ್ತು ಮನಸ್ಸು ಎರಡು ಉಲ್ಲಾಸಭರಿತವಾಗಿರುತ್ತದೆ.

First published: