ಒಮ್ಮೆ ನಿಮ್ಮ ಸುತ್ತಮುತ್ತಲಿನ ಪರಿಸರ ನೋಡಿ (Look Around) ಅಥವಾ ರಸ್ತೆಯಲ್ಲಿ ಪ್ರಯಾಣಿಸುತ್ತಿರುವಾಗ ರಸ್ತೆ ಬದಿಗಳಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗಳನ್ನೊಮ್ಮೆ (Power Lines) ಗಮನಿಸಿ. ನಿಮಗಲ್ಲಿ ಹಲವಾರು ಪಕ್ಷಿಗಳು ಸ್ವಚ್ಛಂದವಾಗಿ ತಂತಿಗಳ ಮೇಲೆ ಕುಳಿತಿರುವುದು ಕಂಡುಬರುತ್ತದೆ.
ವಿದ್ಯುತ್ ತಂತಿ ಎಂದಾಗ ಸಹಜವಾಗಿ ಅದರಲ್ಲಿ ವಿದ್ಯುತ್ ಸಂಚಾರ ಇದ್ದೆ ಇರುತ್ತದೆ. ಹೀಗೆ ವಿದ್ಯುತ್ ಸಂಚಾರ ಇರುವ ತಂತಿಗಳ ಮೇಲೆ ಪಕ್ಷಿಗಳು ಕುಳಿತಾಗ ಅವುಗಳಿಗೆ ಶಾಕ್ ಹೊಡೆಯುವುದಿಲ್ಲವೇಕೆ? ಎಂಬ ಪ್ರಶ್ನೆ ನಿಮ್ಮ ತಲೆಯಲ್ಲಿ ಹಲವಾರು ಬಾರಿ ಮೂಡಿರಬಹುದಲ್ಲವೆ? ಅದು ಹೇಗೆ ಸಾಧ್ಯ ಎಂದು ನೀವು ಎಷ್ಟು ಯೋಚಿಸಿದರೂ ಸಮಾಧಾನಕರ ಉತ್ತರ ಸಿಕ್ಕಿರದೇ ಇರಬಹುದು. ಹಾಗಾದರೆ ಅದಕ್ಕೆ ಸಮರ್ಪಕವಾದ ಉತ್ತರ ಏನು ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ.
ಪಕ್ಷಿಗಳು ವಿದ್ಯುತ್ ಸಂಚಾರ ಇರುವ ತಂತಿಗಳ ಮೇಲೆ ಕುಳಿತಾಗ ವಿದ್ಯುತ್ ಏಕೆ ತಗಲುವುದಿಲ್ಲ?
ಈ ಪ್ರಶ್ನೆಗೆ ಸರಳ ಹಾಗೂ ಪ್ರಧಾನವಾದ ಉತ್ತರ ಎಂದರೆ ಪಕ್ಷಿಗಳ ರೆಕ್ಕೆ ಹಾಗೂ ಕಾಲುಗಳು ಪ್ರಧಾನವಾಗಿ ವಿದ್ಯುತ್ ವಿರೋಧಿಸುವ ಗುಣಲಕ್ಷಣ ಹೊಂದಿರುವುದೇ ಆಗಿದೆ. ವಿಜ್ಞಾನದಲ್ಲಿ ಸಾಮಾನ್ಯವಾಗಿ ಉಷ್ಣವಾಹಕ ಎಂಬ ಪದವನ್ನು ಬಳಸಲಾಗುತ್ತದೆ. ಇದರ ಸಾಮಾನ್ಯ ಅರ್ಥ ಎಂದರೆ ಯಾವುದೇ ವಸ್ತು ಶಾಖವನ್ನು ಉತ್ತಮವಾಗಿ ತನ್ನಲ್ಲಿ ಸ್ವೀಕರಿಸಿ ಅದನ್ನು ಪ್ರಹರಿಸಲು ಅನುವು ಮಾಡಿಕೊಡುವ ಗುಣ ಎಂದು ಹೇಳಬಹುದು.
ಆದರೆ ಪಕ್ಷಿಗಳ ಕಾಲುಗಳು ಹಾಗೂ ರೆಕ್ಕೆ ವಿದ್ಯುತ್ ಅನ್ನು ವಿರೋಧಿಸುವ ಗುಣವನ್ನು ಹೊಂದಿದೆ. ಅಂದರೆ ವಿದ್ಯುತ್ ಸಂಚಾರಕ್ಕೆ ಆ ಭಾಗಗಳು ಸಾಕಷ್ಟು ತಡೆಯನ್ನೊಡ್ಡುತ್ತವೆ (ಇದರ ಅರ್ಥ ಪಕ್ಷಿಗಳು ಸಂಪೂರ್ಣವಾಗಿ ವಿದ್ಯುತ್ ನಿರೋಧಕ ಎನ್ನಲು ಸಾಧ್ಯವಿಲ್ಲ). ವೈಜ್ಞಾನಿಕವಾಗಿ ವಿದ್ಯುತ್ ಪ್ರಮಾಣವು ಪಕ್ಷಿಗಳ ದೇಹವನ್ನು ಪ್ರವೇಶಿಸಿದಾಗ ಅದರಲ್ಲಿರುವ ನಿರೋಧ ಅಥವಾ ವಿರೋಧದ ಗುಣಲಕ್ಷಣದಿಂದಾಗಿ ತಗ್ಗುತ್ತ ಸಾಗುತ್ತದೆ.
ಇದನ್ನೂ ಓದಿ: Weird News: ಉಲ್ಟಾ ಪಲ್ಟಾ ನೇತಾಡುವ ಮರ ಇದು, ನೀವೂ ಒಮ್ಮೆ ನೋಡಿ!
ವಿದ್ಯುತ್ ತಂತಿಗಳ ಮಧ್ಯೆ ಇರುವ ಅಂತರವೇ ಕಾರಣ
ಇದಲ್ಲದೆ, ಪಕ್ಷಿಗಳಿಗೆ ವಿದ್ಯುತ್ ತಗುಲದೆ ಇರುವುದಕ್ಕೆ ಇನ್ನೊಂದು ಕಾರಣವೆಂದರೆ ವಿದ್ಯುತ್ ಸಂಚಾರವಿರುವ ಎರಡು ವಿದ್ಯುತ್ ತಂತಿಗಳ ಮಧ್ಯೆ ಇರುವ ಅಂತರ. ಈ ಅಂತರದಿಂದಾಗಿ ಒಂದು ತಂತಿಯಲ್ಲಿನ ವಿದ್ಯುತ್ ತನ್ನ ಪಕ್ಕದಲ್ಲಿರುವ ಇನ್ನೊಂದು ತಂತಿಗೆ ಪ್ರವಹಿಸಲು ಸಾಧ್ಯವಾಗುವುದಿಲ್ಲ. ಈ ಅಂತರವೇ ಒಂದು ಸುರಕ್ಷತೆಯ ತಾಣವಾಗಿ ಮಾರ್ಪಡುವುದರಿಂದ ಹಕ್ಕಿಗೆ ವಿದ್ಯುತ್ ತಗಲುವ ಪ್ರಮೇಯವೇ ಬರುವುದಿಲ್ಲ.
ಇನ್ನು ವಿದ್ಯುತ್ ನಲ್ಲಿ ಎರಡು ಬಗೆಗಳಿವೆ, ಒಂದು ಎಸಿ (ಅಲ್ಟರ್ನೇಟಿವ್ ಕರೆಂಟ್) ಹಾಗೂ ಇನ್ನೊಂದು ಡಿಸಿ (ಡೈರೆಕ್ಟ್ ಕರೆಂಟ್). ಎಸಿ ವಿದ್ಯುತ್ ಎಂಬುದು ಪ್ರತಿ ಕ್ಷಣ ತನ್ನ ದಿಕ್ಕನ್ನು ಬದಲಿಸುತ್ತ ಸಂಚರಿಸುವ ಶಕ್ತಿಯಾಗಿದ್ದು ಪಕ್ಷಿಗೆ ತಗುಲಿದಾಗ ಅವುಗಳಿಗೆ ಸಾಕಷ್ಟು ಹಾನಿ ಮಾಡಬಹುದು. ಅದೇ ಡಿಸಿ ಕರೆಂಟ್ ಎಂಬುದು ಒಂದೇ ದಿಕ್ಕಿನಲ್ಲಿ ಪ್ರವಹಿಸುವ ವಿದ್ಯುತ್ ಆಗಿದ್ದು ಪಕ್ಷಿಗೆ ತಗುಲಿದರೆ ಅದನ್ನದು ಸುಟ್ಟು ಕರಕಲಾಗುವಂತೆ ಮಾಡುತ್ತದೆ.
ವಿದ್ಯುತ್ ಜೊತೆ ಎಂದಿಗೂ ಆಟ ಆಡಬೇಡಿ
ವಿದ್ಯುತ್ ಶಕ್ತಿ ನಿಯಮ ಎಂಬುದು ಮನುಷ್ಯನಿಗಾಗಲಿ ಅಥವಾ ಪಕ್ಷಿಗಳಿಗಾಗಲಿ ಬೇರೆ ಬೇರೆ ಇಲ್ಲ. ಆದರೆ ಮನುಷ್ಯನಾದವನು ವಿದ್ಯುತ್ ತಂತಿಗಳನ್ನು ಬರಿಗೈಯಿಂದ ಮುಟ್ಟಲು ಖಂಡಿತ ಸಾಹಸ ಮಾಡಬಾರದು. ಏಕೆಂದರೆ ಮನುಷ್ಯ ಭೂಮಿಯ ಸಂಪರ್ಕವನ್ನು ಸಹ ಹೊಂದಿರುವುದರಿಂದ ವಿದ್ಯುತ್ ತಂತಿ ಮುಟ್ಟಿದಾಗ ಅದರ ಸರ್ಕ್ಯೂಟ್ ಪೂರ್ಣಗೊಳ್ಳುತ್ತದೆ. ಇದರ ಪರಿಣಾಮ ವಿದ್ಯುತ್ ಜೀವಹಾನಿಯನ್ನೂ ಮಾಡಬಹುದು.
ಹಗಾಗಿಯೇ ಮನೆಯಲ್ಲಿ ಯಾವುದಾದರೂ ವಿದ್ಯುತ್ ಸಂಬಂಧಿತ ಕೆಲಸಗಳನ್ನು ಮಾಡಬೇಕೆಂದಾದಲ್ಲಿ ಪ್ಲಾಸ್ಟಿಕ್ ಚಪ್ಪಲ್ ಧರಿಸಲು ಶಿಫಾರಸ್ಸು ಮಾಡಲಾಗುತ್ತದೆ. ಏಕೆಂದರೆ ಪ್ಲಾಸ್ಟಿಕ್ ವಿದ್ಯುತ್ ನಿರೋಧಕ ವಸ್ತುವಾಗಿದ್ದು ಅದರಲ್ಲಿ ವಿದ್ಯುತ್ ಸಂಚರಿಸಲಾಗದು. ನೀವು ಚಪ್ಪಲ್ ಧರಿಸಿದ್ದಾಗ ನಿಮ್ಮೊಳಗೆ ಪ್ರವೇಶಿಸುವ ವಿದ್ಯುತ್ ನಿಮ್ಮ ಕಾಲಿನ ಮೂಲಕ ಭೂಮಿಗೆ ಪ್ರವಹಿಸದೆ ಸರ್ಕ್ಯೂಟ್ ಎಂಬುದು ಪೂರ್ಣಗೊಳ್ಳುವುದಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ