ಗಂಡು-ಹೆಣ್ಣು ವಿವಾಹದ ಬಂಧನವಿಲ್ಲದೆ ಬದುಕುವುದು ನಮಲ್ಲಿ ಈಗ ಸೋಜಿಗದ ಸಂಗತಿಯಾಗಿ ಉಳಿದಿಲ್ಲ. ಶ್ರೀಮಂತ ವರ್ಗದವರು ಮತ್ತು ತಾರೆಯರ ಪಾಲಿಗೆ ಅದೊಂದು ಟ್ರೆಂಡ್ ಕೂಡ. ಆದರೆ ಹಳ್ಳಿಗಾಡಿನಲ್ಲಿ ಇಂತದ್ದೆಲ್ಲಾ ಸಾಧ್ಯವೇ? ಹೌದು, ಒಂದಲ್ಲ ಎರಡಲ್ಲ ಬರೋಬ್ಬರಿ 20 ವರ್ಷಗಳ ಕಾಲ ಜೊತೆಯಾಗಿ ಬಾಳಿದ ಹಳ್ಳಿಗಾಡಿನ ಜೋಡಿಯೊಂದು ಕೊನೆಗೂ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ! ಇನ್ನೂ ಮಜವಾದ ಸಂಗತಿಯೆಂದರೆ, ಅವರಿಗೆ ಹದಿಹರೆಯದ ವಯಸ್ಸಿನ ಮಗನಿದ್ದು, ಆತನೂ ತನ್ನ ಹೆತ್ತವರ ಮದುವೆಗೆ ಸಾಕ್ಷಿಯಾಗಿದ್ದಕ್ಕೆ ಸಂತಸಗೊಂಡಿದ್ದಾನೆ. ಹಾಗಾದರೆ ಆ ಜೋಡಿಯ ವಯಸ್ಸು ಎಷ್ಟಿರಬಹುದು ಎಂಬ ಕುತೂಹಲವೇ? ಪುರುಷನ ವಯಸ್ಸು 60 ವರ್ಷ ಮತ್ತು ಮಹಿಳೆಯ ವಯಸ್ಸು 55 ವರ್ಷ.
ಈ ಮದುವೆ ಇದೇ ವಾರದ ಆರಂಭದಲ್ಲಿ, ಉನ್ನಾವೋ ಜಿಲ್ಲೆಯ ಗಂಜ್ ಮೊರಾದಬಾದ್ನ ರಸುಲ್ಪುರ್ ರುರಿ ಎಂಬ ಹಳ್ಳಿಯಲ್ಲಿ ನಡೆದಿದೆ. ಮದುವೆಯ ಎಲ್ಲಾ ಖರ್ಚು ವೆಚ್ಚಗಳನ್ನು ಗ್ರಾಮದ ಮುಖಂಡ ಹಾಗೂ ಗ್ರಾಮಸ್ಥರು ವಹಿಸಿಕೊಂಡಿದ್ದರು.
ಇದನ್ನೂ ಓದಿ:ಚಿತ್ರದುರ್ಗ ಜಿಲ್ಲೆಗೆ ಭದ್ರಾ ನೀರು ಹರಿಸಲು ಸರ್ಕಾರ ಆದೇಶ; ಮಲೆನಾಡು ಭಾಗದ ರೈತರ ವಿರೋಧ
ಇಪ್ಪತ್ತು ವರ್ಷ ಮದುವೆ ಇಲ್ಲದೆ ಜೊತೆ ಇರುವುದು , ಅದೂ ಒಂದು ಹಳ್ಳಿಯಲ್ಲಿ ಸುಲಭವೇ? ಖಂಡಿತಾ ಇಲ್ಲ. ಮದುವೆ ಇಲ್ಲದೆ ಜೊತೆಗೆ ವಾಸಿಸುತ್ತಿರುವುದಕ್ಕೆ ಅವರು ಗ್ರಾಮಸ್ಥರಿಂದ ಸಾಕಷ್ಟು ಕೊಂಕು ಮಾತುಗಳನ್ನು ಕೇಳಬೇಕಾಗಿ ಬಂದಿತ್ತು ಎನ್ನುತ್ತಾರೆ ಅಲ್ಲಿಯ ಮಂದಿ. ಗ್ರಾಮದ ಮುಖಂಡ ಅವರಿಗೆ ಮದುವೆ ಆಗುವಂತೆ ಮನ ಒಲಿಸಿದರು. ಕೊಂಕು ಮಾತುಗಳಿಗೆ ಮುಕ್ತಾಯ ಹಾಡಬೇಕೆಂದು, ಕೊನೆಗೂ ಅವರಿಬ್ಬರು ಮದುವೆ ಆಗಲು ಒಪ್ಪಿದರು.
ವರದಿಗಳ ಪ್ರಕಾರ, 60 ವರ್ಷದ ನಾರಾಯಣ್ ರಾಯ್ದಾಸ್ ಮತ್ತು 55 ವರ್ಷದ ರಾಮ್ರತಿ , 2001 ರಿಂದ ಜೊತೆಯಾಗಿ ಬದುಕುತ್ತಿದ್ದಾರೆ. ಕೃಷಿಯ ಆದಾಯದಿಂದ ಬದುಕುತ್ತಿರುವ ಈ ಜೋಡಿಯ ಕುಟುಂಬದಲ್ಲಿ ಬೇರೆ ಯಾರೂ ಇಲ್ಲ.
ಅವರ 13 ವರ್ಷದ ಮಗ ಅಜಯ್ ಕುಮಾರ್ನನ್ನು ಗ್ರಾಮಸ್ಥರ ಕೊಂಕು ನುಡಿ ಮತ್ತು ಅವಮಾನಗಳಿಂದ ಪಾರು ಮಾಡಲಿಕ್ಕಾದರೂ ಮದುವೆ ಆಗಬೇಕೆಂದು, ಗ್ರಾಮ ಮುಖಂಡ ರಮೇಶ್ ಕುಮಾರ್ ಮತ್ತು ಸಾಮಾಜಿಕ ಕಾರ್ಯಕರ್ತ ಧರ್ಮೆಂದ್ರ ಬಾಜಪೇಯಿ ಅವರು, ನಾರಾಯಣ್ ಮತ್ತು ರಾಮ್ರತಿಯನ್ನು ಮದುವೆಗೆ ಒಪ್ಪಿಸಿದರು.
ಅವರು ಮದುವೆಯ ಎಲ್ಲಾ ಖರ್ಚುಗಳನ್ನು ತಾವೇ ನೋಡಿಕೊಳ್ಳುವುದಾಗಿ ಕೂಡ ಆಶ್ವಾಸನೆ ನೀಡಿದರು. ಗ್ರಾಮದ ಮುಖಂಡ ಮತ್ತು ಗ್ರಾಮಸ್ಥರು ಮದುವೆಗಾಗಿ ಡಿಜೆ, ಬ್ಯಾಂಡ್ ಮತ್ತು ಅತಿಥಿಗಳಿಗಾಗಿ ಭೋಜನದ ವ್ಯವಸ್ಥೆ ಮಾಡಿಸಿದ್ದರು. ಆ ಜೋಡಿಯ ಮಗನ ನೇತೃತ್ವದ ಮದುವೆಯ ಮೆರವಣಿಗೆ ಹಳ್ಳಿಗೆ ಹೋಗಿ, ಮದುವೆಯನ್ನು ನೆರವೇರಿಸಿತು.
“ಅವರಿಗೆ, ಹೆಣ್ಣಿನ ಕಡೆಯವರ ಉಸ್ತುವಾರಿ ನೋಡಿಕೊಳ್ಳಲು ನಿಯೋಜಿತರಾಗಿದ್ದ ಹಳ್ಳಿಯವರಿಂದ ಆತ್ಮೀಯ ಸ್ವಾಗತ ದೊರಕಿತು” ಎಂದು ಸ್ಥಳಿಯ ನಿವಾಸಿ ರಮೇಶ್ ಹೇಳಿದರು. ಅದಕ್ಕಿಂತ ಮೊದಲು, ವರ ಮತ್ತು ವಧು ಹಳ್ಳಿಯಲ್ಲಿ ಇರುವ ಬ್ರಹ್ಮ ದೇವ ಬಾಬಾ ದೇವಾಲಯಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ