ಟಿಂಡರ್ ಮತ್ತು ಬಂಬಲ್‌ನಂತಹ ಡೇಟಿಂಗ್ ಆ್ಯಪ್‌ಗಳು ಇದೀಗ ಹೊಸ ಸೇವೆಯನ್ನು ಲಾಂಚ್ ಮಾಡಹೊರಟಿದ್ದು ಇದು ಲಾಕ್‌ಡೌನ್, ಕ್ವಾರಂಟೈನ್‌ನಿಂದ ಹೊರಬಂದಿರುವ ಸಂಗಾತಿಗಳಿಗೆ ಆಪ್ತತೆ ಮತ್ತು ಆತ್ಮೀತೆಯನ್ನುಂಟು ಮಾಡುವ ಗೆಳೆತನಕ್ಕೆ ಆದ್ಯತೆ ನೀಡ ಹೊರಟಿದೆ. ಇದರಿಂದ ಡೇಟಿಂಗ್ ಆ್ಯಪ್‌ಗಳ ಬಗ್ಗೆ ಪ್ರತಿಯೊಬ್ಬರಿಗೆ ಇದ್ದಂತಹ ಮನೋಭಾವನೆ ಬದಲಾಗಲಿದೆ. ಕೀಳರಿಮೆ, ಖಿನ್ನತೆ, ಭಯ ಇಂದಿನ ದಿನಗಳಲ್ಲಿ ಪ್ರತಿಯೊಬ್ಬರನ್ನೂ ಕಾಡುತ್ತಿರುತ್ತದೆ. ಕೋವಿಡ್ ಸೋಂಕು, ಲಾಕ್‌ಡೌನ್, ಮೊದಲಾದ ಪದಗಳೇ ಕಿವಿ ಸೋಂಕುತ್ತಿದೆ. ಪ್ರತಿಯೊಬ್ಬರೂ ಇಂದು ಬಾಂಧವ್ಯ ಮತ್ತು ಗೆಳೆತನದ ಮಹತ್ವ ಅರಿಯತೊಡಗಿದ್ದಾರೆ.
ಈ ನಿಟ್ಟಿನಲ್ಲಿ ಡೇಟಿಂಗ್ ಆ್ಯಪ್‌ಗಳು ಗೆಳೆತನಕ್ಕೆ ಹೊಸ ರೂಪ ನೀಡ ಹೊರಟಿದೆ. ಸ್ನೇಹಿತರನ್ನು ಮಾಡಿಕೊಳ್ಳುವುದು, ಸ್ನೇಹವನ್ನು ಕಾಪಾಡಿಕೊಳ್ಳುವುದು ಎಂಬ ಅಂಶಕ್ಕೆ ಮಹತ್ವ ನೀಡುವ ನಿಟ್ಟಿನಲ್ಲಿ ಇದೇ ಬಗೆಯ ಬದಲಾವಣೆಗಳನ್ನು ಮಾಡಿಕೊಳ್ಳಲಿದೆ. ದೈಹಿಕ ಕಾಮನೆಗಳಿಗಿಂತಲೂ ಈಗ ಜನರಿಗೆ ಬೇಕಾಗಿರುವುದು ಆಪ್ತತೆ ಮತ್ತು ಸ್ನೇಹವಾಗಿದೆ. ಅದಕ್ಕಾಗಿಯೇ ಈ ಹೊಸ ಮಾರ್ಪಾಡುಗಳನ್ನು ಆ್ಯಪ್‌ಗಳು ತಮ್ಮಲ್ಲಿ ರೂಪಿಸಿಕೊಂಡಿವೆ. ಬಂಬಲ್ ಬಿಎಫ್‌ಎಫ್ ಎಂಬ ಫೀಚರ್ ಅನ್ನು ಹೊರತಂದಿದ್ದು ಬೆಸ್ಟ್ ಫ್ರೆಂಡ್ ಫಾರ್‌ಎವರ್ ಎಂಬುದು ಇದರ ವಿಸ್ತಾರ ರೂಪವಾಗಿದೆ. ಈ ಫೀಚರ್‌ನಿಂದ ಬಂಬಲ್‌ನ ಒಟ್ಟು ಸಕ್ರಿಯ ಬಳಕೆದಾರರಲ್ಲಿ ಏರಿಕೆಯಾಗಿದ್ದು ಈ ಫೀಚರ್‌ನ ಮೇಲೆಯೇ ಹೆಚ್ಚು ಕಾರ್ಯತತ್ಪರರಾಗಲು ಅನುಕೂಲಕರವಾಗಿದೆ ಎಂದು ಬಂಬಲ್‌ನ ಸಿಇಒ ಹಾಗೂ ಸ್ಥಾಪಕಿ ವಿಟ್ನೆ ವೋಲ್ಫ್ ಹರ್ಡ್ ತಿಳಿಸಿದ್ದಾರೆ.
ಇನ್ನು ಟಿಂಡರ್ ಮತ್ತು ಹಿಂಗ್ ಡೇಟಿಂಗ್ ಆ್ಯಪ್‌ಗಳು ಕೂಡ ಲವ್ ಲೈಫ್‌ಗೂ ಮುನ್ನ ಫ್ರೆಂಡ್‌ಶಿಪ್ ಮುಖ್ಯ ಎಂದು ಈ ದಿಶೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಬಂಬಲ್‌ನ ಅದೇ ಹಾದಿಯನ್ನು ಈ ಎರಡೂ ಆ್ಯಪ್‌ಗಳೂ ಅನುಸರಿಸುತ್ತಿವೆ. ದಕ್ಷಿಣ ಕೊರಿಯಾದ ಸೋಶಿಯಲ್ ಮೀಡಿಯಾ ಆ್ಯಪ್ ಆದ ಹೈಪರ್‌ಕನೆಕ್ಟ್‌ಗೆ ಇದು $1.7 ಬಿಲಿಯನ್ ಅನ್ನು ಪಾವತಿಸಿದ್ದು ರಿಯಲ್-ಟೈಮ್ ಅನುವಾದ ಪ್ರಕ್ರಿಯೆಯನ್ನು ಬಳಸಿಕೊಂಡು ಚಾಟ್ ಮಾಡುವ ಅವಕಾಶವೊದಗುವಂತೆ ಮಾಡಿದೆ. ಹೈಪರ್‌ಕನೆಕ್ಟ್‌ನ ವಾರ್ಷಿಕ ಆದಾಯವು ಕಳೆದ ವರ್ಷಕ್ಕೆ ಹೋಲಿಸಿದಾಗ ಈ ಬಾರಿ 50% ಹೆಚ್ಚಾಗಿದೆ. ಇನ್ನು ಮೀಟಪ್ ಹೆಸರಿನ ಅಪ್ಲಿಕೇಶನ್ ಜನವರಿಯಿಂದ ತನ್ನ ಸಬ್‌ಸ್ಕ್ರಿಪ್ಶನ್ ಸಂಖ್ಯೆಯಲ್ಲಿ 22% ಏರಿಕೆಯನ್ನು ಕಂಡಿದೆ.
ಕೋವಿಡ್‌ನ ನಿರ್ಬಂಧಗಳ ನಂತರ ಸ್ನೇಹದ ವಿಷಯದಲ್ಲಿ ಪ್ರತಿಯೊಬ್ಬರ ಭಾವನೆಗಳು ಬದಲಾಗುತ್ತಿದೆ. ಲಾಕ್‌ಡೌನ್‌ನಿಂದ ವರ್ಕ್ ಫ್ರಂ ಹೋಮ್ ಇಲ್ಲವೇ ಮನೆಯಲ್ಲೇ ಬಂಧಿಯಾಗುವ ಸಂದಿಗ್ಧ ಪರಿಸ್ಥಿತಿ ಉಂಟಾಗಿದೆ. ಈ ಸಮಯದಲ್ಲಿ ಹೊಸ ಸ್ನೇಹಿತರನ್ನು ಮಾಡುವ ತುಡಿತ ಹೆಚ್ಚಾಗುತ್ತದೆ. ನ್ಯೂಯಾರ್ಕ್‌ನಲ್ಲಿ ರೋಸಿ ಹೆಸರಿನ ನರ್ಸ್ ಒಬ್ಬರು ಬಂಬಲ್‌ನ ಬಿಎಫ್‌ಎಫ್ ಬಳಸಿಕೊಂಡು ಹೊಸ ಹೊಸ ಜನರನ್ನು ಸಂಧಿಸುತ್ತಿದ್ದಾರೆ. ನನಗೆ ಹೊಸ ಜನರನ್ನು ಸಂಧಿಸುವುದೆಂದರೆ ಖುಷಿಯ ವಿಚಾರವಾಗಿದೆ. ಆದರೆ ಕೋವಿಡ್ ಮತ್ತು ಲಾಕ್‌ಡೌನ್ ಕಾರಣ ಇದು ಅಸಂಭವವಾಗಿತ್ತು. ಆದರೆ ಬಂಬಲ್ ನನಗೆ ಈ ಅವಕಾಶವನ್ನೊದಗಿಸಿದೆ ಎಂದು ರೋಸಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹೀಗೆ ಟಿಂಡರ್ ಮತ್ತು ಬಂಬಲ್ ಅಪ್ಲಿಕೇಶನ್‌ಗಳನ್ನು ಬರಿಯ ಡೇಟಿಂಗ್ ಅಪ್ಲಿಕೇಶನ್‌ಗಳಂತೆ ಕಾಣುತ್ತಿದ್ದವರ ಮೊಗದಲ್ಲಿ ಮಂದಹಾಸ ಮೂಡಿದೆ. ಪ್ರೇಮ ಕಾಮದಂತಹ ಭಾವನೆ ಹೋಗಿ ಅಲ್ಲಿ ಶುದ್ಧ ಸ್ನೇಹ ಜಾಗಮಾಡಿಕೊಂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ