ಕೋವಿಡ್-19 ಸಾಂಕ್ರಾಮಿಕದ (Covid19) ಸಮಯದಲ್ಲಿ ಮುಖ್ಯವಾಗಿ ಶಿಕ್ಷಣ (Education) ಹಾಗೂ ಉದ್ಯೋಗ ಕ್ಷೇತ್ರ ಮಹಾನ್ ಪರಿವರ್ತನೆಗೆ ಸಾಕ್ಷಿಯಾದವು. ಮನೆಯಿಂದಲೇ ಓದು, ಮನೆಯಿಂದಲೇ ಕೆಲಸ ಎಂಬ ಹೊಸ ಪದ್ಧತಿಗೆ ವಿದ್ಯಾರ್ಥಿಗಳು ಉದ್ಯೋಗಿಗಳು ತಮ್ಮನ್ನು ಅಳವಡಿಸಿಕೊಂಡರು. ಆದರೆ ಅಮೆರಿಕದ ಕುಟುಂಬವೊಂದು ಈ ಪದ್ಧತಿಗೆ ತದ್ವಿರುದ್ಧವಾಗಿ ಬಸ್ ಅನ್ನೇ ಪ್ರಯಾಣಕ್ಕೆ ತಕ್ಕಂತೆ ಪುನರ್ನಿರ್ಮಿಸಿ ಊರಿಂದೂರಿಗೆ ಪ್ರಯಾಣ ಬೆಳೆಸಿಕೊಂಡು ಮಕ್ಕಳ ಆನ್ಲೈನ್ ತರಗತಿಗಳು ಹಾಗೂ ಔದ್ಯೋಗಿಕ ಸಂಬಂಧಿತ ಕೆಲಸಗಳನ್ನು ನಡೆಸಿದ್ದಾರೆ ಎಂದರೆ ನೀವು ನಂಬಲೇಬೇಕು.
ಹಳೆಯ ಶಾಲಾ ಬಸ್ ಅನ್ನು ಮೊಬೈಲ್ ಹೋಮ್ ಅನ್ನಾಗಿ ಮಾರ್ಪಡಿಸಿ ಈ ಕುಟುಂಬವು ತಮ್ಮ ಪ್ರಯಾಣಕ್ಕೆ ಬೇಕಾದ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದಾರೆ. ಎಲಿಜಬೆತ್ ಸ್ಪೈಕ್ ಹಾಗೂ ಅವರ ಸಂಗಾತಿ ಸ್ಪೈಕ್ ತಮ್ಮಿಬ್ಬರು ಮಕ್ಕಳೊಂದಿಗೆ ಸಾಂಕ್ರಾಮಿಕದ ಸಮಯದಲ್ಲಿ ಸಣ್ಣ ಸಾಹಸಕ್ಕೆ ಕೈ ಹಾಕಿದರು. ಕುಟುಂಬ ಸಮೇತ ಪ್ರಯಾಣ ಮಾಡಲು ನಿರ್ಧರಿಸಿದ ಇವರು, ಇದಕ್ಕಾಗಿ ಆರಿಸಿಕೊಂಡಿದ್ದು ಹಳೆಯ ಶಾಲಾ ಬಸ್ ಅನ್ನು.
ಪ್ರಯಾಣಕ್ಕಾಗಿ ಶಾಲಾ ಬಸ್ ಅನ್ನು ಎಲ್ಲಿ ಖರೀದಿಸಿದರು?:
ಶಾಲಾ ಬಸ್ ಅನ್ನು ಮೂರು ಬೆಡ್ಗಳು ಹಾಗೂ ಇತರ ಸೌಲಭ್ಯಗಳಿರುವ ಮೋಟಾರ್ ಹೋಮ್ ಅನ್ನಾಗಿ ಪರಿವರ್ತಿಸಿ ಕಾರು ಹಾಗೂ ವ್ಯಾನ್ ಬದಲಿಗೆ ಹೊಸ ರೀತಿಯಲ್ಲಿ ಪ್ರಯಾಣವನ್ನು ಅರ್ಥಪೂರ್ಣಗೊಳಿಸಿದ್ದಾರೆ. ಸ್ಪೈಕ್ ಕುಟುಂಬವು ಶಾಲಾ ಬಸ್ ರೂಪಾಂತರಗೊಳಿಸಲು 15,000 ಡಾಲರ್ (ಅಂದಾಜು 11,14,233.00 ರೂ.) ವ್ಯಯಿಸಿದ್ದು ಎರಡು ತಿಂಗಳಲ್ಲಿ ಹಳೆಯ ಶಾಲಾ ಬಸ್ ಅನ್ನು ಪ್ರಯಾಣಕ್ಕೆ ಬೇಕಾದಂತೆ ಮಾರ್ಪಡಿಸಿಕೊಂಡಿದೆ ಎಂದು Metro.co.uk ತಿಳಿಸಿದೆ. ಎಲಿಜಬೆತ್ ಹಾಗೂ ಸ್ಪೈಕ್ ಜೂನ್ 2020ರಲ್ಲಿ ಈ ಹಳೆಯ ಬಸ್ ಅನ್ನು ಫೇಸ್ಬುಕ್ ಮಾರ್ಕೆಟ್ ಪ್ಲೇಸ್ನಿಂದ $3,500 (ಅಂದಾಜು 2,59,987.70 ರೂ.) ಕ್ಕೆ ಖರೀದಿಸಿದ್ದರು ಎನ್ನಲಾಗಿದೆ. ಮೂಲ ಮಾರಾಟ ಬೆಲೆಗಿಂತ ಈ ಬಸ್ಸು ಕನಿಷ್ಠ ಪಕ್ಷ 5 ಪಟ್ಟು ಹೆಚ್ಚಿನ ಬೆಲೆಯಲ್ಲಿ ಮಾರಾಟವಾಗುವುದರಲ್ಲಿ ಸಂದೇಹವೇ ಇಲ್ಲ.
ಹಳೆಯ ಬಸ್ ಅನ್ನೇ ಕುಟುಂಬವು ಪ್ರಯಾಣಕ್ಕೆ ಆರಿಸಿಕೊಂಡಿದ್ದೇಕೆ:
ಹಳೆಯ ಬಸ್ ಅನ್ನೇ ಪ್ರಯಾಣಕ್ಕೆ ಆರಿಸಿಕೊಂಡಿರುವುದರ ಕಾರಣ ತಿಳಿಸಿದ ಎಲಿಜಬೆತ್ ಮಕ್ಕಳೊಂದಿಗೆ ಪ್ರಯಾಣ ಬೆಳೆಸಲು ಕೋವಿಡ್ ನಮಗೆ ಸುವರ್ಣ ಅವಕಾಶವನ್ನೊದಗಿಸಿತು. ಸ್ಪೈಕ್ ಶಾಲಾ ಬಸ್ ಅನ್ನು ಪರಿವರ್ತನೆಯ ಕುರಿತು ಸಣ್ಣವರಾಗಿದ್ದಲೇ ತಿಳಿದುಕೊಂಡಿದ್ದರು ಹಾಗೂ ಇಂತಹದ್ದೇ ಬಸ್ ಅನ್ನು ಪರಿವರ್ತಿಸುವ ಅವಕಾಶಕ್ಕಾಗಿ ಕಾಯುತ್ತಿದ್ದರು ಎಂದು ಎಲಿಜಬೆತ್ ತಿಳಿಸಿದ್ದಾರೆ.
ಬಸ್ ಅನ್ನು ದಂಪತಿ ಹೇಗೆ ಪರಿವರ್ತಿಸಿದರು:
ಹಳೆಯ ಶಾಲಾ ಬಸ್ ಅನ್ನು ಪರಿವರ್ತಿಸುವ ಮುನ್ನ ದಂಪತಿ ಹಲವಾರು ವಿಶ್ಲೇಷಣೆ, ಸಂಶೋಧನೆಗಳನ್ನು ಕೈಗೊಂಡಿದ್ದಾರೆ ಎನ್ನಲಾಗಿದೆ. ಕೆಲಸ ಆರಂಭಿಸುತ್ತಿದ್ದಂತೆಯೇ ಬಸ್ನ ಒಳಾಂಗಣವನ್ನು ತೆಗೆದು ಪುನರ್ ನಿರ್ಮಾಣ ಕಾರ್ಯ ಆರಂಭಿಸಿದರು. ಮೇಲ್ಛಾವಣಿಯ ಮೇಲೆ ಬಿಳಿ ಬಣ್ಣದ ಪ್ಯಾಚ್ನೊಂದಿಗೆ ಬಾಹ್ಯ ರೂಪದಲ್ಲಿ ಹಸಿರು ಬಣ್ಣ ನೀಡಿದರು. ಒಳಭಾಗದಲ್ಲಿ ಕ್ವೀನ್ ಸೈಜ್ ಹಾಸಿಗೆಯೊಂದಿಗೆ ಅದರ ಎದುರು ಭಾಗದಲ್ಲಿ ಮಕ್ಕಳಿಗೆ ಬಂಕ್ ಬೆಡ್ ನಿರ್ಮಿಸುವಲ್ಲಿ ದಂಪತಿ ಯಶಸ್ವಿಯಾದರು.
ಬಸ್ ಏನೆಲ್ಲಾ ಸೌಲಭ್ಯಗಳನ್ನು ಒಳಗೊಂಡಿದೆ?
ಬಸ್ ಇತರ ಸೌಲಭ್ಯಗಳಾದ ಬಾತ್ರೂಮ್, ಶವರ್ ರೂಮ್, ಸಣ್ಣ ಅಡುಗೆ ಮನೆ, ಮೊದಲಾದವುಗಳನ್ನು ಹೊಂದಿದೆ. ಬಸ್ನಲ್ಲಿ ಮಕ್ಕಳಿಗೆ ಮನರಂಜನೆ ಒದಗಿಸುವುದಕ್ಕಾಗಿ ಕ್ಲೈಂಬಿಂಗ್ ವಾಲ್ ಅಳವಡಿಸಲಾಗಿದೆ. ಎಲಿಜಬೆತ್ ಹಾಗೂ ಅವರ ಸಂಗಾತಿ 'chasingthecoastline' ಹೆಸರಿನ ಇನ್ಸ್ಟಾಗ್ರಾಮ್ ಖಾತೆಯನ್ನು ಹೊಂದಿದ್ದು ತಮ್ಮ ಬಸ್ ಪ್ರಯಾಣ ಸಾಹಸದ ವಿವರಗಳನ್ನು ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Holiday at Maldives: ಮಾಲ್ಡೀವ್ಸ್ ಗೆ ಹೋಗೋ ಪ್ಲಾನ್ ಮಾಡ್ತಿದ್ದೀರಾ? ಟ್ರಿಪ್ ಬಗ್ಗೆ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ
ಬಸ್ ಸಿದ್ಧವಾದ ನಂತರ ದಂಪತಿ ಮಕ್ಕಳೊಂದಿಗೆ 16 ಯುಎಸ್ ರಾಜ್ಯಗಳಿಗೆ ಪ್ರಯಾಣ ಬೆಳೆಸಿದ್ದಾರೆ. ಪ್ರಯಾಣದ ಸಮಯದಲ್ಲಿಯೇ ಮಕ್ಕಳು ಕೂಡ ಶಾಲಾ ಕೆಲಸಗಳನ್ನು ಮಾಡಿದ್ದಾರೆ ಹಾಗೂ ಪ್ರಯಾಣದ ಆನಂದ ಅನುಭವಿಸಿದ್ದಾರೆ ಎಂದು ಎಲಿಜಬೆತ್ ತಿಳಿಸುತ್ತಾರೆ. ಪ್ರಯಾಣದ ಆನಂದದಿಂದ ನಾವು ರೋಮಾಂಚನಗೊಂಡಿದ್ದೇವೆ ಎಂದು ಎಲಿಜಬೆತ್ ತಿಳಿಸುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ