• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • ನೀವು ಹಗಲು ಗನಸು ಕಂಡರೆ ಸಂಕೋಚ ಬೇಡ, ನೀವು ದಕ್ಷ ಮನಸ್ಸು, ಚುರುಕಾದ ಮೆದುಳು ಹೊಂದಿರುವಿರಿ!

ನೀವು ಹಗಲು ಗನಸು ಕಂಡರೆ ಸಂಕೋಚ ಬೇಡ, ನೀವು ದಕ್ಷ ಮನಸ್ಸು, ಚುರುಕಾದ ಮೆದುಳು ಹೊಂದಿರುವಿರಿ!

Photo: Google

Photo: Google

ನಾವು ಹೊರಜಗತ್ತಿನ ಗದ್ದಲಗಳಿಂದ ನಮ್ಮ ಮನಸ್ಸುಗಳನ್ನು ನಿರಾಳಗೊಳಿಸಲು ಹಗಲುಗನಸುಗಳು ನಮಗೆ ಸಹಕರಿಸುತ್ತವೆ. ಮನಸ್ಸು ಶಾಂತವಾಗಿ ವಿಶ‍್ರಾಂತ ಸ್ಥಿತಿಗೆ ಬರುತ್ತದೆ ಹಾಗೂ ಹೊಸತನ್ನು ಪರಿಶೋಧನೆ ಮಾಡುತ್ತದೆ.

  • Share this:

ನಿಮಗೆ ಇಷ್ಟವಿಲ್ಲದ ತರಗತಿಗಳಲ್ಲಿ ಕುಳಿತು ತೂಕಡಿಸಿದ್ದು, ಇಲ್ಲವೇ ಕಿಟಕಿಯಿಂದಾಚೆಗೆ ನೋಡುತ್ತ ಕನಸುಗಳನ್ನು ಕಂಡಿದ್ದು,  ನಿಮಗಿನ್ನೂ ನೆನಪಿವೆಯಾ? ಆಗೆಲ್ಲ ಶಿಕ್ಷಕರ ಕೈಯಿಂದ ಏಟುಗಳನ್ನೋ ಬಾಯಿಂದ ಬೈಗುಳಗಳನ್ನೋ ನೀವು ಪ್ರತಿಫಲವಾಗಿ ಪಡೆದಿರಬಹುದು. ಅಲ್ಲವೇ? ನಿಜ, ನಾವೆಲ್ಲರೂ ಹಗಲು ಕನಸುಗಳು ಕಂಡಿದ್ದೆವು. ಈಗಲೂ ಕಾಣಬಲ್ಲೆವು. ಏಕೆಂದರೆ ದಕ್ಷ ಮನಸ್ಸು, ಚುರುಕಾದ ಮೆದುಳು ಇರುವುದರ ಸಂಕೇತ ಅದು. ನಮ್ಮ ಮೆದುಳಿನ ಪರದೆಯಲ್ಲಿ ಬಂದು ಹೋಗುವ ನಮ್ಮ ಯೋಚನೆಗಳಿಂದ ನಾವು ತಪ್ಪಿಸಿಕೊಳ್ಳಲಾರೆವು. ನಾವು ಅಂದುಕೊಳ್ಳುವುದಕ್ಕಿಂತಲೂ ಹೆಚ್ಚು ಹಗಲುಕನಸು ಕಾಣಬಹುದು. ನಮ್ಮ 47 ಶೇಕಡಾ ಸಮಯವನ್ನು ನಾವು ಹಗಲು ಗನಸುಗಳಲ್ಲಿ ಕಳೆದು ಬಿಡುತ್ತೇವೆ ಎನ್ನುವುದನ್ನು ವಿಜ್ಞಾನಿಗಳೂ ಒಪ್ಪುತ್ತಾರೆ.


ಹಗಲು ಗನಸು ಎಂಬುದು ಬಹುತೇಕರ ಪ್ರಕಾರ ವ್ಯರ್ಥ ಪ್ರಲಾಪ, ಸುಮ್ಮನೆ ಕಾಲಹರಣ. ಆದರೆ ವಿಜ್ಞಾನಿಗಳ ಪ್ರಕಾರ, ಹಗಲು ಗನಸು ಖಂಡಿತವಾಗಿಯೂ ಕಾಲಹರಣ ಅಲ್ಲ. ಅದು ದೈನಂದಿನ ಕಾರ್ಯಗಳ ಮಂದಗತಿಯಿಂದ ನಮ್ಮನ್ನು ನಾವೇ ಬೇರ್ಪಡಿಸಿಕೊಳ್ಳುವ ಉಪಯುಕ್ತ ಕಾಲಕ್ಷೇಪವಾಗಿದೆ.


ಹಗಲು ಗನಸುಗಳು ಸೃಜನಶೀಲತೆ ಮತ್ತು ನಮಗೆ ಎದುರಾಗುವ ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯಗಳನ್ನು ವೃದ್ಧಿಸುತ್ತದೆ. ಗಮನವನ್ನು ಕೇಂದ್ರೀಕರಿಸಲು ಮತ್ತು ನಿರ್ದಿಷ್ಟ ಕಾರ್ಯಗಳತ್ತ ನಮ್ಮ ಚಿತ್ತವನ್ನು ಹರಿಸಲು ಅವು ನೆರವಾಗುತ್ತದೆ.  ಹೀಗಾಗಿ ಹಗಲು ಗನಸು ಕಾಣುವುದು ಮನುಷ್ಯರ ಸಾಮಾನ್ಯ ಅಭ್ಯಾಸ ಎನ್ನುತ್ತಾರೆ ವಿಜ್ಞಾನಿಗಳು.
ಯುವಕರು ಹಗಲುಗನಸು ಕಾಣುವುದು ಹೆಚ್ಚು:


ಹೆಚ್ಚಾಗಿ ಯುವಕರು, ಹದಿಹರೆಯದವರು, ವಿದ್ಯಾರ್ಥಿಗಳು, ಸಣ್ಣ ವಯಸ್ಸಿನ ಯುವಕರು ಹಗಲುಗನಸು ಕಾಣುತ್ತಾರೆ ಎಂದು ಮತ್ತೊಂದು ಸಂಶೋಧನಾ ಅಧ್ಯಯನವು ಹೇಳುತ್ತದೆ. ಸಾಮಾನ್ಯವಾಗಿ ಎಲ್ಲರೂ ತಮ್ಮ ಕಿರಿಯ ವರ್ಷಗಳಲ್ಲಿ ಹಗಲುಗನಸು ಕಾಣುವುದು ಹೆಚ್ಚು. ಶಾಲೆಯಲ್ಲಿ ಕ್ರೀಡಾಕೂಟಗಳಲ್ಲಿ ಗೆದ್ದಿದ್ದು, ಶಾಲೆಯಲ್ಲಿ ಕಲಿಯುವುದರಲ್ಲಿ ಅಗ್ರಸ್ಥಾನ ಪಡೆದಿದ್ದು, ಪ್ರವಾಸ ಹೋಗಿದ್ದು, ದಾರಿಯಲ್ಲಿ ಹೋಗುವಾಗ ನಿಧಿ ಸಿಕ್ಕಿ ಶ‍್ರೀಮಂತರಾಗಿದ್ದು, ವೈದ್ಯನಾಗಿದ್ದು, ಎಂಜಿನಿಯರ್ ಆಗಿದ್ದು … ಹೀಗೆ ಹತ್ತಾರು ಹಗಲು ಗನಸುಗಳು ನಮ್ಮ ಶಾಲಾ ಕಾಲೇಜು ದಿನಗಳಲ್ಲಿ ನಮ್ಮ ಭಿತ್ತಿ ಪಟಲದಲ್ಲಿ ಮೂಡಿ ಮರೆಯಾಗಿರಬಹುದು.
ಒತ್ತಡ, ಚಿಂತೆಯನ್ನು ದೂರ ಮಾಡುವ ಹಗಲು ಗನಸು:


ನಾವು ಹೊರಜಗತ್ತಿನ ಗದ್ದಲಗಳಿಂದ ನಮ್ಮ ಮನಸ್ಸುಗಳನ್ನು ನಿರಾಳಗೊಳಿಸಲು ಹಗಲುಗನಸುಗಳು ನಮಗೆ ಸಹಕರಿಸುತ್ತವೆ. ಮನಸ್ಸು ಶಾಂತವಾಗಿ ವಿಶ‍್ರಾಂತ ಸ್ಥಿತಿಗೆ ಬರುತ್ತದೆ ಹಾಗೂ ಹೊಸತನ್ನು ಪರಿಶೋಧನೆ ಮಾಡುತ್ತದೆ. ಇಡೀ ದಿನದ ಕೆಲಸದ ನಂತರ ಅಥವಾ ಸ್ನೇಹಿತರು, ಇಲ್ಲವೇ ಸಂಗಾತಿಯ ಜತೆಗೆ ಜಗಳಗಳಾದಾಗ ಮನಸ್ಸು ಅಶಾಂತವಾಗುತ್ತದೆ. ಆಗ ಮನಸ್ಸು ಹರಿಬಿಟ್ಟರೆ ಅದು ಸಂಬಂಧವಿಲ್ಲದ ವಿಚಾರಗಳ ಸುತ್ತ ಸುತ್ತುತ್ತದೆ ಹಾಗೂ ಮನಸ್ಸಿಗೆ ಆಹ್ಲಾದವನ್ನು ಉಂಟುಮಾಡುತ್ತದೆ. ನೀವು ನಿಮ್ಮ ಚಿಂತೆಗಳನ್ನು ಮರೆತು ಮುನ್ನಡೆಯಲು ಹಗಲು ಗನಸುಗಳು ನೆರವಾಗಬಲ್ಲದು.


ಹಗಲು ಗನಸುಗಳು ನಮ್ಮ ಸಮಸ್ಯೆಗಳನ್ನೂ ಪರಿಹರಿಸಬಲ್ಲವು. ಅವು ಕೇವಲ ಚಿಂತೆಗಳನ್ನು ದೂರ ಮಾಡುವ ಸಾಧನವಲ್ಲ. ನಿಮಗೆ ಎದುರಾಗಿರುವ ಸಮಸ್ಯೆಯನ್ನು ಮತ್ತೆ ಸಂಪೂರ್ಣ ಮನಸ್ಸಿನಿಂದ ಎದುರಿಸಲು ನಿಮಗೆ ಹಗಲುಗನಸುಗಳು ಸಹಾಯ ಮಾಡುತ್ತವೆ ಎನ್ನುತ್ತಾರೆ ವಿಜ್ಞಾನಿಗಳು.


ಇದನ್ನೂ ಓದಿ: Black Fungus| ಬ್ಲಾಕ್​ ಫಂಗಸ್​ಗೆ ಕಳೆದ 3 ವಾರಗಳಲ್ಲಿ 2,100 ಜನ ಬಲಿ; 31,000 ಕೇಸ್, ಶೇ.150ಕ್ಕಿಂತ ಹೆಚ್ಚಾಗಿದೆ ಪ್ರಕರಣಗಳ ಸಂಖ್ಯೆ


ಸಮಸ್ಯೆಗಳನ್ನು ಪರಿಹರಿಸಲು ಕೂಡ ಅವು ನೆರವಾಗಬಲ್ಲವು. ಆಂತರಿಕ ಚಿಂತನೆಗಳು, ಸಂಶೋಧನೆಗಳು, ಹತೋಟಿಗೆ ಸಿಗದೆ ಓಡಾಡುವ ಮನಸ್ಸು, ಹಗಲುಗನಸು, ಇವೆಲ್ಲವೂ ನಮ್ಮ ಮೆದುಳಿಗೂ ಮನಸ್ಸಿಗೂ ತುಂಬ ಒಳ್ಳೆಯದು. ಇವು ಹೊಸ ಐಡಿಯಾಗಳನ್ನು ಪಡೆಯಲು ಸಹಾಯ ಮಾಡುವ ಪ್ರಕ್ರಿಯೆಗಳೂ ಆಗಿವೆ.


ನೀವು ಗಮನಿಸಿರಬಹುದು. ಮಕ್ಕಳ ಮನಸ್ಸು ತುಂಬ ಚಂಚಲ. ಅವರು ಒಂದು ಕೆಲಸದ ಮೇಲೆ ತುಂಬ ಹೊತ್ತು ಫೋಕಸ್ ಮಾಡಲಾರರು. ಅವರು ಬೇಗನೇ ತಮ್ಮದೇ ಲೋಕಕ್ಕೆ ಹೋಗಿಬಿಡುತ್ತಾರೆ. ಯುವಕರು ಕೂಡ ಅಷ್ಟೇ. ಹಗಲುಗನಸು ಕಾಣುವುದು ಅವರೇ ಹೆಚ್ಚು. ಅದರಿಂದ ಅವರ ಮೆದುಳು ಸಮಸ್ಯೆಗಳನ್ನು ಪರಿಹರಿಸಲು ಸಜ್ಜಾಗುತ್ತದೆ. ಸೃಜನಶೀಲತೆಯು ಚುರುಕಾಗುತ್ತದೆ.


ಇದನ್ನೂ ಓದಿ: Explainer: ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರ ನಿರಂತರವಾಗಿ ಏರುತ್ತಲೇ ಇದೆ ಇದಕ್ಕೆ ಕಾರಣವೇನು ಗೊತ್ತೇ..?


ಅಲ್ಲದೆ ಹಗಲು ಗನಸುಗಳು ಜೀವನದ ಗುರಿ ಮುಟ್ಟಲು ನೆರವಾಗುತ್ತವೆ ಎನ್ನುವುದು ತುಂಬ ಜನರಿಗೆ ಗೊತ್ತಿಲ್ಲ. ಸಂಶೋಧಕರ ಪ್ರಕಾರ, ಹಗಲುಗನಸುಗಳು ಅವರ ಜೀವನದ ಗುರಿ ಮಟ್ಟಲು ಪ್ರೇರಣೆ ನೀಡುತ್ತದೆ. ಕ್ರೀಡಾಪಟುಗಳು, ಕಲಾವಿದರು ತಮ್ಮ ಪ್ರದರ್ಶನಕ್ಕಿಂತ ಮೊದಲು ಬೇಕೆಂದೇ ಹಗಲುಗನಸು ಕಾಣುತ್ತಾರೆ. ಅವರ ಉತ್ತಮ ನಿರ್ವಹಣೆಗೆ ಇದು ಪ್ರೇರೇಪಿಸುತ್ತದೆ ಎನ್ನುತ್ತಾರೆ ವಿಜ್ಞಾನಿಗಳು.


ಒಟ್ಟಿನಲ್ಲಿ ಹಗಲು ಗನಸು ಕಾಣುವವರು ನೀವಾಗಿದ್ದರೆ, ಇನ್ನು ಮುಂದೆ ಸಂಕೋಚ ಪಟ್ಟುಕೊಳ್ಳದಿರಿ. ಹಗಲು ಗನಸು ನಿಮ್ಮ ದಕ್ಷ ಮನಸ್ಸಿನ, ಚುರುಕಾದ ಮೆದುಳಿನ ಹೆಗ್ಗುರುತು ಎಂಬುದು ನಿಮಗೆ ನೆನಪಿರಲಿ.

Published by:MAshok Kumar
First published: