ನನ್ನಲ್ಲಿ ಅಂತರಂಗ ಮತ್ತು ಬಾಹ್ಯ ಸೌಂದರ್ಯ ಎರಡೂ ಇದೆ ಎಂದು ಆತ್ಮವಿಶ್ವಾಸದಿಂದ ನುಡಿದಿದ್ದಾರೆ ಮಹೊಗನಿ ಜಿಟರ್. ಅಬ್ಬಾ. .….ಇಷ್ಟು ಆತ್ಮವಿಶ್ವಾಸದಿಂದ ಸ್ವಯಂ ಪ್ರಶಂಸೆ ಮಾಡಿಕೊಳ್ಳುವ ಬೆಡಗಿ ಇದ್ಯಾರಪ್ಪಾ ಅಂದುಕೊಂಡಿರಾ? ಮಹೋಗನಿ ಒಬ್ಬ ಮಾಡೆಲ್. ಮಾಡೆಲ್ ಎಂದಾಕ್ಷಣ ಮನಸಲ್ಲಿ ನೀಳ ಕಾಲುಗಳ ತೆಳ್ಳನೆಯ ಸುಂದರಿಯೊಬ್ಬಳ ಕಲ್ಪನೆ ಕಣ್ಣ ಮುಂದೆ ಬರುತ್ತದೆ. ಮಹೋಗನಿ ಸುಂದರವಾಗಿದ್ದಾರೆ ಎಂಬುದೇನೋ ನಿಜ, ಆದರೆ ಸಾಮಾನ್ಯವಾಗಿ ಎಲ್ಲಾ ರೂಪದರ್ಶಿಯರಿಗಿರುವ ಮೋಹಕ ನೀಳ ಕಾಲುಗಳು ಆಕೆಗಿಲ್ಲ. ಮೋಹಕ ಕಾಲುಗಳ ವಿಷಯ ಬಿಡಿ, ಇತರರಂತೆ ಆರೋಗ್ಯಪೂರ್ಣ ಕಾಲುಗಳು ಕೂಡ ಆಕೆಗಿಲ್ಲ! ಇದು ಮಹೊಗನಿಯ ಬದುಕಿನ ಕಟುಸತ್ಯ. ಹೌದು, ಆಕೆಯ ಒಂದು ಕಾಲಿಗೆ ಲಿಂಫೆಡೀಮಾ ರೋಗ ಅಂಟಿಕೊಂಡಿದೆ. ಕಾಲಿನಲ್ಲಿ ದುಗ್ಧರಸ ತುಂಬಿಕೊಳ್ಳವ ಈ ರೋಗದಲ್ಲಿ, ಕಾಲು ಸಂಪೂರ್ಣವಾಗಿ ಆನೆಯ ಕಾಲಿನಂತೆ ಊದಿಕೊಳ್ಳುತ್ತದೆ.
ಊದಿಕೊಂಡಿರುವ ಕಾಲಿನ ಮಹೊಗನಿಯ ಫೋಟೋಗಳು ಟ್ವಿಟ್ಟರ್, ಇನ್ಸ್ಟಾಗ್ರಾಂ, ಫೇಸ್ಬುಕ್ ಮತ್ತು ಯೂಟ್ಯೂಬ್ನಲ್ಲಿ ಇತ್ತೀಚೆಗೆ ತುಂಬಾ ಜನಪ್ರಿಯವಾಗಿವೆ. ಆದರೆ, ಬಾಹ್ಯ ಸೌಂದರ್ಯಕ್ಕಷ್ಟೇ ಹೆಚ್ಚಾಗಿ ಮಣೆ ಹಾಕುವ ಜನರು ತುಂಬಿಕೊಂಡಿರುವ ಈ ಲೋಕದಲ್ಲಿ, ಮಹೊಗನಿಯ ಈ ಅಂಗವೈಕಲ್ಯವನ್ನು ಅಪಹಾಸ್ಯ ಮಾಡಿ ಆಡಿಕೊಳ್ಳುತ್ತಿರುವ ಜನರಿಗೇನೂ ಕೊರತೆಯಿಲ್ಲ. ಬಹಳಷ್ಟು ಸಾಮಾಜಿಕ ಮಾಧ್ಯಮ ಬಳಕೆದಾರರು ಆಕೆ ಊದಿಕೊಂಡಿರುವ ಕಾಲಿನ ಚಿತ್ರಗಳ ಕುರಿತು ಅಣಕವಾಡಿದ್ದಾರೆ. ಅವಳ ಕಾಲುಗಳನ್ನು ಕತ್ತರಿಸಿ, ಹಾಗಾದರೂ ಆಕೆ ಸುಂದರವಾಗಿ ಕಾಣಿಸಲಿ ಎಂದು ಕ್ರೂರವಾದ ಕಮೆಂಟುಗಳನ್ನು ಹಾಕಿದ ನೆಟ್ಟಿಗರೂ ಇದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ನನ್ನ ಕುರಿತು ಬರೆಯಲಾಗುವ ಅವಹೇಳನಕಾರಿ ಮತ್ತು ಕೆಟ್ಟ ಕಮೆಂಟುಗಳನ್ನು ನಿರ್ಲಕ್ಷಿಸಿ, ಅದೆಲ್ಲವನ್ನು ಮೀರಿ ಬೆಳೆಯಲು ಬಯಸುತ್ತೇನೆ. ಎಲ್ಲರೂ ಕೆಟ್ಟವರಲ್ಲ, ನನಗೆ ತುಂಬಾ ಪ್ರೋತ್ಸಾಹ ನೀಡುವ, ಮನಸ್ಸಿಗೆ ಖುಷಿ ನೀಡುವ ಸ್ನೇಹಿತರು ಕೂಡ ಸಾಮಾಜಿಕ ಮಾಧ್ಯಮಗಳಿಂದ ಸಿಕ್ಕಿದ್ದಾರೆ ಎನ್ನುವ ಮಹೊಗನಿ, ಫಿಸಿಯೋಥೆರಪಿ , ಟಿಕ್ಟಾಕ್ ಮತ್ತು ಇನ್ಸ್ಟಾಗ್ರಾಂ ವಿಡಿಯೋಗಳನ್ನು ಮಾಡುತ್ತಾ ಸದಾ ಚಟುವಟಿಕೆಯಿಂದ ಇರಲು ಪ್ರಯತ್ನಿಸುತ್ತಾರೆ. lymph.goddess23 ಎನ್ನುವ ಅವರ ಇನ್ಸ್ಟಾಗ್ರಾಂ ಖಾತೆಗೆ ಸುಮಾರು 8,000ಕ್ಕೂ ಹೆಚ್ಚು ಹಿಂಬಾಲಕರಿದ್ದಾರೆ.
ಅಮೆರಿಕ ಮೂಲದ , 23 ವರ್ಷದ ಈ ರೂಪದರ್ಶಿಗೆ ಇದು ಹುಟ್ಟಿನಿಂದಲೇ ಬಂದ ಕಾಯಿಲೆ. ತನಿಗಿರುವ ಈ ಕಾಯಿಲೆ ಬದುಕಿಗಂಟಿದ ಮಹಾಶಾಪವೆಂದು ಪರಿಗಣಿಸುತ್ತಿದ್ದ ಮಹೋಗನಿ, ಏಕಾಂತದಲ್ಲಿ ಕಣ್ಣೀರು ಸುರಿಸಿದ ಕ್ಷಣಗಳಿಗೆ ಲೆಕ್ಕವಿಲ್ಲ. ಮೊದಲೆಲ್ಲ ಅವರು ಸೊಂಟದವರೆಗಿನ ಅಂದರೆ ಅರ್ಧ ಫೋಟೋಗಳನ್ನಷ್ಟೇ ತೆಗೆಸಿಕೊಳ್ಳುತ್ತಿದ್ದರು, ಕಾಲುಗಳು ಮುಚ್ಚಿಕೊಳ್ಳುವಂತ ಬಟ್ಟೆಗಳನ್ನೇ ಹೆಚ್ಚಾಗಿ ಧರಿಸಿಕೊಳ್ಳುತ್ತಿದ್ದರು. ಈಗ ಅವರ ಮನಸ್ಥಿತಿ ಬದಲಾಗಿದೆ, ವಾಸ್ತವವನ್ನು ಸಂಪೂರ್ಣವಾಗಿ ಒಪ್ಪಿಕೊಂಡಿರುವ ಅವರು ಆತ್ಮವಿಶ್ವಾಸದ ಚಿಲುಮೆಯಾಗಿ ಮಾರ್ಪಟ್ಟಿದ್ದಾರೆ. ತನ್ನ ಕಾಲುಗಳನ್ನು ತೋರಿಸಿಕೊಳ್ಳಲು ಅವರಿಗೀಗ ಯಾವುದೇ ಮುಜುಗರವಿಲ್ಲ.
ರೂಪದರ್ಶಿ ಮಹೊಗನಿ ಜಿಟರ್ಗೆ,ತನ್ನನ್ನು ಇಷ್ಟು ಸ್ವಾವಲಂಬಿಯಾಗಿ ಬೆಳೆಸಿರುವ ತಾಯಿಗೆ ತಾನು ಸದಾ ಋಣಿ ಮತ್ತು ಆಕೆ ತನ್ನ ಬದುಕಿಗೆ ಮಾದರಿ ಎನ್ನುವ ಮಹೊಗನಿಗೆ, ತಾಯಿಗಾಗಿ ಒಂದು ಮನೆ ಕೊಂಡುಕೊಳ್ಳಬೇಕು, ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಬೇಕು ಮತ್ತು ಲಿಂಫೆಡೀಮಾ ರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ, ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಕನಸಿದೆ.
ಕಾಲೇನು ಇಡೀ ದಿನ ನೋಯುತ್ತಿರುವುದಿಲ್ಲ, ಆದರೆ ಅದರ ತೂಕವನ್ನು ತಡೆದುಕೊಳ್ಳುವುದೇ ಕಷ್ಟ. ಹಾಗಂತ ನನ್ನ ಕಾಲಿನ ತೂಕ, ನನ್ನ ದೇಹದ ತೂಕದ ಏಳು ಪಟ್ಟು ಹೆಚ್ಚಾದರೂ, ನಾನದನ್ನು ಕತ್ತರಿಸುವುದಿಲ್ಲ ಎನ್ನುವ ಮಹೊಗನಿಯ ಗಮನ ಪ್ರಸ್ತುತ ತನ್ನ ಕಾಲೀನ ಆರೋಗ್ಯವನ್ನು ಸರಿ ಮಾಡಿಸಿಕೊಳ್ಳುವ ಕಡೆಗಿದೆ. ಕೆಲಸದಿಂದ ಕೊಂಚ ಬ್ರೇಕ್ ತೆಗೆದುಕೊಂಡಿರುವ ಅವರು, ಚಿತ್ರ ಬರೆಯುವುದು, ಹಾಡು ಕೇಳುವುದು ಮತ್ತು ತನ್ನ ಯೂಟ್ಯೂಬ್ ಚಾನೆಲ್ಗಾಗಿ ವಿಡಿಯೋಗಳನ್ನು ಹಾಕುವುದು ಮತ್ತಿತರ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ.
ಕೆನ್ನೆಯಲ್ಲಿ ಎರಡು ಮೊಡವೆ ಬಂದರೆ ಅಥವಾ ಮುಖದ ಬಣ್ಣ ತುಸು ಮಾಸಿದರೆ, ತಮ್ಮ ಬದುಕೇ ಬುಡಮೇಲಾಗಿ ಹೋಯಿತು ಎಂದು ತಲೆ ಕೆಡಿಸಿಕೊಳ್ಳುವ, ಬಾಹ್ಯ ಸೌಂದರ್ಯದಿಂದಷ್ಟೇ ಆತ್ಮವಿಶ್ವಾಸ ಹೆಚ್ಚುತ್ತದೆ ಎಂದುಕೊಂಡು ಡಯೆಟ್ ನೆಪದಲ್ಲಿ ಹೊಟ್ಟೆ ಕಟ್ಟುವ, ದುಬಾರಿ ಪಾರ್ಲರ್ ಮತ್ತು ಜಿಮ್ಗಳ ಮೊರೆ ಹೋಗುವ ಹುಡುಗಿಯರು, ನಿಜವಾದ ಆತ್ಮವಿಶ್ವಾಸವೆಂದರೆ ಏನೆಂಬುದನ್ನು ಮಹೊಗನಿ ಜಿಟರ್ಅವಂದ ಕಲಿಯಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ