ಸಾಮಾನ್ಯವಾಗಿ ನಾವು ಆಕಾಶದಲ್ಲಿ ಹಾರಾಡುವಂತಹ ಅನೇಕ ಪಕ್ಷಿಗಳನ್ನು ನೋಡಿ ನಾವು ಸಹ ಹೀಗೆ ಆಕಾಶದಲ್ಲಿ ಹಾಯಾಗಿ ಹಾರಿಕೊಂಡು ಇರಲು ನಮಗೆ ಎರಡು ರೆಕ್ಕೆಗಳಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಒಮ್ಮೆಯಾದರೂ ನಮಗೆ ಅನ್ನಿಸಿರುತ್ತದೆ.ಮನುಷ್ಯರು ಹೀಗೆ ಆಕಾಶದಲ್ಲಿ ಹಾರಲು ಅನುಕೂಲವಾಗಲು ಮತ್ತು ಆ ಅನುಭವವನ್ನು ನಮಗೆ ಕಟ್ಟಿಕೊಡಲೆಂದೇ ಈ ಪ್ಯಾರಾಗ್ಲೈಡಿಂಗ್ ಪರಿಚಯಿಸಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ. ಈ ಪ್ಯಾರಾಗ್ಲೈಡಿಂಗ್ ಅತ್ಯಂತ ಸಾಹಸಮಯದಿಂದ ಕೂಡಿದ್ದು, ಇದನ್ನು ಮಾಡಲು ತುಂಬಾ ಧೈರ್ಯ ಬೇಕಾಗುತ್ತದೆ.
ಈ ಪ್ಯಾರಾಗ್ಲೈಡಿಂಗ್ ಮೂಲಕ ಮನುಷ್ಯರು ಆಕಾಶದಲ್ಲಿ ಹಾರಾಡಿಕೊಂಡು ಕೆಳಗಿನ ಸಮುದ್ರ, ಹಸಿರಿನಿಂದ ಕಂಗೊಳಿಸುತ್ತಿರುವ ಬೆಟ್ಟ ಗುಡ್ಡಗಳನ್ನು ನೋಡುವುದೇ ಒಂದು ಆನಂದ. ಅದನ್ನು ಅನುಭವಿಸಿದವರಿಗೆ ಮಾತ್ರ ಇದರಿಂದಾಗುವಂತಹ ಖುಷಿಯ ಬಗ್ಗೆ ತಿಳಿದಿರುತ್ತದೆ. ಇಲ್ಲಿ ತನ್ನ ಮಾಲೀಕನೊಂದಿಗೆ ಒಂದು ಮುದ್ದಾದ ಬಿಳಿ ನಾಯಿಯೊಂದು ಪ್ಯಾರಾಗ್ಲೈಡಿಂಗ್ ಮಾಡಿದೆ ನೋಡಿ.
ಸುಮಾರು 3 ವರ್ಷ ವಯಸ್ಸಿನ ಪುಟ್ಟ ನಾಯಿಯ ಹೆಸರು ಓಕಾ. ತನ್ನ ಮಾಲೀಕನ ಮುಂದೆ ಮುದ್ದಾಗಿ ಕುಳಿತುಕೊಂಡು ಸ್ವಲ್ಪವೂ ಭಯ ಪಡದೇ ತನ್ನ ಮಾಲೀಕನೊಂದಿಗೆ ಗಾಳಿಯಲ್ಲಿ ತೇಲಾಡಿರುವ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗಿದೆ.
ನಾಯಿ ಅಸಾಮಾನ್ಯವಾದಂತಹ ಅನುಭವದ ಪ್ರತಿಯೊಂದು ಕ್ಷಣವನ್ನು ಆನಂದಿಸುತ್ತಿರುವುದನ್ನು ಈ 29 ಸೆಕೆಂಡುಗಳ ವಿಡಿಯೋ ತುಣುಕಿನಲ್ಲಿ ನಾವು ಕಾಣಬಹುದು.
ಇದನ್ನೂ ಓದಿ:Basavaraj Bommai: ಆರೋಗ್ಯ ಸಚಿವರ ಎದುರಲ್ಲೇ ಆರೋಗ್ಯ ವ್ಯವಸ್ಥೆ ಸರಿಯಿಲ್ಲ ಎಂದ ಸಿಎಂ; ಮುಜುಗರಕ್ಕೀಡಾದ ಸುಧಾಕರ್
ಲಿಮಾಹ್ಲ್ ಅವರ 'ನೆವರ್ ಎಂಡಿಂಗ್ ಸ್ಟೋರಿ' ಸಂಗೀತದೊಂದಿಗೆ ಈ ವಿಡಿಯೋ ತಯಾರಿಸಲಾಗಿದ್ದು ‘ಔಕಾ.ಸ್ಯಾಮ್’ ಎನ್ನುವ ಹೆಸರಿರುವಂತಹ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡಲಾಗಿದೆ.
ನಾಯಿ ಮತ್ತು ಅದರ ಮಾಲೀಕ ಶಾಮ್ಸ್ ಇಬ್ಬರೂ ಪ್ಯಾರಾಗ್ಲೈಡಿಂಗ್ ಮಾಡುತ್ತಾ ಫ್ರಾನ್ಸ್ನಲ್ಲಿರುವಂತಹ ಪರ್ವತಗಳ ಮೇಲೆ ಹಾರುತ್ತಾ ಕೆಳಗೆ ಕಾಣುವಂತಹ ಮನಮೋಹಕವಾದ ದೃಶ್ಯವನ್ನು ಆನಂದಿಸಿದ್ದಾರೆ.
ಗಾಳಿಯು ತನ್ನ ಮುಖಕ್ಕೆ ನೇರವಾಗಿ ಬೀಸುತ್ತಿದ್ದಂತೆ ಮುದ್ದಾದ ನಾಯಿ ತುಂಬಾ ಶಾಂತ ರೀತಿಯಿಂದ ನೋಡುತ್ತಿದ್ದುದನ್ನು ಈ ವಿಡಿಯೋದಲ್ಲಿ ನಾವು ಕಾಣಬಹುದಾಗಿದೆ.
ಶಾಮ್ಸ್ ತನ್ನ ಸಾಹಸಮಯ ವಿಡಿಯೋವನ್ನು ಚಿತ್ರೀಕರಿಸುತ್ತಾ, ಓಕಾನನ್ನು ಆಗಾಗ ತಟ್ಟುತ್ತಾ ಅದಕ್ಕೆ ಎಚ್ಚರಿಸಿದನು. ಇವರಿಬ್ಬರು ಫ್ರಾನ್ಸ್ನ ಪ್ರಸಿದ್ಧ ಪರ್ವತವಾದ ‘ಕೋಲ್ ಡು ಗ್ರಾನನ್’ ಮೇಲೆ ಸುಮಾರು ಹೊತ್ತು ಗಾಳಿಯಲ್ಲಿ ಹಾರಿದ್ದಾರೆ.
ಈ ಸಾಹಸಿ ಜೋಡಿಯ ವಿಡಿಯೋ ನೆಟ್ಟಿಗರನ್ನು ಸಂತೋಷಗೊಳಿಸಿದೆ. ಸಾಹಸಿ ಜೋಡಿಯ ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಇದುವರೆಗೂ 61,000ಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ.
ಇದನ್ನು ನೋಡಿದ ಒಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರನು "ನಾಯಿಯೂ ತುಂಬಾ ಸಂತೋಷವಾಗಿ ಕಾಣುತ್ತಿದೆ" ಎಂದು ಪ್ರತಿಕ್ರಿಯಿಸಿದರೆ, ಇನ್ನೊಬ್ಬರು "ಇಂತಹ ವಿಡಿಯೋಗಳು ಹೆಚ್ಚಾಗಿ ನೋಡಲು ಸಿಗುವುದಿಲ್ಲ" ಎಂದು ಬರೆದಿದ್ದಾರೆ.
ಇದನ್ನೂ ಓದಿ:Garlic Bread: ಗಾರ್ಲಿಕ್ ಬ್ರೆಡ್ನಲ್ಲಿ ನಿಜವಾಗಿಯೂ ಬೆಳ್ಳುಳ್ಳಿ ಇದೆಯೇ..? ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ
ಪ್ಯಾರಾಗ್ಲೈಡಿಂಗ್ ಉತ್ಸಾಹಿಯಾದ ಶಾಮ್ಸ್ ತಮ್ಮ ನಾಯಿಯ ಇನ್ಸ್ಟಾಗ್ರಾಮ್ ಪ್ರೊಫೈಲ್ನಲ್ಲಿ ಪ್ಯಾರಾಗ್ಲೈಡಿಂಗ್ ಹೊರತುಪಡಿಸಿ, ತನ್ನ ಧೈರ್ಯಶಾಲಿ ನಾಯಿ ಅನೇಕ ಸಾಹಸಮಯ ಕ್ರೀಡೆಗಳಲ್ಲಿ ಭಾಗವಹಿಸಿದ ಫೋಟೋಗಳನ್ನು ಮತ್ತು ವಿಡಿಯೋ ತುಣುಕುಗಳನ್ನು ಸಹ ಹಂಚಿಕೊಂಡಿದ್ದಾರೆ.
''ಧನ್ಯವಾದಗಳು ಸ್ನೇಹಿತನೇ, ಈಗ ಪ್ರಪಂಚದಾದ್ಯಂತ ಹಾರೋಣ" ಎಂದು ಅವರು ಹಂಚಿಕೊಂಡ ಸಾಹಸಮಯ ಫೋಟೋಗಳಿಗೆ ಶೀರ್ಷಿಕೆ ಬರೆದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ