ಕುಡುಕನೊಬ್ಬ ಬೆಳ್ಳಂಬೆಳ್ಳಗ್ಗೆ ಬಾರ್ ಗೆ ಕಾಲ್ ಮಾಡಿ, ಎಷ್ಟೊತ್ತಿಗೆ ಬಾಗಿಲು ತೆಗೀತೀರಾ? ಅಂತ ಮಾಲೀಕನಿಗೆ ಫೋನ್ ಮಾಡಿ ತಲೆ ತಿಂತಾ ಇದ್ದನಂತೆ. ಅವನು ಮತ್ತೆ ಮತ್ತೆ ಕಾಲ್ ಮಾಡಿದ್ದನ್ನು ನೋಡಿ ರೋಸಿದ ಮಾಲೀಕ, 10 ಗಂಟೆಗೆ ತೆಗೀತೀವಿ, ನೀವು ಧಾರಾಳವಾಗಿ ಒಳಗೆ ಬರಬಹುದು ಅಂದನಂತೆ. ಅದಕ್ಕೆ ಆ ಕುಡುಕ, ಅಯ್ಯೋ, ನಾನು ಒಳಗೆ ಬರೋಕಲ್ಲ, ಹೊರಗೆ ಹೋಗೋಕೆ ಕೇಳಿದ್ದು, ರಾತ್ರಿ ನಾನಿಲ್ಲಿ ಕುಡೀತಾ ಕೂತಿದ್ದಾಗ, ನಿಮ್ಮ ಬಾರ್ ನವರು ನನ್ನನ್ನು ಗಮನಿಸದೆ ಹೊರಗಿನಿಂದ ಲಾಕ್ ಮಾಡ್ಕೊಂಡ್ ಹೋಗಿದ್ದಾರೆ ಅಂದನಂತೆ. ನಾವೆಲ್ಲ ಕೇಳಿರಬಹುದಾದ ಈ ಜೋಕ್ ಅನ್ನೇ ಹೋಲುವ ಘಟನೆಯೊಂದು ಇಂಗ್ಲೆಂಡ್ನಲ್ಲಿ (England)ನಡೆದಿದೆ. ಆದರೆ ಇಲ್ಲಿ ಕುಡಿಯಲು ಬಂದವರೆಲ್ಲಾ ಲಾಕ್ ಆಗಲು ಹಿಮಪಾತವಾದ ಕಾರಣ ಅನ್ನೋದು ವ್ಯತ್ಯಾಸ.
ತೀವ್ರವಾದ ಹಿಮಪಾತದಿಂದಾಗಿ ಪಬ್ (Pub) ಒಂದರಲ್ಲಿ ಕುಡಿಯಲು ಬಂದಿದ್ದ ಅನೇಕ ಪಾನಪ್ರಿಯರು ಅಲ್ಲಿಯೇ ಲಾಕ್ ಆಗಿದ್ದ ಘಟನೆ ಇದು. ಈಗ ಮೂರು ರಾತ್ರಿಗಳನ್ನು ಕಳೆದ ನಂತರ ಅವರೆಲ್ಲ ಅಲ್ಲಿಂದ ಹೊರಡಲು ಪ್ರಾರಂಭಿಸಿದ್ದಾರೆ.
ಸಮುದ್ರ ಮಟ್ಟದಿಂದ 1,732 ಅಡಿ (528 ಮೀಟರ್) ಎತ್ತರದಲ್ಲಿರುವ ಈ ಪಬ್ನಲ್ಲಿ 61 ಜನರನ್ನು ಲಾಕ್ ಮಾಡಲಾಗಿತ್ತು. ಹಿಮಪಾತದಿಂದಾಗಿ ಅತಿಯಾದ ಹಿಮ (Snow), ಈ ಪಬ್ ನ ಸುತ್ತಮುತ್ತಲಿನ ರಸ್ತೆಗಳನ್ನು ಬ್ಲಾಕ್ ಮಾಡಿದ್ದರಿಂದ ಇವರು ಯಾರಿಗೂ ಅಲ್ಲಿಂದ ಹೊರಡಲು ಸಾಧ್ಯವಾಗದೆ ಅಲ್ಲೇ ಲಾಕ್ ಆಗಬೇಕಾಗಿ ಬಂದಿತ್ತು. ಆದರೆ, ಇದರಿಂದ ಬಾರ್ ನಲ್ಲಿದ್ದವರಿಗೆ ತೊಂದರೆ ಏನೂ ಆದಂತಿಲ್ಲ. ಯಾಕಂದ್ರೆ, ಮೊದಲೇ 1,732 ಅಡಿ ಎತ್ತರದ ಹೈಯಸ್ಟ್ ಜಾಗದಲ್ಲಿರುವ ಈ ಪಬ್ನಲ್ಲಿ ಲಾಕ್ ಆಗಿದ್ದ ಜನ ಕುಡಿದು ಮತ್ತಷ್ಟು ಹೈ ಆಗಿದ್ದಾರೆ ಅಷ್ಟೇ. ಪಬ್, ಬಾರುಗಳಲ್ಲಿ ಮಾತು ಮಾತಿಗೆ ವೆಯ್ಟರ್ ನನ್ನು ಕರೆದು ಕಿರಿಕಿರಿ ಮಾಡುವ ಜನ ಈಗ ಅಲ್ಲಿಂದ ಮನೆಗೆ ಹೋಗಲು 3 ದಿನಗಳ ಕಾಲ ಕಾದಿದ್ದಾರೆ ಅನ್ನೋದು ವಿಶೇಷ.
ಯಾರ್ಕ್ಷೈರ್ ಡೇಲ್ಸ್ನ 'ಟ್ಯಾನ್ ಹಿಲ್ ಇನ್' ನಲ್ಲಿ ಬ್ಯಾಂಡ್ನ ಪ್ರದರ್ಶನದಲ್ಲಿ ಭಾಗವಹಿಸಿ ಡ್ರಿಂಕ್ಸ್ ಮಾಡಲು ಬಂದಿದ್ದ ಅತಿಥಿಗಳು ಸೋಮವಾರ (ನವೆಂಬರ್ 29, 2021) ತಮ್ಮ ಮನೆಗಳಿಗೆ ಮರಳಲು ಪ್ರಾರಂಭಿಸಿದ್ದಾರೆ ಎಂದು ಮಾಧ್ಯಮ ವರದಿಗಳು ಹೇಳಿವೆ. ಅಂದಹಾಗೆ, ಲಂಡನ್ನಿಂದ ಉತ್ತರಕ್ಕೆ 435 ಕಿಲೋಮೀಟರ್ ದೂರದಲ್ಲಿರುವ 'ಟ್ಯಾನ್ ಹಿಲ್ ಇನ್' ಕೆಟ್ಟ ಹವಾಮಾನದಿಂದ ಅನೇಕ ಬಾರಿ ಹೀಗೆ ಸಂಪರ್ಕ ಕಡಿದುಕೊಂಡಿರುವುದು ಹೊಸದೇನಲ್ಲ.
ವರದಿಗಳ ಪ್ರಕಾರ, ಪಬ್ನ ಸಿಬ್ಬಂದಿ ಲಾಕ್ ಆಗಿದ್ದ ಅತಿಥಿಗಳಿಗಾಗಿ ಚಲನಚಿತ್ರಗಳು, ರಸಪ್ರಶ್ನೆ ರಾತ್ರಿ ಮತ್ತು ಕರೋಕೆ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಶುಕ್ರವಾರ ರಾತ್ರಿ ಇದೇ ಪಬ್ನಲ್ಲಿ ಸಿಲುಕಿಕೊಂಡಿದ್ದ ಓಯಸಿಸ್ ಕವರ್ ಬ್ಯಾಂಡ್ ಆಗಿರುವ ನೋಸಿಸ್ ಬ್ಯಾಂಡ್ ಅಲ್ಲಿದ್ದ ಎಲ್ಲರಿಗೆ ಮನರಂಜನೆ ನೀಡಿದರು ಎಂದು ವರದಿಯಾಗಿದೆ.
"ಅಲ್ಲಿ ಸಿಕ್ಕಿ ಹಾಕಿಕೊಂಡಿದ್ದವರ ನಡುವೆ ಒಳ್ಳೆಯ ಸ್ನೇಹ ಬೆಳೆದು ಅವರೆಲ್ಲರೂ ಈಗ ಫ್ಯಾಮಿಲಿ ಫ್ರೆಂಡ್ಸ್ ಗಳಂತಾಗಿದ್ದಾರೆ" ಎಂದು ಮ್ಯಾನೇಜರ್ ನಿಕೋಲಾ ಟೌನ್ಸೆಂಡ್ ಹೇಳಿದ್ದಾರೆಂದು ಪಿಟಿಐ ಸುದ್ದಿ ಸಂಸ್ಥೆ ಉಲ್ಲೇಖಿಸಿದೆ. ಒಬ್ಬ ಮಹಿಳೆಯಂತೂ, ನಾವ್ ಮನೇಗ್ ಹೋಗೋದಿಲ್ಲ, ನಂಗೆ ಇಲ್ಲಿಂದ ಹೋಗಲು ಮನಸ್ಸಿಲ್ಲ ಎಂದು ಹೇಳಿದ್ದಾಳಂತೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ