ಈಗಂತೂ ಈ ಆನ್ಲೈನ್ ನಲ್ಲಿ (Online) ಹಣದ ಆಸೆ, ವಿಕೃತ ಮನಸ್ಥಿತಿ, ಇನ್ನೊಬ್ಬರಿಗೆ ಕಿರುಕುಳ ನೀಡಬೇಕೆಂಬ ಕ್ಷುಲ್ಲಕ ಉದ್ದೇಶದಿಂದ ಅನೇಕರು ತಮ್ಮ ಹತ್ತಿರದವರಿಗೆ ಅವರಿಗೆ ಗೊತ್ತಾಗದಂತೆ ಸೈಬರ್ ನಲ್ಲಿ ಅವರ ಬಗ್ಗೆ ದ್ವೇಷದ ಸಂದೇಶಗಳನ್ನು (Message) ಕಳುಹಿಸುವುದು ಮತ್ತು ಬೆದರಿಕೆಗಳನ್ನು ಹಾಕುವ ಅನೇಕ ಘಟನೆಗಳ ಬಗ್ಗೆ ನಾವು ದಿನ ಬೆಳಗಾದರೆ ಟಿವಿ ವಾಹಿನಿಗಳಲ್ಲಿ ನೋಡುತ್ತಲೇ ಇದ್ದೇವೆ ಅಂತ ಹೇಳಬಹುದು. ಅನೇಕ ಬಾರಿ ಈ ರೀತಿಯ ಕಿರುಕುಳದಿಂದಾಗಿ ಬೇಸತ್ತು ಜನರು ಇದನ್ನು ಯಾರಿಗೂ ಹೇಳಿಕೊಳ್ಳಲು ಆಗದೆ ಆತ್ಮಹತ್ಯೆ ಸಹ ಮಾಡಿಕೊಂಡಿರುವ ಪ್ರಕರಣಗಳು ಇವೆ ಅಂತ ಹೇಳಬಹುದು. ಇಲ್ಲಿಯೂ ಸಹ ಇಂತಹದೇ ಒಂದು ಘಟನೆ (Situation) ನಡೆದಿದೆ ನೋಡಿ.
ಸೈಬರ್ ನಲ್ಲಿ ಯುವತಿಗೆ ಕಿರುಕುಳ ನೀಡುತ್ತಿದ್ದುದ್ದು ಆಕೆಯ ತಾಯಿ!
ಸೈಬರ್ ಬೆದರಿಕೆಯಿಂದ ಬಳಲುತ್ತಿದ್ದ ಹದಿಹರೆಯದ ಹುಡುಗಿಯೊಬ್ಬಳು ಕಳೆದ ಒಂದು ವರ್ಷದಲ್ಲಿ ತಾನು ಸ್ವೀಕರಿಸಿದ ದ್ವೇಷದಿಂದ ಕೂಡಿದ ಸಂದೇಶಗಳ ಹಿಂದಿರುವ ಅನಾಮಧೇಯರು ಯಾರು ಅಂತ ತುಂಬಾನೇ ತಲೆ ಕೆಡೆಸಿಕೊಂಡಿದ್ದಳು.
ಆದರೆ ಈಗ ಆಕೆಗೆ ಅದೆಲ್ಲದರ ಹಿಂದೆ ಬೇರೆ ಯಾರೂ ಅಲ್ಲ, ಆಕೆಯ ಸ್ವಂತ ತಾಯಿಯೇ ಭಾಗಿಯಾಗಿದ್ದಾಳೆಂದು ಗೊತ್ತಾದ ನಂತರ ಶಾಕ್ ಆಗಿದೆ. ಮಿಶಿಗನ್ ಮೂಲದ ಕೆಂಡ್ರ ಗೇಲ್ ಲಿಕಾರಿ ತನ್ನ ಸ್ವಂತ ಮಗಳನ್ನು ತನ್ನ ಗುರುತು ಸಿಗದಂತೆ ಹದಿಹರೆಯದವರ ಭಾಷೆಯನ್ನು ಬಳಸಿಕೊಂಡು ಆನ್ಲೈನ್ ನಲ್ಲಿ ನಿಂದಿಸಿದ್ದಾಳೆ.
ಕಳೆದ ತಿಂಗಳು ಆ ತಾಯಿಯನ್ನು ಒಂದು ವರ್ಷದ ಸುದೀರ್ಘ ತನಿಖೆಯ ನಂತರ ಬಂಧಿಸಲಾಯಿತು, ಈ ಪ್ರಕರಣವನ್ನು ತನಿಖೆ ಮಾಡಲು ಎಫ್ಬಿಐ ತಜ್ಞರನ್ನು ಕರೆಸಲಾಯಿತು.
ಸಂದೇಶಗಳ ಮೂಲವನ್ನು ಮರೆಮಾಚಲು ಲಿಕಾರಿ ವಿಪಿಎನ್ ಅನ್ನು ಬಳಸಿದ್ದಳು ಮತ್ತು ಅವಳ ಸಂದೇಶಗಳನ್ನು ಈಗಿನ ಯುವಕ-ಯುವತಿಯರು ಬರೆದಂತೆ ಕಾಣುವಂತೆ ಮಾಡಲು ಅವರ ಭಾಷೆಯನ್ನೇ ಬಳಸಿದರು ಅಂತ ಹೇಳಲಾಗುತ್ತಿದೆ. ಕೊನೆಗೂ ಸಂಪೂರ್ಣವಾದ ತನಿಖೆಯ ನಂತರ ಪತ್ತೆದಾರರು ಅಂತಿಮವಾಗಿ ಈ ಎಲ್ಲಾ ಸಂದೇಶಗಳು ಲಿಕಾರಿಗೆ ಸಂಬಂಧಿಸಿದ್ದು ಅಂತ ಕಂಡು ಹಿಡಿಯಲು ಸಾಧ್ಯವಾಯಿತು.
ಸಂತ್ರಸ್ತೆ ತನ್ನ ತಾಯಿಯ ಬಳಿ ಸಹಾಯ ಕೇಳಿದ್ದಳಂತೆ!
ಸಂತ್ರಸ್ತೆ ಈ ಎಲ್ಲಾ ಕಿರುಕುಳದಿಂದ ಬೇಸತ್ತಿದ್ದಾಗ ತನ್ನ ತಾಯಿಯ ಬಳಿಗೆ ಹೋಗಿ ಸಹಾಯ ಕೇಳಿದ್ದಾಳೆ ಎಂದು ಹೇಳಲಾಗುತ್ತಿದೆ. ಆಗ ತಾಯಿ ತನ್ನ ಮಗಳಿಗೆ ಈ ರೀತಿಯ ಬೆದರಿಕೆ ಸಂದೇಶಗಳು ಬರುತ್ತಿವೆ ಅಂತ ಅಧಿಕಾರಿಗಳಿಗೆ ವರದಿ ಮಾಡಿದಳು ಎಂದು ಹೇಳಲಾಗುತ್ತಿದೆ.
ಆರಂಭದಲ್ಲಿ, ಶಾಲಾ ಅಧಿಕಾರಿಗಳಿಗೆ ಸಹಾಯ ಮಾಡಲು ಸಾಧ್ಯವಾಗಲಿಲ್ಲ ಮತ್ತು ಸ್ಥಳೀಯ ಪೊಲೀಸರು ಸಹ ಅಪರಾಧಿಯನ್ನು ಪತ್ತೆ ಹಚ್ಚಲು ಆಗಲಿಲ್ಲ.
ಇದನ್ನೂ ಓದಿ: ಪ್ಲಾನೆಟ್ ಪರೇಡ್ ಫೋಟೋ ಹಂಚಿಕೊಂಡ ನಾಸಾ, ನಿಸರ್ಗದ ಅದ್ಭುತವನ್ನು ಮೆಚ್ಚಿಕೊಂಡ ಇಂಟರ್ನೆಟ್ ಬಳಕೆದಾರರು!
ಇಸಾಬೆಲ್ಲಾ ಕೌಂಟಿ ಪ್ರಾಸಿಕ್ಯೂಟರ್ ಡೇವಿಡ್ ಬಾರ್ಬರಿ ಸ್ಥಳೀಯ ರೇಡಿಯೋ ಸ್ಟೇಷನ್ ಡಬ್ಲ್ಯೂಕೆಆರ್ಸಿ ಗೆ ಮಾತನಾಡುತ್ತ "ಈ ಪ್ರಕರಣವು ಮೊದಲ ಬಾರಿಗೆ ನಮ್ಮ ಕಚೇರಿಗೆ ಬಂದಾಗ, ಅದು ತುಂಬಾನೇ ವಿಚಿತ್ರವಾಗಿತ್ತು ಮತ್ತು ಬಹುತೇಕ ನಂಬಲಸಾಧ್ಯವಾಗಿತ್ತು."
"ನಾವು ನೂರಾರು ಪಠ್ಯ ಸಂದೇಶಗಳನ್ನು ನೋಡಿದೆವು, ಆ ಫೈಲ್ ನಲ್ಲಿ 1,000 ಕ್ಕೂ ಹೆಚ್ಚು ಪುಟಗಳ ಪಠ್ಯವಿತ್ತು" ಎಂದು ಅವರು ಹೇಳಿದರು. ಈ ಸಂದೇಶಗಳು ಹೆಚ್ಚಾಗಿ ಗೊಂದಲಮಯ ಮತ್ತು ಅವಮಾನಕರ ಪಠ್ಯ ಸಂದೇಶಗಳಾಗಿದ್ದವು ಎಂದು ಹೇಳಿದರು.
ಮಗಳಿಗೆ ಆ ಸಂದೇಶಗಳನ್ನೆಲ್ಲಾ ಕಳುಹಿಸಿದ್ದು ತಾನೇ ಎಂದು ಒಪ್ಪಿಕೊಂಡ ತಾಯಿ
ಆದಾಗ್ಯೂ, ಎಫ್ಬಿಐನ ಕಂಪ್ಯೂಟರ್ ತಜ್ಞರು ಈ ಸಂದೇಶಗಳು ಲಿಕಾರಿಯ ಫೋನ್ ನಿಂದ ಬಂದಿವೆ ಎಂದು ಗುರುತಿಸಿದ ನಂತರ, ಅವಳು ತನಿಖೆಯಲ್ಲಿ ಸಿಕ್ಕಿ ಹಾಕಿಕೊಂಡಳು ಮತ್ತು ತನ್ನ ಮಗಳಿಗೆ ಬೆದರಿಕೆಗಳ ಸಂದೇಶಗಳನ್ನು ಕಳುಹಿಸಿದ್ದು ತಾನೇ ಅಂತ ಒಪ್ಪಿಕೊಂಡಳು.
ಬಿಲ್ ಸಿಟಿ ಶಾಲೆಯ ಸೂಪರಿಂಟೆಂಡೆಂಟ್ ವಿಲಿಯಂ ಚಿಲ್ಮನ್ ಮಾತನಾಡಿ 42 ವರ್ಷದ ಲಿಕಾರಿ ತನ್ನ ಮಗಳ ಶಾಲೆಯಲ್ಲಿ ಬಾಸ್ಕೆಟ್ ಬಾಲ್ ತರಬೇತುದಾರರಾಗಿದ್ದರು. ಡಿಸೆಂಬರ್ 12, ಸೋಮವಾರದಂದು ಲಿಕಾರಿಯನ್ನು ವಿಚಾರಣೆಗೆ ಗುರಿಪಡಿಸಲಾಯಿತು ಮತ್ತು 5,000 ಡಾಲರ್ ದಂಡ ಹಾಕಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.
ಈ ರೀತಿಯ ಸೈಬರ್ ಅಪರಾಧಗಳಿಗೆ ಯುಎಸ್ ನಲ್ಲಿ 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆಯಿದೆ. ಅಪ್ರಾಪ್ತ ವಯಸ್ಕರಿಗೆ ಬೆದರಿಸಿದ ಮತ್ತು ನ್ಯಾಯಕ್ಕೆ ಅಡ್ಡಿಪಡಿಸಿದ ಆರೋಪವನ್ನು ಸಹ ಲಿಕಾರಿಯ ಮೇಲೆ ಹೊರಿಸಲಾಯಿತು. ಈ ಸಮಯದಲ್ಲಿ ಪ್ರಕರಣವನ್ನು ವಿಚಾರಣೆಗೆ ವರ್ಗಾಯಿಸಲು ಸಾಕಷ್ಟು ಪುರಾವೆಗಳಿವೆಯೇ ಎಂಬುದು ಸ್ಪಷ್ಟವಾಗಿಲ್ಲ ಮತ್ತು ಯಾವುದೇ ಕಾರಣವನ್ನು ನೀಡದೆ ಈ ವಿಷಯದ ವಿಚಾರಣೆಯನ್ನು ಜನವರಿ 12ಕ್ಕೆ ಮುಂದೂಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ