Raman Institute ನಿಂದ'ಬ್ರಹ್ಮಾಂಡ' ರೇಡಿಯೋ ತರಂಗದ ನಿರಾಕರಣೆ! ಅಮೆರಿಕದ ಸಂಶೋಧನೆ ಸುಳ್ಳು?

ಅಮೆರಿಕದ MIT ಹಾಗೂ ASU ಶೈಕ್ಷಣಿಕ ಸಂಸ್ಥೆಗಳ ಸಂಶೋಧಕರು ಬ್ರಹ್ಮಾಂಡದ ಉಗಮದ ಸಂದರ್ಭದಲ್ಲಿ ಹುಟ್ಟಿದ ನಕ್ಷತ್ರಗಳು ಮತ್ತು ನಕ್ಷತ್ರ ಪುಂಜಗಳಿಂದ ಹೊರಹೊಮ್ಮಿದ ಸುಮಾರು 21 ಸೆ.ಮೀ ಗಾತ್ರದ ಹೊಸ ರೇಡಿಯೋ ತರಂಗಾಂತರವನ್ನು ಪತ್ತೆ ಹಚ್ಚಿರುವುದಾಗಿ ಹೇಳಿಕೊಂಡಿದ್ದರು.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಇಂದು ವಿಜ್ಞಾನ ಎಷ್ಟೇ ಮುಂದುವರೆದಿದ್ದರೂ ನಮಗಿನ್ನೂ ನಮ್ಮ ಸೃಷ್ಟಿಯಲ್ಲಿ ಹುದುಗಿರುವ ಅದೆಷ್ಟೋ ರಹಸ್ಯಗಳ ಹಿಂದಿನ ವಿಷಯ ತಿಳಿಯಲಾಗಿಲ್ಲ ಅಥವಾ ಆಗುತ್ತಿಲ್ಲವೆಂದರೂ ತಪ್ಪಿಲ್ಲ. ಅಂಥದ್ದರಲ್ಲಿ ಈ ಸೃಷ್ಟಿಯು ಸಮ್ಮಿಳಿತವಾಗಿರುವ ಈ ಆಗಸದ, ಸೌರಮಂಡಲದ, ಗ್ಯಾಲಕ್ಸಿಯ (Galaxy) ಬಗ್ಗೆ ತಿಳಿದುಕೊಳ್ಳಬೇಕಾದ ವಿಷಯಗಳು ಎಷ್ಟಿರಬಹುದು..? ನೀವೇ ಒಮ್ಮೆ ಯೋಚಿಸಿ ನೋಡಿ. ಆದರೂ, ಬಾಹ್ಯಾಕಾಶದ (Universe) ವಿಷಯದಲ್ಲಿ ಇಂದು ಮನುಷ್ಯ ಸಾಕಷ್ಟು ಪ್ರಗತಿ ಮಾಡುತ್ತಿದ್ದಾನೆ. ಈಗಾಗಲೇ ನಾವು ಹಲವು ಬಾಹ್ಯಾಕಾಶದ ವಿಸ್ಮಯಕಾರಿ ಸಂಗತಿಗಳನ್ನು (Astronomy) ತಿಳಿದುಕೊಳ್ಳುವುದರಲ್ಲಿ ಸಫಲರಾಗಿದ್ದೇವೆ. ಅಲ್ಲದೆ, ಈ ಕ್ಷೇತ್ರದಲ್ಲಿ ನಿರಂತರ ಸಂಶೋಧನೆ ನಡೆಯುತ್ತಲೇ ಇದೆ. ಒಮ್ಮೊಮ್ಮೆ ಹೊಸ ನಕ್ಷತ್ರ ಪುಂಜಗಳನ್ನು ಶೋಧಿಸಲಾದರೆ ಇನ್ನೊಮ್ಮೆ ಬ್ಲ್ಯಾಕ್ ಹೋಲ್ (Black Hole)  ಕುರಿತು ಇನ್ನೇನೋ ಸಂಗತಿಗಳು ತಿಳಿದುಬರುತ್ತವೆ, ಮಗದೊಮ್ಮೆ ಮತ್ತೊಂದು ಹೊಸ ಗ್ರಹ ಗೋಚರವಾಗಬಹುದು. 

ಇತ್ತೀಚಿಗಷ್ಟೆ ಅಮೆರಿಕದ MIT ಹಾಗೂ ASU ಶೈಕ್ಷಣಿಕ ಸಂಸ್ಥೆಗಳ ಸಂಶೋಧಕರು EDGES ಎಂಬ ಶಕ್ತಿಶಾಲಿ ದೂರದರ್ಶಕದ ಮೂಲಕ ಕಾಸ್ಮಿಕ್ ಡಾನ್‌ ಅಂದರೆ ಮಹಾಸ್ಫೋಟದಿಂದ ಬ್ರಹ್ಮಾಂಡದ ಉಗಮದ ಸಂದರ್ಭದಲ್ಲಿ ಹುಟ್ಟಿದ ನಕ್ಷತ್ರಗಳು ಮತ್ತು ನಕ್ಷತ್ರ ಪುಂಜಗಳಿಂದ ಹೊರಹೊಮ್ಮಿದ ಸುಮಾರು 21 ಸೆ.ಮೀ ಗಾತ್ರದ ಹೊಸ ರೇಡಿಯೋ ತರಂಗಾಂತರವನ್ನು ಪತ್ತೆ ಹಚ್ಚಿರುವುದಾಗಿ ಹೇಳಿಕೊಂಡಿತ್ತು. ಇದೊಂದು ಅದ್ಭುತ ಆವಿಷ್ಕಾರ ಎಂದೇ ಹೇಳಬಹುದಾಗಿತ್ತು. ಈ ಬಗ್ಗೆ ಅವರು ಪ್ರತಿಷ್ಠಿತ ನೇಚರ್ ಎಂಬ ನಿಯತಕಾಲಿಕೆಯಲ್ಲಿ ಪ್ರಕಟಿಸಿದ್ದರು. ಈ ವಿಚಾರ ವಿಶ್ವದ ಎಲ್ಲ ಖಗೋಳಶಾಸ್ತ್ರಜ್ಞರಲ್ಲಿ ಆಸಕ್ತಿ ಮೂಡಿಸಿತ್ತು.

ಇಷ್ಟೆ ಅಲ್ಲದೆ, ಹಾರ್ವರ್ಡ್ ಸಂಸ್ಥೆಯ ಖಗೋಳ ಶಾಸ್ತ್ರಜ್ಞರಾದ ಅವಿ ಲೊಯೇಬ್ ಅವರು ಈ ಸಂಶೋಧನೆಯನ್ನು ಶ್ಲಾಘಿಸಿದ್ದಲ್ಲದೆ ಇದು ನೊಬೆಲ್ ಪ್ರಶಸ್ತಿ ಪಡೆಯಲು ಅರ್ಹ ಎಂದೂ ಸಹ ಹೇಳಿ ಇದರ ವಿಚಾರವನ್ನು ನೇಚರ್ ಆ್ಯಸ್ಟ್ರಾನಮಿ ಪುಸ್ತಕದಲ್ಲಿ ಪ್ರಕಟಿಸಿದ್ದರು. ಆದರೆ, ಇದೀಗ ಭಾರತದ ಬೆಂಗಳೂರಿನಲ್ಲಿರುವ ರಾಮನ್ ಇನ್ಸ್ಟಿಟ್ಯೂಟ್ ನ ಪ್ರೊಫೆಸರ್‌ಗಳಾಗಿರುವ ರವಿ ಸುಬ್ರಮಣ್ಯನ್ ಹಾಗೂ ಉದಯ ಶಂಕರ್ ಈ ಶೋಧನೆಯನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.

SARAS-3 ವಿಶೇಷವೇನು..?

EDGES ಒಂದು ಪ್ರಾಯೋಗಿಕ ಟೆಲಿಸ್ಕೋಪ್ ಆಗಿದ್ದು ಪಶ್ಚಿಮ ಆಸ್ಟ್ರೇಲಿಯಾದ ಮರ್ಚಿಸನ್ ರೇಡಿಯೋ ಆ್ಯಸ್ಟ್ರಾನಮಿ ಅಬ್ಸರ್ವೇಟರಿಯಲ್ಲಿ ಸ್ಥಿತವಿದೆ. ಇದು ಅರಿಜೋನಾ ಸ್ಟೇಟ್ ಯುನಿವರ್ಸಿಟಿ ಹಾಗೂ ಹೇಸ್ಟ್ಯಾಕ್ ಅಬ್ಸರ್ವೇಟರಿ ಮಧ್ಯದ ಒಡಂಬಡಿಕೆಯಾಗಿದ್ದು ಇದಕ್ಕೆ CSIRO ಮೂಲಸೌಕರ್ಯವನ್ನು ಒದಗಿಸಿದೆ.

ಬೆಂಗಳೂರಿನ ರಾಮನ್ ಇನ್ಸ್ಟಿಟ್ಯೂಟ್‌ನಲ್ಲಿರುವ ಟೆಲಿಸ್ಕೋಪ್ SARAS-3 ಅತ್ಯಾಧುನಿಕ ದೂರದರ್ಶಕವಾಗಿದ್ದು ನಭೋಮಂಡಲದಲ್ಲಿ ಅತ್ಯಂತ ಮಸುಕಾದ ರೇಡಿಯೋ ತರಂಗವನ್ನೂ ಸಹ ಪತ್ತೆಹಚ್ಚಬಲ್ಲ ಅದ್ಭುತ ಸಾಮರ್ಥ್ಯವನ್ನು ಹೊಂದಿದ್ದು ರಾಮನ್ ಇನ್ಸ್ಟಿಟ್ಯೂಟ್ ಸಂಸ್ಥೆಯ ಖಗೋಳ ಶಾಸ್ತ್ರಜ್ಞರಿಂದ ನಿರ್ಮಿಸಲ್ಪಟ್ಟಿದೆ. ಇದರ ಇನ್ನೊಂದು ಹೆಗ್ಗಳಿಕೆ ಅಂದರೆ ಕಾಲದ ಗರ್ಭದಿಂದ ಈ ನಭೋ ಮಂಡಲದಲ್ಲಿ ಆಗುತ್ತಿರುವ ಸೂಕ್ಷ್ಮತೆಗಳನ್ನು ಸೂಕ್ಷ್ಮವಾಗಿ ಗ್ರಹಿಸಬಲ್ಲ ಜಗತ್ತಿನ ಏಕೈಕ ಟೆಲಿಸ್ಕೋಪ್ ಇದಾಗಿದೆ ಎನ್ನಲಾಗುತ್ತದೆ.

ಇದನ್ನೂ ಓದಿ: World Civil Defence Day 2022: ವಿಶ್ವ ನಾಗರಿಕ ಪಡೆ ದಿನದ ಆಚರಣೆ ಏಕೆ? ಅದರ ಮಹತ್ವ ಮತ್ತು ಇತಿಹಾಸ ತಿಳಿಯಿರಿ

ಮೊದಲಿಗೆ ಹೊಸ ತರಂಗದ ಸುದ್ದಿ ಹೊರ ಹೊಮ್ಮಿದಾಗ SARAS-3 ವಿಜ್ಞಾನಿಗಳು ಸತತವಾಗಿ ಶೋಧನೆ ನಡೆಸಿದ್ದು ಅವರ ಶೋಧನೆಯಲ್ಲಿ ಈ ರೀತಿಯ ಹೊಸ ತರಂಗದ ಯಾವುದೇ ಪುರಾವೆಗಳಾಗಲಿ ಲಭಿಸಿಲ್ಲ ಎಂದು ರಾಮನ್ ಸಂಸ್ಥೆಯ ವಿಜ್ಞಾನಿಯಾಗಿರುವ ಸೌರಭ್ ಸಿಂಗ್ ಹೇಳಿದ್ದಾರೆ.

ರಾಜ್ಯಕ್ಕೂ SARAS-3ಗೂ ನಂಟು..!

ಈ ನಿಟ್ಟಿನಲ್ಲಿ ಉತ್ತರ ಕರ್ನಾಟಕ ಪ್ರದೇಶದ ದಂಡಿಗಾನಹಳ್ಳಿ ಕೆರೆ ಮತ್ತು ಶರಾವತಿ ಹಿನ್ನೀರಿನಲ್ಲಿ SARAS-3 ದೂರದರ್ಶಕವನ್ನು ಅಳವಡಿಸಿ ಸತತವಾಗಿ ಸಂಶೋಧನೆ ನಡೆಸಲಾಗಿದ್ದು ಈ ಮೂಲಕ ದೊರೆತಿರುವ ದತ್ತಾಂಶದ ಪ್ರಕಾರ ಯಾವುದೇ ರೀತಿಯ ಹೊಸ ತರಂಗದ ಉಪಸ್ಥಿತಿ ಕಂಡುಬಂದಿಲ್ಲ ಎನ್ನಲಾಗಿದೆ.

ತೇಲುವ ದೂರದರ್ಶಕ
ಸಾಮಾನ್ಯವಾಗಿ ಭೂಮಿಯ ಮೇಲ್ಮೈನಿಂದ ಹೊರಹೊಮ್ಮುವ ತರಂಗಗಳು ದೂರದರ್ಶಕಗಳ ಕಾರ್ಯಪ್ರಣಾಳಿಯಲ್ಲಿ ಅಡೆ-ತಡೆಗಳನ್ನುಂಟು ಮಾಡಬಹುದಾದ ಸಾಧ್ಯತೆಯಿರುತ್ತದೆ. ಇದರಿಂದ ನಿಖರವಾದ ಹಾಗೂ ಸೂಕ್ಷ್ಮವಾಗಿ ಅವಲೋಕಿಸಬಹುದಾದ ತರಂಗಗಳನ್ನು ಪತ್ತೆ ಹಚ್ಚುವುದು ಕಷ್ಟಕರವಾಗಬಹುದು. ಆದರೆ, ನೀರಿನ ಮಾಧ್ಯಮದಲ್ಲಿ ದೂರದರ್ಶಕ ಅಳವಡಿಸಿದಾಗ ಯಾವುದೇ ರೀತಿಯ ಇತರೆ ತರಂಗಗಳು ಹೊರಹೊಮ್ಮದ ಕಾರಣ ಸೂಕ್ಷ್ಮ ತರಂಗಗಳನ್ನು ಪತ್ತೆ ಹಚ್ಚಲು ದೂರದರ್ಶಕಗಳಿಗೆ ಸಾಕಷ್ಟು ಸಹಾಯಕಾವಾಗುತ್ತದೆ.

ಇದನ್ನೂ ಓದಿ: 'ಆರೋಗ್ಯ ವನಂ' ಉದ್ಘಾಟಿಸಿದ ರಾಷ್ಟ್ರಪತಿಗಳು; ಆಯುರ್ವೇದ ಸಸ್ಯಗಳ ಮಹತ್ವ ಸಾರಿದ Ram Nath Kovind

ರಾಮನ್ ಸಂಸ್ಥೆಯು ತನ್ನ ಹೇಳಿಕೆಯಲ್ಲಿ, "ಈ ವಿಷಯವನ್ನು ಬಹು ಸೂಕ್ಷ್ಮವಾಗಿ ಎಚ್ಚರಿಕೆಯಿಂದ ವಿಶ್ಲೇಷಣೆ ಮಾಡಿದ ನಂತರ ಹೊಸ ತರಂಗಗಳ ಉಪಸ್ಥಿತಿಯಿರುವಿಕೆಯನ್ನು ನಾವು ತಳ್ಳಿ ಹಾಕುತ್ತಿದ್ದೇವೆ. ಹಾಗಾಗಿ EDGES ಹೇಳಿರುವಂತೆ ಯಾವುದೇ ರೀತಿಯ ತರಂಗದ ಉಪಸ್ಥಿತಿಯಿಲ್ಲ. ಬದಲಾಗಿ ಅವರ ಅಳೆಯುವಿಕೆಯಲ್ಲಿ ಪ್ರಮಾದವಾಗಿರಬಹುದು" ಎಂದು ಬರೆದುಕೊಂಡಿದೆ.

MIT ಹಾಗೂ ASU ಗಳ ಹೇಳಿಕೆಯನ್ನು ನಿರಾಕರಿಸಿರುವ SARAS ಈಗ ತನ್ನ ಸಂಶೋಧನೆಯನ್ನು ಮತ್ತಷ್ಟು ತೀವ್ರಗೊಳಿಸುವ ಮೂಲಕ ಬ್ರಹ್ಮಾಂಡ ಉಗಮದಿಂದ ಉಂಟಾದ 21 ಸೆ.ಮೀ ತರಂಗದ ಶೋಧನೆ ಮಾಡುವತ್ತ ಹಲವು ರೀತಿಯಲ್ಲಿ ಸಜ್ಜಾಗುತ್ತಿದೆ. ಅವರು ಈ ಸಂಶೋಧನೆಯಲ್ಲಿ ಸಫಲರಾಗುತ್ತಾರೋ ಎಂಬುದನ್ನು ಕಾದು ನೋಡಬೇಕಾಗಿದೆ ಅಷ್ಟೆ.
Published by:guruganesh bhat
First published: