ಮಗುವಿನ ಲಿಂಗವನ್ನು ಬಹಿರಂಗಪಡಿಸುವ ಪಾರ್ಟಿಯಲ್ಲಿ 80 ಪೌಂಡ್‌ನಷ್ಟು ಟ್ಯಾನೇರೈಟ್ ಸ್ಪೋಟವಾಗಿದೆ. ಟ್ಯಾನೇರೈಟನ್ನು ಸಾಮಾನ್ಯವಾಗಿ ಬಂದೂಕು ಅಭ್ಯಾಸಕ್ಕಾಗಿ ಬಳಸಲಾಗುತ್ತದೆ. ಇದನ್ನು ಪಾರ್ಟಿಯ ಕಾರಣಕ್ಕೆ ಸ್ಪೋಟಿಸಿದ ಪರಿಣಾಮ ಹತ್ತಿರದ ಮನೆಗಳಲ್ಲಿ ಗೋಡೆಗೆ ತೂಗುಹಾಕಿದ್ದ ಫೋಟೋ ಫ್ರೇಮ್‌ಗಳು ಒಡೆದಿರುವ ಘಟನೆ ಯುಕೆಯಲ್ಲಿ ಕಂಡು ಬಂದಿದೆ.
ಜೆಂಡರ್ ರಿವೀಲ್ ಪಾರ್ಟಿ ಅಂದರೆ ಲಿಂಗ ಬಹಿರಂಗಪಡಿಸುವ ಸಂಭ್ರಮ. ಹುಟ್ಟಲಿರುವ ತಮ್ಮ ಮಗು ಗಂಡೋ ಅಥವಾ ಹೆಣ್ಣೋ ಎಂದು ತಿಳಿಸುವ ಪಾರ್ಟಿ ಇದಾಗಿದೆ. ಶಾಕ್ ಆಗಬೇಡಿ! ಇದು ನಮ್ಮ ದೇಶದಲ್ಲಿ ಅಲ್ಲ. ವಿದೇಶದಲ್ಲಿ ಇಂತಹದೊಂದು ಟ್ರೆಂಡ್ ಜಾರಿಯಲ್ಲಿದೆ. ಈ ಪಾರ್ಟಿ ಮೂಲಕ ದೊಡ್ಡ ಸ್ಫೋಟಕಗಳನ್ನು ಬಳಸಿ ಪಿಂಕ್ ಮತ್ತು ನೀಲಿ ಬಣ್ಣಗಳನ್ನು ತುಂಬಿ ಸ್ಪೋಟಕದ ಮೂಲಕ ನೀಲಿ ಆದರೆ ಗಂಡು ಮಗು, ತಿಳಿ ಗುಲಾಬಿ ಬಣ್ಣ ಬಂದರೆ ಹೆಣ್ಣು ಎಂದು ತಿಳಿಸಲಾಗುತ್ತದೆ. ಕೇವಲ ವೈಯಕ್ತಿಕ ಸಂಭ್ರಮಕ್ಕಾಗಿ ಆಚರಿಸುವ ಈ ಕ್ರೇಜಿ ಐಡಿಯಾಗಳು ಅತ್ಯಂತ ಭಯಂಕರ ಆಚರಣೆಯಾಗಿದೆ. ಇದರಿಂದ ಸಾವಿರಾರು ಎಕರೆ ಪ್ರದೇಶಗಳು ಹೊತ್ತಿ ಉರಿದಿವೆ. ಅಲ್ಲದೇ ಸಾವು, ನೋವುಗಳು ಕೂಡ ಸಂಭವಿಸಿರುವ ಘಟನೆ ವರದಿಯಾಗಿದೆ.
ಆದರೆ ಇತ್ತೀಚೆಗೆ ಇಂಗ್ಲೆಂಡ್‌ನ ನ್ಯೂ ಹ್ಯಾಂಪ್‌ಶೈರ್‌ನಲ್ಲಿ ನಡೆದ ಇಂತಹ ಒಂದು ಪಾರ್ಟಿಯಲ್ಲಿ ನಡೆಸಿದ ಸ್ಪೋಟಕದಿಂದಾಗಿ ಇಡೀ ನಗರ ಕಂಪಿಸಿರುವುದಲ್ಲದೇ ಆ ಪ್ರದೇಶದಾದ್ಯಂತ ನಡುಕ ಉಂಟಾಗಿ ಭೂಕಂಪನಕ್ಕೆ ಕಾರಣವಾಯಿತು.
ಕಿಂಗ್ಸ್‌ಟನ್ ಪೊಲೀಸರಿಗೆ ಮಂಗಳವಾರ ಸಂಜೆ ನ್ಯೂ ಹ್ಯಾಂಪ್‌ಶೈರ್ ಬಳಿ ದೊಡ್ಡ ಸ್ಫೋಟ ಸಂಭವಿಸಿದೆ ಎನ್ನುವ ಹತ್ತು ವರದಿಗಳು ಬಂದಿವೆ ಎಂದು ಎಂದು NBC 10 ವರದಿ ಮಾಡಿದೆ. ಅಲ್ಲದೇ ಈ ಸ್ಫೋಟ ಸಂಭವಿಸಿದ ಕಾರಣ ನಗರದಲ್ಲೆಲ್ಲಾ ಆತಂಕದ ವಾತಾವರಣ ನಿರ್ಮಾಣವಾಗಿದೆ. ಬಹಳ ಮುಖ್ಯವಾಗಿ ಸ್ಪೋಟ ಸಂಭವಿಸಿದ ಸಮೀಪವಿದ್ದ ಮನೆಗಳಲ್ಲಿದ್ದವರು ಬೆಚ್ಚಿ ಬಿದ್ದಿದ್ದಾರೆ. ಮನೆಯಲ್ಲಿ ಕೆಲವು ವಸ್ತಗಳು ಚದುರಿ ಬಿದ್ದಿದ್ದು, ಗಾಜಿನ ಫ್ರೇಮ್‌ಗಳು ಒಡೆದಿವೆ ಅಲ್ಲದೇ ಆಸ್ತಿ ಪಾಸ್ತಿಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ.
ವಾಹನ ಸವಾರರೇ ಎಚ್ಚರ..!; ಸ್ಟಂಟ್ ಮಾಡಿದ್ರೆ ಇದೆ ನಿಮಗೆ ಪೊಲೀಸರಿಂದ ಮಾರಿಹಬ್ಬ..!
ಈ ಸ್ಪೋಟ ಉಂಟಾದ ಸಮಯದಲ್ಲಿ ಮೊದಲು ಅಲ್ಲಿನ ನಿವಾಸಿಗಳು ಭೂಕಂಪನ ಸಂಭವಿಸುತ್ತಿರಬಹುದು ಎಂದು ಭಯಭೀತರಾಗಿದ್ದಾರೆ. ಆದರೆ ಭೂಕಂಪನದ ಕೆಲವು ಲಕ್ಷಣಗಳು ಇಲ್ಲದಿದ್ದಾಗ ಬೆದರಿಕೊಂಡಿದ್ದಾರೆ. ಅಲ್ಲದೇ ಇದೇನಿದು ಎಂದು ಆಶ್ಚರ್ಯಚಕಿತರಾಗಿದ್ದಾರೆ.
ಪೊಲೀಸರು ಈ ಘಟನೆಯ ಬಗ್ಗೆ ತನಿಖೆ ನಡೆಸಿದಾಗ ತಮ್ಮ ಮಗುವಿನ ನಿರೀಕ್ಷೆಯಲ್ಲಿರುವ ಪೋಷಕರು ಲಿಂಗ ಬಹಿರಂಗ ಪಾರ್ಟಿ ಆಯೋಜಿಸಿರುವುದು ತಿಳಿದು ಬಂದಿದೆ. ಅಲ್ಲದೇ ಪೋಷಕರು ಬಂದೂಕು ಅಭ್ಯಾಸವನ್ನು ಮಾಡುವ ಸ್ಥಳವನ್ನು ಸೂಕ್ತವೆಂದು ಈ ಪಾರ್ಟಿಗಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಅಲ್ಲಿಯೇ ಸ್ಫೋಟಕ ನಡೆಸಿದ್ದಾರೆ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ.
ಪೊಲೀಸ್ ಅಧಿಕಾರಿಗಳ ಪ್ರಕಾರ ಕುಟುಂಬವು 80 ಪೌಂಡ್ ಸ್ಫೋಟಕಗಳನ್ನು ಬಳಸಿದೆ. ಸ್ಫೋಟಕಗಳು ಮುಖ್ಯವಾಗಿ ಟ್ಯಾನೇರೈಟ್ ಅನ್ನು ಒಳಗೊಂಡಿವೆ. ಇದನ್ನು ಸಾಮಾನ್ಯವಾಗಿ ಬಂದೂಕುಗಳ ಅಭ್ಯಾಸಕ್ಕಾಗಿ ಮಾರಾಟ ಮಾಡಲಾಗುತ್ತದೆ. ಅದೃಷ್ಟವಶಾತ್ ಈ ಘಟನೆಯಿಂದ ಯಾರಿಗೂ ಗಾಯಗಳಾಗಿಲ್ಲ, ಪ್ರಾಣಾಪಾಯವಾಗಿಲ್ಲ. ಆದರೆ ನಿವಾಸಿಗಳನ್ನು ಗಾಬರಿಬೀಳಿಸಿದೆ. ಈ ಬಗ್ಗೆ ಮಾತನಾಡಿದ ಅಲ್ಲಿನ ನಿವಾಸಿಯೊಬ್ಬರು 'ನಮ್ಮ ಮನೆಯ ಗೋಡೆಯ ಮೇಲೆ ತೂಗು ಹಾಕಿದ್ದ ಚಿತ್ರಗಳು ಒಡೆದಿವೆ. ಇದು ತಮಾಷೆಯ ಪರಮಾವಧಿಯನ್ನು ಮೀರಿದೆ' ಎಂದು ಹೇಳಿದ್ದಾರೆ. ಮತ್ತೊಬ್ಬರು 'ಅಬ್ಬಾ! ದೇವರೇ ಇಂತಹ ಭೀಕರ ಸ್ಫೋಟಕ್ಕೆ ನಾವಿನ್ನೂ ಸುಧಾರಿಸಿಕೊಳ್ಳುತ್ತಿದ್ದೇವೆ' ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
ಇನ್ನು ಪೊಲೀಸರು ಲಿಂಗ ಬಹಿರಂಗ ಪಾರ್ಟಿಯ ವೀಡಿಯೋ ನೋಡಿದ್ದು, ಅದು ಗಂಡು ಮಗು ಎನ್ನುವುದು ತಿಳಿದು ಬಂದಿದೆ. ಈ ಸ್ಪೋಟಕ ಖರೀದಿಸಿ, ಸ್ಫೋಟಿಸಿದ್ದು ಯಾರು ಎನ್ನುವುದನ್ನು ಇನ್ನೂ ತನಿಖೆ ಮಾಡಲಾಗುತ್ತಿದೆ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ