ಐದು ಪೈಸೆಗೆ ಉಚಿತ ಬಿರಿಯಾನಿ, ಆಫರ್ ನೋಡಿ ಮುಗಿಬಿದ್ದ ಜನ!; ಮುಂದೇನಾಯ್ತು ಗೊತ್ತಾ?

ಮಧುರೈನಲ್ಲಿ ಹೊಸ ಬಿರಿಯಾನಿ ಹೊಟೇಲ್ ಒಂದು, ಐದು ಪೈಸೆಯ ನಾಣ್ಯ ತಂದವರಿಗೆ ಒಂದು ಪ್ಲೇಟ್‌ ಬಿರಿಯಾನಿ ಉಚಿತವಾಗಿ ನೀಡುವುದಾಗಿ ಘೋಷಿಸಿತ್ತು.

ಬಿರಿಯಾನಿ

ಬಿರಿಯಾನಿ

  • Share this:

ತಮಿಳುನಾಡಿನ ಮಧುರೈನಲ್ಲಿ ದೊಡ್ಡವರು ಮಾತ್ರವಲ್ಲ, ಮಕ್ಕಳು ಕೂಡ ಐದು ಪೈಸೆಯ ನಾಣ್ಯಗಳನ್ನು ಕೈಯಲ್ಲಿ ಹಿಡಿದು ಸರತಿಯ ಸಾಲಿನಲ್ಲಿ ನಿಂತಿದ್ದರು. ಹೋ, ಇದ್ಯಾವ ಕಾಲದ ಕತೆ..? ಐದು ಪೈಸೆ ನಾಣ್ಯದ ಚಲಾವಣೆ ನಿಂತು ದಶಕಗಳೇ ಕಳೆದವು, ಇಂದಿನ ಮಕ್ಕಳಂತೂ ಅದನ್ನು ನೋಡಿರಲಿಕ್ಕೇ ಇಲ್ಲ ಎನ್ನುತ್ತೀರಾ..? ಆದರೆ ಮಧುರೈನಲ್ಲಿ ಜನರು ಐದು ಪೈಸೆಯ ನಾಣ್ಯಗಳನ್ನು ಹಿಡಿದುಕೊಂಡು ಸರತಿಯ ಸಾಲಿನಲ್ಲಿ ನಿಂತಿದ್ದು ನಿಜ, ಇದು ನಡೆದದ್ದು ಯಾವುದೋ ಕಾಲದಲ್ಲಿ ಅಲ್ಲ, ಇತ್ತೀಚೆಗೆ..! ಹೌದು, ಮಧುರೈನಲ್ಲಿ ಹೊಸ ಬಿರಿಯಾನಿ ಹೊಟೇಲ್ ಒಂದು, ಐದು ಪೈಸೆಯ ನಾಣ್ಯ ತಂದವರಿಗೆ ಒಂದು ಪ್ಲೇಟ್‌ ಬಿರಿಯಾನಿ ಉಚಿತವಾಗಿ ನೀಡುವುದಾಗಿ ಘೋಷಿಸಿತ್ತು. ಅಸ್ತಿತ್ವ ಕಳೆದುಕೊಂಡು ಕಣ್ಮರೆಯಾಗಿದ್ದ ಐದು ಪೈಸೆ ನಾಣ್ಯಗಳು , ಜನರಿಗೆ ಅದೆಲ್ಲಿಂದ ಸಿಕ್ಕಿತೋ, ನೂರಾರು ಮಂದಿ ಐದು ಪೈಸೆಗಳನ್ನು ಹಿಡಿದುಕೊಂಡು ಹೊಟೇಲ್ ಮುಂದೆ ಉಚಿತ ಬಿರಿಯಾನಿ ತಿನ್ನಲು ಜಮಾಯಿಸಿದರು. ಇಲ್ಲಿ ಕೋವಿಡ್‌ ನಿಯಮಗಳು ಲೆಕ್ಕಕ್ಕೇ ಇರಲಿಲ್ಲ.


ತಮ್ಮ ಸುಕನ್ಯಾ ಬಿರಿಯಾನಿ ಸ್ಟಾಲ್‍ ಪ್ರಚಾರದ ಉದ್ದೇಶದಿಂದ, 5 ಪೈಸೆ ತಂದವರಿಗೆ ಉದ್ಘಾಟನಾ ಕೊಡುಗೆಯಾಗಿ ಒಂದು ಪ್ಲೇಟ್ ಬಿರಿಯಾನಿ ಉಚಿತವಾಗಿ ನೀಡುವುದಾಗಿ ಹೊಟೇಲ್‍ನವರು ಘೋಷಿಸಿದ್ದರು. ಆದರೆ ತಮ್ಮ ಈ ಘೋಷಣೆ ಇಷ್ಟೊಂದು ಗದ್ದಲ ಸೃಷ್ಟಿಸುತ್ತದೆ ಎನ್ನುವುದನ್ನು ಅವರು ಊಹಿಸಿರಲಿಲ್ಲ. ಸೆಲ್ಲೂರು ಪ್ರದೇಶದಲ್ಲಿ ಐದು ಪೈಸೆ ಬಿರಿಯಾನಿ ಕೊಡುಗೆಯ ಪೋಸ್ಟರ್ ಓದಿ, ಹೊಟೇಲ್ ಮುಂದೆ ಐದು ಪೈಸೆ ನಾಣ್ಯ ಹಿಡಿದುಕೊಂಡು 300ಕ್ಕೂ ಹೆಚ್ಚು ಮಂದಿ ಗುಂಪು ಸೇರಿದ್ದರು. ಯಾರಿಗೂ ಕೋವಿಡ್ ನಿಯಮಗಳ ಬಗ್ಗೆ ಚಿಂತೆ ಇರಲಿಲ್ಲ. ಈ ಸನ್ನಿವೇಶವನ್ನು ಹೇಗೆ ನಿಯಂತ್ರಿಸಲು ಬೇರೆ ದಾರಿ ಕಾಣದೆ, ಮಾಲೀಕರು ಹೊಟೇಲ್ ಬಾಗಿಲನ್ನು ಮುಚ್ಚಬೇಕಾಯಿತು. ಅದನ್ನು ಕಂಡು ಬಿರಿಯಾನಿ ಆಸೆಗೆ ಐದು ಪೈಸೆ ಹುಡುಕಿ ತಂದಿದ್ದ ಜನ ಸುಮ್ಮನಿರುತ್ತಾರಾ? ತಮಗೆ ಬಿರಿಯಾನಿ ಬೇಕೆ ಬೇಕು ಎಂದು ಗಲಾಟೆ ಮಾಡತೊಡಗಿದರು.


ಈ ಬಗ್ಗೆ ಪೊಲೀಸರಿಗೆ ದೂರು ಹೋಯಿತು. ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಸೇರಿದಂತೆ ಯಾವುದೇ ಕೋವಿಡ್ -19 ನಿಯಮಗಳ ಗೊಡವೆಯೇ ಇಲ್ಲದವರಂತೆ ಉಚಿತ ಬಿರಿಯಾನಿ ತಿನ್ನಲು ಮುಗಿಬಿದ್ದಿರುವುದನ್ನು ನೋಡಿ ಸ್ವತಃ ಪೊಲೀಸರೇ ದಂಗಾದರು.


ಕೋವಿಡ್-19 ಸಾಂಕ್ರಾಮಿಕ ಕಾಯಿಲೆ ಹಬ್ಬಿರುವ ಈ ಸಮಯದಲ್ಲಿ ಗುಂಪುಗೂಡುವುದು ನಿಷಿದ್ಧ ಎಂಬುವುದನ್ನು ಜನ ನೆನಪಿಟ್ಟುಕೊಂಡಿರುವುದು ಪಕ್ಕಕಿರಲಿ, ವಿಚಿತ್ರವೆಂದರೆ, ಐದು ಪೈಸೆ ನಾಣ್ಯಗಳನ್ನು ತಂದರೂ, ಬಿರಿಯಾನಿ ನೀಡದೆ ಮೋಸ ಮಾಡಿದ್ದಾರೆ ಎಂದು ಗುಂಪಿನಲ್ಲಿ ಇದ್ದ ಕೆಲವರು ದೂರಿದ್ದಾರೆ. ಕಡ್ಡಾಯವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಜನರಿಗೆ ಸಲಹೆ ನೀಡಿ, ಅಂತೂ ಇಂತೂ ಪೊಲೀಸರು ಗುಂಪನ್ನು ಚದುರಿಸಿದರು.


First published: