ಸಾಮಾನ್ಯವಾಗಿ ನಾವು ಯಾವುದಾದರೂ ಪಾರ್ಕ್‌ಗೆ (Park) ಅಂತ ಹೋದಾಗ, ಅಲ್ಲಿ ಯಾವುದಾದರೂ ಚಿಕ್ಕ ನೀರಿನ ಕೊಳ ಇದೆಯಾ ಅಂತ ಹುಡುಕುತ್ತೇವೆ. ಏಕೆಂದರೆ ನೀರಿನ ಕೊಳ ಇದ್ದರೆ, ಅಲ್ಲಿ ಬೋಟಿಂಗ್ ಮಾಡಲು ವ್ಯವಸ್ಥೆ ಇದ್ದೇ ಇರುತ್ತದೆ ಅಂತ. ಮಕ್ಕಳ ಜೊತೆ ನಾವು ಸಹ ಸ್ವಲ್ಪ ಹೊತ್ತು ಬೋಟಿಂಗ್ (Boting) ಮಾಡಿ ಮನಸ್ಸಿಗೆ ಸಂತೋಷ ಪಡೆಯೋಣ ಅನ್ನೋದು ನಮ್ಮ ಆಸೆಯಾಗಿರುತ್ತದೆ. ಕೆಲವೊಮ್ಮೆ ಹೀಗೆ ಬೋಟಿಂಗ್‌ಗೆ ಅಂತ ಹೋದಾಗ ನಮ್ಮ ಮನಸ್ಸಿನಲ್ಲಿ ನೀರಿನಲ್ಲಿ ಮೊಸಳೆಗಳು ಇದ್ದರೆ ಏನು ಮಾಡೋದು ಅನ್ನೋ ಚಿಕ್ಕ ಭಯ (Fear) ಮತ್ತು ಆತಂಕ ಇದ್ದೇ ಇರುತ್ತದೆ. ಈ ಆತಂಕ ಮತ್ತು ಭಯ ಬೆಂಗಳೂರಿನ (Bengaluru) ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ನಿಜವಾಗಿದೆ ನೋಡಿ.
ದೋಣಿ ವಿಹಾರಕ್ಕೆ ಅಂತ ಪಾರ್ಕ್ ಬಳಿ ಬಂದ ಪ್ರವಾಸಿಗರಿಗೆ ಕಣ್ಣಿಗೆ ಬಿದ್ದ ಮೊಸಳೆಗಳು!
ಹೌದು, ನಗರದ ಹೊರವಲಯದಲ್ಲಿರುವ ಬನ್ನೇರುಘಟ್ಟ ಬಯೋಲಜಿಕಲ್ ಪಾರ್ಕ್ (ಬಿಬಿಪಿ) (ಜೈವಿಕ ಉದ್ಯಾನವನ) ನಲ್ಲಿ ಗುರುವಾರ ಕೆಲವು ಪ್ರವಾಸಿಗರು ದೋಣಿ ವಿಹಾರಕ್ಕೆ ಅಂತ ಅಲ್ಲಿಯೇ ಇದ್ದ ಒಂದು ಪುಟ್ಟ ನೀರಿನ ಕೊಳದ ಹತ್ತಿರ ಬಂದಿದ್ದಾರೆ. ಆಗ ಅವರ ಕಣ್ಣುಗಳು ಅಲ್ಲಿಯೇ ನೀರಿನಲ್ಲಿರುವ ಎರಡು ಮೊಸಳೆಗಳ ಮೇಲೆ ಬಿದ್ದಿದೆ. ಅವುಗಳನ್ನು ನೋಡಿದ ನಂತರ ಪ್ರವಾಸಿಗರು ತುಂಬಾನೇ ಭಯಭೀತರಾಗಿದ್ದಾರೆ. ಈ ಘಟನೆಯ ಸಮಯದಲ್ಲಿ ಉದ್ಯಾನದಲ್ಲಿ ಅನೇಕ ಜನ ಪ್ರವಾಸಿಗರು ಇದ್ದರಂತೆ.
ಉದ್ಯಾನದಲ್ಲಿರುವ ಸಿಬ್ಬಂದಿಗಳು ಆ ಎರಡು ಮೊಸಳೆಗಳನ್ನು ರಕ್ಷಿಸಿ ಅದೇ ಉದ್ಯಾನವನದೊಳಗಿನ ಬೇರೊಂದು ಜಲಮೂಲಕ್ಕೆ ಸ್ಥಳಾಂತರಿಸಿದರು ಎಂದು ಅಧಿಕಾರಿಗಳು ನಂತರ ಮಾಧ್ಯಮದವರಿಗೆ ಸ್ಪಷ್ಟಪಡಿಸಿದರು. ದೋಣಿ ವಿಹಾರಕ್ಕಾಗಿ ಸರೋವರದ ಬಳಿ ಕಾಯುತ್ತಿದ್ದ ಪ್ರವಾಸಿಗರು ಇದ್ದಕ್ಕಿದ್ದಂತೆ ಮೊಸಳೆಗಳನ್ನು ಗುರುತಿಸಿ ಬಿಬಿಪಿ ಸಿಬ್ಬಂದಿಗೆ ತಕ್ಷಣವೇ ಮಾಹಿತಿ ನೀಡಿದರು. ಆ ಸರೀಸೃಪಗಳು ಸರೋವರದಲ್ಲಿ ಮುಕ್ತವಾಗಿ ಈಜುವುದರೊಂದಿಗೆ, ಪ್ರವಾಸಿಗರು ಎಲ್ಲಿ ತಮ್ಮ ಮೇಲೆ ದಾಳಿ ಮಾಡುತ್ತವೆಯೋ ಅನ್ನೋ ಭಯದಿಂದ ಉದ್ಯಾನವನವನ್ನು ಬೇಗನೆ ತೊರೆಯಲು ಶುರು ಮಾಡಿದರು.
ಈ ಮೊಸಳೆಗಳು ಬೇರೆ ಕಡೆಯಿಂದ ನುಸುಳಿರಬಹುದು ಅಂತ ಹೇಳಿದ ಅಧಿಕಾರಿಗಳು
ಆದಾಗ್ಯೂ, ಉದ್ಯಾನವನದ ಸಿಬ್ಬಂದಿಗಳು ಆ ಕೊಳಕ್ಕೆ ಕೂಡಲೇ ಧಾವಿಸಿ, ಅಲ್ಲಿರುವ ಎಲ್ಲಾ ದೋಣಿಗಳನ್ನು ಹೊರ ತೆಗೆದರು ಮತ್ತು ತಕ್ಷಣ ಉದ್ಯಾನವನದಲ್ಲಿ ದೋಣಿ ವಿಹಾರವನ್ನು ಸ್ಥಗಿತಗೊಳಿಸಿದರು ಮತ್ತು ಉದ್ಯಾನವನದೊಳಗಿನ ಇತರ ಕೊಳಗಳಿಂದ ಮೊಸಳೆಗಳು ಈ ಬೋಟಿಂಗ್ ವ್ಯವಸ್ಥೆ ಇರುವ ಕೊಳಕ್ಕೆ ನುಸುಳಿರಬಹುದು ಎಂದು ಅಧಿಕಾರಿಗಳು ನಂತರ ಹೇಳಿದರು.
ಇದನ್ನೂ ಓದಿ: ಜಸ್ಟ್ 80 ರೂಪಾಯಿ ಇದ್ರೆ ಸಾಕು, ಈ ಸೂಪರ್ ಸ್ಥಳಕ್ಕೆ ನೀವು ಹೋಗ್ಬೋದು!
ಸಾರ್ವಜನಿಕರು ಮತ್ತು ಪ್ರವಾಸಿಗರ ಭಯವನ್ನು ಕೂಡಲೇ ಕಡಿಮೆ ಮಾಡಿದ ಬಿಬಿಪಿ ಕಾರ್ಯನಿರ್ವಾಹಕ ನಿರ್ದೇಶಕ ಸುನಿಲ್ ಪನ್ವಾರ್, ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಮತ್ತು ಈ ಮೊಸಳೆಗಳು ಹೆಚ್ಚು ಸಮಯದವರೆಗೆ ಸರೋವರದ ನೀರಿನಲ್ಲಿಯೇ ಉಳಿದಿದ್ದವು ಎಂದು ಹೇಳಿದರು.
"ಮೊಸಳೆಗಳು ನೀರಿನಿಂದ ಬೇಗನೆ ಹೊರಗೆ ಬರಲಿಲ್ಲ. ನಾವು ಅವುಗಳನ್ನು ರಕ್ಷಿಸಲು ಮತ್ತು ಉದ್ಯಾನದಲ್ಲಿರುವ ಇನ್ನೊಂದು ಸರೋವರಕ್ಕೆ ಇವುಗಳನ್ನು ಸ್ಥಳಾಂತರಿಸಲು ತಮ್ಮೆಲ್ಲಾ ಪ್ರಯತ್ನವನ್ನು ಮಾಡಿದರು. ಪಶುವೈದ್ಯರ ಸಹಾಯದಿಂದ ನಮ್ಮ ಸಿಬ್ಬಂದಿ ಕೆಲಸವನ್ನು ಮಾಡಿ ಮುಗಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ನಾವು ದೋಣಿ ವಿಹಾರವನ್ನು ನಿಲ್ಲಿಸಬೇಕಾಯಿತು" ಎಂದು ಪನ್ವಾರ್ ಹೇಳಿದರು.
ಮೊಸಳೆಗಳು ಸಾಮಾನ್ಯವಾಗಿ ದೋಣಿ ಮೇಲೆ ದಾಳಿ ಮಾಡೋದಿಲ್ವಂತೆ..
ಮೊಸಳೆಗಳು ಸಾಮಾನ್ಯವಾಗಿ ದೋಣಿಗಳ ಮೇಲೆ ದಾಳಿ ಮಾಡದಿದ್ದರೂ, ಮಕ್ಕಳು ಮತ್ತು ಯುವಕರು ದೋಣಿ ವಿಹಾರದ ಸಮಯದಲ್ಲಿ ನೀರನ್ನು ಚಿಮುಕಿಸುವಾಗ, ಆ ನೀರು ಮೊಸಳೆಗಳ ಮೇಲೆ ಬಿದ್ದು ಅವುಗಳಿಗೆ ಕಿರಿಕಿರಿ ಅಂತ ಅನ್ನಿಸಿ ಅವುಗಳು ಬೋಟ್ ಮೇಲೆ ದಾಳಿ ಮಾಡುವ ಸಾಧ್ಯತೆಗಳು ಇರುತ್ತೇವೆ ಅಂತ ಅಧಿಕಾರಿಗಳು ಹೇಳಿದರು.
ಇದನ್ನೂ ಓದಿ: ಚುನಾವಣೆಗಾಗಿ 45 ಗಂಟೆಯೊಳಗೆ ಮದುವೆ, ಎಲ್ಲವೂ ಅಧಿಕಾರಕ್ಕಾಗಿ!
ಉದ್ಯಾನದ ಜಲಮೂಲಗಳಲ್ಲಿ ಸುಮಾರು 10 ರಿಂದ 15 ಮೊಸಳೆಗಳು ವಾಸಿಸುತ್ತಿವೆ ಎಂದು ಬಿಬಿಪಿಯ ಇತರ ಹಿರಿಯ ಅಧಿಕಾರಿಗಳು ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದಾರೆ. "ಬೇಸಿಗೆಯ ಕಾರಣದಿಂದಾಗಿ, ಆ ಜಲಮೂಲಗಳಲ್ಲಿ ನೀರಿನ ಮಟ್ಟವು ಕಡಿಮೆಯಾಗಿದೆ, ಇದರಿಂದಾಗಿ ಈ ಉಭಯಚರಗಳು ನೀರನ್ನು ಹುಡುಕಿಕೊಂಡು ಇಲ್ಲಿಗೆ ಬಂದಿರಬಹುದು.
ಬಿಬಿಪಿಯಲ್ಲಿರುವ ಬೋಟಿಂಗ್ ಸರೋವರವು ವರ್ಷವಿಡೀ ನೀರನ್ನು ಹೊಂದಿರುವ ಏಕೈಕ ಸರೋವರವಾಗಿದೆ ಮತ್ತು ಅದಕ್ಕಾಗಿಯೇ ಈ ಮೊಸಳೆಗಳು ಇಲ್ಲಿಗೆ ಬಂದಿರಬಹುದು" ಎಂದು ಬಿಬಿಪಿ ಅಧಿಕಾರಿಯೊಬ್ಬರು ವಿವರಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ