• Home
  • »
  • News
  • »
  • trend
  • »
  • Life Lesson: ಜೀವನ ಹೀಗಿದ್ರೆ ಚೆನ್ನಾಗಿರುತ್ತೆ ಅಂತಾರೆ ಈ 92 ವರ್ಷದ ಅಜ್ಜ!

Life Lesson: ಜೀವನ ಹೀಗಿದ್ರೆ ಚೆನ್ನಾಗಿರುತ್ತೆ ಅಂತಾರೆ ಈ 92 ವರ್ಷದ ಅಜ್ಜ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Life Lesson Of Elderly Man: ಲಿಂಕ್ಡ್ಇನ್ ಬಳಕೆದಾರರೊಬ್ಬರು ಸ್ಟಾರ್‌ಬಕ್ಸ್ ನಲ್ಲಿ 92 ವರ್ಷದ ವೃದ್ದ ವ್ಯಕ್ತಿಯನ್ನು ಭೇಟಿಯಾಗುತ್ತಾರೆ. ಅವರಿಬ್ಬರ ನಡುವೆ ನಡೆದ ಸಂಭಾಷಣೆಯನ್ನು ಆ ಬಳಕೆದಾರರು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ ನೋಡಿ.

  • Share this:

ಅನುಭವದಲ್ಲಿ (Experience) ಅಮೃತ ಅಡಗಿರುತ್ತದೆ ಅಂತ ಹೇಳುವ ಮಾತು ನಮಗೆ ಯಾರಾದರೂ ವಯೋವೃದ್ದರ ಹತ್ತಿರ ಕುಳಿತು ಜೀವನದ (Life) ಬಗ್ಗೆ ಮಾತಾಡಿದರೆ ಸ್ಪಷ್ಟವಾಗಿ ಅರ್ಥವಾಗುತ್ತದೆ ಅಂತ ಹೇಳಬಹುದು. ನಮಲ್ಲಿ ಎಷ್ಟೋ ಜನರಿಗೆ ಜೀವನದ ಆಯಾ ಹಂತಗಳಲ್ಲಿ ಹೇಗೆ ಇರಬೇಕು ಮತ್ತು ಜನರೊಂದಿಗೆ ಹೇಗೆ ನಡೆದುಕೊಳ್ಳಬೇಕು ಅನ್ನೋ ಗೊಂದಲಗಳು ತುಂಬಾನೇ ಇರುತ್ತವೆ. ಆದರೆ, ಈಗ ನಮಗೆ ಈ ಜೀವನದ ಬಗ್ಗೆ ಅನೇಕ ವಿಷಯಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಅನೇಕ ರೀತಿಯ ಪೋಸ್ಟ್ ಗಳು, ವಿಡಿಯೋಗಳು (Video) ಸಾಮಾಜಿಕ ಮಾಧ್ಯಮಗಳಲ್ಲಿ ನೋಡಲು ಸಿಗುತ್ತವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.


ಲಿಂಕ್ಡ್ಇನ್ ಬಳಕೆದಾರರೊಬ್ಬರು ಸ್ಟಾರ್‌ಬಕ್ಸ್ ನಲ್ಲಿ 92 ವರ್ಷದ ವೃದ್ದ ವ್ಯಕ್ತಿಯನ್ನು ಭೇಟಿಯಾಗುತ್ತಾರೆ. ಅವರಿಬ್ಬರ ನಡುವೆ ನಡೆದ ಸಂಭಾಷಣೆಯನ್ನು ಆ ಬಳಕೆದಾರರು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ ನೋಡಿ.


ಜೀವನವನ್ನು ನಡೆಸುವ ಬಗ್ಗೆ ಅವರ ಬುದ್ಧಿವಂತಿಕೆ ಮತ್ತು ಸಲಹೆಗಳು ಈಗ ಅಂತರ್ಜಾಲದಲ್ಲಿ ಅನೇಕರಿಗೆ ಸ್ಫೂರ್ತಿದಾಯಕವಾಗಿದೆ.


ಪ್ರತಿದಿನ ಸ್ಟಾರ್ಬಕ್ಸ್ ಗೆ ಬರುವ ಆ ಹಿರಿಯ ವ್ಯಕ್ತಿಯ ಬಗ್ಗೆ ಸಂಜಯ್ ಹೇಳಿದ್ದೇನು?


‘ಎ ಮಿಲಿಯನ್ ಡ್ರೀಮ್ಸ್ ಅಕಾಡೆಮಿ’ ಯ ಸ್ಥಾಪಕ ಸಂಜಯ್ ಮುದ್ನಾನೆ ಅವರು ಕೇಕಿ ಎಂಬ ಹೆಸರಿನ ವೃದ್ದರೊಬ್ಬರು ಪ್ರತಿದಿನ ಸ್ಟಾರ್‌ಬಕ್ಸ್ ಗೆ ಭೇಟಿ ನೀಡುವುದನ್ನು ನೋಡುತ್ತಾರೆ ಮತ್ತು ಒಂದು ದಿನ ಅವರು ಆ ಹಿರಿಯ ವ್ಯಕ್ತಿಯ ಜೊತೆ ಕುಳಿತು ಮಾತಾಡುತ್ತಾರೆ.


ಈ ಸಂದರ್ಭದಲ್ಲಿ ಆ ಹಿರಿಯ ವ್ಯಕ್ತಿ ತಮ್ಮ ಜೀವನದ ಪಾಠಗಳನ್ನು ಸಂಜಯ್ ಅವರ ಜೊತೆಯಲ್ಲಿ ಹಂಚಿಕೊಂಡರು. ತದನಂತರ ಈ ಮಾತುಕತೆಯ ಬಗ್ಗೆ ಪೋಸ್ಟ್ ಮಾಡಿರುವ ಸಂಜಯ್ ಅವರು "ನಾನು ಸ್ಟಾರ್‌ಬಕ್ಸ್ ನಲ್ಲಿ 92 ವರ್ಷದ ಯುವಕನನ್ನು ಭೇಟಿಯಾದೆ” ಎಂದು ಬರೆದಿದ್ದಾರೆ.


ಕೇಕಿ ಅವರು ಪ್ರತಿದಿನ ಅವರ ಮನೆಯಿಂದ ಸ್ಟಾರ್‌ಬಕ್ಸ್ ಗೆ ಹೋಗಲು ಮತ್ತು ಮರಳಿ ಮನೆಗೆ ಬರಲು ಒಂದು ಆಟೋ ರಿಕ್ಷಾವನ್ನು ತೆಗೆದುಕೊಳ್ಳುತ್ತಾರೆ.


ಅವರು ದೈಹಿಕವಾಗಿ ದುರ್ಬಲರಾಗಿದ್ದಾರೆ, ಕೋಲಿನ ಸಹಾಯದಿಂದ ನಡೆಯುತ್ತಾರೆ. ಆದರೆ ಅವರು ಯಾವಾಗಲೂ ಒಬ್ಬರೆ ಬರುತ್ತಾರೆ ಮತ್ತು ಒಂದು ಕಪ್ ಕಾಫಿಯನ್ನು ಆರ್ಡರ್ ಮಾಡುತ್ತಾರೆ.


ಈ ಬಾರಿ ನಾನು ಅವರೊಂದಿಗೆ ಸಂಭಾಷಣೆಯಲ್ಲಿ ತೊಡಗಿದ್ದೇನೆ, ಒಬ್ಬ ಕಥೆಗಾರನಾಗಿ, ನಾನು ಕಥೆಗಳನ್ನು ಕೇಳಲು ಇಷ್ಟಪಡುತ್ತೇನೆ ಎಂದು ಸಂಜಯ್ ತಮ್ಮ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.


ಹಳೆಯ ಪಾರ್ಸಿ ಮನುಷ್ಯ "ಜೀವನದ ಬಗ್ಗೆ ಅಪಾರವಾದ ಉತ್ಸಾಹವನ್ನು ಹೊಂದಿದ್ದಾರೆ ಮತ್ತು ಇದನ್ನು ಇನ್ನೊಬ್ಬರು ಸಹ ಅನುಕರಿಸುವಂತಿದೆ" ಎಂದು ಅವರು ಹೇಳಿದರು.


ಜೀವನದ ಬಗ್ಗೆ ಏನ್ ಹೇಳ್ತಾರೆ 92 ವರ್ಷ ವಯಸ್ಸಿನ ಕೇಕಿ?


ತಮ್ಮ ಜೀವನದಲ್ಲಿ ಅನುಸರಿಸಿದ ವಿವೇಕದ ಮಾತುಗಳನ್ನು ಸಂಜಯ್ ಅವರೊಂದಿಗೆ ಹಂಚಿಕೊಂಡ ಕೇಕಿ ಅವರು, ವ್ಯಕ್ತಿ ಯಾವಾಗಲೂ ತನ್ನ ಬಗ್ಗೆ ಮತ್ತು ತನ್ನ ಕೆಲಸದ ಬಗ್ಗೆ ಪ್ರಮಾಣಿಕನಾಗಿರಬೇಕು ಎಂದು ಸಂಜಯ್ ಅವರಿಗೆ ಹೇಳಿದರು.


"ನಿಮಗೆ ಜೀವನದಲ್ಲಿ ಏನು ಸಿಗಬೇಕೋ, ಅದು ನಿಮಗೆ ಸಿಕ್ಕೆ ಸಿಗುತ್ತದೆ, ಯಾವುದರ ಬಗ್ಗೆಯೂ ಅತಿಯಾಗಿ ಚಿಂತಿಸಬೇಡಿ. ನಿಮಗೆ ಸಿಗಲಾರದ್ದು, ನಿಮಗಾಗಿ ಇರಲಿಲ್ಲ” ಅಂತ ತಿಳಿದುಕೊಳ್ಳಿ ಎಂದು ಕೇಕಿ ಹೇಳುತ್ತಾರೆ.


ಕೇಕಿ ಅವರು ಅವರ ಜೀವನದಲ್ಲಿ ಯಾರ ಬಗ್ಗೆಯೂ ದ್ವೇಷವನ್ನು ಹೊಂದಿಲ್ಲ ಅಥವಾ ಕೆಟ್ಟದಾಗಿ ಮಾತುಗಳನ್ನು ಆಡಲಿಲ್ಲ, ಅವರನ್ನು ಕೆಟ್ಟದಾಗಿ ನಡೆಸಿಕೊಳ್ಳುವ ಜನರ ಬಗ್ಗೆಯೂ ಸಹ ಅವರು ಎಲ್ಲಿಯೂ ಕೆಟ್ಟದಾಗಿ ಮಾತಾಡಿಲ್ಲವಂತೆ ಎಂದು ಹೇಳಿದರು.


ತುಂಬಾ ವರ್ಷಗಳ ಕಾಲ ಸಂತೋಷದಿಂದ ಜೀವಿಸಲು ಯಾವುದರ ಬಗ್ಗೆಯೂ ಅತಿಯಾಗಿ ಚಿಂತೆ ಮಾಡಬೇಡಿ ಎಂದು ಅವರು ಜನರಿಗೆ ಸಲಹೆ ನೀಡುತ್ತಾರೆ.


ಈ ಪೋಸ್ಟ್ ಅನ್ನು ಮುಕ್ತಾಯಗೊಳಿಸಿದ ಮುದ್ನಾನೆ ಅವರು "ಕೇಕಿ ಅವರಿಗೆ ಜೀವನದಲ್ಲಿ ಯಾವುದೇ ರೀತಿಯ ಪಶ್ಚಾತ್ತಾಪವಿಲ್ಲ, ಅವರು ಜಗತ್ತನ್ನು ಸುತ್ತಿದ್ದಾರೆ, ಅವರು ತುಂಬಾನೇ ಪ್ರಾಮಾಣಿಕವಾದ ಜೀವನವನ್ನು ನಡೆಸಿದ್ದಾರೆ. ಈಗ ಅವರು ಒಂದು ಗುಟುಕು ಕಾಫಿಯನ್ನು ಸವಿಯುವ ಮೂಲಕ ಜೀವನದ ಆ ಸಣ್ಣ ಸಂತೋಷವನ್ನು ಆನಂದಿಸುತ್ತಿರುವುದನ್ನು ನಾನು ಪ್ರತಿದಿನ ನೋಡುತ್ತೇನೆ.


ಇದನ್ನೂ ಓದಿ: ಆಹ್ವಾನವಿಲ್ಲದೇ ಬಂದು ಮದುವೆ ಊಟ ಸವಿದ, ಗೊತ್ತಾದ್ಮೇಲೆ ಅಷ್ಟೂ ಪಾತ್ರೆ ಇವನ ಕೈಯಲ್ಲೇ ತೊಳೆಸಿದ್ರು!


ನಿಮ್ಮ ಕಥೆಯನ್ನು ನನ್ನೊಂದಿಗೆ ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು ಕೇಕಿ, ಜೀವನವನ್ನು ಹೇಗೆ ಸಂತೋಷದಿಂದ ಸಂಪೂರ್ಣವಾಗಿ ಕಳೆಯಬೇಕು ಎಂಬುದಕ್ಕೆ ನೀವು ಸ್ಫೂರ್ತಿಯಾಗಿದ್ದೀರಿ.


ನಾನು ಸ್ಟಾರ್‌ಬಕ್ಸ್ ನಿಂದ ಹೊರ ಬಂದಾಗ ನನ್ನ ಮುಖದಲ್ಲಿ ನಗು ಮತ್ತು ನನ್ನ ಹೃದಯದಲ್ಲಿ ಸಂತೋಷವಿತ್ತು" ಎಂದು ಸಂಜಯ್ ಬರೆದುಕೊಂಡಿದ್ದಾರೆ.


ಈ ಸ್ಪೂರ್ತಿದಾಯಕ ಪೋಸ್ಟ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ ನೆಟ್ಟಿಗರು..


ನಿನ್ನೆ ಈ ಪೋಸ್ಟ್ ಅನ್ನು ಹಂಚಿಕೊಳ್ಳಲಾಗಿದ್ದು, 18,000 ಕ್ಕೂ ಹೆಚ್ಚು ಬಳಕೆದಾರರು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ.


ಒಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು "ನೀವು ಜೀವನದ ಈ ಪ್ರಯಾಣದಲ್ಲಿ ಕೆಲವು ಒಳ್ಳೆಯ ಜನರನ್ನು ಭೇಟಿಯಾಗುತ್ತೀರಿ ಮತ್ತು ಅವರು ನಿಮ್ಮ ಜೀವನವನ್ನು ನೋಡುವ ದೃಷ್ಟಿಕೋನವನ್ನೇ ಬದಲಾಯಿಸುತ್ತಾರೆ" ಎಂದು ಪ್ರತಿಕ್ರಯಿಸಿದ್ದಾರೆ.


"ಅದ್ಭುತ ಕಥೆ! ಇಂತಹ ಉತ್ತಮ ಸಲಹೆಗಳನ್ನು ನೀಡಿದ್ದಕ್ಕೆ ಕೇಕಿ ಅವರಿಗೆ ಧನ್ಯವಾದಗಳು" ಎಂದು ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. "ನಿಜವಾದ ಮಾನವ ಜೀವಿ" ಎಂದು ಮೂರನೇ ಬಳಕೆದಾರರೊಬ್ಬರು ಹೇಳಿದರು.


"ಇಂದಿನ ಜಗತ್ತಿನಲ್ಲಿ ಸರಳ ಜೀವನವು ಸುವರ್ಣ ಜೀವನವಾಗಿದೆ. ಕೇಕಿ ಅಂಕಲ್ ಗೆ ಧನ್ಯವಾದಗಳು, ಅವರು ಇನ್ನೂ ಇಂತಹ ಸಲಹೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಲೇ ಇದ್ದರೆ ಯುವ ಪೀಳಿಗೆಗೆ ಸಹಾಯಕವಾಗುತ್ತದೆ.'


ಇದನ್ನೂ ಓದಿ: ಹೆಣ್ಣು ಮಕ್ಕಳನ್ನು ಸಾಕಲು ಆಟೋ ಚಲಾಯಿಸುತ್ತಿರುವ ತಾಯಿ: ಆನಂದ್ ಮಹೀಂದ್ರಾ ಮೆಚ್ಚುಗೆ


ಕೇಕಿ ಅಂಕಲ್ ಅವರೊಂದಿಗೆ ನಿಮ್ಮ ಸುವರ್ಣ ಕ್ಷಣಗಳನ್ನು ಹಂಚಿಕೊಂಡಿದ್ದಕ್ಕಾಗಿ ಸಂಜಯ್ ಮುದ್ನಾನೆ ಅವರನ್ನು ಅಭಿನಂದಿಸಲೇಬೇಕು” ಎಂದು ನಾಲ್ಕನೆಯ ಬಳಕೆದಾರರು ಅನಿಸಿಕೆ ವ್ಯಕ್ತಪಡಿಸಿದ್ದಾರೆ.

Published by:Sandhya M
First published: