ಇಂದಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ (Social Media) ಎಂಬುದು ಎಷ್ಟು ಪ್ರಗತಿ ಹೊಂದಿದೆ ಎಂದರೆ ಅದೆಷ್ಟೋ ಅಪರಾಧಿಗಳನ್ನು ಸಾಕ್ಷಿ ಸಮೇತ ಬಂಧಿಸಲು ನೆರವಾಗಿದೆ. ಪ್ರತಿಯೊಂದು ಘಟನೆಗಳನ್ನು ಇಂದು ತಾಣಗಳಲ್ಲಿ ಬಳಕೆದಾರರು ಪೋಸ್ಟ್ ಮಾಡುತ್ತಿರುವುದರಿಂದ ಹೆಚ್ಚಿನವರು ಸಮಾಜದಲ್ಲಿ (Society) ನಡೆಯುತ್ತಿರುವ ವಿದ್ಯಮಾನಗಳನ್ನು ತಿಳಿದುಕೊಳ್ಳುವಂತಾಗಿದೆ ಅಂತೆಯೇ ತಪ್ಪಿತಸ್ಥರಿಗೂ ಈ ತಾಣ ಕಂಟಕಪ್ರಾಯವಾಗಿದೆ.
ಸಾಮಾಜಿಕ ತಾಣದಲ್ಲಿ ವೈರಲ್ ಆದ ಘಟನೆ
ಮಲೇಷಿಯಾದ ಡೈವಿಂಗ್ ತರಬೇತುದಾರ, 24 ರ ಹರೆಯದ ಚೀನೀ ಪ್ರವಾಸಿಗರೊಬ್ಬರಿಗೆ ಆಕೆ ನೀರಿನಲ್ಲಿ ಡೈವಿಂಗ್ ಮಾಡುತ್ತಿದ್ದ ಸಮಯದಲ್ಲಿ ಕಿರುಕುಳ ನೀಡಿದ ಎಂಬ ಆರೋಪದ ಮೇಲೆ ಬಂಧಿಸಲಾಗಿದೆ.
ಆತ ಚೈನೀಸ್ ಯುವತಿಯನ್ನು ಆಕೆಯ ಅನುಮತಿ ಇಲ್ಲದೆಯೇ ನೀರಿನಲ್ಲಿ ಡೈವ್ ಮಾಡುತ್ತಿದ್ದಾಗ ಚುಂಬಿಸಿದ್ದು ಈ ಘಟನೆ ಸಾಮಾಜಿಕ ತಾಣದಲ್ಲಿ ವೈರಲ್ ಆಯಿತು ಹಾಗೂ ತರಬೇತುದಾರನ ವರ್ತನೆಗೆ ಸಾಮಾಜಿಕ ತಾಣ ಕಟುವಾಗಿ ಪ್ರತಿಕ್ರಿಯಿಸಿದೆ ಹಾಗಾಗಿ ಕೂಡಲೇ ತರಬೇತುದಾರನನ್ನು ಮಲೇಷಿಯಾ ಪೊಲೀಸರು ಬಂಧಿಸಿದ್ದಾರೆ.
ಡೈವಿಂಗ್ ಮಾಡುತ್ತಿದ್ದ ಯುವತಿಯನ್ನು ಚುಂಬಿಸಿದ ತರಬೇತುದಾರ
ಆಪಾದಿತ ತರಬೇತುದಾರ ಹಾಗೂ ಚೈನೀಸ್ ಯುವತಿಯ ನಡುವಿನ ಸಂಭಾಷಣೆಗಳ ಸ್ಕ್ರೀನ್‌ಶಾಟ್‌ಗಳುಳ್ಳ ಚಿತ್ರವು ಇದೀಗ ವೈರಲ್ ಆಗಿದ್ದು ಆತ ಎಷ್ಟು ಹೀನಾಯವಾಗಿ ಆಕೆಯೊಂದಿಗೆ ವರ್ತಿಸಿದ್ದಾನೆ ಎಂಬುದಕ್ಕೆ ಸಾಕ್ಷಿಯಾಗಿದೆ. ಒಂದು ಚಿತ್ರದಲ್ಲಿ ತರಬೇತುದಾರ ಆಕೆಗೆ ಬಲವಂತವಾಗಿ ಕೆನ್ನೆಗೆ ಮುತ್ತಿಕ್ಕುತ್ತಿರುವುದು ಕಂಡುಬಂದಿದೆ.
ಇದನ್ನೂ ಓದಿ: ಅಮ್ಮನಿಗೊಂದು ಥ್ಯಾಂಕ್ಸ್ ಹೇಳಲು ಈ ದಿನವೇ ವಿಶೇಷ! ನಿಮ್ಮ ತಾಯಿಗೆ ಲೈಫ್ ಲಾಂಗ್ ನೆನಪಿರುವಂತಹ ಗಿಫ್ಟ್ ಕೊಡಿ
ಸೆಂಪೋರ್ನಾ ಪೊಲೀಸರಿಗೆ ದೂರು ನೀಡಿದ ಯುವತಿ
ಚೀನಾದ ಈ ಮಹಿಳೆ ನೀರಿನಾಳದಲ್ಲಿ ತರಬೇತುದಾರ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದರಿಂದ ಬೇಸರಗೊಂಡಿದ್ದು ಚೀನಾಕ್ಕೆ ಮರಳುವ ಮುನ್ನ ಸೆಂಪೋರ್ನಾ ಪೊಲೀಸರಿಗೆ ದೂರು ನೀಡಿದ್ದಾರೆ ಎಂಬುದು ತಿಳಿದುಬಂದಿದೆ. ಕೂಡಲೇ ಎಚ್ಚೆತ್ತುಕೊಂಡ ತನಿಖಾಧಿಕಾರಿಗಳು ತರಬೇತುದಾರನನ್ನು ವಾಟರ್ ವಿಲೇಜ್‌ನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸೆಕ್ಷನ್ 354 ರಡಿಯಲ್ಲಿ ಕೇಸು ದಾಖಲು
ಈತನ ಮೇಲೆ ದಂಡ ಸಂಹಿತೆಯ ಸೆಕ್ಷನ್ 354 ರ ಅಡಿಯಲ್ಲಿ ಕೇಸು ದಾಖಲಿಸಲಾಗಿದ್ದು ಬಲವಂತವಾಗಿ ಮಹಿಳೆಯ ಮೇಲೆ ದೈಹಿಕ ಕಿರುಕುಳವನ್ನು ನಡೆಸಿದ್ದಕ್ಕಾಗಿ ಆತನ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ತಂಡ ತಿಳಿಸಿದೆ.
ಪ್ರವಾಸೋದ್ಯಮ ಕ್ಷೇತ್ರಕ್ಕೆ ತೊಂದರೆ
ಸಬಾಹ್‌ನ ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ಪರಿಸರ ಸಚಿವೆ-ಕ್ರಿಸ್ಟಿನಾ ಲೀವ್ ಕೂಡ ಘಟನೆಯ ಕುರಿತು ಅಸಹನೆ ಹೊರಹಾಕಿದ್ದು ಇದೊಂದು ಅಕ್ಷಮ್ಯ ಅಪರಾಧ ಎಂದು ತಿಳಿಸಿದ್ದಾರೆ. ಕೋವಿಡ್‌ನಂತಹ ಸಾಂಕ್ರಾಮಿಕ ರೋಗದಿಂದ ಈಗಾಗಲೇ ಚೇತರಿಸಿಕೊಳ್ಳುತ್ತಿದ್ದ ದೇಶದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಈ ಘಟನೆ ಕಪ್ಪುಚುಕ್ಕೆಯಾಗಿ ಮಾರ್ಪಟ್ಟಿದೆ ಎಂದು ಕ್ರಿಸ್ಟಿನಾ ತಿಳಿಸಿದ್ದಾರೆ.
ಒಂದೆಡೆ ಕೋವಿಡ್‌ನಿಂದ ಉಂಟಾಗಿದ್ದ ಆರ್ಥಿಕ ನಷ್ಟ ಹಾಗೂ ಇನ್ನೊಂದೆಡೆ ಪ್ರವಾಸಿಗರಿಲ್ಲದೆ ಕಂಗೆಟ್ಟಿದ್ದ ಪ್ರವಾಸೋದ್ಯಮ ಕ್ಷೇತ್ರ ಇದೀಗ ತಾನೇ ಚೇತರಿಕೆಯ ದಾರಿಯತ್ತ ಮರಳುತ್ತಿದೆ ಆದರೆ ಇಂತಹ ಘಟನೆಗಳು ದೇಶದ ಆರ್ಥಿಕ ವ್ಯವಸ್ಥೆಗೆ ಬಾಧಕವಾಗುತ್ತಿದೆ ಎಂದು ಕ್ರಿಸ್ಟಿನಾ ತಿಳಿಸಿದ್ದಾರೆ.
ಪ್ರವಾಸಿಗರಲ್ಲಿ ಅಭದ್ರತೆ ಸೃಷ್ಟಿ
ಇಂತಹ ಘಟನೆಗಳು ನಿರ್ದಿಷ್ಟವಾಗಿ ಸೆಂಪೋರ್ನಾ ಜಿಲ್ಲೆಯ ಪ್ರವಾಸೋದ್ಯಮದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ ಹಾಗೂ ಪ್ರವಾಸಿಗರಲ್ಲಿ ಅಭದ್ರತೆಯನ್ನು ಸೃಷ್ಟಿಸುತ್ತದೆ ಎಂದು ಕ್ರಿಸ್ಟಿನಾ ಕಳವಳ ವ್ಯಕ್ತಪಡಿಸಿದ್ದಾರೆ. ಪ್ರವಾಸೋದ್ಯಮವು ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಚೇತರಿಸಿಕೊಳ್ಳುತ್ತಿದೆ ಎಂಬುದಾಗಿ ಕ್ರಿಸ್ಟಿನಾ ತಿಳಿಸಿದ್ದಾರೆ.
ಮುನ್ನೆಚ್ಚರಿಕೆ ತೆಗೆದುಕೊಳ್ಳುವ ಭರವಸೆ ನೀಡಿದ ಸಚಿವರು
ಗುಣಮಟ್ಟದ ಸೇವೆ ಹಾಗೂ ಪ್ರವಾಸಿಗರಿಗೆ ಸುರಕ್ಷತೆಯನ್ನು ನೀಡುವಂತೆ ರಾಜ್ಯದ ಎಲ್ಲಾ ಟ್ರಾವೆಲ್ ಏಜೆಂಟ್‌ಗಳಿಗೆ ಕರೆ ನೀಡುತ್ತೇನೆ ಎಂದು ಕ್ರಿಸ್ಟಿನಾ ತಿಳಿಸಿದ್ದು ಇಂತಹ ಘಟನೆಗಳು ಮರುಕಳಿಸದಂತೆ ಅವರು ಜವಾಬ್ದಾರಿ ವಹಿಸಬೇಕು ಎಂದು ಕರೆನೀಡಿದ್ದಾರೆ.
ಘಟನೆಯ ಕುರಿತು ವಿವರಗಳನ್ನು ಹಂಚಿಕೊಂಡ ಸಚಿವರು, ಸಬಾ ಪಾರ್ಕ್‌ಗಳ ನಿರ್ವಹಣೆಯಲ್ಲಿರುವ ಸಿಪಾದನ್ ಐಲ್ಯಾಂಡ್ ಪಾರ್ಕ್ ಮತ್ತು ತುನ್ ಸಕರನ್ ಮೆರೈನ್ ಪಾರ್ಕ್ ಪ್ರದೇಶದ ಹೊರಗೆ ಘಟನೆ ಸಂಭವಿಸಿದೆ ಎಂದು ತಿಳಿಸಿದ್ದಾರೆ. ಅದಾಗ್ಯೂ ಇಂತಹ ಘಟನೆಗಳು ಸಂಭವಿಸದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ