Success Story: ಅಂದು ಕೋವಿಡ್‌ ವೇಳೆ ಕೆಲಸ ಕಳ್ಕೊಂಡ್ರು, ಇಂದು ಕೇಟರಿಂಗ್ ಮಾಡಿ ಸಕ್ಸಸ್ ಆದ್ರು! ಇದು ಸಾಧಕ ದಂಪತಿಯ ಸಾಹಸದ ಕಥೆ

ಎರಡು ತಿಂಗಳ ಕಾಲ ದೆಹಲಿಯ ಬೀದಿಗಳಲ್ಲಿ ಅದೇ ಕಾರಿನಲ್ಲಿ ವಾಸಿಸಿದರು ಈ ದಂಪತಿ. ದಿನದ ಮೇಲೆ ಕೆಲಸ ಹುಡುಕುತಿದ್ದರು, ಹಸಿವಾದರೆ ಬಂಗ್ಲಾ ಸಾಹೆಬ್ ಮತ್ತು ರಖಬ್ ಘನಿ ಗುರುದ್ವಾರಗಳಲ್ಲಿ ಉಣ್ಣುತ್ತಿದ್ದರು. ಸ್ನಾನಶೌಚಾದಿಗಳಿಗೆ ಸಾರ್ವಾಜನಿಕ ಶೌಚಾಲಗಳನ್ನು ಬಳಸುತ್ತಿದ್ದರು. ಇದೀಗ ಕ್ಯಾಟರಿಂಗ್ ಮಾಡಿ ಯಶಸ್ಸು ಕಂಡಿದ್ದಾರೆ,

ಸಾಧಕ ದಂಪತಿ ಕರಣ್-ಅಮೃತಾ

ಸಾಧಕ ದಂಪತಿ ಕರಣ್-ಅಮೃತಾ

 • Share this:
  ದೆಹಲಿಯ (Delhi) ಟಾಲ್ಕಟೋರಾ ಸ್ಟೇಡಿಯಂನ (Talkatora Stadium) ಬಳಿ ಇರುವ ಜಂಕ್ಷನ್‍ನಲ್ಲಿ(Junction)  ಪ್ರತೀ ದಿನ ಮಧ್ಯಾಹ್ನ 12.30 ರಿಂದ 4 ಗಂಟೆಯ ವರೆಗೆ ನಿಲ್ಲಿಸಿರುವ ಆಲ್ಟೋ ಕಾರೊಂದರ (Alto Car) ಬಳಿ ಒಂದಿಷ್ಟು ಜನ ಸಂದಣಿ ಇರುತ್ತದೆ. ಸುತ್ತಲೂ ಘಂ ಎನ್ನುವ ಬಿಸಿ ಬಿಸಿ ರಾಜ್‍ಮಾ, ಚೋಲೆ, ಖಡಿ ಅನ್ನ ಮತ್ತು ತಂಪಾದ ಮಜ್ಜಿಗೆಯ ಪರಿಮಳ. ಸ್ವಚ್ಛವಾದ ಏಪ್ರನ್ (Apron) ತೊಟ್ಟು, ಈ ಎಲ್ಲಾ ಖಾದ್ಯಗಳನ್ನು ನೆರೆದ ಗ್ರಾಹಕರಿಗೆ (Customers) ಬಡಿಸುವ ದಂಪತಿ (Couple) ಕೂಡ ಅಲ್ಲಿ ಕಾಣ ಸಿಗುತ್ತಾರೆ. ಅವರೇ, ಕರಣ್ ಮತ್ತು ಅಮೃತಾ. ನಿತ್ಯವೂ ಕನಿಷ್ಟ 100 ಮಂದಿ ಗ್ರಾಹಕರು, ಈ ದಂಪತಿ ಮಾರುವ ಖಾದ್ಯಗಳ ರುಚಿ ಉಣ್ಣುತ್ತಾರೆ. ಆ ಅವಕಾಶ ಸಿಗದೇ ನಿರಾಶರಾಗಿ ಮರಳುವವರೂ ಉಂಟು. ವಾರದ ಆರು ದಿನ ಈ ದೃಶ್ಯ ಆ ಜಾಗದಲ್ಲಿ ಸಾಮಾನ್ಯ. ಭಾನುವಾರ ರಜಾ ದಿನ.

  ಸಾಧಕ ದಂಪತಿ ಕರಣ್-ಅಮೃತಾ

  ಯಾರಿದು ಕರಣ್ ಮತ್ತು ಅಮೃತಾ? ಏನಿವರ ಕಥೆ ಅಂತೀರಾ? ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಬದುಕಿಗೆ ಆಸರೆಯಾಗಿದ್ದ ಉದ್ಯೋಗವನ್ನು ಕಳೆದುಕೊಂಡು, ಸ್ವಂತ ಉದ್ಯೋಗ ಸೃಷ್ಟಿಸಿಕೊಂಡು ಬದುಕು ಕಟ್ಟಿಕೊಂಡ ಜೋಡಿ ಇದು.  ಕೋವಿಡ್ ಸಂದರ್ಭದಲ್ಲಿ ಕೆಲಸಕ್ಕೆ ಕುತ್ತು

  ಕರಣ್, ಬಹಳಷ್ಟು ವರ್ಷಗಳವರೆಗೆ ಲೋಕಸಭಾ ಸದಸ್ಯರೊಬ್ಬರ ಕಾರಿನ ಚಾಲಕರಾಗಿ ಕೆಲಸ ಮಾಡಿದ್ದರು. ಆದರೆ ಕೋವಿಡ್ ಸಾಂಕ್ರಾಮಿಕ ಅವರ ಉದ್ಯೋಗವನ್ನು ಕಸಿದುಕೊಂಡಿತು. ಕೇವಲ 12 ನೇ ತರಗತಿಯ ವರೆಗೆ ಮಾತ್ರ ವಿದ್ಯಾಭ್ಯಾಸ ಮಾಡಿದ್ದ ಕರಣ್‍ಗೆ, ಮನೆಯ ಹಣಕಾಸಿನ ಸಮಸ್ಯೆಗಳ ಕಾರಣದಿಂದಾಗಿ ಓದನ್ನು ಮುಂದುವರೆಸಲು ಸಾಧ್ಯವಾಗಿರಲಿಲ್ಲ. ಆಗ ದುಡಿದು ಹಣ ಗಳಿಸುವುದೇ ಅವರ ಆದ್ಯತೆಯಾಗಿತ್ತು.

  ಇದನ್ನೂ ಓದಿ:

  ಕೆಲಸ, ಮನೆ ಎರಡೂ ಹೋಯ್ತು

  2015 ರಲ್ಲಿ ಕರಣ್ ಮತ್ತು ಅಮೃತಾರ ಮದುವೆ ನಡೆಯಿತು. ನಂತರದ ವರ್ಷಗಳಲ್ಲಿ ಕರಣ್ ಹಲವಾರು ಕೆಲಸಗಳನ್ನು ಬದಲಾಯಿಸಿದರು. ಲೋಕ ಸಭಾ ಸದಸ್ಯರ ಬಳಿ ಕೆಲಸ ಮಾಡುತ್ತಿದ್ದಾಗ ಕರಣ್‍ಗೆ ತಿಂಗಳಿಗೆ 14 ಸಾವಿರ ಸಂಬಳದ ಜೊತೆ, ಇರಲು ವಸತಿ ಸೌಲಭ್ಯ ನೀಡಲಾಗಿತ್ತು ಮತ್ತು ಇತರ ದಿನನಿತ್ಯದ ಅಗತ್ಯಗಳನ್ನು ಪೂರೈಸಲಾಗುತ್ತಿತ್ತು. ಆದರೆ ಕೊರೋನಾ ಸಾಂಕ್ರಾಮಿಕ ದಾಳಿ ಮಾಡಿದ್ದೇ ತಡ, ರಾತ್ರಿ ಬೆಳಗಾಗುವುದರೊಳಗೆ ಕರಣ್ ತಲೆ ಮೇಲಿನ ಸೂರನ್ನು ಮತ್ತು ಆದಾಯದ ಮೂಲವನ್ನು ಕಳೆದುಕೊಂಡರು.

  “ಲೋಕಸಭಾ ಸದಸ್ಯರು ಆದಷ್ಟು ಬೇಗ ಹೊರಟು ಹೋಗುವಂತೆ ಒತ್ತಾಯಿಸಿದರು ಮತ್ತು ಮನೆ ಖಾಲಿ ಮಾಡಲು ಒಂದೆರಡು ದಿನಗಳ ಅವಕಾಶ ಮಾತ್ರ ನೀಡಿದರು. ನಮಗೆ ಹೋಗಲು ಎಲ್ಲೂ ಜಾಗವಿರಲಿಲ್ಲ” ಎಂದು ಆ ಕಹಿ ಘಟನೆಯನ್ನು ನೆನೆಸಿಕೊಳ್ಳುತ್ತಾರೆ ಅವರು.

  ಕಾರು ಉಡುಗೊರೆಯಾಗಿ ಕೊಟ್ಟ ಮಾವ

  2016 ರಲ್ಲಿ ಮನೆಯವರ ಜೊತೆ ವೈಯುಕ್ತಿಕ ಮತ್ತು ಆಸ್ತಿಗೆ ಸಂಬಂಧಿಸಿದ ಕಾರಣಗಳಿಗೆ ಜಗಳ ಮಾಡಿಕೊಂಡು ದೂರವಾಗಿದ್ದರಿಂದ, ಕರಣ್ ಅವರಿಂದ ಸಹಾಯ ಕೇಳುವುದು ಸಾಧ್ಯವಿರಲಿಲ್ಲ. ಅತ್ತೆ ಮನೆಯವರು ಆಶ್ರಯ ಕೊಟ್ಚರೂ ಕೂಡ, ಕೆಲಸದ ಬಗೆಗಿನ ಅನಿಶ್ಚಿತತೆಯ ಕಾರಣದಿಂದ ಅಲ್ಲಿ ಹೆಚ್ಚು ದಿನ ಇರುವುದು ಸಾಧ್ಯವಿರಲಿಲ್ಲ. ಆದರೆ, ಕರಣ್ ಅವರ ಮಾವ ತಮ್ಮ ಕಾರನ್ನು ಅವರಿಗೆ ಬಳಸಲು ನೀಡಿದರು.

  ಎರಡು ತಿಂಗಳು ಕಾರಿನಲ್ಲೇ ದಂಪತಿ ವಾಸ!

  ಎರಡು ತಿಂಗಳ ಕಾಲ ದೆಹಲಿಯ ಬೀದಿಗಳಲ್ಲಿ ಅದೇ ಕಾರಿನಲ್ಲಿ ವಾಸಿಸಿದರು ಈ ದಂಪತಿ. ದಿನದ ಮೇಲೆ ಕೆಲಸ ಹುಡುಕುತಿದ್ದರು, ಹಸಿವಾದರೆ ಬಂಗ್ಲಾ ಸಾಹೆಬ್ ಮತ್ತು ರಖಬ್ ಘನಿ ಗುರುದ್ವಾರಗಳಲ್ಲಿ ಉಣ್ಣುತ್ತಿದ್ದರು. ಸ್ನಾನಶೌಚಾದಿಗಳಿಗೆ ಸಾರ್ವಾಜನಿಕ ಶೌಚಾಲಗಳನ್ನು ಬಳಸುತ್ತಿದ್ದರು. ನಿತ್ಯವೂ ವಿಭಿನ್ನ ಸ್ಥಳಗಳಲ್ಲಿ, ತಮ್ಮ ಕಾರನ್ನು ನಿಲ್ಲಿಸಿ ರಾತ್ರಿ ಕಳೆಯುತ್ತಿದ್ದರು.

  ಕ್ಯಾಟರಿಂಗ್ ಮಾಡುವ ಸಲಹೆ ಕೊಟ್ಟ ಅಮೃತಾ

  ಪ್ರತಿ ರಾತ್ರಿಯನ್ನು ಅಳುತ್ತಾ ಮತ್ತು ತಮ್ಮ ವಿಧಿಯನ್ನು ಹಳಿಯುತ್ತಾ ಕಳೆದಯುತ್ತಿದ್ದ ಅಮೃತಾಗೆ ಒಂದು ದಿನ, ಹೀಗೆ ಅಲೆಮಾರಿಗಳಂತೆ ಬದುಕನ್ನು ಮುಂದುವರೆಸುವುದು ಸಾಧ್ಯವಿಲ್ಲ ಎಂಬುವುದು ಅರಿವಾಯಿತು. “ನಾವು ಏನಾದರೂ ಮಾಡಬೇಕಿತ್ತು, ನಾನು ಯಾವಾಗಲೂ ಟ್ಯೂಷನ್ ತರಗತಿ ನಡೆಸುವುದರ ಬಗ್ಗೆ ಅಥವಾ ಪಾರ್ಟ್ ಟೈಮ್ ಕೆಲಸ ಮಾಡುವುದರ ಬಗ್ಗೆ ಹೇಳುತ್ತಿದ್ದೆ. ಆದರೆ ಒಂದು ರಾಜಕಾರಣಿಯ ಮನೆಯಲ್ಲಿ ಕೆಲಸ ಮಾಡುವುದಕ್ಕೆ, ಅದರದ್ದೇ ಆದ ಮಿತಿಗಳಿದ್ದವು. ನಾನು ನಾವೊಂದು ಆಹಾರ ಉದ್ಯಮ ನಡೆಸೋಣ ಎಂದು ಸಲಹೆ ನೀಡಿದೆ” ಎನ್ನುತ್ತಾರೆ ಅಮೃತಾ.

  ‘ಅಮೃತಾ ಜೀ ಕೆ ರಾಜ್ಮಾ ಚಾವಲ್ ‘

  ಚೋಲೆ, ರಾಜ್ಮಾ, ಖಡಿ , ಪಕೋಡ ಮತ್ತು ಅನ್ನ ತಯಾರಿಸಿ ಮಾರುವ ಸಲಹೆ ನೀಡಿದ್ದು ಅಮೃತಾ. ಪತ್ನಿಯ ಸಲಹೆಯನ್ನು ಕರಣ್ ಒಪ್ಪಿದರು. ಬಂಡವಾಳಕ್ಕಾಗಿ ತಮ್ಮಲ್ಲಿದ್ದ ಅಲ್ಮೇರಾ, ಕಬೋರ್ಡ್ ಮತ್ತು ಇನ್ನಿತರ ವಸ್ತುಗಳನ್ನು ಅವರು ಮಾರಿದರು, ಕೆಲವು ಸ್ನೇಹಿತರು ಮತ್ತು ಅಮೃತಾಳ ತಂದೆ ಸ್ಪಲ್ಪ ಹಣ ಸಹಾಯ ಮಾಡಿದರು. ಅವೆಲ್ಲವನ್ನು ಅಡುಗೆ ಸಾಮಾಗ್ರಿ ಮತ್ತು ಪಾತ್ರೆಪಗಡಿಗಳನ್ನು ಕೊಳ್ಳಲು ಬಳಸಿಕೊಂಡರು ದಂಪತಿ. ಸಾಲ ಪಡೆದು, ಅಡುಗೆ ತಯಾರಿಸಲು, ಪಟ್ಟಣದ ಮಂಡಿ ಹೌಸ್ ಬಳಿ ಸ್ಥಳವನ್ನು ಬಾಡಿಗೆ ಪಡೆದರು.

  ಪ್ರಾರಂಭದ ದಿನಗಳನ್ನು ನೆನೆದ ದಂಪತಿ

  ಬೆಳಗ್ಗೆ 3.30 ಕ್ಕೆ ಎದ್ದು ಅಡುಗೆ ತಯಾರಿಸಿ, ಅದನ್ನು ಮಾರಲು 10 ಗಂಟೆಗೆ ಮನೆ ಬಿಡುತ್ತಿದ್ದರು ದಂಪತಿ. “ನಾವು ಗ್ರಾಹಕರಿಗಾಗಿ ಹಲವಾರು ಜಾಗಗಳನ್ನು ಹುಡುಕಿದೆವು. ಲಾಕ್‍ಡೌನ್ ನಿಯಮಾವಳಿಗಳು ನಮ್ಮ ಕಷ್ಟಗಳನ್ನು ಹೆಚ್ಚು ಮಾಡಿತು. ಆದರೆ ಒಂದು ತಿಂಗಳ ಬಳಿಕ, ಟಾಲ್ಕಟೋರ ಸ್ಟೇಡಿಯಂನ ಬಳಿ ನಮಗೆ ನಿರೀಕ್ಷಿತ ಗ್ರಾಹಕರು ಸಿಗತೊಡಗಿದರು, ಮತ್ತು ನಾವು ಇಲ್ಲಿಯೇ ಆಹಾರ ಮಾರಲು ನಿರ್ಧರಿಸಿದೆವು” ಎಂದು ತಮ್ಮ ಆಹಾರ ಉದ್ಯಮದ ಆರಂಭದ ದಿನಗಳನ್ನು ನೆನಸಿಕೊಳ್ಳುತ್ತಾರೆ ಅಮೃತಾ.

  ಈ ದಂಪತಿ, ಕೆಲವೇ ಕೆಲವು ಖಾದ್ಯಗಳನ್ನು ಮಾರುತ್ತಾರೆ ಮತ್ತು ದಿನಕ್ಕೆ ಅದಕ್ಕಾಗಿ ಅವರು ಖರ್ಚು ಮಾಡುವ ಮೊತ್ತ 1,600 ರೂ. “ ನಮ್ಮ ಉದ್ಯಮದ ಪ್ರಚಾರ ಮಾಡಲು ನಾವು ಮಾರ್ಕೆಟಿಂಗ್ ಬಜೆಟ್‍ಗಳನ್ನು ಹೊಂದಿಲ್ಲ. ಉದ್ಯಮಕ್ಕೆ ‘ಅಮೃತಾ ಜೀ ಕೆ ರಾಜ್ಮಾ ಚಾವಲ್ ‘ ಎಂದು ಹೆಸರಿಟ್ಟಿದ್ದೇವೆ. ನಾವು ಊಟದ ಪ್ಲೇಟ್ ಒಂದಕ್ಕೆ 30 ರೂ. ನಿಂದ 50 ರೂ.ಗಳ ವರೆಗೆ ದರ ವಿಧಿಸಿದ್ದೇವೆ” ಎನ್ನುತ್ತಾರೆ ಕರಣ್.

  ಸ್ವಚ್ಛತೆ ಹಾಗೂ ಸುರಕ್ಷತೆಗೆ ಒತ್ತು

  ಗ್ರಾಹಕರಿಗೆ ಕುಳಿತುಕೊಳ್ಳಲು ಜಾಗದ ವ್ಯವಸ್ಥೆ ಇಲ್ಲದ ಕಾರಣ ಈ ಉದ್ಯಮ ಯಶಸ್ವಿಯಾಗದು ಎಂಬುವುದು ಕರಣ್ ಮತ್ತು ಅಮೃತಾ ಭಾವನೆಯಾಗಿತ್ತು. ಆದರೆ ಅವರು ಕೋವಿಡ್ 1 9 ಕಾರಣದಿಂದ, ಸ್ವಚ್ಚತೆ ಮತ್ತು ಸುರಕ್ಷತೆಯನ್ನು ಕಾಪಾಡಿಕೊಂಡಿದ್ದು, ಗ್ರಾಹಕ ಮೆಚ್ಚುಗೆಗೆ ಕಾರಣವಾಯಿತು ಮತ್ತು ಉದ್ಯಮವು ಕೂಡ ಯಶಸ್ವಿಯಾಗಿ ನಡೆಯುತ್ತಿದೆ.

  ಬ್ಲಾಗರ್‌ನಿಂದಾಗಿ ಫೇಮಸ್ ಆದ ದಂಪತಿ

  ಈ ಉದ್ಯಮವನ್ನು ಆರಂಭಿಸಿದ ಕೆಲವು ದಿನಗಳ ಬಳಿಕ, ಕರಣ್ ದುವಾ ಎಂಬ ಸಾಮಾಜಿಕ ಮಾಧ್ಯಮ ಬ್ಲಾಗರ್ ಒಬ್ಬರು ತಮ್ಮ ದಿಲ್ ಸೆ ಫುಡ್ಡಿಯಲ್ಲಿ ಈ ದಂಪತಿಯ ಕಥೆಯನ್ನು ಪ್ರಕಟಿಸಿದರು. ಈ ಘಟನೆ ‘ಅಮೃತಾ ಜೀ ಕೆ ರಾಜ್ಮಾ ಚಾವಲ್’ನ ಯಶಸ್ಸಿಗೆ ಅನುಕೂಲ ಮಾಡಿಕೊಟ್ಟಿತು. ಬ್ಲಾಗರ್ ಹಾಕಿದ ವಿಡಿಯೋ ವೈರಲ್ ಆಯಿತು ಮತ್ತು ‘ಅಮೃತಾ ಜೀ ಕೆ ರಾಜ್ಮಾ ಚಾವಲ್’ ನಲ್ಲಿ ಆಹಾರ ಸವಿಯಲು ದೆಹಲಿಯ ಬೇರೆ ಬೇರೆ ಜಾಗಗಳಿಂದ ಜನರು ಬರಲು ಆರಂಭಿಸಿದರು.

  ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

  ಅಮೃತಾ ಮತ್ತು ಕರಣ್‍ಗೆ ಸಾಮಾಜಿಕ ಮಾಧ್ಯಮದಿಂದ ಹೇರಳವಾದ ಬೆಂಬಲ ಸಿಗುತ್ತಿದೆ. ಮಾರ್ಕೆಟಿಂಗ್ ಬಜೆಟ್ ಇಲ್ಲದೆಯೇ ಪ್ರಚಾರ ಪಡೆದ ಅದೃಷ್ಟ ಅವರದ್ದು. ಸಾಮಾಜಿಕ ಮಾಧ್ಯಮದ ಬ್ಲಾಗರ್‍ಗಳು ಸಹಾಯ ಮಾಡ ತೊಡಗಿದರು. ನಿಧಾನಕ್ಕೆ ದಿನಕ್ಕೆ 320 ರೂ ಲಾಭವಾಗತೊಡಗಿತು, ಅದು 450 ರೂ.ಗೆ ಮತ್ತು ಕ್ರಮೇಣ 800 ರೂ. ಗೆ ಏರಿತು.

  ‘ಅಮೃತಾ ಜೀ ಕೆ ರಾಜ್ಮಾ ಚಾವಲ್’ ಖಾಯಂ ಗಿರಾಕಿಗಳ ಜೊತೆ ನಿತ್ಯವೂ ಹೊಸ ಹೊಸ ಗ್ರಾಹಕರು ಭೇಟಿ ನೀಡುತ್ತಾರೆ. ಬಂದವರು ಆಹಾರ ಸವಿಯುವುದು ಮಾತ್ರವಲ್ಲ, ತಮ್ಮ ಸ್ನೇಹಿತರಿಗೂ ಭೇಟಿ ನೀಡುವಂತೆ ಹಾಗೂ ದಂಪತಿಗೆ ಬೆಂಬಲ ನೀಡುವಂತೆ ಸಲಹೆ ಕೊಟ್ಟಿರುವ ಪ್ರಕರಣಗಳು ಕೂಡ ಇವೆ. ರಾಜ್ಮಾ ಮತ್ತು ಅನ್ನ ಹಾಗೂ ಖಡಿ ಪಕೋಡ ಇಲ್ಲಿನ ಜನಪ್ರಿಯ ಖಾದ್ಯ.

  ಇದು ಪಾಲುದಾರಿಕೆ

  ಇಷ್ಟೆಲ್ಲಾ ಸಾಧನೆ ಮಾಡಿದರೂ, ಕರಣ್ ಮತ್ತು ಅಮೃತಾರ ಉದ್ಯಮ ಸಂಕಷ್ಟದಲ್ಲಿದೆ. ಓಮಿಕ್ರಾನ್ ಹಾವಳಿ ಆರಂಭವಾದಾಗ ಅವರ ರಾಜ್ಮಾ ಅನ್ನ ಮಾರಾಟ ಕುಸಿಯಿತು. ಇದೀಗ ವ್ಯಾಪಾರವನ್ನು ಸರಿದೂಗಿಸಲು ಅವರು ಹೊಸ ಮೆನುವನ್ನು ಆರಂಭಿಸುವ ಯೋಜನೆ ಹೊಂದಿದ್ದಾರೆ. ಶೀಘ್ರದಲ್ಲೇ ಶಾಹಿ ಪನೀರ್ ಮತ್ತು ಥಾಲಿಯನ್ನು ಪರಿಚಯಿಸುವ ಆಶಯ ಅವರಿಗಿದೆ. ತಮ್ಮ ಉದ್ಯಮವನ್ನು ಅಭಿವೃದ್ಧಿಪಡಿಸುವ ಮತ್ತು ಗ್ರಾಹಕರಿಗೆ ಆಸನದ ವ್ಯವಸ್ಥೆ ಮಾಡುವ ಯೋಜನೆಯನ್ನು ಕೂಡ ಅವರು ಹೊಂದಿದ್ದಾರೆ.

  ಇದನ್ನೂ ಓದಿ:

  ಅಮೃತಾ ಕಷ್ಟದ ಸಮಯದಲ್ಲಿ ನನ್ನ ಕೈ ಬಿಡಲಿಲ್ಲ, ಜೊತೆಯಾಗಿ ನಿಂತಳು.ಈ ಸಂಕಷ್ಟ ನಮ್ಮ ನಡುವಿನ ಅನುಬಂಧವನ್ನು ಇನ್ನಷ್ಟು ಗಟ್ಟಿಯಾಗಿಸಿತು ಎಂದು ಹೆಂಡತಿಯ ಬಗ್ಗೆ ಕರಣ್ ಅಭಿಮಾನದಿಂದ ನುಡಿದರೆ, “ ಇದು ಒಂದು ಪಾಲುದಾರಿಕೆ ಮತ್ತು ನಮಗೆ ಪರಸ್ಪರರ ಅಗತ್ಯವಿದೆ. ನಾವಿಬ್ಬರು ಒಂದು ತಂಡವಾಗಿ ಕೆಲಸ ಮಾಡಬೇಕು ಮತ್ತು ಜೊತೆಯಾಗಿ ಯಶಸ್ಸು ಪಡೆಯಬೇಕು” ಎನ್ನುತ್ತಾರೆ ಅಮೃತಾ.
  Published by:Annappa Achari
  First published: