ಸಾಮಾನ್ಯವಾಗಿ ಎಲ್ಲರಿಗೂ ಮನೆ ಕಟ್ಟಬೇಕೆಂಬ ಆಸೆ ಇದ್ದೇ ಇರುತ್ತದೆ. ಆದರೆ, ಕೆಲವರು ಇಂತಹ ಭೌತಿಕ ಆಸೆಗಳಿಗಿಂತ ಭಿನ್ನವಾಗಿ ಆಲೋಚಿಸುತ್ತಾರೆ. ಸಮಾಜದ ಪ್ರತಿ ಒಳ್ಳೆಯದೇನಾದರೂ ನಿರ್ಮಾಣ ಮಾಡಬೇಕೆಂದು ಕೆಲವರು ಇಷ್ಟಪಟ್ಟರೆ ಇನ್ನೂ ಕೆಲವರು ನಮ್ಮ ಸುತ್ತಮುತ್ತಲಿನ ಪರಿಸರ, ಹಸಿರು, ಕಾಡು ಹೀಗೆ ಪ್ರಕೃತಿಗಾಗಿ (Nature) ತಮ್ಮ ಕೊಡುಗೆ ನೀಡುವ ಬಯಕೆ ಹೊಂದಿರುತ್ತಾರೆ. ಭಾರತದಲ್ಲೂ ಇಂತಹ ವ್ಯಕ್ತಿಗಳು ಅಲ್ಲಲ್ಲಿ ಕಾಣಸಿಗುತ್ತಾರೆ.ಇಂದು ನಾವು ಈ ಲೇಖನದ ಮೂಲಕ ಅಂತಹುದ್ದೇ ಒಂದು ದಂಪತಿಯ ಕುರಿತು ಹೇಳುತ್ತಿದ್ದೇವೆ. ಈ ದಂಪತಿಯದ್ದು ((Couple) ಪರಿಸರ ಬಗ್ಗೆ ಕಾಳಜಿ ಅಪಾರ. ಅದರಲ್ಲೂ ವಿಶೇಷವಾಗಿ ಕಾಡುಗಳೆಂದರೆ (Forest) ಇವರಿಗೆ ಎಲ್ಲಿಲ್ಲದ ಪ್ರೀತಿ.
ಕಾಡು ಪ್ರಾಣಿಗಳು ಸ್ವಚ್ಛಂದವಾಗಿ ಓಡಾಡುವುದು, ದಟ್ಟ ಹಸಿರಿನ ವನ್ಯರಾಶಿ, ನೀರಿನ ದಾಹ ತಣಿಸಲು ಅಲ್ಲಲ್ಲಿ ಹಳ್ಳಗಳ ಉಪಸ್ಥಿತಿ ಹೀಗೆ ಸವಿಸ್ತಾರವಾದ ಕಾಡಿನ ಕನಸು ಕಂಡ ದಂಪತಿಗಳಿವರು.
ಕಾಡು ಪ್ರಾಣಿಗಳಿಗಾಗಿಯೇ ಮುಡಿಪು
ಈ ಬಗ್ಗೆ ಈ ಜೋಡಿಗೆ ಅದೆಷ್ಟು ಆಸಕ್ತಿ ಹಾಗೂ ಶೃದ್ಧೆ ಇತ್ತೆಂದರೆ ಅವರು ನಾಡನ್ನು ತೊರೆದು ಕಾಡಲ್ಲಿ ನೆಲೆಸಿದರು. ಹಾಗಂತ, ಅವರು ಅಧಿಕೃತವಾದ ಕಾಡಿನಲ್ಲಿ ಜೀವಿಸಲಿಲ್ಲ, ಬದಲಾಗಿ ಕಾಡಿನ ಪಕ್ಕದಲ್ಲಿ ವಾಸಯೋಗ್ಯವಾದ ಭೂಮಿಯನ್ನು ಖರೀದಿಸಿ ಅದನ್ನು ಕಾಡು ಪ್ರಾಣಿಗಳಿಗಾಗಿಯೇ ಮುಡಿಪಾಗಿಡಲು ನಿರ್ಧರಿಸಿದರು.
ಹಾಯಾಗಿ ದೆಹಲಿಯಲ್ಲಿದ್ದವರಿಗೆ ಹೀಗೇಕೆ ಯೋಚನೆ ಬಂತು?
ಹೌದು, ಆದಿತ್ಯ ಸಿಂಗ್ ಮತ್ತು ಪೂನಂ ದಂಪತಿಯು ಇದರ ಮುಖ್ಯ ಪಾತ್ರಧಾರಿಗಳು. ಆದಿತ್ಯ ಸಿಂಗ್ ಅವರು ಭಾರತೀಯ ನಾಗರಿಕ ಸೇವೆಯಲ್ಲಿ ಅಧಿಕಾರಿಯಾಗಿ ಕೆಲಸ ಮಾಡಿದ್ದು ನಿವೃತ್ತಿಯ ನಂತರ ಹಾಯಾಗಿ ದೆಹಲಿಯಲ್ಲಿ ವಾಸವಾಗಿದ್ದರು.
ಮೊದಲಿನಿಂದಲೂ ಈ ಇಬ್ಬರೂ ಸತಿ-ಪತಿಗಳಿಗೆ ಪ್ರಕೃತಿ, ಕಾಡು, ವನ್ಯಜೀವಿಗಳೆಂದರೆ ಅಚ್ಚುಮೆಚ್ಚು. ಆಗಾಗ ಈ ದಂಪತಿಯು ವನ್ಯಪ್ರವಾಸ ಮಾಡುತ್ತಿತ್ತು. ಹೀಗೊಂದು ಪ್ರವಾಸದಲ್ಲಿ ಪೂನಂ ಅವರು ಗುಡ್ಡದ ತುದಿಯ ಮೇಲೆ ಒಮ್ಮೆ ಒಂದು ಹೆಣ್ಣು ಹುಲಿ ಅದರ ಮೂರು ಮರಿಗಳೊಂದಿಗೆ ಚಲಿಸುತ್ತಿರುವುದನ್ನು ಗಮನಿಸಿದರು.
ರೋಗಿ ಬಯಸಿದ್ದು ಹಾಲು-ಅನ್ನ, ವೈದ್ಯರು ಹೇಳಿದ್ದು ಹಾಲು-ಅನ್ನ
ಅವರಿಗೆ ಈ ದೃಶ್ಯ ಮನಸ್ಸಿಗೆ ಎಷ್ಟು ಸಂತಸ ಹಾಗೂ ತೃಪ್ತಿ ತಂದಿತ್ತೆಂದರೆ ಅವರು ಕೂಡಲೇ ತಮ್ಮ ಪತಿ ಆದಿತ್ಯ ಅವರನ್ನು ಕುರಿತು ನಾವು ರಣಥಂಬೋರ್‌ನಲ್ಲಿ ಬಂದು ನೆಲೆಸೋಣವೇ ಎಂದು ಕೇಳಿಯೇ ಬಿಟ್ಟರು. ಆದಿತ್ಯ ಅವರಿಗೂ ಸಹ ವನ್ಯಜೀವಿಗಳ ಬಗ್ಗೆ ಅಪಾರವಾದ ಕಾಳಜಿ ಹಾಗೂ ಪ್ರೀತಿ ಇತ್ತು. ಅವರ ಮನದಲ್ಲೂ ಎಲ್ಲೋ ಒಂದು ಕಡೆ ಇದೇ ರೀತಿಯ ಬಯಕೆ ಇತ್ತೇನೋ ತಮ್ಮ ಪತ್ನಿ ರಣಥಂಬೋರ್‌ನಲ್ಲಿ ನೆಲೆಸುವ ಬಗ್ಗೆ ಕೇಳುತ್ತಿರುವುದು ಅವರಿಗೆ "ರೋಗಿ ಬಯಸಿದ್ದು ಹಾಲು-ಅನ್ನ, ವೈದ್ಯರು ಹೇಳಿದ್ದು ಹಾಲು-ಅನ್ನ" ಎಂಬಂತಾಗಿ ಕೂಡಲೇ ಒಪ್ಪಿದರಂತೆ.
ದೆಹಲಿಯಿಂದ ಸಂಪೂರ್ಣ ಶಿಫ್ಟ್!
ಇನ್ನೇನು ತಡ ಈ ಜೋಡಿ ತಮ್ಮ ದೆಹಲಿ ಮನೆಗೆ ಹಿಂತಿರುಗಿ ಕೆಲ ತಿಂಗಳುಗಳ ಬಳಿಕ 1998 ರಲ್ಲಿ ರಣಥಂಬೋರ್ ತಾಣಕ್ಕೆ ವಾಸಕ್ಕೆಂದು ಬಂದೇ ಬಿಟ್ಟರು. ಅವರು ವಾಸವಿರುವ ಪ್ರದೇಶವು ರಣಥಂಬೋರ್ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹತ್ತಿರವಾಗಿದೆ. ಕಳೆದ 20 ವರ್ಷಗಳಿಂದ ಇಲ್ಲಿ ವಾಸ ಮಾಡುತ್ತ ಬಂದಿರುವ ಆದಿತ್ಯರವರು ಅವಕಾಶ ಸಿಕ್ಕಾಗಲೆಲ್ಲ ರಣಥಂಬೋರ್ ಹುಲಿ ಸಂರಕ್ಷಿತ ಪ್ರದೇಶದ ಬಳಿ ಭೂಮಿಯ ತುಣುಕುಗಳನ್ನು ಖರೀದಿಸುತ್ತಲೇ ಬಂದಿದ್ದಾರೆ. ಹೀಗೆ ಖರೀದಿಸಿರುವ ಭೂಮಿಯಲ್ಲಿ ಅವರಿಗೆ ಏನಾದರೂ ನಿರ್ಮಿಸುವ ಯಾವುದೇ ಉದ್ದೇಶವಿಲ್ಲ, ಬದಲಾಗಿ ಆ ಭೂಮಿಯನ್ನು ಅವರು ಕಾಡಿನಂತೆಯೇ ಇರಲಿ ಎಂದು ಹಾಗೆ ಬಿಟ್ಟುಬಿಟ್ಟಿದ್ದಾರೆ.
ಅವರ ಗುರಿ
2000 ರಲ್ಲಿ ಆದಿತ್ಯ ಅವರು ಬಿಬಿಸಿಯೊಂದಿಗೆ ವನ್ಯಜೀವಿ ಕುರಿತಾದ ಡಾಕ್ಯುಮೆಂಟರಿಯೊಂದರ ಮೇಲೆ ಕೆಲಸ ಮಾಡುತ್ತಿದ್ದಾಗ ಹುಲಿ ಸಂರಕ್ಷಣೆಯ ಕುರಿತು ಮಿಷನ್ ಒಂದನ್ನು ರೂಪಿಸಲಾಯಿತು. ಹೀಗಿದ್ದಾಗ ಆದಿತ್ಯರವರು ಒಮ್ಮೆ ತಾವು ಖರೀದಿಸಿದ ಭೂಮಿಯಲ್ಲಿ ಹುಲಿ ಓಡಾಡುತ್ತಿರುವುದನ್ನು ಗಮನಿಸಿದರಂತೆ.
ಇದನ್ನೂ ಓದಿ: ಮಕ್ಕಳೂ e-Shram ಯೋಜನೆ ಅಡಿ ನೋಂದಾಯಿಸಿಕೊಳ್ಳಬಹುದೇ? ಏನೆಲ್ಲ ಪ್ರಯೋಜನ ಸಿಗುತ್ತೆ?
ಅಂದಿನಿಂದ ಅವರು ಹುಲಿ ಸಂರಕ್ಷಣೆಯ ಬಗ್ಗೆ ಬಲವಾದ ಪಣ ತೊಟ್ಟು ಆ ಕುರಿತು ಕೆಲಸ ಮಾಡಲು ಪ್ರಾರಂಭಿಸಿದರು. ದಂಪತಿಯು ಆ ಸಮಯದಿಂದ ತುಂಬ ಶೃದ್ಧೆಯಿಂದ ಹುಲಿ ಸಂರಕ್ಷಣಾ ಉದ್ದೇಶದಲ್ಲಿ ತಮ್ಮನ್ನು ತೊಡಗಿಸಿಕೊಂಡು ಇಲ್ಲಿಯೇ ರೆಸಾರ್ಟ್ ಒಂದನ್ನು ಸ್ಥಾಪಿಸಿದರು.
ಶ್ರಮದಿಂದ ಸಿಕ್ಕ ಫಲ
ಸದ್ಯ ಈ ದಂಪತಿಯು ಭಾದ್ಲವ್ ಎಂಬಲ್ಲಿ 35 ಎಕರೆಗಳಷ್ಟು ಭೂಮಿಯ ಒಡೆತನ ಹೊಂದಿದ್ದಾರೆ. ಅಲ್ಲದೆ ಈ ಭೂಮಿಯಿಂದ ಕೆಲವು ನೂರು ಮೀ. ಗಳಷ್ಟು ದೂರದಲ್ಲಿ ಮತ್ತೊಂದು ಭೂಮಿಯನ್ನು ಹೊಂದಿದ್ದು. ಈ ಎರಡೂ ಭೂಮಿಗಳನ್ನು ಒಂದಕ್ಕೊಂದು ಬೆಸೆಯುವಂತೆ ಮಾಡುವ ಇನ್ನೊಂದು ತುಣುಕು ಭೂಮಿಯನ್ನು ಸಹ ಹೊಂದಿದ್ದಾರೆ.
ತಮ್ಮ ಭೂಮಿಯಲ್ಲಿ ಗಂಡ-ಹೆಂಡತಿ ಮೈಮುರಿದು ದುಡಿದು ಆ ಜಾಗವೆಲ್ಲ ಯಾವ ರೀತಿ ದಟ್ಟವಾದ ಹಸಿರಿನಿಂದ ಕಂಗೊಳಿಸುವಂತೆ ಮಾಡಿದ್ದಾರೆಂದರೆ ಅದರ ಬಳಿಯಲ್ಲಿರುವ ಅಧಿಕೃತ ಹುಲಿ ಸಂರಕ್ಷಣಾ ತಾಣವೇ ಬರಡಾಗಿ ಕಾಣುವಂತಾಗಿದೆ. ಆದಿತ್ಯ ಹಾಗೂ ಪೂನಂರವರಿಗೆ ವನ್ಯಜೀವಿಗಳ ಬಗ್ಗೆ ಯಾವ ಪರಿ ಕಾಳಜಿ ಇದೆ ಎಂದರೆ ತಮ್ಮ ಭೂಮಿಯಲ್ಲಿ ಅಲ್ಲಲ್ಲಿ ಕೃತಕ ಕೆರೆಗಳನ್ನು ನಿರ್ಮಿಸುವ ಮೂಲಕ ಬೇಸಿಗೆಯಲ್ಲಿ ಕಾಡು ಪ್ರಾಣಿಗಳಿಗೆ ಯಾವುದೇ ರೀತಿಯ ನೀರಿನ ಅಡಚಣೆ ಉಂಟಾಗದಂತೆ ನೋಡಿಕೊಂಡಿದ್ದಾರೆ.
ರಣಥಂಬೋರ್ ಪ್ರಸಿದ್ಧಿ ಗೊತ್ತೇ?
ರಣಥಂಬೋರ್ ಭಾರತದ ಪ್ರಸಿದ್ಧ 50 ಮೀಸಲು ಹುಲಿ ಸಂರಕ್ಷಿತ ಪ್ರದೇಶಗಳ ಒಂದಾಗಿದ್ದು ಹೆಸರುವಾಸಿಯಾಗಿದೆ. ಇಲ್ಲಿ ಹುಲಿಗಳ ಸಂಖ್ಯೆ 60 ಎಂದು ಅಂದಾಜಿಸಲಾಗಿದ್ದು ದೇಶದ ದೊಡ್ಡ ಸಂರಕ್ಷಿತ ಪ್ರದೇಶಗಳಲ್ಲಿಯೂ ಇದು ಒಂದಾಗಿದೆ.
ಇದನ್ನೂ ಓದಿ: Good News: ಸರ್ಕಾರವೇ ನಿಮ್ಮ ಮದುವೆ ಮಾಡುತ್ತೆ! ಬೇಗನೆ ಅರ್ಜಿ ಸಲ್ಲಿಸಿ, ಹೇಗೆ ಸಲ್ಲಿಸೋದು ವಿವರ ಇಲ್ಲಿದೆ
ರಣಥಂಬೋರ್ ರಕ್ಷಿತ ಅರಣ್ಯವು ಕೇವಲ ಹುಲಿಗಳ ಸಂತತಿ ಏರಲು ಸಹಾಯ ಮಾಡಿಲ್ಲ. ಬದಲಾಗಿ ಈ ಪ್ರದೇಶದ ಬಳಿ ಭೂಮಿ ಹೊಂದಿರುವ ರೈತರಿಗೂ ಇದು ಸಹಾಯ ಮಾಡಿದೆ. ಹೇಗೆಂದರೆ ಈ ಕಾಡಿನಲ್ಲೇ ಮಾನವ ಬೇಟೆ ಹಾಗೂ ಪ್ರಾಣಿಗಳ ಕಳ್ಳಸಾಗಾಣಿಕೆ ನಿರ್ಬಂಧಿಸಲಾಗಿದ್ದು, ಹುಲಿಗಳು ತಮಗೆ ಬೇಕಾದ ಎಲ್ಲ ಅವಶ್ಯಕತೆಗಳನ್ನು ಇಲ್ಲಿಯೇ ಪಡೆಯುವುದರಿಂದ ಅವು ಜನವಸತಿ ಪ್ರದೇಶಗಳಿಗೆ ತೆರಳುವುದಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ