ನಾಳೆ ವಿಶ್ವ ಅಪ್ಪಂದಿರ ದಿನಾಚರಣೆ.. ಪ್ರತೀ ವರ್ಷ ಜೂನ್ 20ನ್ನು ವಿಶ್ವ ಅಪ್ಪಂದಿರ ದಿನವನ್ನಾಗಿ ಆಚರಿಸಲಾಗುತ್ತದೆ. “ಅಪ್ಪ” ಎನ್ನುವ ಅನುಭವಕ್ಕೆ ಬೇರಾವ ಅನುಭವವೂ ಸಾಟಿಯಲ್ಲ. ತನ್ನಿಡೀ ಜೀವನವನ್ನು ಮಕ್ಕಳಿಗೋಸ್ಕರವೇ ಸವೆಸುವ ಅಪ್ಪನ ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವೇ? ಹೆಣ್ಣಾದವಳು ತಾಯಿಯಾಗುತ್ತಿರುವ ಸಂದರ್ಭದಲ್ಲಿ ಹೊಸ ಅನುಭವಕ್ಕೆ ಕೆಲವು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಾಳೆ. ತನ್ನ ಮಗುವನ್ನು 9 ತಿಂಗಳುಗಳ ಕಾಲ ಹೊಟ್ಟೆಯಲ್ಲಿ ಹೊತ್ತುಕೊಳ್ಳುವ ಆಕೆ, ತಾಯ್ತನದ ಸವಿಯನ್ನೂ ಅನುಭವಿಸುತ್ತಿರುತ್ತಾಳೆ. ಹಾಗಾದರೆ ಗರ್ಭಿಣಿಯೊಬ್ಬರು ಮಾತ್ರ ಮಗುವಿನ ಜನನಕ್ಕೆ ಸಿದ್ಧರಾದರೆ ಸಾಕೇ? ಈ ವೇಳೆ ತಂದೆಯಾದವರ ಜವಾಬ್ದಾರಿ ಇರುವುದಿಲ್ಲವೇ? ಖಂಡಿತ ಇದೆ. ಈ ಬಗ್ಗೆ ಫೋರ್ಟಿಸ್ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ಸಲಹೆಗಾರರಾದ ಡಾ.ಚಂದ್ರಿಕಾ ಆನಂದ್ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಗಂಡನಾದವನು, ತನ್ನ ಹೆಂಡತಿಯೇ ಪೂರ್ಣ ನೋವು ಅನುಭವಿಸಿಕೊಂಡು ಮಗು ಹೆರಲಿ, ನನ್ನದು ಕೇವಲ ದುಡಿದು, ತಂದು ಹಾಕುವುದಷ್ಟೇ ಎನ್ನುವ ಮನೋಭಾವ ಸರಿಯಲ್ಲ. ತಾಯ್ತನದಂತೆ, ತಂದೆತನ ಎನ್ನುವುದೂ ಇದೆ, ಹಾಗೇ ಜವಾಬ್ದಾರಿಯೂ ಸಹ ಇದೆ. ಅದರಲ್ಲೂ ಈ ಕೊರೋನ ಕಾಲಘಟ್ಟದಲ್ಲಿ ಹೊಸದಾಗಿ ತಂದೆಯಾಗುತ್ತಿರುವವರ ಪ್ರಮಾಣವೂ ಹೆಚ್ಚು. ಹೀಗಾಗಿ ಹೊಸದಾಗಿ ತಂದೆಯ ಬಡ್ತಿ ಪಡೆಯುತ್ತಿರುವವರಿಗೆ ಇಲ್ಲಿದೆ ಕೆಲವು ಟಿಪ್ಸ್ ಹಾಗೂ ತಂದೆತನ ಅನುಭವಿಸುವ ಟ್ರಿಕ್ಸ್..
1. ಗರ್ಭಾವಸ್ಥೆಯಲ್ಲಿ ತಾಯಿಯಾಗುವಳಿಗಿಂತ ತಂದೆಯದ್ದೇ ಹೆಚ್ಚು ಜವಾಬ್ದಾರಿ:
ಇಂದಿನ ಕಾಲದಲ್ಲಿ ಅವಿಭಕ್ತ ಕುಟುಂಬಗಳಿಗಿಂತ ಗಂಡ-ಹೆಂಡತಿಯಷ್ಟೇ ಇರುವ ಸಣ್ಣ ಕುಟುಂಬಗಳೇ ಹೆಚ್ಚು. ಇಂಥ ಸಂದರ್ಭದಲ್ಲಿ ಹೆಣ್ಣು ಗರ್ಭಿಣಿಯಾದರೆ, ಅವಳ ಆರೈಕೆಗೆ ಮತ್ತೊಬ್ಬರ ಸಹಾಯ ಪಡೆಯುವುದು ಕಷ್ಟಕರ. ಹೀಗಾಗಿ ಗಂಡನಾದವನು, ಗರ್ಭಿಣಿಯನ್ನು ಮಗುವಿಗಿಂತ ಹೆಚ್ಚಾಗಿ ಆರೈಕೆ ಮಾಡುವುದು ಅತಿ ಮುಖ್ಯ. ಆ 9 ತಿಂಗಳುಗಳ ಕಾಲ ತನ್ನ ಗರ್ಭಿಣಿ ಹೆಂಡತಿಯನ್ನು ದೈಹಿಕ ಹಾಗೂ ಮಾನಸಿಕವಾಗಿ ಕ್ರಿಯಾಶೀಲವಾಗಿ ಇಟ್ಟುಕೊಳ್ಳುವತ್ತ ಗಮನ ಹರಿಸಬೇಕು.
ಇದನ್ನೂ ಓದಿ:Karnataka Dams Water Level: ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಇಲ್ಲಿದೆ
2. ಹೆಂಡತಿಗೆ ಸಮಯ ಕೊಡಿ:
ಗರ್ಭಾವಸ್ಥೆಯಲ್ಲಿ ಹೆಣ್ಣಿನ ಮೊದಲ ಬಯಕೆ ಎಂದರೆ ಗಂಡ ಸದಾ ಜೊತೆಯಲ್ಲಿರಬೇಕು ಎಂದು. ಆದರೆ, ಕೆಲಸದ ಒತ್ತಡದಿಂದ ಗಂಡನಾದವನು ಸಮಯ ಕೊಡದೇ ಹೋಗಬಹುದು. ಇದರಿಂದ ಹೆಂಡತಿ ಮಾನಸಿಕವಾಗಿ ಕುಗ್ಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಗಂಡನಾದವನು ಈ ಸಂದರ್ಭದಲ್ಲಿ ಅವಳೊಂದಿಗೆ ಹೆಚ್ಚು ಸಮಯ ಕಳೆಯಬೇಕು. ಅವಳೊಂದಿಗೆ ಆಸ್ಪತ್ರೆಗೆ ತೆರಳಿ ಅಲ್ಟ್ರಾಸೌಂಡ್ ಸ್ಕ್ಯಾನ್, ಸೇರಿದಂತೆ ಇತರೆ ಓಡಾಡದಲ್ಲಿ ಜೊತೆಗೆ ನಿಲ್ಲಬೇಕು.
ಅಲ್ಲದೆ, ಜೊತೆಗೆ ಊಟ ಮಾಡುವುದು, ಊಟ ಮಾಡಿಸುವುದು, ಅವಳೊಂದಿಗೆ ಹರಟೆ ಹೊಡೆಯುವುದು, ಸಾಧ್ಯವಾದರೆ ಸುಂದರ ಸಂಜೆ ಕಳೆಯುವುದು, ಅವಳು ಇಷ್ಟ ಪಡುವ ರೀತಿ ನಡೆದುಕೊಳ್ಳುವುದು, ಕೋಪ ನಿಯಂತ್ರಿಸಿಕೊಳ್ಳುವುದು, ವ್ಯಾಯಾಮ ಮಾಡಿಸುವಲ್ಲಿ ತೊಡಗಿಕೊಳ್ಳುವುದು, ಪೌಷ್ಠಿಕ ಆಹಾರ ನೀಡುವುದು, ಮಾನಸಿಕ ನೆಮ್ಮದಿಗೆ ಒತ್ತು ನೀಡುವುದು ಇಂಥ ಸಣ್ಣ ಸಂಗತಿಗಳನ್ನು ಮಾಡುವುದರಿಂದ ಗರ್ಭಿಣಿಯರು ಹೆಚ್ಚು ಆನಂದವಾಗಿರಲು ಸಾಧ್ಯ.
ಇದನ್ನೂ ಓದಿ:RIP Milkha Singh: ಮಿಲ್ಖಾ ಸಿಂಗ್ ವೇಗಕ್ಕೆ ದಂಗಾಗಿದ್ದ ಪಾಕಿಸ್ತಾನಿ..!; ಫ್ಲೈಯಿಂಗ್ ಸಿಖ್ ದಂತಕತೆಯಾಗಿದ್ದೇ ರೋಚಕ !
3. ಧೂಮಪಾನ, ಮದ್ಯಪಾನ ಸೇವನೆ ನಿಲ್ಲಿಸಿ:
ಮಗು ಹೆರುವುದು ಹೆಂಡತಿ ತಾನೇ, ಆಕೆ ಆರೋಗ್ಯಕರ ಜೀವನ ಶೈಲಿ ಹೊಂದಿದ್ದರೆ ಸಾಕು ಎನ್ನುವ ಮನಸ್ಥಿತಿಯನ್ನು ತೆಗೆದು ಹಾಕಿ. ಏಕೆಂದರೆ, ಗರ್ಭಿಣಿಯರ ಸುತ್ತಲಿನ ವಾತಾವರಣ ಸ್ವಚ್ಛಂದವಾಗಿರಬೇಕು. ಹೀಗಾಗಿ ಗಂಡನಾದವನು ಮೊದಲ ಮಾಡಬೇಕಾದ ಕೆಲಸವೆಂದರೆ ಈ ಕೆಟ್ಟ ಚಟಗಳನ್ನು ಬಿಡುವುದು. ಇಲ್ಲವಾದರೆ, ಸಿಗರೇಟಿನ ಹೊಗೆಯನ್ನೇ ಗರ್ಭಿಣಿಯೂ ಸೇವಿಸುತ್ತಾಳೆ. ಇದರಿಂದ ಹುಟ್ಟುವ ಮಗುವಿನ ತೂಕ ಇಳಿಯಬಹುದು, ಶಿಶುವಲ್ಲಿ ಅಸ್ತಮಾ, ಉಸಿರಾಟದ ಸೋಂಕು, ಕಿವಿ ಸೋರುವಿಕೆ, ಹಠಾತ್ ಶಿಶು ಮರಣದಂತಹ ಘಟನೆ ಸಂಭವಿಸಬಹುದು. ಹೀಗಾಗಿ ಧೂಮಪಾನ ಕಡ್ಡಾಯವಾಗಿ ನಿಲ್ಲಿಸುವುದು ಒಳ್ಳೆಯದು. ಜೊತೆಗೆ ಆಕೆಯ ಪರಿಸರದಲ್ಲಿ ಧೂಮಪಾನಿಗಳನ್ನೂ ದೂರ ಇಡುವುದು ಸೂಕ್ತ.
4. ಹೆರಿಗೆ ಸಮಯದಲ್ಲಿ ಜೊತೆಗಿರಿ:
ತನ್ನ ಹೆರಿಗೆ ಸಮಯದಲ್ಲಿ ಗಂಡನಾದವನು ಜೊತೆಯಲ್ಲೇ ಇರಬೇಕು ಎನ್ನುವುದು ಎಲ್ಲಾ ಹೆಣ್ಣುಮಕ್ಕಳ ಆಸೆ. ಇದಕ್ಕೆ ವೈಜ್ಞಾನಿಕ ಕಾರಣ ಸಹ ಇದೆ. ಗಂಡನಾದವನು ಜೊತೆಯಲ್ಲೇ ಇದ್ದರೆ, ಮಹಿಳೆಯಲ್ಲಿ ಆತ್ಮಸ್ಥೈರ್ಯ ಮೂಡುತ್ತದೆ. ಇದರಿಂದ ಮಗುವಿನ ಜನನಕ್ಕೆ ಹೆಚ್ಚು ಶ್ರಮ ಪಡುವ ಅಗತ್ಯವಿಲ್ಲ. ಅಧ್ಯಯನದ ಪ್ರಕಾರ, ಹೆರಿಗೆ ಸಂದರ್ಭದಲ್ಲಿ ಗಂಡ ಜೊತೆಗಿದ್ದ ಸಂದರ್ಭದಲ್ಲಿ ಶಿಶು ಜನನ ಆರೋಗ್ಯಕರವಾಗಿ ಆಗಿದೆ ಎನ್ನಲಾಗಿದೆ. ಶಿಶು ಮರಣ ಪ್ರಮಾಣ ಸಹ ತೀರ ವಿರಳ ಎಂದು ವರದಿ ತಿಳಿಸಿದೆ.
5. ಭಯ, ಆತಂಕ ನಿವಾರಿಸಿ:
ಹೆರಿಗೆ ಸಂದರ್ಭದಲ್ಲಿ ಗರ್ಭಿಣಿಯರಿಗಿಂತ ಪುರುಷರಲ್ಲೇ ಹೆಚ್ಚು ಆತಂಕ, ಭಯ ಮನೆ ಮಾಡಿರುತ್ತದೆ. ಹೆರಿಗೆ ಸಂದರ್ಭದಲ್ಲಿ ಹೆಂಡತಿಯ ನೋವು, ಕಿರುಚಾಟ ಕೇಳುವ ಗಂಡಂದಿರು ಅಲ್ಲಿಯೇ ಪ್ರಜ್ಞೆ ತಪ್ಪಿದ ಎಷ್ಟೋ ಉದಾಹರಣೆಗಳು ಇವೆ. ಆದರೆ, ಇಂಥ ಘಟನೆಗಳು ನಡೆಯಬಾರದು. ಒಂದು ವೇಳೆ ಗಂಡನೇ ಮೂರ್ಛೆ ಹೋದರೆ ಹೆಂಡತಿ ಆತ್ಮಸ್ಥೈರ್ಯ ಕಳೆದುಕೊಳ್ಳುತ್ತಾರೆ. ಹೀಗಾಗಿ ಆಪರೇಷನ್ ಥಿಯೇಟರ್‌ಗೆ ಬರುವ ಮುನ್ನ ಈ ಬಗ್ಗೆ ಒಂದಷ್ಟು ಅಧ್ಯಯನ ಮಾಡಿಕೊಂಡು ಬಂದಿದ್ದರೆ ಒಳ್ಳೆಯದು.
ಹೆರಿಗೆ ನಂತರ ಪುರುಷನ ಜವಾಬ್ದಾರಿ ದ್ವಿಗುಣವಾಗಿ ಬಿಡುತ್ತದೆ. ಇಷ್ಟು ದಿನ ಗಂಡನಾಗಿದ್ದವರು ಅಪ್ಪನ ಸ್ಥಾನಕ್ಕೆ ಬಡ್ತಿ ಪಡೆದ ನಂತರ ಮಗುವಿನ ಆರೈಕೆಯಲ್ಲಿ ತಾಯಿಯಷ್ಟೇ ಸಮಾನ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಮಗುವಿಗೆ ಚುಚ್ಚುಮದ್ದು, ಮಗುವಿನ ಆರೋಗ್ಯದ ಆರೈಕೆ ಎಲ್ಲವನ್ನೂ ಜವಾಬ್ದಾರಿಯುತವಾಗಿ ನಿಭಾಯಿಸಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ