ಈಗಂತೂ ಈ ಹೃದಯಾಘಾತ (Heartattack) ಮತ್ತು ಹೃದಯ ಸ್ತಂಭನದಿಂದಾಗಿ ಅನೇಕ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಹೌದು.. ಈಗ ಯಾರಿಗಾದರೂ ಯಾವ ಸಮಯದಲ್ಲಾದರೂ ಏನಾದರೂ ಆಗಬಹುದು ಅಂತ ಹೇಳಲಾಗುತ್ತಿದೆ ನೋಡಿ. ಈ ಕೆಲವು ವರ್ಷಗಳಲ್ಲಿ ಈ ಹೃದಯಾಘಾತದ ಮತ್ತು ಹೃದಯ ಸ್ತಂಭನ ಪ್ರಕರಣಗಳು ತುಂಬಾನೇ ಸಂಭವಿಸಿವೆ ಅಂತ ಹೇಳಬಹುದು. ಎಷ್ಟೋ ಜನರು ಬೆಳಿಗ್ಗೆ (Morning) ಹೊತ್ತಿನಲ್ಲಿ ಜಿಮ್ ನಲ್ಲಿ ಕಸರತ್ತು ಮಾಡುವಾಗ ಎದೆ ನೋವು ಕಾಣಿಸಿಕೊಂಡು ನೆಲಕ್ಕೆ ಕುಸಿದು ಸಾವನ್ನಪ್ಪಿರುವ ಘಟನೆಗಳನ್ನು ನಾವು ನೋಡಿದ್ದೇವೆ. ಹೀಗೆ ಹೃದಯಾಘಾತ ಅಥವಾ ಹೃದಯ ಸ್ತಂಭನವಾದಾಗ ವ್ಯಕ್ತಿಗಳನ್ನು (Person) ಕಾಪಾಡುವ ಯಾವುದೇ ರೀತಿಯ ವಿಧಾನಗಳಿಲ್ಲವೇ ಅಂತ ಅನೇಕರು ವೈದ್ಯರನ್ನು ಕೇಳುವುದನ್ನು ನಾವು ನೋಡಿರುತ್ತೇವೆ. ಹೀಗೆ ಹಿಂದೊಮ್ಮೆ ಒಂದು ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೇ ವೈರಲ್ ಆಗಿತ್ತು ನೋಡಿ.
ಆ ವೀಡಿಯೋದಲ್ಲಿ ವ್ಯಕ್ತಿಯೊಬ್ಬರು ತಮ್ಮ ನಿಯಮಿತ ಆರೋಗ್ಯ ತಪಾಸಣೆಗೆಂದು ಡಾಕ್ಟರ್ ಅವರ ಕ್ಲಿನಿಕ್ ಗೆ ಬಂದಿರುತ್ತಾರೆ. ಅಲ್ಲಿ ಅವರು ವೈದ್ಯರ ಮುಂದೆ ಇರುವ ಕುರ್ಚಿಯಲ್ಲಿ ಆರಾಮಾಗಿ ಕುಳಿತ್ತಿರುತ್ತಾರೆ. ಹಠಾತ್ತನೆ ಆ ವ್ಯಕ್ತಿಗೆ ಎದೆನೋವು ಕಾಣಿಸಿಕೊಂಡು ಬಿಡುತ್ತದೆ. ಆಗ ಅಲ್ಲಿಯೇ ಎದುರುಗಡೆ ಕುರ್ಚಿಯ ಮೇಲೆ ಕುಳಿತ ಡಾಕ್ಟರ್ ತಕ್ಷಣವೇ ಎದ್ದು ಬಂದು ಅವರ ಎದೆಯನ್ನು ಜೋರಾಗಿ ಒತ್ತುವುದರ ಮೂಲಕ ಅವರ ಪ್ರಾಣವನ್ನು ಕಾಪಾಡುತ್ತಾರೆ. ಈ ವಿಧಾನವನ್ನು ಕಾರ್ಡಿಯೋಪಲ್ಮೊನರಿ ರೆಸಸಿಟೇಷನ್ (ಸಿಪಿಆರ್) ಅಂತ ಹೇಳಲಾಗುತ್ತದೆ. ಇದನ್ನು ತಕ್ಷಣವೇ ಮಾಡುವುದರಿಂದ ವ್ಯಕ್ತಿಗಳ ಜೀವನವನ್ನು ಉಳಿಸಬಹುದು.
ಇದನ್ನೂ ಓದಿ: 'ನಾನು ಟ್ವಿಟರ್ನ ಹೊಸ CEO ಆಗಬಹುದೇ' ಎಂದ ಖ್ಯಾತ ಯೂಟ್ಯೂಬರ್ಗೆ ಎಲಾನ್ ಮಸ್ಕ್ ಹೇಳಿದ್ದನು ಗೊತ್ತಾ?
ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯ ಜೀವ ಉಳಿಸಿದ ಸಿಐಎಸ್ಎಫ್ ಸಿಬ್ಬಂದಿ
ಇದೇ ರೀತಿಯ ಘಟನೆಯೊಂದು ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಸಹ ಇತ್ತೀಚೆಗೆ ನಡೆದಿದೆ ನೋಡಿ. ಸಿಐಎಸ್ಎಫ್ ಸಿಬ್ಬಂದಿಯೊಬ್ಬರು ಮುಂಬೈಗೆ ತೆರಳುತ್ತಿದ್ದ ಪ್ರಯಾಣಿಕರೊಬ್ಬರ ಜೀವವನ್ನು ಕ್ಷಣ ಮಾತ್ರದಲ್ಲಿ ಉಳಿಸಿದ್ದಾರೆ ಎಂದು ಹೇಳಬಹುದು. ಭದ್ರತಾ ತಪಾಸಣೆಯ ಸಮಯದಲ್ಲಿ ಪ್ರಯಾಣಿಕನಿಗೆ ಹೃದಯಾಘಾತವಾಗಿ ಅಲ್ಲಿಯೇ ಕುಸಿದು ಬಿದ್ದಿದ್ದಾರೆ. ಇದನ್ನು ನೋಡಿದ ಅಲ್ಲಿಯೇ ಇದ್ದಂತಹ ಸಿಐಎಸ್ಎಫ್ ಸಬ್ ಇನ್ಸ್ಪೆಕ್ಟರ್ ಕಪಿಲ್ ರಾಘವ್ ತಕ್ಷಣವೇ ಪ್ರಯಾಣಿಕನಿಗೆ ಕಾರ್ಡಿಯೋಪಲ್ಮೊನರಿ ರೆಸಸಿಟೇಷನ್ ಅನ್ನು ಮಾಡಿದರು ಮತ್ತು ಅವರನ್ನು ಯಶಸ್ವಿಯಾಗಿ ಪುನರುಜ್ಜೀವನಗೊಳಿಸಲು ಸಾಧ್ಯವಾಯಿತು. ಯೋಧನ ಧೈರ್ಯದ ಈ ವೀಡಿಯೋವನ್ನು ಸಿಐಎಸ್ಎಫ್ ನ ಅಧಿಕೃತ ಟ್ವಿಟರ್ ಹ್ಯಾಂಡಲ್ ನಲ್ಲಿ ಹಂಚಿಕೊಳ್ಳಲಾಗಿದೆ.
ವೀಡಿಯೋವನ್ನು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಹ ಹಂಚಿಕೊಂಡಿದ್ದಾರೆ
ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಸುನಿಲ್ ದೇವಧರ್ ಕೂಡ ತಮ್ಮ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ ಮತ್ತು ಸಿಐಎಸ್ಎಫ್ ಅಧಿಕಾರಿಯನ್ನು ತುಂಬಾನೇ ಶ್ಲಾಘಿಸಿದ್ದಾರೆ. "ಸಿಐಎಸ್ಎಫ್ ಜವಾನರ ತ್ವರಿತ ಕಾರ್ಯಾಚರಣೆಯು ಅಹಮದಾಬಾದ್ ಏರ್ಪೋರ್ಟ್ ನಲ್ಲಿ ಪ್ರಯಾಣಿಕರೊಬ್ಬರ ಜೀವವನ್ನು ಉಳಿಸಿತು. ಈ ಮಹಾನ್ ವ್ಯಕ್ತಿಗೆ ಒಂದು ಸೆಲ್ಯೂಟ್" ಎಂದು ವೀಡಿಯೋ ಶೀರ್ಷಿಕೆಯಲ್ಲಿ ಬರೆಯಲಾಗಿದೆ.
Prompt action of CISF Jawan's saved a life at @ahmairport.
Salute to this great force 🙏 pic.twitter.com/miBP4g8Ft6
— Sunil Deodhar (@Sunil_Deodhar) December 22, 2022
ಅವರ ಸಮಯೋಚಿತ ಕ್ರಮಕ್ಕಾಗಿ ಸಿಐಎಸ್ಎಫ್ ಸಿಬ್ಬಂದಿಯನ್ನು ನೆಟ್ಟಿಗರು ತುಂಬಾನೇ ಶ್ಲಾಘಿಸಿದೆ. ಕಾಮೆಂಟ್ ವಿಭಾಗವು ಸಿಬ್ಬಂದಿಗೆ ಮೆಚ್ಚುಗೆಯ ಮಾತುಗಳಿಂದ ತುಂಬಿದೆ ಎಂದು ಹೇಳಬಹುದು.
ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು “ಜಗತ್ತಿನಲ್ಲಿ ಸಿಐಎಸ್ಎಫ್ ಸಿಬ್ಬಂದಿ ಅವರಂತಹ ಹೆಚ್ಚಿನ ಜನರು ನಮಗೆ ಬೇಕು” ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು “ನಿಮಗೆ ಸಲಾಂ, ನಿಮ್ಮ ಬಗ್ಗೆ ನಮಗೆ ತುಂಬಾ ಹೆಮ್ಮೆ ಇದೆ ಸಿಐಎಸ್ಎಫ್ : ಜೈ ಹಿಂದ್” ಎಂದು ಬರೆದಿದ್ದಾರೆ. ಇನ್ನೂ ಮೂರನೆಯ ಬಳಕೆದಾರರು “ಉತ್ತಮ ಕೆಲಸ ಮಾಡಿದ್ದೀರಿ. ದೇವರು ನಿಮ್ಮನ್ನು ಆಶೀರ್ವದಿಸಲಿ” ಎಂದು ಕಾಮೆಂಟ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ