ದಾಂಪತ್ಯ ಜೀವನದಲ್ಲಿ ವಯಸ್ಸಾದಂತೆ ಪ್ರೀತಿ (Love) ಮೊದಲಿದ್ದಂತೆ ಉಳಿಯುವುದಿಲ್ಲ ಎಂಬ ಮಾತಿದೆ. ಆದರೆ ಹೆಚ್ಚಿನ ವೃದ್ಧಾಪ್ಯ ಜೋಡಿಗಳು (Couple) ವಯಸ್ಸು ಮುಪ್ಪು ದೇಹಕ್ಕೆ ಆಗಿರುವುದು ಆದರೆ ಪ್ರೀತಿಗಲ್ಲ ಎಂಬುದನ್ನು ತೋರಿಸಿದ ಅದೆಷ್ಟೋ ಉದಾಹರಣೆಗಳಿವೆ (Examples). ಇಂದಿನ ಯುವ ಪ್ರೀತಿಗಳು ವಿವಾಹ (Marriage) ಬಂಧನಕ್ಕೆ ಒಳಗಾಗಿ ವರ್ಷ ಕಳೆಯುವುದರಲ್ಲೇ ಬೇರ್ಪಟ್ಟ ಅದೆಷ್ಟೋ ಉದಾಹರಣೆಗಳಿವೆ. ಆದರೆ ಹಿರಿಜೀವಿಗಳ ಪ್ರೀತಿ ಸಾವಿನ ನಂತರವೂ ಮತ್ತೊಬ್ಬರಿಗೆ ಪ್ರೇರಕವಾಗಿ ಆದರ್ಶವಾಗಿ ನಿಲ್ಲುತ್ತದೆ.
ಹಿರಿಜೀವಿಗಳ ದಾಂಪತ್ಯ ಕಿರಿಯರಿಗೆ ಮಾದರಿ
ಹಿರಿಜೀವಿಗಳ ದಾಂಪತ್ಯ ಜೀವನ, ಪ್ರೀತಿ, ಒಗ್ಗಟ್ಟು ಯುವ ಜೋಡಿಗಳಿಗೆ ಯಾವಾಗಲೂ ಆದರ್ಶಪ್ರಾಯವಾಗಿದೆ. ಇಂದಿನ ಕಾಲದಲ್ಲಿ ಅದೆಷ್ಟೋ ಪ್ರೀತಿ ಹುಟ್ಟಿ ಗಟ್ಟಿಯಾಗುವ ಮೊದಲು ನಷ್ಟಗೊಳ್ಳುವುದೇ ಹೆಚ್ಚು. ಹಿರಿಯರಿಂದ ಕಿರಿಯರು ಕಲಿತುಕೊಳ್ಳಬೇಕಾದ ಅಂಶಗಳು ಸಾಕಷ್ಟಿದ್ದು ಇದಕ್ಕೆ ಪುಷ್ಟಿ ನೀಡುವಂತೆ ಅದೆಷ್ಟೋ ವಿಡಿಯೋಗಳು ತಾಣದಲ್ಲಿ ದೊರೆಯುತ್ತಿರುತ್ತದೆ. ಇದೀಗ ಇನ್ಸ್ಟಾಗ್ರಾಮ್ನಲ್ಲಿ ಶ್ರುತಿ ವಾಸುದೇವನ್ ಎಂಬ ಬಳಕೆದಾರರು ತಮ್ಮ ಅಪ್ಪ ಅಮ್ಮನ ಬಾಂಧವ್ಯ ಹಾಗೂ ದಾಂಪತ್ಯ ಅನುರಾಗವನ್ನು ಪ್ರದರ್ಶಿಸಿರುವ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
ದಾಂಪತ್ಯ ಜೀವನದಲ್ಲಿ ಪ್ರೀತಿ ಎಂದಿಗೂ ಹಾಗೆಯೇ ಇರುತ್ತದೆ ಎಂಬುದು ಸುಳ್ಳು ಎಂದು ಹೇಳುವವರಿಗೆ ಇದು ನಿದರ್ಶನವಾಗಿದೆ ಎಂದು ತಿಳಿಸಿದ್ದಾರೆ. ಹಾಗೆಯೇ ದಿನಂಪ್ರತಿ ವೈಮನಸ್ಸನ್ನು ಸೃಷ್ಟಿಸಿಕೊಂಡು ಮುನಿಸಿಕೊಳ್ಳುವ ದಂಪತಿಗಳೂ ಪರಸ್ಪರರನ್ನು ಹೇಗೆ ಖುಷಿಪಡಿಸಿಕೊಳ್ಳಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.
ಪತ್ನಿಯ ಸುತ್ತ ನೃತ್ಯಗೈಯ್ಯುತ್ತಿರುವ ಪತಿ
ವಿಡಿಯೋದಲ್ಲಿ ಹಿರಿಯ ವೃದ್ಧರೊಬ್ಬರು ತಮ್ಮ ಪತ್ನಿಯನ್ನು ಖುಷಿಪಡಿಸಲು ವಿಜಯ್ ಅಭಿನಯದ ಬೀಸ್ಟ್ ಚಿತ್ರದ ಜನಪ್ರಿಯ ಗೀತೆ ಅರಬಿ ಕುತ್ತ್ಗೆ ಅಭಿನಯಿಸಿ ಮನದನ್ನೆಯನ್ನು ರಂಜಿಸುವುದನ್ನು ನೋಡಬಹುದು. ಈ ವಿಡಿಯೋ ಇಂಟರ್ನೆಟ್ನಲ್ಲಿ ವೈರಲ್ ಆಗಿದ್ದು ನೆಟ್ಟಿಗರು ವೃದ್ಧರ ಜೀವನೋತ್ಸಾಹವನ್ನು ನೋಡಿ ಖುಷಿಪಟ್ಟಿದ್ದು ಮಾತ್ರವಲ್ಲದೆ ಎಂತಹ ಅನುರೂಪದ ಜೋಡಿ ಎಂದು ಹಾಡಿಹೊಗಳಿದ್ದಾರೆ. ವೃದ್ಧರು ತಮ್ಮ ಪತ್ನಿಯ ಮೇಲೆ ವ್ಯಕ್ತಪಡಿಸಿರುವ ಪ್ರೀತಿ ಹಾಗೂ ಆರಾಧನೆಗೆ ತಡೆಯೇ ಇಲ್ಲ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಇನ್ಸ್ಟಾಗ್ರಾಮ್ ಬಳಕೆದಾರರಾದ ಶ್ರುತಿ ವಾಸುದೇವನ್ ಹಂಚಿಕೊಂಡಿರುವ ವಿಡಿಯೋದಲ್ಲಿ ವೃದ್ಧರು ಲುಂಗಿ ಹಾಗೂ ಬನಿಯನ್ ಧರಿಸಿ ಕುಣಿಯುತ್ತಿದ್ದು, ಕುರ್ಚಿಯಲ್ಲಿ ಕುಳಿತ ಪತ್ನಿಯ ಸುತ್ತ ನೃತ್ಯಗೈಯ್ಯುತ್ತಿದ್ದಾರೆ. ತಮ್ಮ ತಂದೆ ತಾಯಿಯ ವಿಡಿಯೋವನ್ನು ಹಂಚಿಕೊಂಡಿರುವ ಶ್ರುತಿ ಕೋರಿಕೆಯ ಮೇರೆಗೆ ವಿಡಿಯೋವನ್ನು ತಾಣದಲ್ಲಿ ಹಂಚಿಕೊಂಡಿರುವುದಾಗಿ ತಿಳಿಸಿದ್ದಾರೆ.
View this post on Instagram
ಸಂತೋಷ ನಿಮ್ಮಲ್ಲಿಯೇ ಇದೆ
ತಮ್ಮ ತಂದೆ ತಾಯಿಯ ಹಾಸ್ಯಮಯ ಕ್ಷಣವನ್ನು ಶ್ರುತಿ ಹಂಚಿಕೊಂಡಿದ್ದು ಸಂತೋಷ ಎಂಬುದು ನಿಮ್ಮ ಸುತ್ತಲೂ ಇರುವುದಾಗಿದೆ ಇದಕ್ಕೆ ಮಾಡಬೇಕಾಗಿರುವುದು ಇಷ್ಟೇ ನಿಮ್ಮೊಳಗಿರುವ ಮಗುವನ್ನು ಜೀವಂತವಾಗಿಡುವುದು ಈ ಮುದ್ದಾದ ಜೋಡಿಗಳು ನನ್ನ ಅಪ್ಪ ಹಾಗೂ ಅಮ್ಮ ಎಂದು ಶ್ರುತಿಯವರು ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ.
ವಿಡಿಯೋವು ಸಾಮಾಜಿಕ ತಾಣದಲ್ಲಿ ಹೆಚ್ಚಿನ ಸದ್ದುಮಾಡಿದ್ದು 14.9 ಮಿಲಿಯನ್ಗಿಂತಲೂ ಹೆಚ್ಚಿನ ವೀಕ್ಷಣೆಗಳನ್ನು ಪಡೆದುಕೊಂಡಿದೆ. ವೃದ್ಧರ ಪ್ರೀತಿ ಹಾಗೂ ಉತ್ಸಾಹವು ಆನ್ಲೈನ್ನಲ್ಲಿ ಕೂಡ ಪ್ರೀತಿ ನಿಜ ಎಂಬುದನ್ನು ಎದ್ದುಗಾಣಿಸಿದೆ. ಇದೇ ವರ್ಷ ಅಕ್ಟೋಬರ್ನಲ್ಲಿ ಹೊಸ ಮೊಪೆಡ್ ಖರೀದಿಸಿದ ವೃದ್ಧರು ಮೊಪೆಡ್ಗೆ ಹಾರವನ್ನು ಹಾಕುವ ಬದಲಿಗೆ ತಮ್ಮ ಪತ್ನಿಗೆ ಹಾರ ಹಾಕಿರುವ ವಿಡಿಯೋ ಕೂಡ ಇಂಟರ್ನೆಟ್ನಲ್ಲಿ ಟ್ರೆಂಡ್ ಆಗಿ ಹೊಸ ಹವಾ ಸೃಷ್ಟಿಸಿತ್ತು. ವಾಹನದ ಸಮೀಪ ಮಹಿಳೆ ಫೋಟೋಗೆ ಪೋಸ್ ನೀಡಿದ್ದು ಪತಿ ಆಕೆಯ ಸಂತೋಷವನ್ನು ಕಣ್ಣುಗಳಲ್ಲಿ ತುಂಬಿಕೊಂಡಿರುವುದು ವಿಡಿಯೋದಲ್ಲಿ ಕಂಡುಬಂದಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ