ಚುನಾವಣೆಗಳಲ್ಲಿ (Election) ಮಹಿಳಾ ಮೀಸಲಾತಿ ಇರುವುದು ಸಾಮಾನ್ಯ. ಆದರೆ ನಮ್ಮಲ್ಲಿ ಅನೇಕ ಕಡೆಗಳಲ್ಲಿ ಮಹಿಳೆಯರಿಗೆ ಅಧಿಕಾರ ಇರುವುದು ಹೆಸರಿಗೆ ಮಾತ್ರ! ಹೌದು ಸ್ಥಳೀಯ ಚುನಾವಣೆಗಳಲ್ಲಿ ಇಂಥ ಮೀಸಲಾತಿಗಳಲ್ಲಿ ಮಹಿಳೆಯರು ಪಾಲ್ಗೊಂಡರೂ ನಿಜವಾದ ಆಡಳಿತ ಇರುವುದು ಅವರ ಯಜಮಾನನ ಬಳಿ. ಹೌದ, ಇದನ್ನು ನಂಬಲು ಕಷ್ಟ. ಆದರೆ ಇದೇ ನಿಜ ಸಂಗತಿ. ಅನೇಕ ಸ್ಥಳೀಯ ಆಡಳಿತದಲ್ಲಿ ನಾವು ಇಂಥ ಸಂದರ್ಭವನ್ನು ಕಾಣುತ್ತೇವೆ. ಬರೀ ಸಹಿ (Sign) ಮಾತ್ರ ಮಹಿಳೆಯರದ್ದು. ಆಡಳಿತವೆಲ್ಲ ಮನೆಯ ಯಜಮಾನನದ್ದು. ಇದನ್ನು ಅನೇಕ ಸಿನಿಮಾಗಳಲ್ಲಿ ಹಾಗೆಯೇ ಇತ್ತೀಚಿಗಿನ ಒಟಿಟಿ (OTT) ಸರಣಿ ಪಂಚಾಯತ್‌ನಲ್ಲೂ ಇದನ್ನು ಕಾಣಬಹುದು.
ಇಂತದ್ದೇ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಇಲ್ಲಿನ ರಾಂಪುರ ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷ ಮಾಮುನ್ ಷಾ ಖಾನ್ ಇಂಥದ್ದೇ ಒಂದು ಕೆಲಸ ಮಾಡಲು ಹೊರಟಿದ್ದಾರೆ. ಹೌದು, ಅಧ್ಯಕ್ಷ ಸ್ಥಾನ ಮಹಿಳೆಯರಿಗೆ ಮೀಸಲಿಟ್ಟಿರುವುದನ್ನು ಕಂಡ ಮಾಮುನ್ ಷಾ ಖಾನ್ ಇದ್ದಕ್ಕಿದ್ದಂತೆ ಮದುವೆಯಾಗಲು ತಯಾರಿ ನಡೆಸಿದ್ದಾರೆ.
ಅಧ್ಯಕ್ಷ ಸ್ಥಾನ ಕೈತಪ್ಪಬಾರದೆಂದು ಗಡಿಬಿಡಿಯ ಮದುವೆ!
ಉತ್ತರ ಪ್ರದೇಶದ ರಾಂಪುರ ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷ ಮಾಮುನ್ ಷಾ ಖಾನ್ ಅವರು ಈ ಹುದ್ದೆ ಮಹಿಳೆಯರಿಗೆ ಮೀಸಲಿಡಲಾಗಿದೆ ಎಂದು ತಿಳಿದ ನಂತರ ಮದುವೆಯಾಗುವುದಾಗಿ ಘೋಷಿಸಿದರು.
ಆಶ್ಚರ್ಯದ ಸಂಗತಿಯೆಂದರೆ ಮಾಮುನ್ ಷಾ ಖಾನ್ ಕೇವಲ 45 ಗಂಟೆಗಳ ಒಳಗೆ ತಮ್ಮ ಮದುವೆಯನ್ನು ನಿಗದಿಪಡಿಸಿದ್ದಾರೆ. ಮುನ್ಸಿಪಲ್ ಚುನಾವಣೆಗೆ ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕಕ್ಕೆ ಕೇವಲ ಎರಡು ದಿನಗಳ ಮುಂಚಿತವಾಗಿ ಅಂದರೆ ಎಪ್ರಿಲ್ 15 ರಂದು ಹಸೆಮಣೆ ಏರಿದ್ದಾರೆ.
45 ಗಂಟೆಗಳ ಒಳಗಾಗಿ ವಧುವನ್ನು ಹುಡುಕಿದ್ದರು
ಇಂಥ ಸಂದರ್ಭಗಳು ಹಳ್ಳಿಗಳಲ್ಲಿ ಹೊಸತೇನಲ್ಲ. ಜೊತೆಗೆ ಚಿಕ್ಕ ಚಿಕ್ಕ ಪಟ್ಟಣಗಳಲ್ಲೂ ಇದು ನಡೆಯುತ್ತಿರುತ್ತದೆ. ಪುರುಷರು ತಮ್ಮ ಪತ್ನಿಯರನ್ನು ಆಯ್ಕೆ ಮಾಡುವ ಮೂಲಕ ಮಹಿಳೆಯರಿಗೆ ಮೀಸಲಾದ ಸ್ಥಾನಗಳನ್ನು ಪಡೆದುಕೊಂಡು ವಾಸ್ತವಿಕ ಆಡಳಿತ ಮುಂದುವರಿಸುತ್ತಾರೆ.
ಇದನ್ನೂ ಓದಿ: ಪ್ರೈವೇಟ್ ಜೆಟ್‌ನಲ್ಲಿ ಕೇವಲ 13 ಸಾವಿರಕ್ಕೆ ರಾಜನಂತೆ ಪ್ರಯಾಣಿಸಿದ ಯುಕೆ ಪ್ರಯಾಣಿಕ!
ಅಂದಹಾಗೆ 45 ವರ್ಷ ವಯಸ್ಸಾಗಿದ್ದರೂ ಮಾಮುನ್ ಷಾ ಒಂಟಿಯಾಗಿದ್ದರು. ಆದರೆ ರಾಂಪುರ ಮುನ್ಸಿಪಲ್ ಸ್ಥಾನವನ್ನು ಮಹಿಳೆಯರಿಗೆ ಮೀಸಲಿಡುವ ಘೋಷಣೆಯು ಮಾಮುನ್ ಖಾನ್ ಅವರಿಗೆ ವಧುವನ್ನು ಹುಡುಕುವಂತೆ ಮಾಡಿತು. ಆದರೆ ಶತಾಯಗತಾಯ 45 ಗಂಟೆಗಳ ಒಳಗೆ ಅವರು ಮದುವೆಗಾಗಿ ಹೆಣ್ಣನ್ನು ಹುಡುಕಿ ಫಿಕ್ಸ್ ಮಾಡಿದ್ದರು.
ಕಳೆದ ಮೂರು ದಶಕಗಳಿಂದ ರಾಮ್‌ಪುರ ನಗರದಲ್ಲಿ ಕಾಂಗ್ರೆಸ್‌ನ ಧ್ವಜಧಾರಿ ಎಂದೇ ಗುರುತಿಸಲ್ಪಟ್ಟಿರುವ ಖಾನ್, ತಮ್ಮ ರಾಜಕೀಯ ವೃತ್ತಿಜೀವನವನ್ನು ಮುಂದುವರಿಸಲು ತಮ್ಮ ಯೋಜನೆಗಳನ್ನು ಘೋಷಿಸಿದ್ದರು.
ಚುನಾವಣೆ ಘೋಷಣೆ ಬೆನ್ನಲ್ಲೇ ಒಂಟಿಯಾಗಿರುವ ನಿರ್ಧಾರ ಬದಲು!
ವರದಿಗಳ ಪ್ರಕಾರ, ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಇದು ನಡೆದಿದೆ. ನಾಮನಿರ್ದೇಶನಕ್ಕೆ ಕೊನೆಯ ದಿನಾಂಕ ಏಪ್ರಿಲ್ 17 ಆಗಿದ್ದರಿಂದ ಖಾನ್ ತಮ್ಮ ಮದುವೆಯನ್ನು ಎಪ್ರಿಲ್ 15 ರಂದೇ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ವಿಶ್ವದ ಅತ್ಯಂತ ದುಬಾರಿ ದ್ವೀಪ ಇದು; ಇಲ್ಲಿರುವ ಒಂದು ಬಂಗಲೆಗೆ 200 ಕೋಟಿ!
ವಾಸ್ತವವಾಗಿ, ಮಾಮುನ್ ಷಾ ಖಾನ್ ಮದುವೆಯಾಗದಿರಲು ನಿರ್ಧರಿಸಿದ್ದರು, ಮಹಿಳೆಯರಿಗೆ ಮೀಸಲಾತಿ ಘೋಷಿಸುವವರೆಗೆ ಸ್ವತಃ ಚುನಾವಣೆಗೆ ಸ್ಪರ್ಧಿಸಲು ಉತ್ಸುಕರಾಗಿದ್ದರು ಎನ್ನಲಾಗಿದೆ.
ಇನ್ನು ಮಾಧ್ಯಮದ ಜೊತೆಗೆ ಮಾತನಾಡಿದ ಮಮೂನ್ ಷಾ ಖಾನ್, ಮುನ್ಸಿಪಲ್ ಚುನಾವಣೆಗೆ ಸಿದ್ಧತೆಗಳು ನಡೆಯುತ್ತಿವೆ. ಮಹಿಳೆಗೆ ಸ್ಥಾನವನ್ನು ಕಡ್ಡಾಯಗೊಳಿಸಿದ್ದರಿಂದ ತಾನು ಮದುವೆಯಾಗುವ ನಿರ್ಧಾರ ಕೈಗೊಂಡೆ ಎಂದು ಹೇಳಿದ್ದಾರೆ.
ಅಲ್ಲದೇ, “ನಾನು ಚುನಾವಣೆಗೆ ಸ್ಪರ್ಧಿಸಬೇಕೆಂದು ಜನರು ಬಯಸಿದ್ದರು. ಹಾಗಾಗಿ ನಾನು ಈಗ ಮದುವೆಯಾಗಲು ಬಯಸಿದೆ. ಮದುವೆಯ ಬಳಿಕ ನನ್ನ ಪತ್ನಿ ಖಂಡಿತಾ ಚುನಾವಣೆಗೆ ಸ್ಪರ್ಧಿಸಲು ಬರುತ್ತಾಳೆ. ಆದರೆ ಯಾವ ಪಕ್ಷದ ಜೊತೆ ಹೋರಾಡಬೇಕು ಎಂಬುದನ್ನು ಮಾತ್ರ ಇನ್ನೂ ನಿರ್ಧರಿಸಬೇಕಿದೆ" ಎಂದು ಮುಮುನ್ ಷಾ ಖಾನ್ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ