HOME » NEWS » Trend » FIVE SMART WAYS TO SAVE TAX WITHOUT MAKING ANY INVESTMENT STG HG

ಟ್ಯಾಕ್ಸ್ ಉಳಿಸೋಕೆ ಇಲ್ಲಿವೆ 5 ಸರಳ ಮಾರ್ಗಗಳು

Investment: ತೆರಿಗೆ ಉಳಿಸುವ ಸಲುವಾಗಿ ನಿಮಗೆ ಮತ್ತೆ ಹೂಡಿಕೆ ಮಾಡಲು ಮನಸ್ಸಿಲ್ಲದಿದ್ದರೆ, ಈ ಆಯ್ಕೆಗಳನ್ನು ಪರಿಶೀಲಿಸಬಹುದು.

news18-kannada
Updated:June 10, 2021, 3:52 PM IST
ಟ್ಯಾಕ್ಸ್ ಉಳಿಸೋಕೆ ಇಲ್ಲಿವೆ 5 ಸರಳ ಮಾರ್ಗಗಳು
Photo: Google
  • Share this:

ಸಾಮಾನ್ಯವಾಗಿ ನಾವು ತೆರಿಗೆ ಉಳಿತಾಯಕ್ಕಾಗಿ ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್), ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್‌ಎಸ್‌ಸಿ), ತೆರಿಗೆ ಉಳಿಸುವ ನಿಶ್ಚಿತ ಠೇವಣಿ, ಜೀವ ವಿಮೆ ಹಾಗೂ ಆರೋಗ್ಯ ವಿಮೆ ಪಾಲಿಸಿಗಳಂಥ ಹಣಕಾಸು ಆಯ್ಕೆಗಳನ್ನು ಬಳಸುತ್ತೇವೆ.ಇವುಗಳನ್ನು ಹೊರತುಪಡಿಸಿದಂತೆ, ಯಾವುದೇ ಹೂಡಿಕೆ ಇಲ್ಲದೆ ತೆರಿಗೆ ಉಳಿಸುವ ಐದು ಆಯ್ಕೆಗಳು ನಿಮ್ಮ ತೆರಿಗೆಯ ಹೊರೆಯನ್ನು ಇಳಿಸಬಲ್ಲವು. ತೆರಿಗೆ ಉಳಿಸುವ ಸಲುವಾಗಿ ನಿಮಗೆ ಮತ್ತೆ ಹೂಡಿಕೆ ಮಾಡಲು ಮನಸ್ಸಿಲ್ಲದಿದ್ದರೆ, ಈ ಆಯ್ಕೆಗಳನ್ನು ಪರಿಶೀಲಿಸಬಹುದು.


1. ಗೃಹ ಸಾಲ ತೆಗೆದುಕೊಳ್ಳುವುದು:



ತೆರಿಗೆ ಉಳಿಸಲು ಗೃಹ ಸಾಲ ತೆಗೆದುಕೊ‍ಳ್ಳುವುದು ಒಂದು ಉತ್ತಮವಾದ ಮಾರ್ಗ. ಇದು ಅನೇಕ ತೆರಿಗೆ ಕಡಿತಗಳನ್ನು ಒದಗಿಸಿಕೊಡುತ್ತದೆ. ಸಾಮಾನ್ಯವಾಗಿ ಸೆಕ್ಷನ್ 80ಸಿ ಅಡಿ 1.5 ಲಕ್ಷ ರೂ. ಗಳವರೆಗೆ ‍ಗೃಹ ಸಾಲದ ಅಸಲು ಮರುಪಾವತಿಗೆ ಹಾಗೂ ಸೆಕ್ಷನ್ 24ಬಿ ಅಡಿ 2 ಲಕ್ಷ ರೂ.ಗಳವರೆಗೆ ಗೃಹ ಸಾಲದ ಬಡ್ಡಿ ಮರುಪಾವತಿಗೆ ವಿನಾಯಿತಿಗಳನ್ನು ಹೊಂದಬಹುದಾಗಿದೆ. ನೀವು ಖರೀದಿಸಿದ ಆಸ್ತಿ, ನೀವು ಸಾಲ ಪಡೆಯುತ್ತಿರುವ ಮೊತ್ತ ಮತ್ತು ನಿಮ್ಮ ಸಾಲ ಮಂಜೂರಾತಿಯ ವರ್ಷವನ್ನು ಆಧರಿಸಿ, ನಿಮ್ಮ ಸಾಲದ ಬಡ್ಡಿ ಮರುಪಾವತಿಯಲ್ಲಿ ಸೆಕ್ಷನ್ 80 ಇಇ ಅಡಿಯಲ್ಲಿ ಸೆಕ್ಷನ್ 80 ಇಇ ಅಡಿಯಲ್ಲಿ ಅಥವಾ ಸೆಕ್ಷನ್ 80 ಇಇಎ ಅಡಿಯಲ್ಲಿ 1.5 ಲಕ್ಷ ರೂ.ಗಳ ಹೆಚ್ಚಿನ ತೆರಿಗೆ ವಿನಾಯಿತಿಗೆ ನೀವು ಅರ್ಹರಾಗಬಹುದು. ಹಾಗೂ ಆ ಮೂಲಕ ನೀವು ಹೆಚ್ಚಿನ ತೆರಿಗೆ ಪಾವತಿಯಿಂದ ಪಾರಾಗಬಹುದು.


2. ವೈದ್ಯಕೀಯ ವೆಚ್ಚಗಳಿಗೆ ಕಡಿತ:


ನೀವೇನಾದರೂ ನಿಮಗೆ, ನಿಮ್ಮ ಸಂಗಾತಿ, ಅವಲಂಬಿತ ಮಕ್ಕಳು ಮತ್ತು ಅವಲಂಬಿತ ಪೋಷಕರಿಗೆ ಆರೋಗ್ಯ ವಿಮಾ ಪಾಲಿಸಿಗಳಿಗೆ ಪ್ರೀಮಿಯಂ ಪಾವತಿಸುತ್ತಿದ್ದರೆ ತೆರಿಗೆ ವಿನಾಯಿತಿ ಪಡೆಯಲು ಸೆಕ್ಷನ್ 80ಡಿ ನಿಮಗೆ ಅವಕಾಶ ನೀಡುತ್ತದೆ. ನೀವು ನಿಮ್ಮ ಕುಟುಂಬದ ಪ್ರತಿಯೊಬ್ಬರಿಗೂ ಸಂಪೂರ್ಣವಾಗಿ ಆರೋಗ್ಯ ವಿಮೆಯನ್ನು ಖರೀದಿಸಬಹುದು. ಆದರೆ ನೀವು ಹಾಗೆ ಮಾಡದಿದ್ದರೂ, ಆರೋಗ್ಯ ತಪಾಸಣೆಗಾಗಿ ಮಾಡಿದ ಖರ್ಚುಗಳಿಗಾಗಿ 5,000 ರೂ.ಗಳವರೆಗೆ ವಿನಾಯಿತಿಯನ್ನು ಪಡೆಯಬಹುದು. ನೀವೇನಾದರೂ ಹಿರಿಯ ನಾಗರಿಕರಾಗಿದ್ದರೆ ಅಥವಾ ನಿಮ್ಮ ಪೋಷಕರು ಹಿರಿಯ ನಾಗರಿಕರಾಗಿದ್ದರೆ ನೀವು ಮಾಡಿದ ಆರೋಗ್ಯ ವೆಚ್ಚಗಳು ಹಿರಿಯ ನಾಗರಿಕರ ಆರೋಗ್ಯ ವಿಮೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಭಾವಿಸಿ 50,000 ರೂ. ಗಳವರೆಗೆ ವಿನಾಯಿತಿಯನ್ನು ಪಡೆಯಬಹುದು.


3. ಮಕ್ಕಳ ಬೋಧನಾ ಶುಲ್ಕಕ್ಕೆ ವಿನಾಯಿತಿಗಳು:
ನಿಮ್ಮ ಮಕ್ಕಳ ಭವ್ಯ ಭವಿಷ್ಯಕ್ಕಾಗಿ ನೀವು ನಿಮ್ಮ ಮಕ್ಕಳ ಶಿಕ್ಷಣಕ್ಕಾಗಿ ಆದಾಯದ ಬಹುಪಾಲನ್ನು ಬಳಸಿಕೊಂಡಿರುತ್ತೀರಿ. ಹೀಗಾಗಿ ಈ ವೆಚ್ಚಗಳಿಗೆ ಸಂಬಂಧಿಸಿದ ತೆರಿಗೆ ಪ್ರಯೋಜನಗಳನ್ನು ಗರಿಷ್ಠಗೊಳಿಸುವುದು ನಿಮಗೆ ಅನುಕೂಲ ತರಬಹುದು. ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಪಾಲಕರು ಪಾವತಿಸುವ ಬೋಧನಾ ಶುಲ್ಕಕ್ಕೆ ಸೆಕ್ಷನ್ 80 ಸಿ ಅಡಿಯಲ್ಲಿ 1.5 ಲಕ್ಷ ರೂ. ಗಳವರೆಗೆ ತೆರಿಗೆ ವಿನಾಯಿತಿ ಸಿಗುತ್ತದೆ. ಶಾಲೆ, ಕಾಲೇಜು, ಎಲ್.ಕೆ.ಜಿ, ಯು.ಕೆ.ಜಿ, ನರ್ಸರಿಗಳಂತಹ ಯಾವುದೇ ನೋಂದಾಯಿತ ಸಂಸ್ಥೆಯಲ್ಲಿ ನೀಡಲಾಗುವ ಯಾವುದೇ ಪೂರ್ಣಕಾಲಿಕ ಶಿಕ್ಷಣ ಯೋಜನೆಗೆ ಈ ಲಾಭವು ಅನ್ವಯವಾಗುತ್ತದೆ. ಆದರೆ ಷರತ್ತು ಏನೆಂದರೆ, ಪ್ರತಿ ತೆರಿಗೆದಾರನ ಎರಡು ಮಕ್ಕಳಿಗೆ ಮಾತ್ರ ಆತ ಪಾವತಿಸುವ ಬೋಧನಾ ಶುಲ್ಕಕ್ಕೆ ಈ ಯೋಜನೆ ಅನ್ವಯಿಸುತ್ತದೆ. (ಇದರ ಪ್ರಕಾರ, ಇಬ್ಬರೂ ವೈಯಕ್ತಿಕ ತೆರಿಗೆ ಭರಿಸುವ ದಂಪತಿಗಳಾದರೆ ಅವರು ತಮ್ಮ 4 ಮಕ್ಕಳಿಗೆ ಈ ಪ್ರಯೋಜನವನ್ನು ಪಡೆಯಬಹುದು). ಅಂದಹಾಗೆ, ಈ ವಿನಾಯಿತಿಯು ಬೋಧನಾ ಶುಲ್ಕಕ್ಕೆ ಮಾತ್ರ ಅನ್ವಯಿಸುತ್ತದೆ ಮತ್ತು ಅಭಿವೃದ್ಧಿ ಶುಲ್ಕ, ತಡವಾಗಿ ಪಾವತಿ ಶುಲ್ಕ ಮುಂತಾದ ಇತರ ಪಾವತಿಗಳಿಗೆ ಇದು ಅನ್ವಯವಾಗದು.

4. ವಿಪಿಎಫ್‌ನೊಂದಿಗೆ ನಿಮ್ಮ ಇಪಿಎಫ್ ಕೊಡುಗೆಗಳನ್ನು ಹೆಚ್ಚಿಸಿ:


ಸಂಬಳ ನಂಬಿ ಬದುಕುವ ಅಸಂಖ್ಯ ನೌಕರರಿಗೆ ಭವಿಷ್ಯ ನಿಧಿಯು ನಿವೃತ್ತಿಯ ನಂತರದ ಉಳಿತಾಯದ ಬೆನ್ನೆಲುಬು ಎಂದರೆ ತಪ್ಪಾಗದು. ಅವರು ತಮ್ಮ ಮೂಲ ಸಂಬಳದ ಕನಿಷ್ಠ 12% ದಷ್ಟು ಹಣವನ್ನು ಹಾಗೂ ತುಟ್ಟಿ ಭತ್ಯೆಯನ್ನು ಇಪಿಎಫ್ ಆಗಿ ಉಳಿಸುವುದು ಅವಶ್ಯಕ. ಈ ಮಿತಿಯನ್ನು ಬೇಕಿದ್ದರೆ ವಿಪಿಎಫ್ ಮೂಲಕ ಸ್ವಯಂಪ್ರೇರಿತವಾಗಿ ಭವಿಷ್ಯ ನಿಧಿ ಯೋಜನೆಯ ಮೂಲಕ ಮೀರಬಹುದು (ಅವರ ಮೂಲ ವೇತನ ಮತ್ತು ಡಿಎಯ 100% ದಷ್ಟು). ಹೆಸರೇ ಸೂಚಿಸುವಂತೆ, ಕಡ್ಡಾಯ ಇಪಿಎಫ್ ಕೊಡುಗೆಗಿಂತ ಹೆಚ್ಚಿನ ಸ್ವಯಂಪ್ರೇರಿತ ಕೊಡುಗೆಗೆ ವಿಪಿಎಫ್ ಎನ್ನುತ್ತಾರೆ.


"ತಮ್ಮ ವಿಪಿಎಫ್ ಕೊಡುಗೆಗಳನ್ನು ಪ್ರಾರಂಭಿಸಲು, ಅಥವಾ ಹೆಚ್ಚಿನ ಮಾಹಿತಿ ತಿಳಿಯಲು ಸಂಬಳ ಪಡೆಯುವ ವ್ಯಕ್ತಿಗಳು ತಮ್ಮ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದವರನ್ನು ಸಂಪರ್ಕಿಸಬಹುದು. ಮುಖ್ಯವಾಗಿ, ಅವರು ತಮ್ಮ ಇಪಿಎಫ್ ಮತ್ತು ವಿಪಿಎಫ್ ಕೊಡುಗೆಗಾಗಿ ಸೆಕ್ಷನ್ 80 ಸಿ ಅಡಿಯಲ್ಲಿ 1.5 ಲಕ್ಷ ರೂ.ಗಳವರೆಗೆ ತೆರಿಗೆ ವಿನಾಯಿತಿಯನ್ನೂ ಪಡೆಯಬಹುದು. ಈ ಅಪಾಯ ಮುಕ್ತ ಹೂಡಿಕೆಯು ನಿಮಗೆ ಪ್ರಸ್ತುತ ವಾರ್ಷಿಕ 8.5% ಬಡ್ಡಿಯನ್ನೂ ಒದಗಿಸುತ್ತದೆ


5.ಬಾಡಿಗೆ ಪಾವತಿಸಿದರೆ ಅದಕ್ಕೂ ತೆರಿಗೆ ವಿನಾಯಿತಿ ಇದೆ


ನೀವು ಸಂಬಳ ಪಡೆಯುವ ವ್ಯಕ್ತಿಯಾಗಿದ್ದು, ಬಾಡಿಗೆ ಮನೆಯಲ್ಲಿ ವಾಸವಿದ್ದರೆ, ಮನೆ ಮಾಲೀಕರಿಗೆ ಬಾಡಿಗೆ ಪಾವತಿಸುವ ಮೂಲಕ ಸ್ವಲ್ಪ ತೆರಿಗೆಯನ್ನು ಉಳಿಸಬಹುದು. ನೀವು ಕೆಲಸ ಮಾಡುವ ಸಂಸ್ಥೆಯು ನಿಮಗೆ ಬಾಡಿಗೆ ಭತ್ಯೆಯನ್ನು (ಎಚ್‌ಆರ್‌ಎ) ನೀಡುತ್ತಿದ್ದರೆ, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 10 (13 ಎ) ರ ನಿಬಂಧನೆಗಳ ಪ್ರಕಾರ ಪಾವತಿಸಿದ ಬಾಡಿಗೆಗೆ ವಿನಾಯಿತಿ ಪಡೆಯಬಹುದು. ಬೇರೆ ಸಂದರ್ಭಗಳಲ್ಲಿ ಅಥವಾ ನೀವು ನಿಮ್ಮ ಕಂಪನಿಯಿಂದ ಯಾವುದೇ ಎಚ್‌ಆರ್‌ಎ ಪಡೆಯದಿದ್ದಲ್ಲಿ, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಜಿಜಿ ಪ್ರಕಾರ ಪ್ರತಿ ತಿಂಗಳು 5000 ರೂ.ಗಳವರೆಗೆ ವಿನಾಯಿತಿಯನ್ನು ಪಡೆಯಬಹುದು. (ಆದರೆ ಇದು ನಿಗದಿತ ಷರತ್ತುಗಳಿಗೆ ಒಳಪಟ್ಟಿರುತ್ತದೆ).


First published: June 10, 2021, 3:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories