news18-kannada Updated:March 2, 2021, 1:47 PM IST
ಆ್ಯಪಲ್ ಐಫೋನ್, ಆ್ಯಪಲ್ ಜ್ಯೂಸ್
ಈಗ ಆಫ್ಲೈನ್ಗಿಂತ ಆನ್ಲೈನ್ ನೆಚ್ಚಿಕೊಂಡವರೇ ಹೆಚ್ಚು. ಏಕೆಂದು ಇದು ಬಹಳ ಸುಲಭ ಹಾಗೂ ಕುಳಿತಲ್ಲೇ ಎಲ್ಲ ಕೆಲಸವೂ ಆಗುತ್ತದೆ. ಆನ್ಲೈನ್ನಲ್ಲಿ ಆರ್ಡರ್ ಮಾಡಿದರೆ ಫೋನಿಗೆ ಬದಲಾಗಿ ಕಲ್ಲು, ಇಟ್ಟಿಗೆ ಹಾಗೂ ಬದಲಿ ವಸ್ತುಗಳು ಬಂದಿರುವ ನಿದರ್ಶನಗಳು ಸಾಕಷ್ಟಿವೆ. ಗ್ರಾಹಕರು ಆರ್ಡರ್ ಮಾಡುವುದೇ ಒಂದಾದರೆ, ಅವರಿಗೆ ಬರೋದು ಇನ್ನೊಂದು. ಆದರೂ ಕೂಡ ಆನ್ಲೈನ್ ಶಾಪಿಂಗ್ ಮಾಡುವುದು ಕಡಿಮೆಯಾಗಿಲ್ಲ. ಚೀನಾದ ಮಹಿಳೆಯೊಬ್ಬಳು ಆನ್ಲೈನ್ನಲ್ಲಿ ಲಕ್ಷಾಂತರ ರೂ. ಕೊಟ್ಟು ಆರ್ಡರ್ ಮಾಡಿದ ವಸ್ತುವಿನ ಬದಲು ಜ್ಯೂಸ್ ಬಂದಿದೆ.
ಹೌದು, ಚೀನಾದ ಲಿಯು ಎಂಬಾಕೆ ಹೊಸ ಮಾದರಿಯ ಆ್ಯಪಲ್ ಐಫೋನ್ ಆರ್ಡರ್ ಮಾಡಿದ್ದರು. ಆದರೆ ಡೆಲಿವರಿ ಬಾಯ್ ತಂದು ಕೊಟ್ಟ ಪಾರ್ಸಲ್ ತೆಗೆದು ನೋಡಿದ ಲಿಯು ಹೌಹಾರಿಹೋಗಿದ್ದಾರೆ. ಏಕೆಂದರೆ ಬರೋಬ್ಬರಿ 1,500 ಡಾಲರ್ (1.10 ಲಕ್ಷ ರೂ.) ಪಾವತಿಸಿ ಆರ್ಡರ್ ಮಾಡಿದ್ದ ಆ್ಯಪಲ್ ಐಫೋನ್ 12 ಪ್ರೋ ಮ್ಯಾಕ್ಸ್ ಬದಲು ಅವರಿಗೆ ಆ್ಯಪಲ್ ಜ್ಯೂಸ್ ಕಳುಹಿಸಲಾಗಿದೆ. ಇದನ್ನು ನೋಡಿದ ಅವರು ಆಘಾತಗೊಂಡಿದ್ದಾರೆ.
ಪೈಲಟ್ ಮೇಲೆ ಏಕಾಏಕಿ ದಾಳಿ ಮಾಡಿದ ಬೆಕ್ಕು; ವಿಮಾನ ತುರ್ತು ಭೂಸ್ಪರ್ಶ..!
ಇಬೇ ಅಥವಾ ಅಮೆಜಾನ್ನಲ್ಲಿ ಥರ್ಡ್ ಪಾರ್ಟಿ ಮಾರಾಟಗಾರರಿಂದ ಈ ರೀತಿ ಬದಲಿ ವಸ್ತುಗಳು ಗ್ರಾಹಕರಿಗೆ ಹೋಗುವುದು ಸಾಮಾನ್ಯ. ಆದರೆ ಲಿಯು ಅವರು ಆ್ಯಪಲ್ ಐಫೋನ್ ಅಧಿಕೃತ ಪೇಜ್ ನಲ್ಲಿ ಮೊದಲೇ ಹಣ ಪಾವತಿಸಿ ಆರ್ಡರ್ ಬುಕ್ ಮಾಡಿದ್ದರು. ದಿಗ್ಭ್ರಮೆಗೊಂಡ ಲಿಯು ತನಗಾಗಿರುವ ಮೋಸದ ವಿಷಯವನ್ನು ವಿಡಿಯೋ ಮಾಡಿ ಚೀನಾದ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಗ್ರಾಹಕರಿಗೆ ಆರ್ಡರ್ ತಲುಪಿಸಿರುವ ಕೊರಿಯರ್ ಸರ್ವೀಸ್ ಕಂಪನಿಯೇ ಇದಕ್ಕೆ ಕಾರಣ. ಈ ಬಗ್ಗೆ ನಾವು ತನಿಖೆ ನಡೆಸುತ್ತೇವೆಂದು ಆ್ಯಪಲ್ ಮತ್ತು ಎಕ್ಸ್ಪ್ರೆಸ್ ಮೇಲ್ ಸರ್ವೀಸ್ ನ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ವರದಿಗಳ ಪ್ರಕಾರ ಲಿಯುಗೆ ತಲುಪಿಸಬೇಕಾಗಿದ್ದ ಆ್ಯಪಲ್ ಐಫೋನ್ 12 ಪ್ರೋ ಮ್ಯಾಕ್ಸ್ ಪ್ಯಾಕೇಜ್ ಅನ್ನು ಡೆಲಿವರಿ ಸಿಬ್ಬಂದಿ ನೇರವಾಗಿ ಅವರಿಗೆ ತಲುಪಿಸಿಲ್ಲ. ಅದನ್ನು ಅವರು ಸ್ಟೋರೇಜ್ ಘಟಕಕ್ಕೆ ತೆಗೆದುಕೊಂಡು ಹೋಗಿ ಬಳಿಕ ಗ್ರಾಹಕರಿಗೆ ತಲುಪಿಸಿದ್ದಾರೆ. ಇಲ್ಲೇ ಎಲ್ಲೋ ಅದು ಮಿಸ್ ಆಗಿರಬಹುದು ಎಂದು ಶಂಕಿಸಲಾಗಿದೆ. ಆದರೆ ಆ ಐಫೋನ್ ಪ್ಯಾಕೇಜ್ ಎಲ್ಲಿ ಹೋಗಿದೆ ಅನ್ನೋದು ಮಾತ್ರ ಇನ್ನೂ ಸ್ಪಷ್ಟವಾಗಿಲ್ಲ.
ಲಿಯು ಸೋಷಿಯಲ್ ಮೀಡಿಯಾದಲ್ಲಿ ಈ ವಿಷಯ ಹಂಚಿಕೊಂಡ ಬಳಿಕ ಅನೇಕರು ಈ ಬಗ್ಗೆ ಪ್ರತಿಕ್ರಿಯಿಸುತ್ತಿದ್ದಾರೆ. ಡೆಲಿವರಿ ಮಾಡಿದ ಸಿಬ್ಬಂದಿಯೇ ಐಫೋನ್ ಪ್ಯಾಕೇಜ್ ತೆರೆದು ಅದನ್ನು ತೆಗೆದುಕೊಂಡು ಬಳಿಕ ಆ್ಯಪಲ್ ಜ್ಯೂಸ್ ಇಟ್ಟು ಕೊಟ್ಟಿರಬೇಕು ಎಂದು ಒಬ್ಬರು ಹೇಳಿದರೆ, ಲಿಯು ನಕಲಿ ವೆಬ್ಸೈಟ್ನಲ್ಲಿ ಐಫೋನ್ ಆರ್ಡರ್ ಮಾಡಿರಬೇಕು ಎಂದು ಕೆಲವರು ಹೇಳುತ್ತಿದ್ದಾರೆ. ಭಾರತದಲ್ಲಿಯೂ ಇದೇ ರೀತಿಯ ಅನೇಕ ಘಟನೆಗಳು ನಡೆದಿವೆ. 2018ರಲ್ಲಿ ಫ್ಲಿಪ್ಕಾರ್ಟ್ನಲ್ಲಿ 55 ಸಾವಿರ ರೂ. ಪಾವತಿಸಿ ಐಫೋನ್ 8 ಆರ್ಡರ್ ಮಾಡಿದ್ದ ವ್ಯಕ್ತಿಯೊಬ್ಬರಿಗೆ ಬಟ್ಟೆ, ಸೋಪ್ಗಳನ್ನು ಕಳುಹಿಸಲಾಗಿತ್ತು.
Published by:
Latha CG
First published:
March 2, 2021, 1:47 PM IST