Eco-Friendly Home: ಸಿಮೆಂಟ್​ ಬದಲಿಗೆ ಅಕ್ಕಿ ಸಿಪ್ಪೆ, ಬೆಲ್ಲದಲ್ಲಿ ಮನೆಗೆ ಪ್ಲಾಸ್ಟರ್​-ಪರಿಸರ ಸ್ನೇಹಿ ಮನೆಯ ಒಂದು ಝಲಕ್​ ಇಲ್ಲಿದೆ

Eco Friendly Home: ಈ ಮನೆಯನ್ನು 35 ಲಕ್ಷ ರೂಪಾಯಿಗಳ ‘ಪಾಕೆಟ್ ಸ್ನೇಹಿ’ ಬಜೆಟ್‌ನಲ್ಲಿ ನಿರ್ಮಿಸಲಾಗಿದೆ ಎಂದು ದಿನೇಶ್ ಹೇಳುತ್ತಾರೆ. ಕಚ್ಚಾ ಸಾಮಗ್ರಿಗಳು ಮತ್ತು ಕಾರ್ಮಿಕ ಶುಲ್ಕಗಳು ಸೇರಿದಂತೆ ಒಟ್ಟಾರೆ ವೆಚ್ಚವು ಅದೇ ಗಾತ್ರದ ಕಾಂಕ್ರೀಟ್ ಮನೆಯನ್ನು ನಿರ್ಮಿಸುವುದಕ್ಕಿಂತ ಅಗ್ಗವಾಗಿದೆ ಎಂದು ಶಾಂತಿಲಾಲ್ ಹೇಳಿದ್ದಾರೆ.

ಪರಿಸರ ಸ್ನೇಹಿ ಮನೆ

ಪರಿಸರ ಸ್ನೇಹಿ ಮನೆ

  • Share this:
ಇಷ್ಟದ ಮನೆ ಕಟ್ಟುವುದು ಪ್ರತಿಯೊಬ್ಬರು ಕನಸು. ಈಗೆಲ್ಲಾ ಮನೆ ಕಟ್ಟಲು ಬೇಕಿರುವ ಸಾಮಾಗ್ರಿಗಳ ಬೆಲೆ ಗಗನಕ್ಕೇರಿವೆ. ಬೆಲೆ ನಡುವೆ ಗುದ್ದಾಡುವ ಬದಲು ಪರಿಸರ ಸ್ನೇಹಿ ಮನೆಕಟ್ಟುವುದೇ ಒಳಿತು. ಪರಿಸರ ಸ್ನೇಹಿ ಮನೆಗಳಿಗೆ ಈಗ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಮನೆಯೊಳಗೆ ಮನೆಯ ಸುತ್ತಮುತ್ತ ತಂಪಾದ ವಾತಾವರಣ ಬೇಕೆಂದು ಬಯಸುವವರು ಈ ರೀತಿಯ ಮನೆ ನಿರ್ಮಿಸಿಕೊಳ್ಳಬಹುದು. ಪರಿಸರ ಸ್ನೇಹಿ ಮನೆಗಳು ಯಾವ ರೀತಿಯಲ್ಲಿರಬೇಕು, ಅದನ್ನು ನಿರ್ಮಿಸುವುದು, ನಿರ್ವಹಣೆ ಮಾಡುವುದು ಹೇಗೆ ಎಂಬ ಚಿಂತೆ ಹಲವರಲ್ಲಿದೆ. ನೈಸರ್ಗಿಕ ವಸ್ತುಗಳನ್ನು ಬಳಸಿಕೊಂಡು ಹೇಗೆ ಮನೆ ಕಟ್ಟಬಹುದು ಎಂಬುದರ ಒಂದು ಸಣ್ಣ ಝಲಕ್ ಇಲ್ಲಿದೆ ನೋಡಿ.

ಕೇರಳದ ನಿವಾಸಿಯೊಬ್ಬರು ಅಲ್ಲಿನ ಸಾಂಪ್ರದಾಯಿಕ ವಾಸ್ತುಶೈಲಿಯ ಪ್ರಕಾರ 35 ಲಕ್ಷ ರೂ ಬಜೆಟ್‌ನಲ್ಲಿ ಒಂದು ಸುಂದರ, ಭವ್ಯವಾದ ಪರಿಸರ ಸ್ನೇಹಿ ಮನೆಯನ್ನು ವಿನ್ಯಾಸಗೊಳಿಸಿದ್ದಾರೆ. ಈ ವಿಶಿಷ್ಟ ಸುಸ್ಥಿರ ಮನೆ ಹೇಗಿದೆ ನೀವೆ ನೋಡಿ.
ಕೇರಳದ ಮೇಲೂರಿನ ನಿವಾಸಿಯಾಗಿರುವ ದಿನೇಶ್ ಎಂಬವವರು ಈ ಸುಂದರ ಮನೆಯ ಮಾಲೀಕರು.

ಎಲ್ಲಾ ಆಧುನಿಕ ಸೌಲಭ್ಯಗಳೊಂದಿಗೆ,  ಪ್ರಾಚೀನ ಕಾಲದಲ್ಲಿ ಬಳಸುವ ಪರಿಸರ ಸ್ನೇಹಿ ವಸ್ತುಗಳು ಮತ್ತು ವಿಧಾನಗಳನ್ನು ಬಳಸಿ ಮನೆ ನಿರ್ಮಿಸಿದ್ದಾರೆ. ಈ ಮನೆಯ ನಿರ್ಮಾಣಕ್ಕಾಗಿ  ದಿನೇಶ್ ಸೆಂಟರ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ ಫಾರ್ ರೂರಲ್ ಡೆವಲಪ್‌ಮೆಂಟ್‌ನಲ್ಲಿ ಕೆಲಸ ಮಾಡುತ್ತಿರುವ ಎಂಜಿನಿಯರ್ ಶಾಂತಿಲಾಲ್ ಅವರನ್ನು ಸಂಪರ್ಕಿಸಿ ತಮ್ಮಿಷ್ಟದ ಮನೆಯನ್ನು ನಿರ್ಮಿಸಲು ಕೇಳಿಕೊಂಡಿದ್ದರು.

ಸಿಮೆಂಟ್ ಗಾರೆಗೆ ಗುಡ್ ಬೈ, ಅಕ್ಕಿ ಸಿಪ್ಪೆ, ಬೆಲ್ಲ, ಮೆಂತ್ಯ, ಸುಣ್ಣ ಬಳಕೆ
ದಿನೇಶ್ ಕೇರಳದ ಸಾಂಪ್ರದಾಯಿಕ ವಾಸ್ತುಶಿಲ್ಪದ ಆಧಾರದ ಮೇಲೆ ಸ್ಥಳೀಯ ವಿಧಾನಗಳನ್ನು ಬಳಸಿ ವಿನ್ಯಾಸಗೊಳಿಸಲಾಗಿದೆ. ಒಟ್ಟು 2,700 ಚದರ ಅಡಿ ವಿಸ್ತೀರ್ಣದಲ್ಲಿ ಸ್ಥಾಪಿಸಲಾದ ಈ ಮನೆಯು ನಾಲ್ಕು ಮಲಗುವ ಕೋಣೆಗಳು, ಅಡುಗೆ ಮನೆ, ಪೂಜಾ ಕೋಣೆ, ಊಟದ ಕೋಣೆ, ಬಾಲ್ಕನಿ ಮತ್ತು ಹೆಚ್ಚು ವಿಸ್ತಾರವಾದ ಸ್ಥಳವನ್ನು ಹೊಂದಿದೆ.

ಇದನ್ನೂ ಓದಿ: ಸಮಂತಾರಂತೆ ಸ್ವಿಟ್ಜರ್ಲೆಂಡ್‌ನಲ್ಲಿ ಮಜಾ ಮಾಡಬೇಕಾ..? ಈ ಸ್ಥಳಗಳಿಗೆ ಮಿಸ್ ಮಾಡದೇ ಹೋಗಿ..!

ದಿನೇಶ್ ಮನೆಯನ್ನು ಯಾವುದೇ ಸಿಮೆಂಟ್ ಅಥವಾ ಗಾರೆ ಬಳಸದೆ  ಪ್ರಾಚೀನ ಕಾಲದಿಂದಲೂ ಕೇರಳದ ಸಾಂಪ್ರದಾಯಿಕ ವಾಸ್ತುಶಿಲ್ಪದ ಪ್ರಮುಖ ಭಾಗವಾಗಿರುವ ಲ್ಯಾಟರೈಟ್ ಕಲ್ಲುಗಳನ್ನು ಬಳಸಿಕೊಂಡು ಗೋಡೆಗಳನ್ನು ನಿರ್ಮಿಸಲಾಗಿದೆ. ಕಲ್ಲುಗಳನ್ನು ಗಟ್ಟಿಗೊಳಿಸಲು ಮರಳು ಮತ್ತು ಸುಣ್ಣದಂತಹ ನೈಸರ್ಗಿಕ ವಸ್ತುಗಳ ಮಿಶ್ರಣವನ್ನು ಬಳಸಿದ್ದಾರೆ.

ಇನ್ನು ಗೋಡೆಗಳ ಪ್ಲಾಸ್ಟರಿಂಗ್ ಅನ್ನು ಕೂಡ ನೈಸರ್ಗಿಕ ವಸ್ತುಗಳಿಂದ ಮಾಡಲಾಗಿದೆ. ಕಡಿಮೆ ಪ್ರಮಾಣದ ಮರಳಿನಲ್ಲಿ ಹಲವಾರು ಸಾವಯವ ಮತ್ತು ನೈಸರ್ಗಿಕ ವಸ್ತುಗಳನ್ನು ಮಿಶ್ರಣ ಮಾಡುವ ಮೂಲಕ ಪ್ಲಾಸ್ಟರಿಂಗ್ ಮಾಡಲಾಗಿದೆ. ಅಕ್ಕಿ ಸಿಪ್ಪೆ, ಬೆಲ್ಲ, ಮೆಂತ್ಯ, ಸುಣ್ಣ ಕಡುಕ್ಕವನ್ನು ಸೇರಿಸಲಾಗಿದೆ.

ಅಕ್ಕಿ ಸಿಪ್ಪೆ ಉತ್ತಮ ಫೈಬರ್ ಅಂಶವನ್ನು ಹೊಂದಿರುವುದರಿಂದ ಕಲ್ಲುಗಳನ್ನು ಬಿಗಿ ಹಿಡಿಯಲು ಸಹಾಯಕವಾಗಿದೆ. ಮನೆಗಳಿಗೆ ಕೀಟಗಳು ಅಥವಾ ಗೆದ್ದಲುಗಳ ಕಾಟ ತಪ್ಪಿಸಲು 'ಕಡುಕ್ಕ' ಸಹಾಯ ಮಾಡುತ್ತದೆ. ಈ ರೀತಿಯ ಪ್ಲ್ಯಾಸ್ಟರಿಂಗ್ ಗೋಡೆಗಳಿಗೆ ನೈಸರ್ಗಿಕ ವಿನ್ಯಾಸವನ್ನು ನೀಡುತ್ತದೆ ಮತ್ತು ಮನೆಗೆ ಸಾಂಪ್ರದಾಯಿಕ ಆಕರ್ಷಣೆಯನ್ನು ನೀಡುತ್ತದೆ.

ಮನೆಯಲ್ಲಿ ಕೆಲವು ತೇವಾಂಶ ಹೊಂದಿರುವ ಸ್ಥಳಗಳಿಗೆ ಅಂದರೆ ಅಡುಗೆಮನೆ ಮತ್ತು ಸ್ನಾನಗೃಹಗಳಲ್ಲಿ ಸಿಮೆಂಟ್ ಪ್ಲಾಸ್ಟರಿಂಗ್ ಅನ್ನು ಬಳಸಲಾಗಿದೆ.
ಮನೆಯ ಹೊರಭಾಗ ವಿಭಿನ್ನ ಮತ್ತು ಚೆಂದವಾಗಿ ಕಾಣಲು ಲ್ಯಾಟರೈಟ್ ಕಲ್ಲುಗಳನ್ನು ಪ್ಲಾಸ್ಟರಿಂಗ್ ಮಾಡದೇ ಬಿಡಲಾಗಿದೆ.

ನೈಸರ್ಗಿಕ ವಸ್ತುಗಳನ್ನು ಬಳಸುವುದರ ಜೊತೆಗೆ,  ಫಿಲ್ಲರ್ ಸ್ಲ್ಯಾಬ್ ಸೇರಿದಂತೆ ಹಲವಾರು ಸಮರ್ಥನೀಯ ಮತ್ತು ವೆಚ್ಚ-ಪರಿಣಾಮಕಾರಿ ತಂತ್ರಗಳನ್ನು ಬಳಸಲಾಗಿದೆ.
ಶಾಂತಿಲಾಲ್ ಈ ಬಗ್ಗೆ ಮಾತನಾಡಿದ್ದು, “ನಾವು ಕಾಂಕ್ರೀಟ್ ನಡುವೆ ಮಣ್ಣಿನ ಛಾವಣಿಯ ಟೈಲ್ಸ್ ಬಳಸಿದ್ದೇವೆ. ಇದು ಛಾವಣಿಯ ಮೇಲಿನ ಹೊರೆ ಮತ್ತು ಕಾಂಕ್ರೀಟ್ ಕಡಿಮೆ ಮಾಡುತ್ತದೆ ಮತ್ತು ಉತ್ತಮ ಉಷ್ಣ ನಿರೋಧನವನ್ನು ಒದಗಿಸುತ್ತದೆ. ಮಣ್ಣಿನ ಪ್ಲಾಸ್ಟರಿಂಗ್ ಮನೆಯನ್ನು ನೈಸರ್ಗಿಕವಾಗಿ ತಂಪಾಗಿರಿಸಲು ಸಹಾಯ ಮಾಡುತ್ತದೆ ಎಂದಿದ್ದಾರೆ.

ಕಾಂಕ್ರೀಟ್ ಮನೆಗೆ ಹೋಲಿಸಿದರೆ ನಮ್ಮ ಈ ಮನೆ ತಂಪಾಗಿದೆ, ಹೆಚ್ಚಾಗಿ ನಾವು ಫ್ಯಾನ್‌ಗಳನ್ನು ಬಳಸುವುದಿಲ್ಲ ಎಂದು ದಿನೇಶ್ ಹೇಳಿದ್ದಾರೆ.
ಮನೆಯ ಮಧ್ಯಭಾಗದಲ್ಲಿ ಒಂದು ಗ್ರಿಲ್ ಮತ್ತು ಮೇಲೆ ಗಾಜಿನ ಸೀಲಿಂಗ್ ಅನ್ನು ಹೊಂದಿರುವ ಅಂಗಳವಿದೆ. ಇದು ದಿನವಿಡೀ ಸೂರ್ಯನ ಬೆಳಕನ್ನು ಒದಗಿಸಲು ಸಹಾಯ ಮಾಡುತ್ತದೆ.

'ಕೂತಂಬಲಂ’ ಮಾದರಿಯ ಬಾಲ್ಕನಿ - ಹೈಪೈ ಅಡುಗೆ ಮನೆ
ಮನೆಯ ಬಾಲ್ಕನಿಯು ಕೇರಳದ ಸಾಂಪ್ರದಾಯಿಕ ಟೆಂಪಲ್ ಥಿಯೇಟರ್ ರಚನೆಯಿಂದ ಪ್ರೇರಿತವಾದ ಮತ್ತೊಂದು ವೈಶಿಷ್ಟ್ಯವಾಗಿದೆ. ಇದು ‘ಕೂತಂಬಲಂ’ ಮಾದರಿಯ ವಿನ್ಯಾಸವಾಗಿದೆ. ಬಾಲ್ಕನಿಯಲ್ಲಿ ಗ್ರಿಲ್ ಇದೆ, ಇದನ್ನು ಮರದ ಬದಲಿಗೆ ಉಕ್ಕಿನಿಂದ ತಯಾರಿಸಲಾಗಿದ್ದು, ಮರವನ್ನು ಹೋಲುವ ಬಣ್ಣದಿಂದ ಲೇಪಿಸಿದ್ದಾರೆ.
ಮನೆಗೆ ಬೇಕಿರುವ ಮರಗಳನ್ನು ಮೈಸೂರಿನಿಂದ ತರಿಸಿದ ಮತ್ತು ಕೆಲವು ಹಳೆಯ ಮರಗಳನ್ನು ಉಪಯೋಗಿಸಲಾಗಿದೆ.ಅಡಿಗೆ ಮನೆ ವಿಶಾಲವಾಗಿದ್ದು ಮಲ್ಟಿ ವುಡ್ ಫಿನಿಶ್ ಆಧುನಿಕ ಶೈಲಿಯಲ್ಲಿ ಹೊಂದಿಸಲಾಗಿದೆ. ಮನೆಯ ನೆಲಹಾಸನ್ನು ವಿಟ್ರಿಫೈಡ್ ಟೈಲ್ಸ್ ಬಳಸಿ ಮಾಡಲಾಗಿದೆ.

ಇದನ್ನೂ ಓದಿ: ಗರ್ಭಿಣಿ ಆಗೋಕೂ ಮುಂಚೆಯೇ ಮುಂದೆ ಹುಟ್ಟೋ ಮಗುಗಾಗಿ 3 ಲಕ್ಷ ರೂ ಬಟ್ಟೆ ಖರೀದಿಸಿದ ಮಹಿಳೆ!

ಈ ಮನೆಯನ್ನು 35 ಲಕ್ಷ ರೂಪಾಯಿಗಳ ‘ಪಾಕೆಟ್ ಸ್ನೇಹಿ’ ಬಜೆಟ್‌ನಲ್ಲಿ ನಿರ್ಮಿಸಲಾಗಿದೆ ಎಂದು ದಿನೇಶ್ ಹೇಳುತ್ತಾರೆ. ಕಚ್ಚಾ ಸಾಮಗ್ರಿಗಳು ಮತ್ತು ಕಾರ್ಮಿಕ ಶುಲ್ಕಗಳು ಸೇರಿದಂತೆ ಒಟ್ಟಾರೆ ವೆಚ್ಚವು ಅದೇ ಗಾತ್ರದ ಕಾಂಕ್ರೀಟ್ ಮನೆಯನ್ನು ನಿರ್ಮಿಸುವುದಕ್ಕಿಂತ ಅಗ್ಗವಾಗಿದೆ ಎಂದು ಶಾಂತಿಲಾಲ್ ಹೇಳಿದ್ದಾರೆ.
Published by:Sandhya M
First published: