ಮನೆಯಲ್ಲಿ ಮದುವೆ (Marriage) ವಯಸ್ಸಿಗೆ ಬಂದ ಮಕ್ಕಳಿದ್ದರೆ, ಪೋಷಕರಿಗೆ ಮಕ್ಕಳ ಮದುವೆ ಮಾಡಿಸುವ ಚಿಂತೆ ತುಂಬಾನೇ ಕಾಡುವುದಕ್ಕೆ ಶುರು ಮಾಡುತ್ತದೆ. ಮದುವೆ ವಯಸ್ಸು ಬಂತೆಂದರೆ ಸಾಕು ಎಲ್ಲರೂ ಕೇಳುವ ಸಾಮಾನ್ಯವಾದ ಪ್ರಶ್ನೆ ಎಂದರೆ ‘ಮದುವೆ ಇನ್ನೂ ಆಗಿಲ್ಲವೇ’ ಅಂತ. ಪೋಷಕರಷ್ಟೇ (Parents) ಅಲ್ಲದೆ ಮನೆಗೆ ಬರುವ ಸ್ನೇಹಿತರು (Friends) ಮತ್ತು ಸಂಬಂಧಿಕರು ಸಹ ಅದನ್ನೇ ಕೇಳುತ್ತಾರೆ. ಹೀಗಾಗಿ ಪೋಷಕರು ಮತ್ತು ಸಂಬಂಧಿಕರು ಮದುವೆ ಮಾಡಿಕೊಳ್ಳಿ ಅಂತ ಯುವಕ ಮತ್ತು ಯುವತಿಯರ ಮೇಲೆ ತುಂಬಾನೇ ಒತ್ತಡವನ್ನು ಹೇರುವುದನ್ನು ನಾವೆಲ್ಲಾ ನೋಡಿರುತ್ತೇವೆ. ನಮ್ಮಲ್ಲಿ ಅನೇಕರು ಈ ಸಂದರ್ಭವನ್ನು ಎದುರಿಸಿರುತ್ತಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.
ಮಗನಿಗೆ 38 ವರ್ಷ ವಯಸ್ಸಾದರೂ ಮದುವೆಯಾಗಿಲ್ಲ ಅನ್ನೋ ಚಿಂತೆ ತಾಯಿಗೆ
ಚೀನಾದ 38 ವರ್ಷದ ವ್ಯಕ್ತಿಯೊಬ್ಬ ಇನ್ನೂ ಮದುವೆಯಾಗದೆ ಹಾಗೆಯೇ ಉಳಿದಿದ್ದಕ್ಕೆ ತುಂಬಾನೆ ಚಿಂತಿತಳಾಗಿದ್ದ ಅವನ ತಾಯಿ ತನ್ನ ಮಗನಲ್ಲೇ ಏನೋ ಮಾನಸಿಕ ಸಮಸ್ಯೆ ಇರಬೇಕೆಂದು ಭಾವಿಸಿದ್ದಳು. ಏಕೆಂದರೆ ಪ್ರತಿ ಹೊಸ ವರ್ಷದ ಸಂದರ್ಭದಲ್ಲಿ ಮಗ ಎಂದಿಗೂ ತನ್ನ ಸ್ನೇಹಿತೆಯನ್ನು ಮನೆಗೆ ಕರೆದುಕೊಂಡು ಬಂದಿರಲಿಲ್ಲ.
ಹಾಗಾಗಿ ಆ ತಾಯಿ ಮಗನನ್ನು ಎಂದಿನಂತೆ ಈ ಬಾರಿಯೂ ಹೆನನ್ ಪ್ರಾವಿನ್ಷಿಯಲ್ ಮಾನಸಿಕ ಆಸ್ಪತ್ರೆಗೆ ಪರೀಕ್ಷೆಗೆಂದು ಕರೆದುಕೊಂಡು ಹೋಗಿದ್ದರು. ಆದರೆ ಈ ಸಂದರ್ಭದಲ್ಲಿ ಹೊರಗೆ ಬಂದ ಫಲಿತಾಂಶ ನಿಜಕ್ಕೂ ರೋಚಕವಾಗಿತ್ತು.
ಇದನ್ನೂ ಓದಿ: ಈ ಗ್ರಾಮದಲ್ಲಿ ಟಿವಿಯೇ ಇಲ್ಲ, ಹಳೆ ಸಂಪ್ರದಾಯವನ್ನೇ ಇವರು ಫಾಲೋ ಮಾಡೋದಂತೆ!
ಏಕೆಂದರೆ ಅಲ್ಲಿನ ವೈದ್ಯರ ಪ್ರಕಾರ, ಆ ವ್ಯಕ್ತಿ ಮಾನಸಿಕವಾಗಿ ಸರಿಯಾಗಿಯೇ ಇದ್ದನು ಆದರೆ ಅವನು ಇನ್ನೂ ಮದುವೆ ಮಾಡಿಕೊಂಡಿಲ್ಲ ಎಂಬ ಚಿಂತೆಯಿಂದ ಬಾಧಿತಳಾಗಿದ್ದ ಅವನ ತಾಯಿ ಮಾತ್ರ ಮಗನಿಗೆ ಮದುವೆ ಮಾಡಿಸಬೇಕೆಂಬ ಮಾನಸಿಕ ಗೀಳನ್ನು ಅಭಿವೃದ್ಧಿಅಪಡಿಸಿಕೊಂಡಿದ್ದಳು.
ಇಷ್ಟೇ ಅಲ್ಲದೆ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿಯ ಪ್ರಕಾರ, ಯಾರನ್ನಾದರೂ ಮದುವೆಯಾಗು ಅಂತ ತುಂಬಾನೇ ಒತ್ತಾಯಿಸಿದ್ದಾರೆ. ಇದು ಮಾನಸಿಕ ಅಸ್ವಸ್ಥತೆಯನ್ನು ಈ ಚೀನೀ ತಾಯಿ ಬೆಳೆಸಿಕೊಂಡಿದ್ದಾಳೆ ಎಂದು ವೈದ್ಯರು ಹೇಳಿದ್ದಾರೆ.
ಈ ಘಟನೆಯ ವೀಡಿಯೋ ಈಗ ಚೀನಾದ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ವೈರಲ್ ಆಗಿದ್ದು, ಮದುವೆಯಾಗಲು ಯುವಕರ ಮೇಲಿನ ಒತ್ತಡದ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆಯನ್ನು ಹುಟ್ಟು ಹಾಕಿದೆ ಅಂತ ಹೇಳಬಹುದು.
ವೈರಲ್ ಆದ ವೀಡಿಯೋ ಕ್ಲಿಪ್ ನಲ್ಲಿ ಏನಿದೆ ನೋಡಿ
ಈ ವೀಡಿಯೋ ಕ್ಲಿಪ್ ನಲ್ಲಿ ತನ್ನ ಉಪನಾಮದಿಂದ ಮಾತ್ರ ಗುರುತಿಸಲ್ಪಟ್ಟ ವಾಂಗ್, ಹೊಸ ವರ್ಷಕ್ಕೆ ಗೆಳತಿಯನ್ನು ಮನೆಗೆ ಕರೆದುಕೊಂಡು ಬಂದಿಲ್ಲ ಎಂದು ಹೇಳಿದರು. ಹಾಗಾಗಿ ಅವರ ತಾಯಿಗೆ ತನ್ನಲ್ಲೇ ಏನೋ ದೋಷವಿದೆ ಎಂದು ಅನಿಸಿತ್ತಂತೆ.
ಆದ್ದರಿಂದ ಪ್ರತಿ ಹೊಸ ವರ್ಷದ ದಿನದಂದು ಮನೋವೈದ್ಯರನ್ನು ನೋಡಲು ನನ್ನ ತಾಯಿ ನನ್ನನ್ನು ಕರೆದುಕೊಂಡು ಹೋಗುತ್ತಿದ್ದಳು ಎಂದು ವಾಂಗ್ ಹೇಳಿದರು. ಈ ವರ್ಷವೂ ಸಹ ವಾಂಗ್ ಅವರನ್ನು ಅವರ ತಾಯಿ ಹೆನಾನ್ ಪ್ರಾಂತೀಯ ಮನೋವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ದರು.
ದೋಷವಿದ್ದದ್ದು ಮಗನಿಗೆ ಅಲ್ವಂತೆ!
ಈ ಸಮಯದಲ್ಲಿ, ವೈದ್ಯರು ವಾಂಗ್ ಅವರ ತಾಯಿಗೆ ತಮ್ಮ ಮಗನಲ್ಲಿ ಯಾವುದೇ ದೋಷವಿಲ್ಲ ಎಂದು ಹೇಳಿದರು ಮತ್ತು "ತಮ್ಮ ಮಗನನ್ನು ಮದುವೆಯಾಗುವಂತೆ ಒತ್ತಾಯಿಸುವ" ಗೀಳನ್ನು ಅವರು ಬೆಳೆಸಿಕೊಂಡಿದ್ದಾರೆ ಎಂದು ವೈದ್ಯರು ಆ ತಾಯಿಗೆ ಹೇಳಿದರು.
ಈ ಘಟನೆಯ ವೀಡಿಯೋ ಚೀನಾದಲ್ಲಿ ಮದುವೆಯಾಗಲು ಯುವಕರ ಮೇಲೆ ಯಾವ ರೀತಿಯ ಒತ್ತಡವನ್ನು ಹೇರಲಾಗುತ್ತದೆ ಎಂಬುದರ ಬಗ್ಗೆ ಚರ್ಚೆಯನ್ನು ಹುಟ್ಟು ಹಾಕಿದೆ ಅಂತ ಹೇಳಬಹುದು.
ಹಳೆಯ ತಲೆಮಾರಿನವರು ತಮ್ಮ ಮಕ್ಕಳು ಮತ್ತು ಮೊಮ್ಮಕ್ಕಳು ಬೇಗನೆ ಜೀವನದಲ್ಲಿ ಸೆಟಲ್ ಆಗುವುದನ್ನು ನೋಡಲು ತುಂಬಾನೇ ಉತ್ಸುಕರಾಗಿರುತ್ತಾರೆ ಅಂತ ಹೇಳಬಹುದು.
ಆದರೆ ಈಗಿನ 20 ಮತ್ತು 30 ರ ವಯಸ್ಸಿನ ಯುವಕರು ಮದುವೆಯ ವ್ಯವಸ್ಥೆಯ ಬಗ್ಗೆ ಅನೇಕ ಅನುಮಾನಗಳನ್ನು ಹೊಂದಿದ್ದಾರೆ. ಇದಲ್ಲದೆ, ಹೆಚ್ಚುತ್ತಿರುವ ಜೀವನ ವೆಚ್ಚ, ಕಡಿಮೆ ಸಂಬಳ, ಅಭಿವೃದ್ಧಿ ಕಾಣದೆ ಇರುವ ವೃತ್ತಿಗಳು ಹೀಗೆ ಎಲ್ಲಾ ಸಮಸ್ಯೆಗಳನ್ನು ಗಣನೆಗೆ ತೆಗೆದುಕೊಂಡು ಯುವಕರು ಮದುವೆ ಎಂದರೆ ದೂರ ಓಡಿ ಹೋಗುತ್ತಿದ್ದಾರೆ ಅಂತ ಹೇಳಬಹುದು.
‘ಸೂಪರ್ ಸಿಂಗಲ್ ಓಲ್ಡ್ ಮ್ಯಾನ್’ ಅಂತ ಕರಿತಾರಂತೆ ಊರಿನ ಜನ..
ವಾಂಗ್ ಅವರು ಬೀಜಿಂಗ್ ನಲ್ಲಿ ಒಂದು ದಶಕಕ್ಕೂ ಹೆಚ್ಚು ಸಮಯದಿಂದ ಕೆಲಸ ಮಾಡುತ್ತಿದ್ದಾರೆ, ಮೊದಲು ನಟರಾಗಿ ಮತ್ತು ಈಗ ಟೆನಿಸ್ ತರಬೇತುದಾರರಾಗಿ ಕೆಲಸ ಮಾಡುತ್ತಿದ್ದಾರೆ.
ಬೀಜಿಂಗ್ ನ್ಯೂಸ್ ಗೆ ನೀಡಿದ ಸಂದರ್ಶನದಲ್ಲಿ, ಅವರು ತಮ್ಮ ಊರಿನಲ್ಲಿ "ಸೂಪರ್ ಸಿಂಗಲ್ ಓಲ್ಡ್ ಮ್ಯಾನ್" ಎಂದು ಕರೆಯಲ್ಪಡುತ್ತಾರೆ ಎಂದು ಹೇಳಿದ್ದಾರೆ.
"ನಾನು ಇನ್ನೂ ಮದುವೆಯಾಗದ ಕಾರಣ ನನ್ನ ಅಮ್ಮನಿಗೆ ಆರಾಮಾಗಿ ಮಲಗಲು ಸಾಧ್ಯವಾಗುತ್ತಿಲ್ಲ, ಆದ್ದರಿಂದ ನಾನು ಸಾಕಷ್ಟು ಅಸಮಾಧಾನಗೊಂಡಿದ್ದೇನೆ "ಎಂದು ವಾಂಗ್ ಹೇಳಿದರು. ಇದಲ್ಲದೆ, ಬೀಜಿಂಗ್ ನಲ್ಲಿ ಒಂದು ಮನೆ ಖರೀದಿಸಲು ಸಹ ಅವರ ಬಳಿ ಹಣವಿಲ್ಲವಂತೆ, ಆದ್ದರಿಂದ ಅವರು ಮದುವೆ ಆಗಿಲ್ಲ ಎಂದು ಹೇಳಿದರು.
ವಾಂಗ್ ಅವರ ವೀಡಿಯೋ 2,000 ಕ್ಕೂ ಹೆಚ್ಚು ಕಾಮೆಂಟ್ ಗಳನ್ನು ಪಡೆದಿದೆ. ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ತಮ್ಮ ಹಿರಿಯರು ಮದುವೆ ಮಾಡಿಸಲು ತಮ್ಮನ್ನು ಹೇಗೆ ಒತ್ತಾಯಿಸಿದ್ದರು ಎಂಬುದರ ಬಗ್ಗೆ ಹೇಳಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ