Wrong Transaction: ಈ ಬಡ ರೈತನ ಖಾತೆಗೆ ಜಮೆಯಾಯ್ತು 52 ಕೋಟಿ ರೂ..!

"ಈ ಹಣವನ್ನು ನನ್ನ ತಂದೆಯ ಖಾತೆಯಲ್ಲಿ ಹೇಗೆ ಜಮೆ ಮಾಡಲಾಗಿದೆ ಎಂದು ನನಗೆ ಗೊತ್ತಿಲ್ಲ. ಆದರೆ ಬ್ಯಾಂಕ್ ನನ್ನ ತಂದೆಗೆ ಹಣವನ್ನು ಖಾತೆಗೆ ಜಮೆ ಮಾಡಿದ ದಿನದಿಂದ ಬಡ್ಡಿ ನೀಡಬೇಕು. ಅದು ನಮ್ಮ ತಪ್ಪಲ್ಲ. ಇದು ಬ್ಯಾಂಕಿನ ತಪ್ಪು" ಎಂದು ಸುಜಿತ್ ಶಾ ಹೇಳಿದರು.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಒಬ್ಬ ಬಡ ರೈತನಿಗೆ(poor farmer) ಅಬ್ಬಬ್ಬಾ ಎಂದರೆ ಎಷ್ಟು ಹಣ ತನ್ನ ಬ್ಯಾಂಕ್ ಖಾತೆಯಲ್ಲಿ ಜಮೆ ಆಗುವುದು ನೀವೇ ಹೇಳಿ. ಅದರಲ್ಲೂ ಎಷ್ಟೋ ಜನರು ಸರ್ಕಾರದಿಂದ ಬರಬೇಕಾದಂತಹ ದುಡ್ಡಿಗೆ ಸುಮಾರು ಬಾರಿ ತಮ್ಮ ಪಾಸ್‌ಬುಕ್(Bank Account book) ಕೈಯಲ್ಲಿ ಹಿಡಿದುಕೊಂಡು ಬ್ಯಾಂಕ್‌ಗೆ ಅಲೆಯುತ್ತಿರುವುದನ್ನು ನಾವು ನೋಡುತ್ತಿರುತ್ತೇವೆ. ಆದರೆ ಇದ್ದಕ್ಕಿದ್ದಂತೆಯೇ ತಮ್ಮ ಬ್ಯಾಂಕ್ ಖಾತೆಯಲ್ಲಿ ಲಕ್ಷ ಅಲ್ಲ, ಕೋಟ್ಯಂತರ ರೂಪಾಯಿ ಬಂದು ಜಮೆ ಆದರೆ ಯಾರಿಗಾದರೂ ಕೊಂಚ ಗಾಬರಿ ಆಗುವುದು ಸಹಜವೇ. ಇತ್ತೀಚಿನ ದಿನಗಳಲ್ಲಿ ಬಿಹಾರ(Bihar)ದಲ್ಲಿ ಅನೇಕ ಜನರ ವೈಯಕ್ತಿಕ ಬ್ಯಾಂಕ್ ಖಾತೆಗಳಿಗೆ ಕೋಟ್ಯಂತರ ರೂಪಾಯಿಗಳು ಬಂದು ಜಮೆ ಆಗುತ್ತಿರುವಂತಹ ಘಟನೆಗಳು ಕೇಳುತ್ತಲೇ ಇದ್ದೇವೆ.

ಆದರೆ ಇತ್ತೀಚಿನ ಘಟನೆಯೊಂದರಲ್ಲಿ ಮುಜಾಫರ್‌ಪುರ ಜಿಲ್ಲೆಯ ಸಿಂಗಾರಿ ಗ್ರಾಮದ ರಾಮ್ ಬಹದ್ದೂರ್ ಶಾ ಎಂಬ ವೃದ್ಧ ರೈತನ ಬ್ಯಾಂಕ್ ಖಾತೆಯಲ್ಲಿ ಬರೋಬ್ಬರಿ 52 ಕೋಟಿ ರೂಪಾಯಿ ಜಮೆಯಾಗಿದೆ.

ತಮ್ಮ ಬ್ಯಾಂಕಿನ ಪಾಸ್‌ಬುಕ್ ಅನ್ನು ಹಿಡಿದುಕೊಂಡು ವಯಸ್ಸಾದವರಿಗೆ ಸರ್ಕಾರದಿಂದ ಬರುವಂತಹ ಪಿಂಚಣಿ ಹಣವನ್ನು ಅವರ ಖಾತೆಗೆ ಜಮೆ ಮಾಡಲಾಗಿದೆಯೇ ಅಥವಾ ಇಲ್ಲವೇ ಎಂದು ವಿಚಾರಿಸಲು ಶಾ ಅವರು ಕತ್ರಾದ ಸಿಎಸ್‌ಪಿ ಮಳಿಗೆಗೆ ಶುಕ್ರವಾರ ಹೋದಾಗ ತಮ್ಮ ಖಾತೆಯಲ್ಲಿ 52 ಕೋಟಿ ರೂಪಾಯಿ ಜಮೆ ಆಗಿರುವಂತಹ ಘಟನೆಯು ಬೆಳಕಿಗೆ ಬಂದಿದೆ.

ಸಿಎಸ್‌ಪಿಯ ಆಪರೇಟರ್ ವೃದ್ಧ ರೈತನ ಖಾತೆಯಲ್ಲಿ ಲಾಗ್‌ಇನ್ ಆಗಿದ್ದಾನೆ ಮತ್ತು 52 ಕೋಟಿ ರೂಪಾಯಿ ಜಮೆ ಆಗಿದ್ದನ್ನು ನೋಡಿ ಆಘಾತಕ್ಕೊಳಗಾಗಿದ್ದಾನೆ. ಆನಂತರ ಈ ಸುದ್ದಿ ಆ ಪ್ರದೇಶದಲ್ಲಿ ಕಾಡ್ಗಿಚ್ಚಿನಂತೆ ಹರಡಿತು.

ಈ ಭಾರಿ ಮೊತ್ತವು ತನ್ನ ಖಾತೆಯಲ್ಲಿ ಜಮೆ ಆಗಿರುವಂತಹ ಸುದ್ದಿ ಕೇಳಿದ ನಂತರ "ನಾವು ಕೃಷಿಯನ್ನು ಅವಲಂಬಿಸಿರುವ ಬಡ ಗ್ರಾಮಸ್ಥರು. ನನ್ನ ಉಳಿದ ಜೀವನ ಸುಲಭ ಮತ್ತು ಸುಗಮವಾಗಲು ನನಗೆ ಸ್ವಲ್ಪ ಹಣ ನೀಡುವಂತೆ ನಾವು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತೇವೆ" ಎಂದು ಶಾ ಹೇಳಿದರು.

ಬಡ ರೈತನ ಮಗ ಸುಜಿತ್ ಶಾ "ನನ್ನ ತಂದೆಯ ಖಾತೆಗೆ ಹಣ ಜಮೆಯಾದ ನಂತರ ನಾವು ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ನಾವು ರೈತರು ಮತ್ತು ನಮಗೆ ಸರ್ಕಾರದ ಸಹಾಯ ಬೇಕು" ಎಂದು ಹೇಳಿದ್ದಾರೆ.

ಇದನ್ನೂ ಓದಿ:Wrong Transaction: ಯಾರದ್ದೋ ಖಾತೆಗೆ ಹೋಗಬೇಕಾದ ಐದೂವರೆ ಲಕ್ಷ ಹಣ ತಪ್ಪಿ ಬಂತು; ಕೇಳಿದ್ರೆ ಮೋದಿ ಕೊಟ್ಟ ಹಣ ಎಂದು ಕೊಡಲು ನಕಾರ

"ಈ ಹಣವನ್ನು ನನ್ನ ತಂದೆಯ ಖಾತೆಯಲ್ಲಿ ಹೇಗೆ ಜಮೆ ಮಾಡಲಾಗಿದೆ ಎಂದು ನನಗೆ ಗೊತ್ತಿಲ್ಲ. ಆದರೆ ಬ್ಯಾಂಕ್ ನನ್ನ ತಂದೆಗೆ ಹಣವನ್ನು ಖಾತೆಗೆ ಜಮೆ ಮಾಡಿದ ದಿನದಿಂದ ಬಡ್ಡಿ ನೀಡಬೇಕು. ಅದು ನಮ್ಮ ತಪ್ಪಲ್ಲ. ಇದು ಬ್ಯಾಂಕಿನ ತಪ್ಪು" ಎಂದು ಸುಜಿತ್ ಶಾ ಹೇಳಿದರು.

"ವೃದ್ಧರೊಬ್ಬರ ಬ್ಯಾಂಕ್ ಖಾತೆಯಲ್ಲಿ 52 ಕೋಟಿ ರೂಪಾಯಿ ಪಡೆದಿದ್ದಾರೆ ಎಂದು ಸ್ಥಳೀಯ ಮೂಲಗಳಿಂದ ನಮಗೆ ತಿಳಿದುಬಂದಿದೆ. ಜಿಲ್ಲೆಯ ಹಿರಿಯ ಅಧಿಕಾರಿಗಳಿಗೆ ಮತ್ತು ಸಂಬಂಧಪಟ್ಟ ಬ್ಯಾಂಕ್ ಗೆ ಮಾಹಿತಿ ನೀಡಲಾಗಿದೆ. ತನಿಖೆ ನಡೆಯುತ್ತಿದೆ" ಎಂದು ಕತ್ರಾ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಮನೋಜ್ ಪಾಂಡೆ ಹೇಳಿದರು.

ಇಂತಹ ಘಟನೆಗಳು ಇತ್ತೀಚಿನ ದಿನಗಳಲ್ಲಿ ನಡೆಯುತ್ತಲೇ ಇವೆ. ಖಗೇರಿಯಾ ಜಿಲ್ಲೆಯ ರಂಜಿತ್ ದಾಸ್ ಎಂಬ ವ್ಯಕ್ತಿಯ ಬ್ಯಾಂಕ್ ಖಾತೆಯಲ್ಲಿ ಸಹ ಹಿಂದೆ 5.5 ಲಕ್ಷ ರೂಪಾಯಿ ಜಮೆ ಆಗಿತ್ತು. ಮೊತ್ತ ಹಿಂದಿರುಗಿಸಲು ದಾಸ್ ನಿರಾಕರಿಸಿದರು. ಅವನು ಹಣವನ್ನು ಹಿಂದಿರುಗಿಸದ ಕಾರಣ, ಬ್ಯಾಂಕ್ ಆತನ ವಿರುದ್ಧ ಕೇಸು ದಾಖಲಿಸಿತ್ತು.
Published by:Latha CG
First published: