ವೈದ್ಯೋ ನಾರಾಯಣೋ ಹರಿಃ ಎಂಬ ಮಾತು ಕೇಳಿದ್ದೇವೆ, ಅದಕ್ಕೂ ಮೀರಿ ಇಲ್ಲೊಬ್ಬರು ವೈದ್ಯರು (Doctor) ಹಸಿದವರಿಗೆ ಕಡಿಮೆ ಬೆಲೆಯಲ್ಲಿ ವಿಶೇಷವಾಗಿ ಮನೆಯಲ್ಲಿ ತಯಾರಿಸಿದ ಆಹಾರವನ್ನು (Home Made Food) ಬೀದಿ ಬದಿಯಲ್ಲಿ ನಿಂತು ನೀಡುವ ಮಹತ್ತರವಾದ ಕೆಲಸದಲ್ಲಿ ತೊಡಗಿದ್ದಾರೆ. ವೈದ್ಯರ ಈ ಕೆಲಸವು ಕೋಟಿ ಹೃದಯಗಳನ್ನು ಗೆಲ್ಲುತ್ತಿದೆ ಮತ್ತು ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಹೌದು ಪ್ರತಿನಿತ್ಯ ರೆಸ್ಟೋರೆಂಟ್, ಹೋಟೆಲ್ಗಳಲ್ಲಿ ತಿನ್ನುವವರಿಗಿಂತ ಬೀದಿ ಬದಿಯಲ್ಲಿ ಊಟವನ್ನು ಸೇವಿಸುವವರೇ ಹೆಚ್ಚು. ರೆಸ್ಟೋರೆಂಟ್ (Restaurant), ಹೋಟೆಲ್ಗೆ (Hotel) ಹೋಲಿಸಿದರೆ ಬೀದಿ ಬದಿಗಳಲ್ಲಿ ಸಿಗುವ ಊಟದ ವೆಚ್ಚ ಕಡಿಮೆ, ಆದರೆ ರುಚಿ ಮಾತ್ರ ಹೆಚ್ಚಿರುತ್ತದೆ. ಊಟ, ತಿಂಡಿ ಸೇರಿ ಎಲ್ಲವನ್ನು ಬೀದಿ ಬದಿಯಲ್ಲಿ ಮಾರಾಟ ಮಾಡಲಾಗುತ್ತದೆ. ಕಚೇರಿಗೆ ಹೋಗುವವರಿಂದ ಹಿಡಿದು ದಿನಗೂಲಿ ಕಾರ್ಮಿಕರು (Workers) ಇಲ್ಲಿ ಬಂದು ಆಹಾರ ಸೇವಿಸುತ್ತಾರೆ.
ಬೀದಿ ಬದಿಯಲ್ಲಿ ಆಹಾರ ಮಾರಾಟ
ಬೀದಿ ಬದಿಯಲ್ಲಿ ಸಿಗುವ ಊಟ ಕಡಿಮೆ ಬೆಲೆಗೂ ಸಿಗುತ್ತದೆ ಮತ್ತು ಹೊಟ್ಟೆಯೂ ತುಂಬುತ್ತದೆ. ಇದೇ ಉದ್ದೇಶವನ್ನು ಇಟ್ಟುಕೊಂಡು ಹಸಿದವರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಮನೆಯಲ್ಲಿಯೇ ಮಾಡಿದ ರುಚಿಕರವಾದ ಊಟ ನೀಡುವ ಮಹತ್ತರವಾದ ಕಾರ್ಯವನ್ನು ಮುಂಬೈನಲ್ಲಿ ಡಾ. ಸುನೀತಾ ಎಂಬುವವರು ಮಾಡುತ್ತಿದ್ದಾರೆ. ವೈದ್ಯರು ಬೀದಿ ಬದಿಯಲ್ಲಿ ಆಹಾರ ಮಾರುತ್ತಿದ್ದಾರಾ..? ಎಂದು ನಿಮಗೆ ಆಶ್ಚರ್ಯವಾಗಬಹುದು, ಆದರೆ ಇದು ನಿಜ. ಸುನೀತಾ ಅವರು ವೈದ್ಯ ವೃತ್ತಿಯೊಂದಿಗೆ ಹಲವಾರು ವರ್ಷಗಳಿಂದ ಈ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.
ವೈದ್ಯರ ಕಾರ್ಯಕ್ಕೆ ಮೆಚ್ಚುಗೆ
ಕಡಿಮೆ ಬೆಲೆಗೆ ತಾಜಾ ಮನೆಯಲ್ಲಿ ತಯಾರಿಸಿದ ಆಹಾರವನ್ನು ಮಾರಾಟ ಮಾಡುವ ವೈದ್ಯರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಹೃದಯ ಗೆದ್ದಿದೆ. ಇತ್ತೀಚಿಗೆ ವಿಡಿಯೋ ಇಂಟರ್ನೆಟ್ನಲ್ಲಿ ಭಾರಿ ಸುದ್ದಿ ಮಾಡಿದ್ದು, ವೈದ್ಯರು ರುಚಿಕರವಾದ ಮನೆಯಲ್ಲಿ ತಯಾರಿಸಿದ ಆಹಾರವನ್ನು ಮಾರಾಟ ಮಾಡುವುದನ್ನು ಮತ್ತು ತಯಾರಿಸುವುದನ್ನು ವಿಡಿಯೋದಲ್ಲಿ ನೋಡಬಹುದು. ಇನ್ಸ್ಟಾಗ್ರಾಮ್ನಲ್ಲಿ ಫುಡ್ ಬ್ಲಾಗರ್ @the_temptationalley ಎಂಬುವವರು ಈ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ.
30 ವರ್ಷಗಳಿಂದ ಆಹಾರ ಮಳಿಗೆ ನಡೆಸುತ್ತಿದ್ದಾರೆ
55 ವರ್ಷ ವಯಸ್ಸಿನ ಡಾ. ಸುನೀತಾ ಅವರು ತಮ್ಮ ಪತಿಯೊಂದಿಗೆ ಕಳೆದ 30 ವರ್ಷಗಳಿಂದ ಆಹಾರ ಮಳಿಗೆಯನ್ನು ನಡೆಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಅವರು ವೃತ್ತಿಯಲ್ಲಿ ಪೌಷ್ಟಿಕತಜ್ಞೆ ಮತ್ತು ಆಹಾರ ತಜ್ಞರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಯಾರು ಬೇಕಾದರೂ 3 - 4 ಕೆಲಸಗಳನ್ನು ನಿಭಾಯಿಸಬಲ್ಲರು ಎಂಬುದು ಸುನೀತಾ ಅವರ ತತ್ವ, ಹಾಗಾಗಿ ವೃತ್ತಿಯ ಜೊತೆಗೆ ಅವರು ಆಹಾರದ ಮಳಿಗೆಗಳನ್ನು ನಡೆಸುತ್ತಿದ್ದಾರೆ.
ಇದನ್ನೂ ಓದಿ: Weight Loss: ಬರ್ಗರ್, ಬಿಯರ್, ಚಿಪ್ಸ್, ಪಿಜ್ಜಾ ಸೇವಿಸಿ ತೂಕ ಇಳಿಸಿಕೊಂಡ ಫಿಟ್ನೆಸ್ ತರಬೇತುದಾರರ ಸ್ಟೋರಿ ಇಲ್ಲಿದೆ
ಫುಡ್ ಬ್ಲಾಗರ್ ತಮ್ಮ ಇನ್ಸ್ಟಾಗ್ರಾಮ್ ಪುಟದಲ್ಲಿ ಸುನೀತಾ ಅವರು ಆಹಾರ ಮಳಿಗೆಯಲ್ಲಿ ಕೆಲಸ ಮಾಡುವ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ. ವಿಡಿಯೊದಲ್ಲಿ ವೈದ್ಯರು ಆಹಾರ ನೀಡುವುದನ್ನು ಮತ್ತು ಆಹಾರ ತುಂಬಿದ ಪಾತ್ರೆಗಳನ್ನು ನೋಡಬಹುದಾಗಿದೆ.
ಕೇವಲ 40 ರೂಪಾಯಿಯಲ್ಲಿ ಬಗೆ ಬಗೆ ಊಟ
ವೈದ್ಯೆ ಸುನೀತಾ ಅವರು ನೀಡುವ ಊಟದ ಬೆಲೆ ಕೇವಲ 40 ರೂ ಆಗಿದೆ. ಕಡಿಮೆ ಬೆಲೆಯಲ್ಲಿ ಅನ್ನ, ಸಾರು ಅಷ್ಟೇ ಕೊಡಬಹುದು ಎಂದು ನೀವು ಅಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು. ಕೇವಲ 40 ರೂಪಾಯಿಯ ಕಡಿಮೆ ಬೆಲೆಯಲ್ಲಿ ಅವರು ದಾಲ್, ಅನ್ನ, ರೊಟ್ಟಿ, ಸಬ್ಜಿ, ಪೂರಿ, ಉಪ್ಪಿನಕಾಯಿ ಮತ್ತು ಪಾಪಡ್ ಅನ್ನು ನೀಡುತ್ತಿದ್ದಾರೆ. ಮನೆಯೂಟದ ರುಚಿಯನ್ನು ಸವಿಯಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದು ಇಲ್ಲಿ ಊಟ ಮಾಡುತ್ತಾರೆ ಎಂದು ಫುಡ್ ಬ್ಲಾಗರ್ ಹೇಳಿದ್ದಾರೆ.
ಇದನ್ನೂ ಓದಿ: ಅಡುಗೆ ಮನೆಯಲ್ಲಿ ಕೈ ಸುಟ್ಟುಕೊಂಡರೆ ತಪ್ಪಿಯೂ ಈ ಕೆಲವು ತಪ್ಪು ಮಾಡಬೇಡಿ, ಇವು ಇನ್ನಷ್ಟು ಡೇಂಜರ್
ಈ ವಿಡಿಯೊವನ್ನು ಅಪ್ಲೋಡ್ ಮಾಡಿದಾಗಿನಿಂದ ಇದನ್ನು 3 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದು, 27 ಸಾವಿರಕ್ಕೂ ಅಧಿಕ ಲೈಕ್ಸ್ ಮತ್ತು ಬಳಕೆದಾರರಿಂದ ಹಲವಾರು ಕಾಮೆಂಟ್ಗಳು ಆಕೆಯ ಶ್ರಮವನ್ನು ಶ್ಲಾಘಿಸಿವೆ. ಒಬ್ಬ ಬಳಕೆದಾರರು "ವಾವ್, ಒಬ್ಬ ಡಯೆಟಿಷಿಯನ್ ಮತ್ತು ಪೌಷ್ಟಿಕತಜ್ಞರಾಗಿ ಇದು ನನಗೆ ಸ್ಫೂರ್ತಿ ನೀಡುತ್ತಿದೆ" ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ, "ವೈದ್ಯರು ತುಂಬಾ ಉದಾರಿ. ಒಬ್ಬ ವ್ಯಕ್ತಿಯ ಹಸಿವನ್ನು ಪೂರೈಸಲು ಕಡಿಮೆ ಬೆಲೆಯಲ್ಲಿ ಹೆಚ್ಚಿನ ಆಹಾರವನ್ನು ನೀಡುತ್ತಿದ್ದಾರೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ