ಅಪಾರ್ಟ್‌ಮೆಂಟ್‌ಗಳು (Apartment) ಅಥವಾ ರೆಸಿಡೆನ್ಶಿಯಲ್ ಪ್ರದೇಶಗಳಲ್ಲಿ ಹಲವಾರು ಬೀದಿನಾಯಿಗಳು ವಾಸಿಸುತ್ತವೆ. ಇವುಗಳು ಆಹಾರಕ್ಕಾಗಿ ಇಲ್ಲಿರುವ ನಿವಾಸಿಗಳನ್ನೇ ಆಶ್ರಯಿಸಿಕೊಂಡಿರುತ್ತವೆ. ಆದರೆ ಕೆಲವೊಂದು ಸೊಸೈಟಿಗಳು ಬೀದಿನಾಯಿಗಳಿಗೆ (Street Dogs) ತಮ್ಮ ಆವರಣದೊಳಗೆ ಆಹಾರ ನೀಡುವುದಕ್ಕೆ ಅನುಮತಿಸುವುದಿಲ್ಲ. ಅಂತೆಯೇ ಸೊಸೈಟಿಯಲ್ಲಿರುವವರು ಕೂಡ ಬೀದಿ ನಾಯಿಗಳಿಗೆ ಆಹಾರ (Foods) ನೀಡಬಾರದು ಎಂಬ ಕಠಿಣ ನಿಯಮಗಳನ್ನು ಹೇರುತ್ತದೆ.
ಇಂತಹುದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬೆ ಹೈ ಕೋರ್ಟ್ ನೀಡಿರುವ ತೀರ್ಪಿನ ಅನ್ವಯ ಅಪಾರ್ಟ್‌ಮೆಂಟ್ ಹಾಗೂ ಸೊಸೈಟಿ ಪರಿಸರದಲ್ಲಿ ನಾಯಿಗಳಿಗೆ ಆಹಾರ ನೀಡುವುದು ಅಪಾರ್ಟ್‌ಮೆಂಟ್ ಮಾಲೀಕ ಸಂಘ ಅಥವಾ ಸ್ಥಳೀಯ ಸಂಸ್ಥೆಯ ಪ್ರತಿನಿಧಿಯ ಜವಾಬ್ದಾರಿಯಾಗಿದೆ ಎಂದು ತೀರ್ಪು ನೀಡಿದೆ.
ಪ್ರಕರಣವೇನು?
ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡುವ ಕೇಂದ್ರಗಳನ್ನು ಗುರುತಿಸಲು ಮತ್ತು ನವ ಮುಂಬೈ ಮಹಾನಗರ ಪಾಲಿಕೆಗೆ (ಎನ್‌ಎಂಎಂಸಿ) ನಿರ್ದೇಶನ ನೀಡುವಂತೆ ಕೋರಿ ಮುಂಬೈಯ ಸೀವುಡ್ಸ್ ರೆಸಿಡೆನ್ಶಿಯಲ್ ಕಾಂಪೆಕ್ಸ್‌ನಲ್ಲಿರುವ ಆರು ನಿವಾಸಿಗಳು ಸಲ್ಲಿಸಿರುವ ಅರ್ಜಿಯನ್ನು ಬಾಂಬೆ ಹೈಕೋರ್ಟ್ ವಿಚಾರಣೆ ನಡೆಸಿದೆ.
ಇದನ್ನೂ ಓದಿ: ಭಾರತದ ಈ ಪ್ರದೇಶದಲ್ಲಿ ಭೂಕಂಪ ಆಗೋದೇ ಇಲ್ಲ!
ಬೀದಿ ನಾಯಿಗಳಿಗೆ ಆಹಾರ ನೀಡಿದ್ದಕ್ಕಾಗಿ ಹೌಸಿಂಗ್ ಸೊಸೈಟಿಯವರು ತಮಗೆ ದಂಡ ಹೇರಿದ್ದಾಗಿಯೂ ಅರ್ಜಿದಾರರು ತಿಳಿಸಿದ್ದು ಸೀವುಡ್ಸ್ ಎಸ್ಟೇಟ್ಸ್ ಲಿಮಿಟೆಡ್ ಹಾಗೂ ಅರ್ಜಿದಾರರ ನಡುವೆ ಈ ವಿಷಯವಾಗಿ ಜಗಳವಾಗಿದೆ ಎಂದು ದೂರಿದ್ದಾರೆ.
ಅಪಾರ್ಟ್‌ಮೆಂಟ್ ಮಾಲೀಕ ಸಂಘ ಹಾಗೂ ಸ್ಥಳೀಯ ಸಂಸ್ಥೆಯ ಪ್ರತಿನಿಧಿಯ ಜವಾಬ್ದಾರಿ
ಈ ಹಿಂದಿನ ಮೊಕದ್ದಮೆಯಲ್ಲಿ ನ್ಯಾಯಾಲಯವು ಹಲವಾರು ವರ್ಷಗಳಿಂದ ಬೀದಿನಾಯಿಗಳ ಕಲ್ಯಾಣಕ್ಕಾಗಿ ಯೋಜನೆಗಳನ್ನು ಹಮ್ಮಿಕೊಂಡಿರುವ ಹಾಗೂ ಅವುಗಳ ಪಾಲನೆ ಮಾಡುತ್ತಿರುವ ಎನ್‌ಜಿಓ ದ ನಿರ್ದೇಶನವನ್ನು ಪಡೆದುಕೊಂಡಿದೆ ಎಂದು ವರದಿಯಾಗಿದೆ.
ಕೇಂದ್ರ ಸರಕಾರ ಸಿದ್ಧಪಡಿಸಿರುವ ಪ್ರಾಣಿ ಜನನ ನಿಯಂತ್ರಣ ನಿಯಮಗಳು 2023 ರ ನಿಯಮಗಳನ್ನು ಗಮನಿಸಿರುವ ಬಾಂಬೆ ನ್ಯಾಯಾಲಯ, ಅಪಾರ್ಟ್‌ಮೆಂಟ್ ಮಾಲೀಕರು ಹಾಗೂ ಸ್ಥಳೀಯ ಸಂಸ್ಥೆಯ ಪ್ರತಿನಿಧಿಗಳು ವಿಚಾರ ವಿನಿಮಯಗಳನ್ನು ಮಾಡಿಕೊಂಡು ಒಮ್ಮತದಿಂದ ಸೂಕ್ತ ನಿರ್ಧಾರ ತೆಗೆದುಕೊಂಡು ಬೀದಿ ನಾಯಿಗಳಿಗೆ ಆಹಾರ ಒದಗಿಸಬೇಕು ಎಂದು ತಿಳಿಸಿದೆ.
ನಾಯಿಗಳಿಗೆ ಆಹಾರ ನೀಡುವ ಸ್ಥಳ ಹೇಗಿರಬೇಕು?
ನಾಯಿಗಳಿಗೆ ಆಹಾರ ನೀಡುವ ಸ್ಥಳವು ಮಕ್ಕಳು ಆಟವಾಡುವ ಸ್ಥಳ, ಅಪಾರ್ಟ್‌ಮೆಂಟ್ ಪ್ರವೇಶ ಹಾಗೂ ನಿರ್ಗಮನ ದ್ವಾರ, ಮೆಟ್ಟಿಲು ಅಥವಾ ಮಕ್ಕಳು ಅಥವಾ ಹಿರಿಯ ನಾಗರಿಕರು ಆಗಾಗ್ಗೆ ಓಡಾಡುವ ಸ್ಥಳದಿಂದ ದೂರದಲ್ಲಿರಬೇಕು ಎಂದು ಸೂಚಿಸಿದೆ. ನಾಯಿಗಳಿಗೆ ಆಹಾರ ನೀಡಲು ಬಯಸವವರು ಹಾಗೂ ಶ್ವಾನ ಪ್ರೇಮಿಗಳು ಅಪಾರ್ಟ್‌ಮೆಂಟ್ ಹಾಗೂ ಹೌಸಿಂಗ್ ಸೊಸೈಟಿಯ ಮಾರ್ಗಸೂಚಿಗಳು ಹಾಗೂ ನಿಯಮಗಳನ್ನು ಮೀರದೆಯೇ ಆಹಾರ ಒದಗಿಸಬೇಕು ಎಂದು ತಿಳಿಸಿದೆ.
7 ಸದಸ್ಯರ ಪ್ರಾಣಿ ಕಲ್ಯಾಣ ಸಮಿತಿ ರಚನೆ
ಅಪಾರ್ಟ್‌ಮೆಂಟ್ ಹಾಗೂ ನಾಯಿಗಳನ್ನು ಆರೈಕೆಮಾಡುವವರ ನಡುವೆ ವಾದ ವಿವಾದಗಳು ಉಂಟಾದರೆ 7 ಸದಸ್ಯರಿರುವ ಪ್ರಾಣಿ ಕಲ್ಯಾಣ ಸಮಿತಿಯನ್ನು ರಚಿಸಿ ಅಲ್ಲಿ ತೆಗೆದುಕೊಳ್ಳುವ ತೀರ್ಪು ಅಂತಿಮವಾಗಿರುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.
ಏಳು ಸದಸ್ಯರ ಪ್ರಾಣಿ ಕಲ್ಯಾಣ ಸಮಿತಿಯಲ್ಲಿ ನಾಯಿಗೆ ಆಹಾರ ನೀಡುವವರನ್ನು ಸೇರಿಸಬೇಕಾಗಿಲ್ಲ ಎಂದು ತಿಳಿಸಿದ್ದು, ನಾಯಿಗೆ ಆಹಾರ ನೀಡುವ ಹಾಗೂ ಸಮುದಾಯ ಪ್ರಾಣಿಗಳ ಜವಬ್ದಾರಿಯನ್ನು ಖುದ್ದು ಅವರೇ ತೆಗೆದುಕೊಂಡಿರುವಾಗ ಸಮಿತಿಯಲ್ಲಿ ಅವರು ಉಪಸ್ಥಿತರಾಗಬೇಕಾಗಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ಪ್ರತಿಯೊಬ್ಬ ನಾಗರಿಕನ ಮೂಲಭೂತ ಕರ್ತವ್ಯ
ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯ ಸೆಕ್ಷನ್ 38 ರ ಅಡಿಯಲ್ಲಿ ನಿಯಮಗಳನ್ನು ಜಾರಿಗೊಳಿಸಲಾಗಿದೆ ಮತ್ತು ಸಂವಿಧಾನದ 51-ಎ (ಜಿ) ವಿಧಿಯು ಎಲ್ಲಾ ಜೀವಿಗಳ ಬಗ್ಗೆ ಸಹಾನುಭೂತಿ ಹೊಂದುವುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಕರ್ತವ್ಯವಾಗಿದೆ. ರಾಜ್ಯ ನೀತಿಯ ಡೈರೆಕ್ಟಿವ್ ಪ್ರಿನ್ಸಿಪಲ್ಸ್‌ನ ಭಾಗ IV ಅಂತಹ ನಿಯಮಗಳನ್ನು ರೂಪಿಸಲು ಸಮರ್ಥನೀಯವಾಗಿದೆ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.
ಈ ನೀತಿಗಳನ್ನು ಭಾರತದ ಅಂತಾರಾಷ್ಟ್ರೀಯ ಕಟ್ಟುಪಾಡುಗಳ ಜೊತೆಗೆ ಸೂಕ್ತ ಪ್ರಕರಣದಲ್ಲಿ ಪರಿಶೀಲಿಸಬಹುದು ಎಂದು ನ್ಯಾಯಾಲಯ ಹೇಳಿದೆ. ನಾಯಿಗಳಿಗೆ ಆಹಾರ ಉಣಿಸುವುದು ಪ್ರತಿಯೊಬ್ಬರ ನಾಗರಿಕರ ಕರ್ತವ್ಯವಾಗಿದೆ ಎಂದು ಪೀಠ ಸ್ಪಷ್ಟಪಡಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ