90ರ ದಶಕದ Cadbury ಜಾಹೀರಾತಿನ ಮರುಸೃಷ್ಟಿ: ಮಹಿಳೆಯರ ಸಾಧನೆಯ ಸಂಭ್ರಮಾಚರಣೆ

90ರ ದಶಕದಲ್ಲಿ ಅತ್ಯಂತ ಜನಪ್ರಿಯವಾಗಿದ್ದ ಕ್ಯಾಡ್‍ಬರಿ ಡೈರಿಮಿಲ್ಕ್‌ ಜಾಹೀರಾತೊಂದನ್ನು, ಇದೀಗ ಭಿನ್ನ ಪರಿಕಲ್ಪನೆಯೊಂದಿಗೆ ಹೊಸತಾಗಿ ರೂಪಿಸಲಾಗಿದ್ದು, ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಕ್ಯಾಡ್‍ಬರಿಯ ಹೊಸ ಜಾಹೀರಾತು

ಕ್ಯಾಡ್‍ಬರಿಯ ಹೊಸ ಜಾಹೀರಾತು

  • Share this:
ಜನರ ನಡುವೆ ಎಂತದ್ದೇ ಭಿನ್ನಾಭಿಪ್ರಾಯವಿರಲಿ, ಕ್ರಿಕೆಟ್ ಎಂದಾಕ್ಷಣ ಹೆಚ್ಚಾಗಿ ಎಲ್ಲವನ್ನು ಮರೆತು ಜೊತೆಯಾಗಿ ನೋಡ ಬಯಸುತ್ತಾರೆ. ಹಲವಾರು ವರ್ಷಗಳಿಂದ ಒಗ್ಗೂಡಿಸಿರುವ ಕ್ರಿಕೆಟ್, ಭಾರತೀಯರ ಅಚ್ಚುಮೆಚ್ಚಿನ ಕ್ರೀಡೆ. ನಮ್ಮ ದೇಶದ ಜಾಹಿರಾತುಗಳಲ್ಲೂ ಅಷ್ಟೆ ಕ್ರಿಕೆಟ್ ಮತ್ತು ಕ್ರಿಕೆಟಿಗರನ್ನು ಹೆಚ್ಚಾಗಿ ಬಳಸಿಕೊಳ್ಳಲಾಗುತ್ತದೆ. ಅಂತದ್ದೇ, ಕ್ರಿಕೆಟ್ ಆಟದ ದೃಶ್ಯವುಳ್ಳ, 90ರ ದಶಕದಲ್ಲಿ ಅತ್ಯಂತ ಜನಪ್ರಿಯವಾಗಿದ್ದ ಕ್ಯಾಡ್‍ಬರಿ ಡೈರಿಮಿಲ್ಕ್‌ ಜಾಹೀರಾತೊಂದನ್ನು ಇದೀಗ ಭಿನ್ನ ಪರಿಕಲ್ಪನೆಯೊಂದಿಗೆ ಹೊಸತಾಗಿ ರೂಪಿಸಲಾಗಿದ್ದು, ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

1994ರಲ್ಲಿ ಪ್ರಸಾರವಾಗುತ್ತಿದ್ದ ಕ್ಯಾಡ್‍ಬರಿ ಜಾಹೀರಾತೊಂದರಲ್ಲಿನ ದೃಶ್ಯ ಹೀಗಿದೆ... ನೀಲಿ ಹೂಗಳುಳ್ಳ ಧಿರಿಸು ತೊಟ್ಟ ಯುವತಿಯೊಬ್ಬಳು, ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕ್ರಿಕೆಟ್ ಪಂದ್ಯಾವಳಿಯಲ್ಲಿ ತನ್ನ ಪ್ರಿಯಕರನ ಬ್ಯಾಟಿಂಗ್ ನೋಡುತ್ತಾ, ಕ್ಯಾಡ್‍ಬರಿ ಚಾಕೊಲೇಟ್ ತಿನ್ನುತ್ತಿರುತ್ತಾಳೆ. ಆತ ಗೆಲುವಿನ ರನ್ ಬಾರಿಸಿದ ಕೂಡಲೇ, ಆಕೆ ಖುಷಿಯಿಂದ ಪಕ್ಕದಲ್ಲಿರುವ ಸ್ನೇಹಿತೆಯನ್ನು ಅಪ್ಪಿಕೊಂಡು, ಕೂಡಲೇ ಎದ್ದು, ಸಂತೋಷದಿಂದ ಕುಣಿಯುತ್ತಲೇ, ಆಟದ ಮೈದಾನದ ಕಾವಲುಗಾರ ತಡೆಯುತ್ತಿದ್ದರೂ ಲೆಕ್ಕಿಸದೆ, ಪ್ರಿಯಕರನ ಕಡೆ ಓಡುತ್ತಾಳೆ. ಹಿನ್ನೆಲೆಯಲ್ಲಿ ‘ಕ್ಯಾ ಸ್ವಾದ್ ಹೈ ಜಿಂದಗಿ’ ಎಂಬ ಹಾಡು ಕೇಳಿ ಬರುತ್ತದೆ.ಈ ಹಳೆಯ ಜಾಹೀರಾತು, ಯುವತಿಯೊಬ್ಬಳು ತನ್ನ ಪ್ರಿಯಕರ ಕ್ರಿಕೆಟ್‍ನ ಸಾಧನೆಗಾಗಿ ಸಂಭ್ರಮಿಸುತ್ತಿರುವುದನ್ನು ತೋರಿಸಿದರೆ, ಇದೀಗ 28 ವರ್ಷಗಳ ನಂತರದ ಹೊಸ ಜಾಹೀರಾತಿನಲ್ಲಿ ಕೊಂಚ ವಿಶೇಷವಿದೆ. ಹೊಸ ಜಾಹೀರಾತಿನಲ್ಲಿ ಕ್ರಿಕೆಟ್, ಮೈದಾನ, ಯುವಕ ಯುವತಿಯ ಪ್ರೇಮ ಮತ್ತಿತರ ಅಂಶಗಳು ಹಳೆಯದ್ದೇ ಆಗಿದ್ದರೂ, ಪರಿಕಲ್ಪನೆಯ ದೃಷ್ಟಿಕೋನ ವಿಭಿನ್ನವಾಗಿದೆ. ಹೌದು, ಈ ಹೊಸ ಜಾಹೀರಾತು ಲಿಂಗ ಬೇಧಕ್ಕೆ ಸವಾಲನ್ನು ಒಡ್ಡಿದ್ದು, ಫಲಿತಾಂಶ ಅತ್ಯಂತ ಸುಂದರವಾಗಿದೆ.

ಇದನ್ನೂ ಓದಿ: South Korea-Honorary Rescue Dog: ಸಾಕಿದ್ದ ವೃದ್ಧೆಯನ್ನು ಸಾವಿನಂಚಿನಿಂದ ರಕ್ಷಿಸಿದ ನಾಯಿಗೆ ವಿಶೇಷ ಗೌರವ

2021ರ ಹೊಸ ಜಾಹೀರಾತಿನಲ್ಲಿ, ಯುವಕ ತನ್ನ ಪ್ರೇಯಸಿಯ ಸಾಧನೆ ಕಂಡು ಖುಷಿ ಪಡುವ ಪರಿಕಲ್ಪನೆಯಿದೆ. ಈ ಜಾಹೀರಾತಿನ ದೃಶ್ಯ ಹೀಗಿದೆ. ಯುವಕನೊಬ್ಬ ಕ್ಯಾಡ್‍ಬರಿ ಚಾಕೊಲೇಟ್ ತಿನ್ನುತ್ತಾ, ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕ್ರಿಕೆಟ್ ಪಂದ್ಯಾವಳಿಯಲ್ಲಿ ತನ್ನ ಪ್ರಿಯತಮೆಯ ಬ್ಯಾಟಿಂಗನ್ನು ಅತ್ಯಂತ ಕಾತುರದಿಂದ ವೀಕ್ಷಿಸುತ್ತಿರುತ್ತಾನೆ. ಆಕೆ ಗೆಲುವಿನ ರನ್ ಬಾರಿಸಿದ ಕೂಡಲೇ, ಆತ ಖುಷಿಯಿಂದ ಪಕ್ಕದಲ್ಲಿರುವ ಗೆಳೆಯನನ್ನು ತಬ್ಬಿಕೊಂಡು, ಬಳಿಕ ಕೂಡಲೇ ಎದ್ದು ಸಂತೋಷದಿಂದ ಜಿಗಿಯುತ್ತಾ... ಕುಣಿಯುತ್ತಾ... ತಡೆಯುತ್ತಿರುವ ಕಾವಲುಗಾರನನ್ನು ಲೆಕ್ಕಿಸದೆ, ತನ್ನ ಪ್ರಿಯತಮೆಯನ್ನು ತಬ್ಬಿಕೊಳ್ಳಲು ಮೈದಾನದ ಕಡೆಗೆ ಓಡುತ್ತಾನೆ. ಹಿನ್ನೆಲೆಯಲ್ಲಿ ‘ಕ್ಯಾ ಸ್ವಾದ್ ಹೈ ಜಿಂದಗಿ’ ಎಂಬ ಹಾಡು ಕೇಳಿ ಬರುತ್ತದೆ.

ಮಹಿಳಾ ಕ್ರಿಕೆಟ್ ಯಶಸ್ಸು ಮತ್ತು ಸಾಧನೆಯ ಸಂಭ್ರಮಾಚರಣೆ

ದಶಕಗಳಿಂದಲೂ ಕ್ರಿಕೆಟ್ ಪುರುಷರ ಕ್ರೀಡೆ ಎಂದು ಪರಿಗಣಿಸಲ್ಪಟ್ಟಿರುವ ಈ ದೇಶದಲ್ಲಿ, ಇಂತಹ ಒಂದು ಜಾಹೀರಾತು ಆಟದ ಕುರಿತ ಗ್ರಹಿಕೆಯನ್ನು ಬದಲಾಯಿಸಿದೆ ಎನ್ನಬಹುದು. ಈ ಜಾಹೀರಾತು, ಕ್ರೀಡಾಪಟುವಿನ ಲಿಂಗವನ್ನು ಲೆಕ್ಕಿಸದೆ ಆಟವನ್ನು ಆನಂದಿಸಬಹುದು ಎಂಬುದನ್ನು ಬಿಂಬಿಸುತ್ತದೆ. ಅದರಲ್ಲೂ ಮುಖ್ಯವಾಗಿ, ಮಹಿಳಾ ಕಿಕೆಟ್ ಪಂದ್ಯವನ್ನು ಸಾಧಾರಣಗೊಳಿಸುವ ಮೂಲಕ ಈ ಜಾಹೀರಾತು ಮಹಿಳಾ ಕ್ರಿಕೆಟ್ ಯಶಸ್ಸು ಮತ್ತು ಸಾಧನೆಯ ಸಂಭ್ರಮಾಚರಣೆ ಕೂಡ ಮಾಡುತ್ತಿದೆ.ಈ ಜಾಹೀರಾತು ನೆಟ್ಟಿಗರಿಗೆ ಸಿಕ್ಕಾಪಟ್ಟೆ ಇಷ್ಟವಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಮೆಚ್ಚುಗೆಯ ಪ್ರತಿಕ್ರಿಯೆಗಳನ್ನು ಪಡೆಯುತ್ತಿದೆ. ಹೊಸ ಜಾಹೀರಾತಿನಲ್ಲಿರುವ ವಿಭಿನ್ನ ಬದಲಾವಣೆಯ ಕಾರಣದಿಂದ ದಿಢೀರನೆ ವೈರಲ್ ಆಗಿದೆ.

“ಅತ್ಯಂತ ಅಗತ್ಯವಿದ್ದ ಬದಲಾವಣೆ. . . .ಚೆನ್ನಾಗಿ ಮೂಡಿ ಬಂದಿದೆ @DairyMilkIn. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಬಾಲ್ಯದ ಬಹಳಷ್ಟು ನೆನಪುಗಳನ್ನು ಹೊತ್ತು ತಂದಿದೆ. . .ಕುಡೋಸ್. ನಮ್ಮ ಪುತ್ರಿಯರಿಗೆ ದಾರಿ ತೋರಿಸುತ್ತಿದೆ!” ಎಂದು ಒಬ್ಬರು ಬರೆದುಕೊಂಡಿದ್ದರೆ, ಮತ್ತೊಬ್ಬರು, “ಭಾರತದ ಅಚ್ಚುಮೆಚ್ಚಿನ ಜಾಹೀರಾತುಗಳಲ್ಲಿ ಒಂದರ ಮರುಸೃಷ್ಟಿ. ಪಾತ್ರ ಬದಲಾವಣೆಯ ಈ ಜಾಹಿರಾತು , ಭಾರತೀಯ ಸಮಾಜದಲ್ಲಿ ಮಹಿಳೆಯರು ಎಷ್ಟು ಮುಂದುವರೆದಿದ್ದಾರೆ, ಯಶಸ್ಸು ಮತ್ತು ಗೆಲುವಿನ ಭಾವನೆಗಳು ಹಾಗೆಯೇ ಉಳಿದಿವೆ ಎಂಬುದನ್ನು ತೋರಿಸುತ್ತದೆ” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Manike Mage Hithe Song: ವೈರಲ್​ ಆಗುತ್ತಿದೆ ಈ ಗಗನಸಖಿ ಮಾಡಿದ ಡ್ಯಾನ್ಸ್ ವಿಡಿಯೋ..!

“90ರ ದಶಕದಿಂದಲೂ ದೀರ್ಘ ಕಾಲದಿಂದ ಕಾಯುತ್ತಿದ್ದ ಅದ್ಭುತವಾದ ಜಾಹೀರಾತು. ಭಾರತೀಯ ಸಮಾಜದಲ್ಲಿ ಮಹಿಳೆಯರು ಎಷ್ಟು ಪ್ರಗತಿ ಸಾಧಿಸಿದ್ದಾರೆ ಎಂಬುದನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ. ..ಇನ್ನಷ್ಟು ಮುಂದೆ ಸಾಗಲಿಕ್ಕಿದೆ!! #Cadbury @DairyMilkIn.” ” ಎಂದು ಮತ್ತೊಬ್ಬ ಬಳಕೆದಾರ ಬರೆದುಕೊಂಡಿದ್ದಾರೆ.

ಮಹಿಳಾ ಕ್ರೀಡಾಪಟುಗಳು, ಪ್ರಮುಖವಾದ ಮೈಲಿಗಲ್ಲುಗಳನ್ನು ಸಾಧಿಸುವ ವಿಷಯದಲ್ಲಿ ಯಾವಾಗಲೂ ಮುಂಚೂಣಿಯಲ್ಲಿ ಇರುತ್ತಾರೆ, ಆದರೆ ಅವರಿಗೆ ಮನ್ನಣೆ ಸಿಗುವುದು ವಿರಳ. ಅವರ ಪ್ರಯತ್ನಗಳು ಮತ್ತು ಸಾಧನೆಗಳನ್ನು ಒಪ್ಪಿಕೊಳ್ಳಲು, ಇಂತಹ ಚಿಕ್ಕ ಆದರೂ ಮಹತ್ವದ ಉಪಕ್ರಮಗಳನ್ನು ತೆಗೆದುಕೊಳ್ಳುವುದು ಅವರನ್ನು ಹೆಚ್ಚು ಸಾಧನೆ ಮಾಡಲು ಉತ್ತೇಜಿಸುತ್ತದೆ.
Published by:Anitha E
First published: