Summer Trip: ಬೇಸಿಗೆಯಲ್ಲಿ ಪ್ರವಾಸ ಮೋಜು ಅನುಭವಿಸಬೇಕು ಎಂದ್ರೆ ಈ ವಸ್ತುಗಳನ್ನು ಮರೆಯಬೇಡಿ

ಒಂದಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು, ಅಗತ್ಯ ಸಾಮಾಗ್ರಿಗಳನ್ನು ಜೊತೆಗಿಟ್ಟುಕೊಂಡರೆ, ಬಿಸಿಲಲ್ಲೂ ಪ್ರವಾಸದ ಖುಷಿ ಅನುಭವಿಸಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಭಾರತದಲ್ಲಿ ಬೇಸಿಗೆ (Summer) ಕಾಲವೆಂದರೆ ಥಟ್ಟನೆ ನೆನಪಾಗುವುದು ಸುಡುವ ಸೂರ್ಯ, ವಿಪರೀತ ಸೆಕೆ, ಮೈತುಂಬ ಹರಿಯುವ ಬೆವರು ಮತ್ತು ಬೇಸಿಗೆಯ ಜೊತೆ ಜೊತೆಗೆ ಬರುವ ಒಂದಿಷ್ಟು ಕಾಯಿಲೆಗಳು. ಇದ್ದಲ್ಲೇ ಇರುವವರು ಆಯಾ ಜಾಗದ ಬಿಸಿಲಿನ ತಾಪಕ್ಕೆ (Heat) ಹೊಂದಿಕೊಂಡು ಹೇಗಾದರೂ ಬದುಕಿಯಾರು, ಆದರೆ ಈ ಋತುವಿನಲ್ಲಿ ಪ್ರವಾಸಿಗರ (Tourist) ಪಾಡು ಮಾತ್ರ ಹೇಳ ತೀರದು.

ಕೆಲವು ಗಿರಿಧಾಮಗಳಲ್ಲಿ ಕೊಂಚ ತಂಪು ವಾತಾವರಣ ಇರುತ್ತದೆ ಎನ್ನುವುದನ್ನು ಬಿಟ್ಟರೆ, ಭಾರತವಿಡೀ ಧಗೆಯಲ್ಲಿ ಬಳಲುತ್ತಿರುತ್ತದೆ. ಹೆಚ್ಚಿನವರಿಗೆ ರಜೆ ಸಿಗುವುದು ಬೇಸಿಗೆಯಲ್ಲಿ, ಅಲ್ಲದೆ ಕೆಲವೊಂದು ಸ್ಥಳಗಳನ್ನು ಬೇಸಿಗೆಯಲ್ಲಿ ನೋಡಿದರಷ್ಟೇ ಕಣ್ಣಿಗೆ ಹಿತ, ಹಾಗಿರುವಾಗ ಪ್ರವಾಸ ಹೊರಡದಿರಲು ಸಾಧ್ಯವೇ? ಇಲ್ಲ. ಆದರೆ, ಒಂದಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು, ಅಗತ್ಯ ಸಾಮಾಗ್ರಿಗಳನ್ನು ಜೊತೆಗಿಟ್ಟುಕೊಂಡರೆ, ಬಿಸಿಲಲ್ಲೂ ಪ್ರವಾಸದ ಖುಷಿ ಅನುಭವಿಸಬಹುದು. ಆ ಕುರಿತ ಮಾಹಿತಿ ಇಲ್ಲಿದೆ.

ನೀರಿನ ಬಾಟಲಿಗಳು: ಭಾರತದಲ್ಲಿ ಪ್ರತೀ ಕೆಲವು ಕಿ.ಮೀ.ಗಳಿಗೆ ನೀರಿನ ರುಚಿಯಲ್ಲಿ ಬದಲಾವಣೆಯಾಗುತ್ತದೆ ಎನ್ನುತ್ತಾರೆ; ಈ ಸಂಗತಿ ಖಂಡಿತಾ ಸತ್ಯ. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ಇದ್ದಲ್ಲಿ, ನಿಮ್ಮೊಡನೆ ಸದಾ ಮಿನರಲ್ ವಾಟರ್ ಬಾಟಲಿಗಳನ್ನು ಇಟ್ಟುಕೊಳ್ಳುವುದನ್ನು ಮರೆಯದಿರಿ. ಎಲ್ಲಾ ಕಡೆ ಮಿನರಲ್ ವಾಟರ್ ಸಿಗುತ್ತದೆ ನಿಜ, ಆದರೆ ಗಿರಿಧಾಮ ಮತ್ತು ಮರುಭೂಮಿಯಂತಹ ಸ್ಥಳಗಳಲ್ಲಿ ನೀರಿನ ಬಾಟಲಿ ಸದಾ ಜೊತೆಗಿರಲಿ.

ಗ್ಲುಕೋಸ್ ಪಾನೀಯ: ನೀರು ಮಾತ್ರವಲ್ಲ, ಸಾಕಷ್ಟು ಪ್ರಮಾಣದ ಗ್ಲುಕೋಸ್ ಪಾನೀಯವನ್ನು ಜೊತೆಗಿಟ್ಟುಕೊಳ್ಳುವುದನ್ನು ಮರೆಯಬೇಡಿ. ನಮ್ಮ ದೇಶದಲ್ಲಿ ಬೇಸಿಗೆ ಕಾಲದಲ್ಲಿ ಡಿಹೈಡ್ರೇಶನ್ ಸಾಮಾನ್ಯ ಸಂಗತಿ. ಹಾಗಾಗಿ ನಿರಂತರವಾಗಿ ಗ್ಲುಕೋಸ್ ಪಾನೀಯವನ್ನು ಕುಡಿಯುತ್ತಾ ದೇಹವನ್ನು ಹೈಡ್ರೆಟ್ ಆಗಿಡಲು ಪ್ರಯತ್ನಿಸಿ.

ಎನರ್ಜಿ ಬಾರ್ : ಸಕ್ಕರೆ ಮಟ್ಟ ಕುಸಿಯುವುದು ನಮ್ಮ ದೇಶದ ಬೇಸಿಗೆಯಲ್ಲಿ ಎದುರಾಗುವ ದೊಡ್ಡ ಆರೊಗ್ಯ ಸಮಸ್ಯೆ. ಹಾಗಂತ ನೀವು ಪ್ರವಾಸದ ಸಮಯದಲ್ಲಿ ಹೊಟ್ಟೆ ಬಿರಿಯುವಂತೆ ಊಟ ಮಾಡಬೇಕು ಎಂದು ಅರ್ಥವಲ್ಲ, ಹಾಗೆ ಮಾಡುವುದರಿಂದ ಹೊಟ್ಟೆ ಹಾಳಾಗಿ ನಿಮ್ಮ ಪ್ರವಾಸದ ಯೋಜನೆಯಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಹಾಗಾಗಿ, ತಿನ್ನಲು ಸಾಕಷ್ಟು ಎನರ್ಜಿ ಬಾರ್‍ಗಳನ್ನು ಖರೀದಿಸಿಟ್ಟುಕೊಳ್ಳಲು ಮರೆಯದಿರಿ.

ವೆಟ್ ಟಿಶ್ಯುಗಳು: ಬೇಸಿಗೆಯಲ್ಲಿ ಬೆವರು ಸಾಮಾನ್ಯ, ಎಣ್ಣೆ ಚರ್ಮದವರಿಗಂತೂ ತ್ವಚೆಯ ಆರೋಗ್ಯವನ್ನು ಕಾಪಾಡಿಕೊಳ್ಳವುದೇ ಒಂದು ಸವಾಲು. ಆಗಾಗ ಮುಖಕ್ಕೆ ನೀರು ಸಿಂಪಡಿಸಿಕೊಳ್ಳುವುದು ಒಳ್ಳೆಯ ಉಪಾಯವೆ, ಆದರೆ ಯಾವ್ಯಾವುದೋ ನೀರನ್ನು ಹಾಕಿಕೊಳ್ಳಲಾದೀತೆ? ಪ್ರವಾಸಕ್ಕೆ ಹೋದಾಗ , ಕುಡಿಯುವ ನೀರಿನಲ್ಲಿ ಮುಖ ತೊಳೆಯುವುದು ಕೂಡ ಜಾಣತನವಲ್ಲ. ಹಾಗಾಗಿ, ವೆಟ್ ಟಿಶ್ಯುಗಳನ್ನು ಜೊತೆಗೆ ಒಯ್ಯುವುದೇ ನಿಮ್ಮ ಸಮಸ್ಯೆಗೆ ಸೂಕ್ತ ಪರಿಹಾರ.

ಸನ್ ಗ್ಲಾಸ್ : ಸೂರ್ಯನ ಅತಿ ನೇರಳೆ ಕಿರಣಗಳು ನಿಮ್ಮ ಕಣ್ಣಿಗೆ ಕೂಡ ಹಾನಿಕಾರಕ. ಹಾಗಾಗಿ ಬೇಸಿಗೆಯಲ್ಲಿ ಪ್ರವಾಸ ಹೊರಡುವಿರೆಂದರೆ, ಒಂದಲ್ಲ ಎರಡೆರಡು ತಂಪು ಕನ್ನಡಕಗಳನ್ನು ಜೊತೆಗೊಯ್ಯುವುದು ಉತ್ತಮ.

ಹತ್ತಿಯ ಬಟ್ಟೆ: ಬೇಸಿಗೆಯಲ್ಲಿ ಪ್ರವಾಸ ಹೊರಡುವಾಗ ,ಕೇವಲ ಹತ್ತಿಯ ಅಥವಾ ಲಿನೆನ್ ಬಟ್ಟೆಗಳನ್ನು ಪ್ಯಾಕ್ ಮಾಡಿಕೊಳ್ಳಿ. ನೀವು ಬೇಸಿಗೆಯಲ್ಲಿ ನೈಲಾನ್, ಪಾಲಿಸ್ಟರ್ ಅಥವಾ ಬೇರೆ ಯಾವುದೇ ಫ್ಯಾನ್ಸಿ ಬಟ್ಟೆಯನ್ನು ಧರಿಸಿದರೆ, ಅದರಿಂದ ನಿಮಗೆ ಕಿರಿಕಿರಿ ಉಂಟಾಗುವುದು ಖಂಡಿತಾ. ಬೇಸಿಗೆ ಪ್ರವಾಸಕ್ಕೆ ಧರಿಸಲು (ಎರಡೂ ಲಿಂಗಗಳಿಗೆ) ಹತ್ತಿಯ ಪ್ಯಾಂಟ್ ಶರ್ಟ್‍ಗಳು ಉತ್ತಮ ಆಯ್ಕೆ.

ಇದನ್ನು ಓದಿ: ಪ್ರಯಾಣ, ಶತ್ರುಬಾಧೆ ಸಮಸ್ಯೆ ನಿವಾರಣೆಗೆ ಗಾಯತ್ರಿ ಮಂತ್ರ ಪಠಿಸಿ ಪ್ರಯೋಜನ ಪಡೆಯಿರಿ

ಸನ್‍ಸ್ಕ್ರೀನ್ ಲೋಶನ್ : ಸೂರ್ಯನ ಹಾನಿಕಾರಕ ಕಿರಣಗಳಿಂದ ನಿಮ್ಮ ಚರ್ಮವನ್ನು ರಕ್ಷಿಸಿಕೊಳ್ಳಲು ಸನ್‍ಸ್ಕ್ರೀನ್ ಲೋಶನ್ ಅತ್ಯಗತ್ಯ. ಬೇಸಿಗೆಯಲ್ಲಿ ನಿಮ್ಮ ಮುಖ ಮತ್ತು ಕೈಗಳಿಗೆ ಸಾಕಷ್ಟು ಪ್ರಮಾಣದ ಸನ್‍ಸ್ಕ್ರೀನ್ ಹಚ್ಚಲು ಮರೆಯದಿರಿ. ನೀವು ಸನ್‍ಸ್ಕ್ರೀನ್ ಜೊತೆಗೊಯ್ಯತ್ತಿಲ್ಲವಾದರೆ, ಕೊನೆಪಕ್ಷ ಉದ್ದ ತೋಳಿನ ಉಡುಪನ್ನಾದರೂ ಧರಿಸಿ.

ಹ್ಯಾಂಡ್ ಸ್ಯಾನಿಟೈಸರ್ : ಪ್ರವಾಸದ ಸಮಯದಲ್ಲಿ ಕೈಗಳನ್ನು ಸ್ವಚ್ಚವಾಗಿಡಲು ಕೇವಲ ನೀರಷ್ಟೇ ಸಾಕಾಗುವುದಿಲ್ಲ, ಅದಕ್ಕಾಗಿ ನೀವು ಹ್ಯಾಂಡ್ ಸ್ಯಾನಿಟೈಸರ್ ಬಳಸುವುದು ಉತ್ತಮ. ಸೋಪ್‍ಗಿಂತ ಸ್ಯಾನಿಟೈಸರ್ ಉತ್ತಮ.

ಇದನ್ನು ಓದಿ: ಪರಂಪರೆ ರಕ್ಷಣೆಗೆ ಶತಪ್ರಯತ್ನ ನಡೆಸುತ್ತಿದೆ ತೇಲುವ ನಗರ ವೆನಿಸ್! ಏಕೆ ಏನಾಯ್ತು?

ಸೊಳ್ಳೆ ನಿವಾರಕ: ಭಾರತದಲ್ಲಿ ಬೇಸಿಗೆಯಲ್ಲಿ ಸೊಳ್ಳೆ ಸಂಬಂಧಿ ಕಾಯಿಲೆಗಳು ಸರ್ವೆಸಾಮಾನ್ಯ. ಪ್ರವಾಸದ ಸಂದರ್ಭದಲ್ಲಿ ನೀವು ಸೊಳ್ಳೆ ಕಾಟದಿಂದ ದೂರ ಇರಬೇಕೆಂದರೆ, ನಿಮ್ಮೊಂದಿಗೆ ಸೊಳ್ಳೆ ನಿವಾರಕ ಕ್ರೀಂಗಳನ್ನು ತೆಗೆದುಕೊಂಡು ಹೋಗುವುದನ್ನು ಮರೆಯದಿರಿ. ನೀವು ಉಳಿದುಕೊಳ್ಳಲಿರುವ ಹೊಟೇಲ್ ರೂಮ್‍ಗಾಗಿ ಪ್ಲಗ್ ಇನ್ ಸೊಳ್ಳೆ ನಿವಾರಕಗಳನ್ನು ತೆಗೆದುಕೊಂಡು ಹೋಗುವುದು ಕೂಡ ಒಳ್ಳೆಯದು.
Published by:Seema R
First published: