ನಾಯಿಗಳು (Dog) ನಮ್ಮ ಜೀವನದಲ್ಲಿ ಯಾವೆಲ್ಲಾ ರೀತಿಯ ಆನಂದವನ್ನು ನೀಡಬಲ್ಲವು ಎಂಬುವುದು ನಾಯಿಗಳನ್ನು ಸಾಕಿದವರಿಗೆ ಮತ್ತು ಅವುಗಳ ಜೊತೆ ಆತ್ಮೀಯ ಒಡನಾಟ (Companionship) ಉಳ್ಳವರಿಗೆ ಗೊತ್ತಿರುತ್ತದೆ. ಸಂತಸದಿಂದ (Happily) ನೆಗೆಯುತ್ತಾ, ಉತ್ಸಾಹದಿಂದ ಹಾರುತ್ತಾ, ಪೆದ್ದು ಪೆದ್ದಾಗಿ ಮುಖಭಾವ ತೋರುತ್ತಾ , ಅಕ್ಕರೆಯಿಂದ ನೆಕ್ಕುತ್ತಾ, ಕುತೂಹಲದಿಂದ ಮೂಸುತ್ತಾ ಈ ಡೊಂಕು ಬಾಲದ ನಾಯಕರು, ದಿನವಿಡೀ ನಮ್ಮನ್ನು ಮೆಚ್ಚಿಸಲು, ನಗಿಸಲು ಸಾಕಷ್ಟು ಕಸರತ್ತುಗಳನ್ನು ಮಾಡುತ್ತಾರೆ. ನಮಗಾಗಿ, ನಮ್ಮ ಸಂತೋಷಕ್ಕಾಗಿ ಅಷ್ಟೆಲ್ಲಾ ಶ್ರಮ (Hard Work) ವಹಿಸುವ ಮುದ್ದಿನ ಬೌ ಬೌಗಳಿಗಾಗಿ ನಾವು ಕೂಡ ಏನನ್ನಾದರೂ ಮಾಡಬೇಕು ಅಲ್ಲವೇ?
ಇದಕ್ಕೆ ಉತ್ತರವಾಗಿ, ಶ್ವಾನ ಪ್ರೀಯರು, ಅರೇ ನಾವು ಕೂಡ ಅಷ್ಟೇ ಪ್ರೀತಿ ತೋರುತ್ತೇವಲ್ಲಾ? ವಾಕಿಂಗ್ ಕರೆದುಕೊಂಡು ಹೋಗುತ್ತೇವೆ, ರುಚಿಕರ ತಿಂಡಿಗಳನ್ನು ನೀಡುತ್ತೇವೆ, ಸ್ನಾನ ಮಾಡಿಸುತ್ತೇವೆ, ಮುದ್ದಿಸುತ್ತೇವೆ, ಆಟವಾಡಿಸುತ್ತೇವೆ ಎಂದು ದೊಡ್ಡ ಪಟ್ಟಿಯನ್ನೇ ನೀಡಬಹುದು. ಇದನ್ನೆಲ್ಲಾ ಮಾತ್ರವಲ್ಲ, ತಮ್ಮ ಮುದ್ದು ನಾಯಿಗಾಗಿ ಅನ್ಯರ ಆಲೋಚನೆಗೂ ಮೀರಿದ ಕೆಲಸಗಳನ್ನು ಮಾಡುವ ಅಪ್ಪಟ ಶ್ವಾನ ಪ್ರಿಯರು ಕೂಡ ಇದ್ದಾರೆ ಬಿಡಿ.
ನಾಯಿಗಳಿಗಾಗಿ ಗ್ರಂಥಾಲಯ
ಯೂಎಸ್ ನಲ್ಲಿ ಇರುವ ಅಂತಹ ಒಬ್ಬ ನಾಯಿ ಪ್ರೇಮಿ ಒಬ್ಬರು, ನಾಯಿಗಳಿಗಾಗಿ ಏನು ಮಾಡಿದ್ದಾರೆ ಗೊತ್ತಾ? ಗ್ರಂಥಾಲಯ..! ಇದು ನಾಯಿ ಪ್ರೀತಿಯಲ್ಲ, ಹುಚ್ಚುತನ . . .ಓದು ಬರಹ ತಿಳಿಯದ ನಾಯಿಗಳಿಗೆ ಗ್ರಂಥಾಲಯವೇಕೆ ಎನ್ನುತ್ತೀರಾ? ಚಿಂತಿಸಬೇಡಿ. ಎಲ್ಲರಂತೆ, ಆ ಯೂಎಸ್ ಶ್ವಾನ ಪ್ರೇಮಿಗೂ ಈ ಸಂಗತಿಯ ಅರಿವಿದೆ. ಅದಕ್ಕೆಂದೇ ಅವರು, ನಾಯಿಗಳಿಗಾಗಿ ಮಾಡಿರುವ ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಇಟ್ಟಿಲ್ಲ! ಅದರ ಬದಲಿಗೆ ಆಟಿಕೆಗಳು ಮತ್ತು ಕಡ್ಡಿಗಳನ್ನು ಇಟ್ಟಿದ್ದಾರಂತೆ.
ಈ ಗ್ರಂಥಾಲಯದಲ್ಲಿ ಏನೇನಿದೆ
ಟ್ವಿಟ್ಟರಿನ 'ಟಾಬಿ ದ ಡಾಗ್' ಎಂಬ ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾಗಿರುವ ಪೋಸ್ಟಿನಲ್ಲಿ ಆ ಪುಟ್ಟ ಗ್ರಂಥಾಲಯದ ಚಿತ್ರವಿದೆ. “ನಮ್ಮ ನೆರೆಹೊರೆಗಾಗಿ ಶ್ವಾನ ಗ್ರಂಥಾಲಯವನ್ನು ಮಾಡಿದ್ದೇನೆ. ಆದರೆ ಅದು ಪುಸ್ತಕಗಳ ಬದಲಿಗೆ ಆಟಿಕೆ ಮತ್ತು ಕೋಲುಗಳಿಂದ ತುಂಬಿರುತ್ತದೆ.
ಒಂದನ್ನು ತೆಗೆದುಕೊಳ್ಳಿ, ಒಂದನ್ನು ಬಿಡಿ
ಪ್ರತಿಯೊಬ್ಬರೂ ಅದನ್ನು ಇಷ್ಟ ಪಡುತ್ತಾರೆ ಎಂದು ನಾನು ಭಾವಿಸುತ್ತೇನೆ” ಎಂದು ಆ ಪೋಸ್ಟಿನಲ್ಲಿ ಬರೆಯಲಾಗಿದೆ. ಫೋಟೋದಲ್ಲಿ ಕಾಣುವ ಗ್ರಂಥಾಲಯದ ಮೇಲೆ ಒಂದು ಫಲಕವಿದೆ, “ಒಂದನ್ನು ತೆಗೆದುಕೊಳ್ಳಿ, ಒಂದನ್ನು ಬಿಡಿ” ಎಂದು ಬರೆಯಲಾಗಿದೆ.
ಇದನ್ನೂ ಓದಿ: Viral Video: ನಾವ್ ಬರ್ತಾ ಇದ್ದೀವಿ, ಸೈಡ್ ಪ್ಲೀಸ್! ಬಾತುಕೋಳಿ ಕುಟುಂಬ ರಸ್ತೆ ದಾಟಿದ ವಿಡಿಯೋ ವೈರಲ್
ಈ ಟ್ವಿಟ್ ಪೋಸ್ಟ್ ಇದುವರೆಗೆ 20 ಸಾವಿರಕ್ಕೂ ಹೆಚ್ಚು ಮೆಚ್ಚುಗೆಗಳನ್ನು ಪಡೆದಿದೆ. ಶ್ವಾನ ಗ್ರಂಥಾಲಯದ ಫೋಟೋ ಕಂಡು ನೆಟ್ಟಿಗರು ನೀಡಿರುವ ಪ್ರತಿಕ್ರಿಯೆಗಳಿಗಂತೂ ಲೆಕ್ಕವಿಲ್ಲ. ಅಷ್ಟೇ ಅಲ್ಲ, ಆ ಫೋಟೋದಲ್ಲಿ, ಆ ಪುಟಾಣಿ ಗ್ರಂಥಾಲಯದ ಉಸ್ತುವಾರಿ ವಹಿಸಿರುವ “ಗ್ರಂಥಪಾಲಕ” ಮುದ್ದಾದ ಶ್ವಾನ, ಪಕ್ಕದಲ್ಲೆ ನಿಂತು ಪೋಸ್ ನೀಡಿರುವ ಶೈಲಿಯನ್ನು ಕೂಡ ನೆಟ್ಟಿಗರು ಬಹಳ ಇಷ್ಟಪಟ್ಟಿದ್ದಾರೆ. ಅನೇಕರು, ತಮ್ಮ ಪ್ರೀತಿಯ ನಾಯಿಗಳ ಜೊತೆ ಆ ವಿಶೇಷ ಗ್ರಂಥಾಲಯಕ್ಕೆ ಭೇಟಿ ನೀಡುವ ಆಸೆ ಇದೆ ಎಂದು ಹೇಳಿಕೊಂಡಿದ್ದಾರೆ.
ಟ್ವಿಟ್ಟರ್ ನಲ್ಲಿ ಈ ಪೋಸ್ಟ್ ನೋಡಿ ನೆಟ್ಟಿಗರು ಹೇಳಿದ್ದು ಹೀಗೆ
“ಎಷ್ಟು ಅದ್ಭುತವಾದ ಉಪಾಯ..!! ನಾನು ನಮ್ಮ ಎಲ್ಲಾ ಶ್ವಾನ ಪ್ರೇಮಿಗಳ ಜೊತೆ ಇದನ್ನು ಹಂಚಿಕೊಳ್ಳಲಿದ್ದೇನೆ” ಎಂದು ಒಬ್ಬ ನೆಟ್ಟಿಗ ಪ್ರತಿಕ್ರಿಯಿಸಿದ್ದರೆ, “ಕಡ್ಡಿಗಳನ್ನಿಡುವುದು ಒಳ್ಳೆಯ ಉಪಾಯ. ನಿಮ್ಮ ಜನರಿಗೆ ಗ್ರಂಥಾಲಯದಿಂದ ಏನನ್ನು ಬೇಕೋ ಅದನ್ನೇ ಆರಿಸಿಕೊಳ್ಳಲಿ. ಟೋಬಿ, ಇಡೀ ಶ್ವಾನ ಗ್ರಂಥಾಲಯದ ಐಡಿಯಾವೇ ಅದ್ಭುತವಾಗಿದೆ. ಇದನ್ನು ಮಾಡಿದ್ದಕ್ಕೆ ಧನ್ಯವಾದಗಳು” ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Street Dog: ಈ ಮೂಕಪ್ರಾಣಿಯ ಜೀವ ಉಳಿಸಲು ಹಳ್ಳಿಗರು ಏನೆಲ್ಲಾ ಮಾಡಿದ್ದಾರೆ ನೋಡಿ!
“ಕಡ್ಡಿಗಳನ್ನು ಇಡಬೇಡಿ, ಅದರಿಂದ ಗಾಯಗಳಾಗಬಹುದು” ಎಂದು ಒಬ್ಬ ನೆಟ್ಟಿಗರ ಸಲಹೆ ನೀಡಿದ್ದರೆ, ಇನ್ನೊಬ್ಬರು “ಕಡ್ಡಿಗಳನ್ನು ಇಡುವುದರಿಂದ ತಪ್ಪೇನಿದೆ? ಒಳ್ಳೆ ಒಂದು ಕಡ್ಡಿಯನ್ನು ಯಾರು ತಾನೇ ಇಷ್ಟಪಡುವುದಿಲ್ಲ” ಎಂದು ಅವರನ್ನು ಪ್ರಶ್ನಿಸಿದ್ದಾರೆ. “ಕಡ್ಡಿಗಳು ಇರಲಿ, ತಮ್ಮ ನಾಯಿಗಳಿಗೆ ಕಡ್ಡಿಗಳು ಬೇಕೆ ಬೇಡವೇ ಎಂಬುದನ್ನು ಮನುಷ್ಯರು ಆಯ್ಕೆ ಮಾಡಿಕೊಳ್ಳುತ್ತಾರೆ. ನನ್ನ ನಾಯಿಗಳು ಮೊದಲು ಕಡ್ಡಿಗಳ ಕಡೆಗೆ ಹೋಗುತ್ತವೆ” ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಮತ್ತೊಬ್ಬ ನೆಟ್ಟಿಗರು “ಒಳ್ಳೆಯ ಆಲೋಚನೆ” ಎಂದು ಹೊಗಳಿದ್ದಾರೆ. ಇನ್ನೊಬ್ಬರು “ನನ್ನ ನಾಯಿ ಆಟಿಕೆಯ ಬದಲು ಕಡ್ಡಿಯನ್ನು ತೆಗೆದುಕೊಳ್ಳುತ್ತದೆ” ಎಂದು ಪ್ರತಿಕ್ರಿಯಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ