Viral Video: ಹಣ್ಣು ಮಾರುವ ಮಹಿಳೆಗೆ ಶಾಲಾ ಮಕ್ಕಳು ಹೇಗೆ ಸಹಾಯ ಮಾಡ್ತಿದ್ದಾರೆ ಗೊತ್ತೇ? ಈ ವಿಡಿಯೋ ನೋಡಿ ಗೊತ್ತಾಗುತ್ತೆ

ದಯೆ ಮತ್ತು ಸಹಾನುಭೂತಿ ಇನ್ನೂ ಈ ಭೂಮಿಯ ಮೇಲಿದೆ ಅಂತ ಹೇಳುವುದಕ್ಕೆ ಈ ವಿಡಿಯೋ ಒಂದೇ ಸಾಕು! ಮಹಿಳೆಯೊಬ್ಬರು ಹಣ್ಣಿನ ತಳ್ಳುಗಾಡಿಯನ್ನು ತಳ್ಳುವಾಗ ಕಷ್ಟ ಪಡುತ್ತಿದ್ದರೆ ತಕ್ಷಣವೇ ಹೋಗಿ ಶಾಲಾ ಮಕ್ಕಳಿಬ್ಬರು ಅವರಿಗೆ ಸಹಾಯ ಮಾಡಿರುವುದನ್ನು ವಿಡಿಯೋದಲ್ಲಿ ಸೆರೆಹಿಡಿಯಲಾಗಿದೆ.

ಹಣ್ಣು ಮಾರುವ ಮಹಿಳೆಗೆ ಸಹಾಯ ಮಾಡುತ್ತಿರುವ ಮಕ್ಕಳು

ಹಣ್ಣು ಮಾರುವ ಮಹಿಳೆಗೆ ಸಹಾಯ ಮಾಡುತ್ತಿರುವ ಮಕ್ಕಳು

  • Share this:
ಸಾಮಾನ್ಯವಾಗಿ ನಾವು ರಸ್ತೆಗಳಲ್ಲಿ (Road) ಹೋಗುವಾಗ ವಯಸ್ಸಾದ ಮಹಿಳೆಯರು (Women's) ಮತ್ತು ಪುಟ್ಟ ಪುಟ್ಟ ಮಕ್ಕಳಿರುವ (Children) ತಾಯಂದಿರು ಮತ್ತು ವಯಸ್ಸಾದ ಪುರುಷರು ತಮ್ಮ ಹೊಟ್ಟೆ ಪಾಡಿಗಾಗಿ ಈ ತರಕಾರಿಗಳನ್ನು ಮತ್ತು ಹಣ್ಣುಗಳನ್ನು (Fruits) ಈ ತಳ್ಳುಗಾಡಿಗಳಲ್ಲಿ ಹಾಕಿಕೊಂಡು ತಳ್ಳಿಕೊಂಡು ಹೋಗುತ್ತಿರುತ್ತಾರೆ. ಎಷ್ಟೋ ಜನರು ದೈಹಿಕವಾಗಿ ಅಷ್ಟೊಂದು ಸಬಲರಾಗಿಲ್ಲದಿದ್ದರೂ ಸಹ ಆ ಭಾರವಾದ ತಳ್ಳುಗಾಡಿಯನ್ನು ತಳ್ಳಿಕೊಂಡು ಹೋಗುವುದನ್ನು ನೋಡಿ ನಮಗೆ ಎಷ್ಟೋ ಬಾರಿ ‘ಪಾಪಾ.. ಈ ಸುಡುವ ಬಿಸಿಲಿನಲ್ಲಿ ಭಾರವಿರುವ ತಳ್ಳುಗಾಡಿಯನ್ನು ಕಷ್ಟ ಪಟ್ಟು ತಳ್ಳಿಕೊಂಡು ಹೋಗುತ್ತಿದ್ದಾರೆ’ ಅಂತ ಅಂದು ಕೊಂಡಿರುತ್ತೇವೆ.

ಈ ತಳ್ಳುಗಾಡಿಯನ್ನು ಸಮತಟ್ಟಾದ ರಸ್ತೆಗಳಲ್ಲಿ ಆರಾಮಾಗಿ ತಳ್ಳಿಕೊಂಡು ಹೋಗಬಹುದು. ಆದರೆ ಈ ಎತ್ತರದ ರಸ್ತೆಗಳಲ್ಲಿ ಇವುಗಳನ್ನು ಒಬ್ಬರೇ ತಳ್ಳಿಕೊಂಡು ಹೋಗುವುದು ತುಂಬಾನೇ ಒಂದು ಕಷ್ಟಕರವಾದ ಕೆಲಸ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅದರಲ್ಲೂ ಮಹಿಳೆಯರು ಇದನ್ನು ಅಂತಹ ರಸ್ತೆಯಲ್ಲಿ ತಳ್ಳಿಕೊಂಡು ಹೋಗುವುದು ಒಂದು ದೊಡ್ಡ ಸವಾಲಿನ ಕೆಲಸವೇ ಸರಿ. ದಯೆ ಮತ್ತು ಸಹಾನುಭೂತಿ ಇನ್ನೂ ಈ ಭೂಮಿಯ ಮೇಲಿದೆ ಅಂತ ಹೇಳುವುದಕ್ಕೆ ಈ ವಿಡಿಯೋ ಒಂದೇ ಸಾಕು ಅಂತ ಹೇಳಬಹುದು ನೋಡಿ. ನಮ್ಮನ್ನು ಮಾನವರನ್ನಾಗಿ ಮಾಡುವ ಗುಣಗಳು ಎಂದರೆ ಈ ದಯೆ ಮತ್ತು ಸಹಾನುಭೂತಿ ಅಂತ ಹೇಳಿದರೆ ತಪ್ಪಾಗುವುದಿಲ್ಲ.

ಮಹಿಳೆಗೆ ಹಣ್ಣಿನ ತಳ್ಳುಗಾಡಿಯನ್ನು ತಳ್ಳಲು ಸಹಾಯ ಮಾಡಿದ ಮಕ್ಕಳು 
ಜನರು ಅನೇಕ ವೇಳೆ ಪ್ರಾಣಿಗಳು ಮತ್ತು ಅಗತ್ಯವಿರುವ ವ್ಯಕ್ತಿಯ ಬಗ್ಗೆ ದಯೆ ಮತ್ತು ಸಹಾನುಭೂತಿಯನ್ನು ತೋರಿಸಿದ್ದಾರೆ. ಆದಾಗ್ಯೂ, ಈ ವೈಶಿಷ್ಠ್ಯಗಳನ್ನು ಅತ್ಯುತ್ತಮ ರೀತಿಯಲ್ಲಿ ಪ್ರದರ್ಶಿಸುವವರು ಚಿಕ್ಕ ಮಕ್ಕಳು ಅಂತ ಹೇಳಿದರೆ ಸುಳ್ಳಲ್ಲ. ಅಂತಹ ಒಂದು ಹೃದಯಸ್ಪರ್ಶಿ ವಿಡಿಯೋದಲ್ಲಿ ಇಬ್ಬರು ಶಾಲಾ ಮಕ್ಕಳು ರಸ್ತೆಯಲ್ಲಿ ಮಹಿಳೆಯೊಬ್ಬರು ಹಣ್ಣಿನ ತಳ್ಳುಗಾಡಿಯನ್ನು ತಳ್ಳುವಾಗ ಕಷ್ಟ ಪಡುತ್ತಿದ್ದರೆ, ತಕ್ಷಣವೇ ಹೋಗಿ ಶಾಲಾ ಮಕ್ಕಳಿಬ್ಬರು ಅವರಿಗೆ ಸಹಾಯ ಮಾಡಿರುವುದನ್ನು ನಾವು ನೋಡಬಹುದು.

ಇದನ್ನೂ ಓದಿ: ದಿನ ಬೆಳಗಾಗ್ತಿದ್ದಂತೆ ಸ್ಟಾರ್​​ ಆದ ಡೆಲಿವರಿ ಬಾಯ್, ಭೇಟಿಯಾಗುವಂತೆ ಕರೆ ಮಾಡಿದ Dubai ರಾಜಕುಮಾರ!

ಜನರು ರಸ್ತೆಯಲ್ಲಿ ಅನೇಕ ಸಮಸ್ಯೆಗಳೊಂದಿಗೆ ಹೆಣಗಾಡುವುದನ್ನು ನಾವು ಆಗಾಗ್ಗೆ ನೋಡಿದ್ದೇವೆ. ಆದಾಗ್ಯೂ, ನಾವು ಅವರಿಗೆ ಸಹಾಯ ಮಾಡುತ್ತೇವೆಯೇ ಅಂತ ಕೇಳಿಕೊಂಡರೆ ಉತ್ತರ ಸಿಗುವುದು ‘ಇಲ್ಲ’ ಅಂತ. ಹೆಚ್ಚಿನ ಸಮಯದಲ್ಲಿ ಜನರ ಹೋರಾಟವನ್ನು ನೋಡಿದ ನಂತರ, ನಾವು ಅದನ್ನು ನಿರ್ಲಕ್ಷಿಸುತ್ತೇವೆ. ಆದರೆ ಈ ವಿಡಿಯೋದಲ್ಲಿ ಈ ಮಕ್ಕಳ ದಯಾಪರ ಹಾವಭಾವಗಳು ನೆಟ್ಟಿಗರನ್ನು ಬೆರಗುಗೊಳಿಸುತ್ತವೆ.

ವಿಡಿಯೋದಲ್ಲಿ ಏನಿದೆ 
ಮಹಂತ್ ಆದಿತ್ಯನಾಥ್ ಎಂಬ ಹೆಸರಿನ ಟ್ವಿಟರ್ ಹ್ಯಾಂಡಲ್ ಈ ವಿಡಿಯೋವನ್ನು ಹಂಚಿಕೊಂಡಿದ್ದು, "ನಿಮ್ಮ ನಡವಳಿಕೆಯಲ್ಲಿ ಅದು ಪ್ರತಿಬಿಂಬಿತವಾಗದಿದ್ದರೆ, ನಿಮ್ಮ ಪದವಿ ಕೇವಲ ಕಾಗದದ ತುಣುಕು" ಎಂದು ಒಳ್ಳೆಯ ಮತ್ತು ಅರ್ಥವಿರುವ ಶೀರ್ಷಿಕೆಯನ್ನು ಬರೆದು ಹಂಚಿಕೊಂಡಿದ್ದಾರೆ.ಲೋಡೆಡ್ ಹಣ್ಣಿನ ಗಾಡಿಯನ್ನು ರಸ್ತೆಯ ಮೇಲೆ ಏರಿಸಲು ಮಹಿಳೆಯೊಬ್ಬರು ಹೆಣಗಾಡುತ್ತಿರುವುದನ್ನು ವಿಡಿಯೋ ತೋರಿಸುತ್ತದೆ. ವಿಡಿಯೋದಲ್ಲಿ, ಅನೇಕ ಜನರು ಹತ್ತಿರದಲ್ಲಿ ಹಾದು ಹೋಗುತ್ತಿದ್ದರೂ ಸಹ ಸಹಾಯಕ್ಕೆ ಯಾರೂ ಬರುವುದಿಲ್ಲ. ಆದರೆ ಅವಳ ಹೋರಾಟವನ್ನು ನೋಡಿದ ಮಕ್ಕಳಿಬ್ಬರು ಓಡಿ ಬಂದು ಆ ತಳ್ಳುಗಾಡಿಯನ್ನು ರಸ್ತೆಯ ಮೇಲೆ ಏರಿಸಲು ಸಹಾಯ ಮಾಡಿದರು. ವಿಡಿಯೋದ ಕೊನೆಯಲ್ಲಿ, ಆ ಮಹಿಳೆಯು ಹುಡುಗ ಮತ್ತು ಹುಡುಗಿಗೆ ತಲಾ ಒಂದೊಂದು ಬಾಳೆಹಣ್ಣನ್ನು ನೀಡುವುದನ್ನು ನಾವು ಇಲ್ಲಿ ನೋಡಬಹುದು.

ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದು ಹೀಗೆ 
ಆನ್ಲೈನ್ ನಲ್ಲಿ ಹಂಚಿಕೊಂಡ ನಂತರ, 30 ಸೆಕೆಂಡುಗಳ ವಿಡಿಯೋವನ್ನು ತುಂಬಾ ಜನರು ವೀಕ್ಷಿಸಿದ್ದು ಮತ್ತು 32,000ಕ್ಕೂ ಹೆಚ್ಚು ಲೈಕ್ ಗಳು ಸಹ ಲಭಿಸಿವೆ. ಆದರೆ ಈ ಘಟನೆಯ ಯಾವಾಗ ಮತ್ತು ಎಲ್ಲಿ ಸಂಭವಿಸಿತು ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಸಾಮಾಜಿಕ ಮಾಧ್ಯಮ ಬಳಕೆದಾರರು ಪುಟ್ಟ ಮಕ್ಕಳ ದಯಾಪರ ಕೆಲಸವನ್ನು ತುಂಬಾನೇ ಶ್ಲಾಘಿಸಿದ್ದಾರೆ.

ಇದನ್ನೂ ಓದಿ: Friendship: ಗಡಿಗಳನ್ನು ಮೀರಿರುವ ಇವರಿಬ್ಬರ ಸ್ನೇಹವೇ ಎಲ್ಲರಿಗೂ ಸ್ಪೂರ್ತಿ!

ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು "ಇದನ್ನು ನೋಡಲು ತುಂಬಾ ಸಂತೋಷವಾಗಿದೆ. ದಯವಿಟ್ಟು ಸಾಧ್ಯವಾದಷ್ಟು ಇದೇ ರೀತಿಯ ವಿಡಿಯೋಗಳನ್ನು ಪೋಸ್ಟ್ ಮಾಡಿ. ಇದು ಜನರಲ್ಲಿ ಪ್ರಬುದ್ಧತೆಯನ್ನು ತರುತ್ತದೆ" ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ವ್ಯಕ್ತಿಯು ಕಾಮೆಂಟ್ ಮಾಡಿ "ಸಹಾಯ ಹಸ್ತವನ್ನು ಮಕ್ಕಳು ನೀಡುವುದನ್ನು ನೋಡುವುದೇ ಒಂದು ಚಂದ" ಎಂದು ಬರೆದಿದ್ದಾರೆ.
Published by:Ashwini Prabhu
First published: