CM Stalin Hops on to City Bus ಸಿಟಿ ಬಸ್ ನಲ್ಲಿ ಪ್ರಯಾಣಿಸಿದ ಸಿಎಂ ಸ್ಟಾಲಿನ್: ಮುಖ್ಯಮಂತ್ರಿಗಳನ್ನು ಕಂಡು ಚಕಿತರಾದ ಪ್ರಯಾಣಿಕರು
ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ನಿಲ್ದಾಣಕ್ಕೆ ಕಾದು ಬಸ್ ಹತ್ತಿದರು. ಮಹಿಳೆಯರಿಗಾಗಿ ಜಾರಿಗೊಳಿಸಿರುವ ಉಚಿತ ಬಸ್ ಪ್ರಯಾಣದ ಕುರಿತು ಅವರಿಂದಲೇ ಮಾಹಿತಿ ಪಡೆದುಕೊಂಡರು. ಎಂ.ಕೆ.ಸ್ಟಾಲಿನ್ ಅಧಿಕಾರಕ್ಕೆ ಬರುತ್ತಿದ್ದಂತೆ ಈ ಯೋಜನೆಯನ್ನು ಘೋಷಿಸಿದ್ದು, ಕಾರ್ಯರೂಪಕ್ಕೂ ತರಲಾಗಿದೆ
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ (Tamil Nadu Chief Minister M K Stalin) ಶನಿವಾರ ಸರ್ಕಾರಿ ಬಸ್ (Bus) ನಲ್ಲಿ ಪ್ರಯಾಣಿಸುವ ಮೂಲಕ ಅಚ್ಚರಿ ಮೂಡಿಸಿದರು. ತಮ್ಮ ಬಸ್ ನಲ್ಲಿ ಮುಖ್ಯಮಂತ್ರಿಗಳನ್ನು ಕಂಡ ಸಾರ್ವಜನಿಕರು ಮತ್ತು ಸಾರಿಗೆ ಸಿಬ್ಬಂದಿ ಸಹ ಒಂದು ಕ್ಷಣ ಶಾಕ್ ಆಗಿದ್ದರು. ಚೆನ್ನೈನಲ್ಲಿ ಮಹಿಳಾ ಪ್ರಯಾಣಿಕರಿಗೆ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ. ಸರ್ಕಾರದ ಉಚಿತ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯರಿಂದ ಯೋಜನೆಯ ಅನುಕೂಲತೆ ಬಗ್ಗೆ ತಿಳಿದುಕೊಂಡರು. ಜೊತೆಗೆ ಇತರೆ ವಿಷಯಗಳ ಕುರಿತು ಚರ್ಚೆ ನಡೆಸಿ, ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು. ಆರನೇ ಕೊರೊನಾ ಲಸಿಕಾಕರಣ ಅಭಿಯಾನದ (Sixth mega Covid-19 inoculation drive) ಭಾಗವಾಗಿ ಕನ್ನಗಿ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಮುಖ್ಯಮಂತ್ರಿ ಸ್ಟಾಲಿನ್ ಬಸ್ ನಲ್ಲಿಯೇ ಪ್ರಯಾಣಿಸಿದರು.
ಸಿಎಂ ಸ್ಟಾಲಿನ್ ಜೊತೆ ಸೆಲ್ಫಿ
ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ನಿಲ್ದಾಣಕ್ಕೆ ಕಾದು ಬಸ್ ಹತ್ತಿದರು. ಮಹಿಳೆಯರಿಗಾಗಿ ಜಾರಿಗೊಳಿಸಿರುವ ಉಚಿತ ಬಸ್ ಪ್ರಯಾಣದ ಕುರಿತು ಅವರಿಂದಲೇ ಮಾಹಿತಿ ಪಡೆದುಕೊಂಡರು. ಎಂ.ಕೆ.ಸ್ಟಾಲಿನ್ ಅಧಿಕಾರಕ್ಕೆ ಬರುತ್ತಿದ್ದಂತೆ ಈ ಯೋಜನೆಯನ್ನು ಘೋಷಿಸಿದ್ದು, ಕಾರ್ಯರೂಪಕ್ಕೂ ತರಲಾಗಿದೆ ಎಂದು ರಾಜ್ಯ ಸರ್ಕಾರ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ. ಟ್ವಿಟರ್ ನಲ್ಲಿ ವಿಡಿಯೋ ಶೇರ್ ಮಾಡಿಕೊಳ್ಳಲಾಗಿದ್ದು, ಸಿಎಂ ಸ್ಟಾಲಿನ್ ಮಹಿಳಾ ಪ್ರಯಾಣಿಕರ ಜೊತೆ ಮಾತನಾಡುತ್ತಿರೋದನ್ನು ಕಾಣಬಹುದಾಗಿದೆ. ಕೆಲ ಮಹಿಳೆಯರು ಸಿಎಂ ಸ್ಟಾಲಿನ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸ್ಟಾಲಿನ್ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹಬ್ಬಗಳ ಸೀಸನ್ ಆಗಿರೋದರಿಂದ ಬಸ್ ಗಳಲ್ಲಿ ಶೇ.100ರಷ್ಟು ಆಸನ ಭರ್ತಿಗೆ ಸರ್ಕಾರ ಅನುಮತಿ ನೀಡಿದೆ. ಆದ್ರೆ ಈ ನಿಯಮ ಕೇರಳಕ್ಕೆ ತೆರಳುವ ಬಸ್ ಗಳಿಗೆ ಅನ್ವಯ ಆಗಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಶನಿವಾರ ಲಾಕ್ ಡೌನ್ ನಿಯಮಗಳಲ್ಲಿ ಕೆಲ ಸಡಿಲಿಕೆ ತಂದಿದ್ದು, ಇನ್ನುಳಿದ ನಿರ್ಬಂಧಗಳು ನವೆಂಬರ್ 15ರವರೆಗೆ ಮುಂದುವರಿಯಲಿವೆ. ಗುಂಪಾಗಿ ಹಬ್ಬ ಸಂಭ್ರಮಾಚರಣೆ ಮತ್ತು ರಾಜಕೀಯ ಕಾರ್ಯಕ್ರಮಗಳ ಮೇಲಿನ ನಿರ್ಬಂಧ ಮುಂದುವರಿಯಲಿದೆ. ತಮಿಳುನಾಡಿನಲ್ಲಿ ಶನಿವಾರ 1,040 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 17 ಜನರು ಸಾವನ್ನಪ್ಪಿದ್ದಾರೆ. ಇಲ್ಲಿಯವರೆಗೆ ತಮಿಳುನಾಡಿನಲ್ಲಿ 26,94,089 ಕೊರೊನಾ ಪ್ರಕರಣಗಳು ವರದಿಯಾಗಿದ್ದು, 36,004ಕ್ಕೆ ಏರಿಕೆಯಾಗಿದೆ.
ದೆಹಲಿಯಲ್ಲಿಯೂ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ
ದೆಹಲಿಯ ಸಿಎಂ ಅರವಿಂದ್ ಕೇಜ್ರಿವಾಲ್ ಸರ್ಕಾರ 2019ರಲ್ಲಿ ಮಹಿಳೆಯರಿಗೆ ಬಸ್ ನಲ್ಲಿ ಉಚಿತ ಪ್ರಯಾಣದ ಅವಕಾಶ ನೀಡಿತ್ತು. ಸರ್ಕಾರಿ ಬಸ್ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಲಾಗುವುದು ಎಂದಿತ್ತು. ರಾಷ್ಟ್ರ ರಾಜಧಾನಿಯಲ್ಲಿ ಮಹಿಳೆಯರ ಭದ್ರತೆಗೆ ಸರ್ಕಾರ ಹೆಚ್ಚು ಒತ್ತು ನೀಡುತ್ತಿದೆ. ಲೈಂಗಿಕ ಕಿರುಕುಳದಂತಹ ಘಟನೆಗಳು ತಡೆಯಲು ಮಹಿಳೆಯರಿಗೆ ಪ್ರತ್ಯೇಕ ಬಸ್ಗಳನ್ನು ನೇಮಿಸಲಾಗುತ್ತಿದೆ" ಎಂದು ಅರವಿಂದ್ ಕೇಜ್ರಿವಾಲ್ ತಿಳಿಸಿದ್ದರು.
ಮಹಿಳೆಯರಿಗೆ ವಿಶೇಷ ವ್ಯವಸ್ಥೆ ಕಲ್ಪಿಸಲಿಕ್ಕಾಗಿಯೇ ಸಾರಿಗೆ ಇಲಾಖೆಗೆ ಸಂಪುಟ 479 ಕೋಟಿ ರೂ. ಘೋಷಿಸಿದೆ. ದೀಪಾವಳಿ ಹೊತ್ತಲ್ಲಿ ಆಚರಿಸಲಾಗುವ "ಭಾಯ್ ದೂಜ್" ಹಬ್ಬಕ್ಕೆ ಮಹಿಳೆಯರಿಗೆ ಸರ್ಕಾರಿ ಬಸ್ನಲ್ಲಿ ಉಚಿತ ಪ್ರಯಾಣ ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿಯೇ 13 ಸಾವಿರ ಬಸ್ ಮಾರ್ಷಲ್ಗಳನ್ನು ನೇಮಿಸಲಾಗಿದೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದರು. 2019ರ ಆಗಸ್ಟ್ 15ರಂದು ಮೆಟ್ರೋ ಮತ್ತು ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಅವಕಾಶ ಕಲ್ಪಿಸಲಾಗುವುದು ಎಂದು ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದರು.
Published by:Mahmadrafik K
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ