ಈ ಜಗತ್ತಿನಲ್ಲಿ ಒಬ್ಬರಂತೆ ಇರುವ ಸುಮಾರು ಏಳು ಜನರಿರುತ್ತಾರೆ ಎಂಬ ವಿಶ್ವಾಸವಿದೆ. ಇದು ಎಷ್ಟು ನಿಜವೋ ಅಥವಾ ಸುಳ್ಳೋ ತಿಳಿಯದು ಆದರೆ ಒಬ್ಬರಂತಿರುವ ಯಾರಾದರೊಬ್ಬರು ಆಗಾಗ ಕಾಣಿಸಿಕೊಳ್ಳುತ್ತಿರುತ್ತಾರೆ ಎಂದರೆ ಅತಿಶಯೋಕ್ತಿಯಾಗಲಾರದು. ಅದರಲ್ಲೂ ಜನಪ್ರೀಯರಾಗಿರುವ ವ್ಯಕ್ತಿಗಳ ರೀತಿ ಇನ್ನೊಬ್ಬರು ಎಲ್ಲಿಯಾದರೂ ಕಂಡರೆ ಅವರು ಸಾಕಷ್ಟು ವೈರಲ್ (Viral) ಆಗುವುದರಲ್ಲಿ ಸಂದೇಹವೇ ಇಲ್ಲ. ಮುಂಚೆಯೂ ಈ ರೀತಿ ಜನಪ್ರೀಯ ವ್ಯಕ್ತಿಗಳ (Celebraties0 ಪ್ರತಿರೂಪದಂತಿರುವ ವ್ಯಕ್ತಿಗಳಿದ್ದರೂ ಅಷ್ಟೊಂದು ಸುದ್ದಿಯಾಗುತ್ತಿರಲಿಲ್ಲ, ಕಾರಣ ಹಿಂದಿನ ಕಾಲದಲ್ಲಿ ಇಂದಿನ ಶಕ್ತಿಯುತ ಸಾಮಾಜಿಕ ಮಾಧ್ಯಮಗಳು (Social Media) ಬಂದಿರಲಿಲ್ಲ. ಆದರೆ, ಈಗ ಕಾಲ ಬದಲಾಗಿದೆ, ಜಗತ್ತಿನ ಯಾವ ಮೂಲೆಯಲ್ಲಾದರೂ ಒಬ್ಬ "ನಕಲಿ", ಜನಪ್ರೀಯ ವ್ಯಕ್ತಿಯ ರೀತಿಯಿದ್ದರೆ ಅವರು ತಕ್ಷಣವೇ ಮುನ್ನೆಲೆಗೆ ಬಂದು ಬಿಡುತ್ತಾರೆ.
ಈಗಾಗಲೇ ನಾವು ಸಾಮಾಜಿಕ ಮಾಧ್ಯಮಗಳಲ್ಲಿ ಕ್ರಿಕೆಟ್ ತಾರೆಯಾದ ಸಚಿನ್ ತೆಂಡೂಲ್ಕರ್, ನಟರಾದ ಶಾರೂಕ್ ಖಾನ್, ಸಲ್ಮಾನ್ ಖಾನ್ ರಂತೆಯೇ ಕಾಣುವ ಹಲವು ಸಾಮಾನ್ಯ ವ್ಯಕ್ತಿಗಳು ವೈರಲ್ ಆಗಿರುವ ವಿಡಿಯೋಗಳನ್ನು ನೋಡಿದ್ದೇವೆ.
ಆದರೆ, ಇದೀಗ ಮಧ್ಯಪ್ರದೇಶದ ಗ್ವಾಲಿಯರ್ ಪಟ್ಟಣದಲ್ಲಿ ಚಾಟ್ ಮಾರಾಟ ಮಾಡುವ ವ್ಯಕ್ತಿಯೊಬ್ಬರು ದೆಹಲಿ ಮುಖ್ಯಮಂತ್ರಿಯಾಗಿರುವ ಅರವಿಂದ್ ಕೇಜ್ರಿವಾಲ್ ಅವರ ಪ್ರತಿರೂಪದಂತಿದ್ದು ಅವರ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಸಂಚಲನ ಉಂಟು ಮಾಡುತ್ತಿದೆ ಎನ್ನಬಹುದು.
ಇದನ್ನೂ ಓದಿ: ಪ್ರೇಮಿಗಳ ದಿನವನ್ನು ಆಚರಿಸಲು ಪರ್ಫೆಕ್ಟ್ ಆಗಿರುವ ರೊಮ್ಯಾಂಟಿಕ್ ನಗರಗಳಿವು!
ಗ್ವಾಲಿಯರ್ ಶಹರಿನಲ್ಲಿರುವ ಗುಪ್ತಾ ಚಾಟ್ ಸೆಂಟರಿನ ಮಾಲಿಕರು ಆಮ್ ಆದ್ಮಿ ಪಕ್ಷದ ದಿಗ್ಗಜ ನಾಯಕ ಹಾಗೂ ದೆಹಲಿ ಮುಖ್ಯಮಂತ್ರಿಯಾಗಿರುವ ಅರವಿಂದ್ ಕೇಜ್ರಿವಾಲ್ ಅವರಂತೆಯೇ ಕಾಣುವುದರಿಂದ ಸಖತ್ ಫೇಮಸ್ ಆಗುತ್ತಿದ್ದಾರೆ. ಅವರನ್ನು ನೋಡಲೆಂದೇ ಈಗ ನಗರದ ಹಲವು ಜನರು ನಿತ್ಯ ಈ ಚಾಟ್ ಕೇಂದ್ರಕ್ಕೆ ಭೇಟಿ ನೀಡುತ್ತಿದ್ದಾರೆ.
ಫುಡ್ ವ್ಲಾಗರ್ ವಿಶಾಲ್ ಎಂಬುವವರು ಗುಪ್ತಾ ಚಾಟ್ ಕೆಂದ್ರದ ಮಾಲೀಕರು ಕೇಜ್ರಿವಾಲ್ ಅವರಂತೆ ಇರುವುದನ್ನು ಕಂಡು ಬೆರಗಾಗಿ ಅವರ ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಟ್ಟಿದ್ದೇ ತಡ ಆ ವಿಡಿಯೋ ಅನೇಕ ನೆಟಿಜನ್ ಗಳ ಹುಬ್ಬೇರಿಸಿದೆ. ಅಲ್ಲದೆ ತರಾವರಿ ಕಾಮೆಂಟುಗಳೂ ಸಹ ಈ ವಿಡಿಯೋಗೆ ಈಗ ನೀಡಲಾಗುತ್ತಿದೆ.
ವ್ಲಾಗರ್ ವಿಶಾಲ್ ಅವರು ತಾವು ಮಾಡಿದ್ದ ವಿಡಿಯೋವನ್ನು ಹಂಚಿಕೊಳ್ಳುತ್ತ, "ಅರವಿಂದ್ ಕೇಜ್ರಿವಾಲ್ ಗ್ವಾಲಿಯರ್ ನಲ್ಲಿ ಚಾಟ್ ಮಾರುತ್ತಿದ್ದಾರೆ" ಎಂದು ಬರೆದುಕೊಂಡಿದ್ದಾರೆ.
ಅರವಿಂದ್ ಕೇಜ್ರಿವಾಲ್ನಂತೆ ರೂಪ
ಇದರಲ್ಲಿ ಇನ್ನೊಂದು ಆಸಕ್ತಿಕರ ವಿಷಯವೆಂದರೆ ಗುಪ್ತಾ ಚಾಟ್ ಕೇಂದ್ರದ ಮಾಲಿಕನೂ ಸಹ ಕೆಜ್ರಿವಾಲ್ ಅವರಂತೆ ಆಪ್ ಪಕ್ಷದ ರೀತಿಯ ಟೋಪಿ ಧರಿಸಿದ್ದಲ್ಲದೆ ಕೇಜ್ರಿವಾಲ್ ರೀತಿಯಂತೆಯೇ ಕನ್ನಡಕ ಹಾಕಿಕೊಂಡಿದ್ದು ಸ್ವಲ್ಪ ದೂರದಿಂದ ನೋಡಿದರೆ ನಿಜಕ್ಕೂ ಅರವಿಂದ್ ಕೇಜ್ರಿವಾಲ್ ಅವರೇ ನಿಂತಿದ್ದಾರೆ ಎನ್ನಬಹುದಾಗಿದೆ.
ಗ್ವಾಲಿಯರಿನ ಫೂಲ್ ಬಾಗ್ ಪ್ರದೇಶದಲ್ಲಿರುವ ಮೋತಿ ಮಹಲ್ ಎದುರಿಗೆ ಗುಪ್ತಾ ಅವರು ತಮ್ಮ ಸ್ಟಾಲ್ ಹೊಂದಿದ್ದು ಅಲ್ಲಿ ಅವರು ಪಾಪಡಿ ಚಾಟ್, ಕಚೋರಿ, ಪಾಲಕ್ ಪಟ್ಟಾ, ದಹಿ ಬಡಾ, ಗುಲಾಬ್ ಜಾಮೂನ್ ಹಾಗೂ ವಿಶಿಷ್ಟ ತಿಂಡಿಯಾದ ಖೋವಾ ಸಮೋಸಾ ಮಾರಾಟ ಮಾಡುತ್ತಾರೆ. ಗುಪ್ತಾ ಅವರ ಸ್ಟಾಲ್ ಬೆಳಗ್ಗೆ 11 ರಿಂದ ಸಂಜೆ 5ರವರೆಗೆ ಕಾರ್ಯನಿರ್ವಹಿಸುತ್ತದೆ.
ವಿಡಿಯೋ ಮಾಡುತ್ತಿದ್ದ ಸಂದರ್ಭದಲ್ಲಿ ವ್ಲಾಗರ್ ವಿಶಾಲ್ ಅವರು ತಮ್ಮ ಪ್ರೇಕ್ಷಕರನ್ನು ಕುರಿತು, "ದೆಹಲಿಯ ಕೇಜ್ರಿವಾಲ್ ಸರ್ಕಾರವು ಜನರಿಗಾಗಿ ಹಲವು ಉಚಿತ ಸೇವೆಗಳನ್ನು ನೀಡಿದ್ದರೆ ಗ್ವಾಲಿಯರ್ ಮೂಲದ ಕೇಜ್ರಿವಾಲ್ ಅವರು ಗುಣಮಟ್ಟದ ತಿನಿಸುಗಳನ್ನು ಮಿತದರದಲ್ಲಿ ನೀಡುತ್ತಿದ್ದಾರೆ" ಎನ್ನುತ್ತಿರುವಂತೆಯೇ ಚಾಟ್ ಕೇಂದ್ರದ ಗುಪ್ತಾ ಅವರು ನಗುಮುಖದಿಂದ ಗ್ವಾಲಿಯರ್ ನಗರದಲ್ಲೇ ಅತಿ ಕಡಿಮೆ ದರದಲ್ಲಿ ತಾನು ಚಾಟ್ ಮಾರಾಟ ಮಾಡುತ್ತಿರುವುದಾಗಿ ಹೇಳುತ್ತಾರೆ.
ನೋಡುಗರ ಪ್ರತಿಕ್ರಿಯೆ
ಇನ್ನು, ಈ ವಿಡಿಯೋ ನೋಡಿದ ಹಲವು ನೆಟ್ಟಿಗರು ವಿವಿಧ ರೀತಿಯಲ್ಲಿ ತಮಾಷೆಪೂರ್ವಕ ಕಾಮೆಂಟ್ ಗಳನ್ನು ಮಾಡಿದ್ದಾರೆ. ಈ ವಿಡಿಯೋಗೆ ಇಲ್ಲಿವರೆಗೂ 98 ಸಾವಿರಕ್ಕಿಂತಲೂ ಅಧಿಕ ಲೈಕುಗಳು ದೊರೆತಿದ್ದು ನೂರಾರು ಪ್ರತಿಕ್ರಿಯೆಗಳು ಲಭಿಸಿವೆ.
ಒಬ್ಬ ಬಳಕೆದಾರರು, "ಕೊನೆ ಪಕ್ಷ ಒಬ್ಬರಾದರೂ ಉಚಿತ ಎನ್ನುವುದನ್ನು ಬಿಟ್ಟು ಗುಣಾತ್ಮಕತೆಯ ಮೇಲೆ ನಂಬಿಕೆ ಇರಿಸಿದ್ದಾರೆ" ಎಂದು ಪ್ರತಿಕ್ರಯಿಸಿದ್ದರೆ, ಇನ್ನೊಬ್ಬರು "ನನಗೆ ಇವರೂ ಸಹ ಆ ಉಚಿತದವರೇ ಎಂದೆನೆಸಿತ್ತು" ಎಂದು ತಮಷೆಯಾಗಿ ಬರೆದುಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ