ಕೋವಿಡ್ – 19ನಂತಹ ಮಾರಕ ಸಾಂಕ್ರಾಮಿಕ ರೋಗಗಳು ಪ್ರಸ್ತುತ ದಿನಗಳಲ್ಲಿ ಪ್ರತಿಯೊಬ್ಬರನ್ನು ಕಾಡುತ್ತಿದೆ. ಹೆಚ್ಚಿನ ಕುಟುಂಬಗಳಲ್ಲಿ ಕೋವಿಡ್ ಕಹಿನೆನಪುಗಳನ್ನು ಉಳಿಸಿದೆ. ಮನೆಯ ಹಿರಿಯರು, ಗೃಹಿಣಿ, ಮನೆ ಯಜಮಾನ, ಪುಟ್ಟ ಮಕ್ಕಳು ಹೀಗೆ ಪ್ರತಿಯೊಬ್ಬರ ಜೀವವನ್ನು ಈ ಸಾಂಕ್ರಾಮಿಕವು ಬಲಿ ತೆಗೆದುಕೊಂಡಿದೆ. ಕೋವಿಡ್ನಿಂದ ಬಾಧೆಗೊಳಪಟ್ಟವರು ಆ ನೋವಿನಿಂದ ಹೊರಬರುತ್ತಿದ್ದಾರೆ. ಅದೇ ರೀತಿ ಇತರರು ಸಾಂಕ್ರಾಮಿಕದಿಂದ ಉಂಟಾಗುವ ನಷ್ಟವನ್ನು ಸರಿದೂಗಿಸಲು, ಆರ್ಥಿಕವಾಗಿ ಭದ್ರತೆಯನ್ನು ಕಾಯ್ದುಕೊಳ್ಳಲು ಅನುಸರಿಸಬೇಕಾದ ಕ್ರಮಗಳನ್ನು ಈಗಿನಿಂದಲೇ ಅರಿತುಕೊಳ್ಳಬೇಕು. ಸಾಂಕ್ರಾಮಿಕ ಇಲ್ಲವೇ ಇನ್ನಿತರ ಕಷ್ಟಕರ ಸನ್ನಿವೇಶಗಳಲ್ಲಿ ನಿಮ್ಮ ಕುಟುಂಬವನ್ನು ಸಂರಕ್ಷಿಸಲು ಜೀವ ವಿಮಾ ರಕ್ಷಣೆಯನ್ನು ಖರೀದಿಸುವುದು ಮಾತ್ರವಲ್ಲ, ಇನ್ನೂ ಕೆಲ ಕ್ರಮಗಳನ್ನು ಕುಟುಂಬ ಸಂರಕ್ಷಣೆಗಾಗಿ, ಆರ್ಥಿಕ ಸುಸ್ಥಿರತೆಗಾಗಿ ಮಾಡಬೇಕಾಗುತ್ತದೆ. ನೀವು ಹೆಚ್ಚು ಮೊತ್ತದ ವಿಮಾ ಖರೀದಿ ಮಾಡಿದ್ದರೂ ಒಮ್ಮೊಮ್ಮೆ ಈ ವಿಮೆ ಕೂಡ ನಿಮ್ಮ ಕುಟುಂಬವನ್ನು ರಕ್ಷಿಸದೇ ಇರುವ ಪರಿಸ್ಥಿತಿ ಉಂಟಾಗಬಹುದು.
ಹಾಗಾದರೆ ಇದಕ್ಕೆ ಪರಿಹಾರವೇನು ಎಂಬುದನ್ನು ನೋಡುವುದಾದರೆ ನಿಮ್ಮ ಜೀವ ವಿಮಾ ಪಾಲಿಸಿಯನ್ನು ವಿವಾಹಿತ ಮಹಿಳೆಯರ ಆಸ್ತಿ ಕಾಯ್ದೆ (MWPA) ವ್ಯಾಪ್ತಿಗೆ ತಂದಲ್ಲಿ ನಿಮ್ಮ ಹಕ್ಕಿನ ಮೊತ್ತವು ನಿಮ್ಮ ಪತ್ನಿ ಹಾಗೂ ಮಕ್ಕಳಿಗೆ ಮಾತ್ರ ಸೇರುತ್ತದೆ. ಹಾಗೂ ಅವರಿಗೆ ಆರ್ಥಿಕ ಭದ್ರತೆ ನೀಡುತ್ತದೆ. ಹಾಗಾದರೆ ಈ ಕಾಯ್ದೆಯ ಇನ್ನಷ್ಟು ಪ್ರಯೋಜನಗಳ ಬಗ್ಗೆ ಅರಿತುಕೊಳ್ಳೋಣ.
ನಿಮ್ಮ ಪತ್ನಿ ಹಾಗೂ ಮಕ್ಕಳಿಗೆ ಆರ್ಥಿಕ ಸುರಕ್ಷತೆ
ವ್ಯಕ್ತಿಯ ಮರಣದ ನಂತರ ಅಥವಾ ದಿವಾಳಿಯಾದ ಸಮಯದಲ್ಲಿ ಆತನ ಸ್ವತ್ತುಗಳನ್ನು ಸಾಲದ ಹೊಣೆಗಾರಿಕೆಯನ್ನು ತೀರಿಸಲು ಬಳಸಲಾಗುತ್ತದೆ. ಸಾಲಗಾರರಿಗೆ ನೀಡುವ ಬಾಕಿ ಇತ್ಯರ್ಥವಾದ ನಂತರವೇ ಉಳಿದ ಸಂಪತ್ತು ಆತನ ಕುಟುಂಬಕ್ಕೆ ಸೇರುವುದು. ಆದರೆ MWPA ಕಾಯ್ದೆಯನ್ವಯ ಕುಟುಂಬದ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ರಕ್ಷಿಸಲಾಗುತ್ತದೆ. ವಿವಾಹಿತ ವ್ಯಕ್ತಿ ಖರೀದಿಸಿದ ಈ ಯೋಜನೆಯು ಆತನ ಆಸ್ತಿಯ ಭಾಗವಾಗಿರುವುದಿಲ್ಲ. ಹಾಗಾಗಿ ಆತನ ಸಾಲ ಮತ್ತು ಬಾಧ್ಯತೆಗಳನ್ನು ತೀರಿಸಲು ಇದನ್ನು ಬಳಸಲಾಗುವುದಿಲ್ಲವೆಂದು ಖೈತಾನ್ ಅಂಡ್ ಕೋ ಸಂಸ್ಥೆಯ ಪಾಲುದಾರರಾದ ಶಬ್ನಮ್ ಶೇಖ್ ವಿವರಿಸುತ್ತಾರೆ. ದಿವಾಳಿಯಾಗುವ ಅಪಾಯವನ್ನು ಎದುರಿಸುವ ವ್ಯವಹಾರಸ್ಥರಿಗೆ, ಸಂಬಳ ಪಡೆಯುವವರಿಗೆ ಕೂಡ ಈ ಕಾಯ್ದೆ ಉಪಯುಕ್ತವಾಗಿದೆ ಎಂದು ಹೇಳುತ್ತಾರೆ.
MWPA ವ್ಯಾಪ್ತಿಯಲ್ಲಿ ಪಾಲಿಸಿ ಖರೀದಿ ಮಾಡುವುದರಿಂದ ಕ್ಲೈಮ್ ಆದಾಯವನ್ನು ವರ್ಗಾಯಿಸುವ ಟ್ರಸ್ಟ್ನ ರಚನೆಗೆ ಇದು ಕಾರಣವಾಗುತ್ತದೆ. ಪಾಲಿಸಿದಾರರ ಪತ್ನಿ, ಮಕ್ಕಳು ಟ್ರಸ್ಟ್ನ ಫಲಾನುಭವಿಗಳಾಗಿರುತ್ತಾರೆ. ಮೆಚ್ಯುರಿಟಿ ಅಥವಾ ಮರಣ ಪ್ರಯೋಜನವನ್ನು ಫಲಾನುಭವಿಗಳಿಗೆ ವರ್ಗಾಯಿಸಲಾಗುತ್ತದೆ. ಜೀವ ವಿಮಾ ಕಂಪನಿಯಿಂದ ಪಡೆದ ಆದಾಯದ ಮೇಲೆ ಸಾಲಗಾರನಿಗೆ ಯಾವುದೇ ಹಕ್ಕು ಇರುವುದಿಲ್ಲ” ಎಂದು Tata-AIA ಜೀವ ವಿಮೆಯ ಮುಖ್ಯ ವಿತರಣಾ ಅಧಿಕಾರಿ ವೆಂಕಿ ಅಯ್ಯರ್ ಹೇಳುತ್ತಾರೆ.
ಈ ಕಾಯ್ದೆಯ ವ್ಯಾಪ್ತಿಯಲ್ಲಿ ಪಾಲಿಸಿಗಳನ್ನು ಖರೀದಿಸುವುದರಿಂದ ಪಾಲಿಸಿದಾರರ ಪತ್ನಿ, ಮಕ್ಕಳು ಕೂಡು ಕುಟುಂಬದಲ್ಲಿ ವಾಸಿಸುತ್ತಿದ್ದರೆ ಅವರ ಹಿತಾಸಕ್ತಿಗಳನ್ನು ರಕ್ಷಿಸುತ್ತದೆ. ಪಾಲಿಸಿದಾರ ಸಾಲದ ಹೊರೆಯಿಂದ ಬಳಲುತ್ತಿದ್ದು ಮರಣ ಹೊಂದಿದ ಸಮಯದಲ್ಲಿ ಈ ಪಾಲಿಸಿಗಳಿಂದ ಬರುವ ಹಣವು ಪತ್ನಿ, ಮಕ್ಕಳ ಖಾತೆಯನ್ನು ತಲುಪುತ್ತದೆ. ಆರ್ಥಿಕ ಭದ್ರತೆಯನ್ನು ಖಾತ್ರಿಗೊಳಿಸುತ್ತದೆ.
ಷರತ್ತುಗಳು ಅನ್ವಯ
ವಿವಾಹಿತ ಪುರುಷರಿಗೆ ಮಾತ್ರವೇ ಈ ಪಾಲಿಸಿ ಲಭ್ಯವಿದ್ದು ಪಾಲಿಸಿದಾರರ ಪತ್ನಿ, ಮಕ್ಕಳು ಮಾತ್ರವೇ ಇದರ ಫಲಾನುಭವಿಗಳಾಗಿರುತ್ತಾರೆ. ನಿಮ್ಮ ಪತ್ನಿ, ಮಕ್ಕಳ ಅನುಕೂಲಕ್ಕಾಗಿ ಮಾತ್ರವೇ ಪಾಲಿಸಿಯನ್ನು ತೆಗೆದುಕೊಳ್ಳಲಾಗಿದೆ ಎಂಬುದನ್ನು ನೀವು ಖಚಿತಪಡಿಸಬೇಕಾಗುತ್ತದೆ. ಇನ್ನು ವಿಚ್ಛೇದನದಂತಹ ಕೆಲವೊಂದು ಸನ್ನಿವೇಶಗಳನ್ನು ಕೂಡ ಪಾಲಿಸಿ ಪರಿಗಣನೆಗೆ ತೆಗೆದುಕೊಳ್ಳುತ್ತದೆ.
ವಿಧುರ ಅಥವಾ ವಿಚ್ಛೇದಿತ ವ್ಯಕ್ತಿ ಕೂಡ ತಮ್ಮ ಮಕ್ಕಳ ಅನುಕೂಲಕ್ಕಾಗಿ ಈ ಪಾಲಿಸಿ ಖರೀದಿಸಬಹುದಾಗಿದೆ. ಇನ್ನು ನಿಮ್ಮ ಸಾಲದಾರರಿಗೆ ಮೋಸ ಮಾಡುವ ಉದ್ದೇಶದಿಂದ ಕೂಡ ನೀವು ಈ ಪಾಲಿಸಿ ತೆಗೆದುಕೊಂಡಿರಬಾರದು ಎಂದು ಶೇಖ್ ಹೇಳುತ್ತಾರೆ. ಸಾಲದಾರರಿಗೆ ಮೋಸ ಮಾಡುವ ಉದ್ದೇಶದಿಂದ ಪಾಲಿಸಿಗೆ ನೀವು ಚಂದಾದಾರರಾದರೆ ಪಾಲಿಸಿ ವ್ಯಾಪ್ತಿಗೆ ಬರುವ ಅನುಕೂಲಗಳನ್ನು ನಿರ್ಬಂಧಿಸಲಾಗುತ್ತದೆ.
MWP ಮತ್ತು ಮಹಿಳಾ ವಿಮಾ ಪಾಲಿಸಿ
ಈ ಕಾಯ್ದೆಯು 1874 ರಲ್ಲಿ ಜಾರಿಗೆ ಬಂದಿತು ಹಾಗೂ ಪುರುಷರು ಮಾತ್ರವೇ ಈ ಪಾಲಿಸಿಯನ್ನು ತೆಗೆದುಕೊಳ್ಳಬಹುದಾಗಿದೆ. ಇನ್ನು ಈ ಪಾಲಿಸಿಯು ಕ್ರಿಶ್ಚಿಯನ್ ಹಾಗೂ ಪಾರ್ಸಿ ಸಮುದಾಯಗಳ ವಿವಾಹಿತ ಅಥವಾ ವಿಚ್ಛೀದಿತ ಮಹಿಳೆಯರಿಗೆ ಅನ್ವಯಿಸುತ್ತದೆ. ಹಾಗೂ ಹಿಂದೂ, ಸಿಖ್, ಬೌದ್ಧ, ಮುಹಮ್ಮದಾನ್ ಹಾಗೂ ಜೈನ ಸಮುದಾಯದ ಮಹಿಳೆಯರಿಗೆ ಅನ್ವಯಿಸುವುದಿಲ್ಲ.
ಕ್ರೈಸ್ತ ಹಾಗೂ ಪಾರ್ಸಿ ಸಮುದಾಯದ ಮಹಿಳೆಯರು ತಮ್ಮ ಪರವಾಗಿ ಹಾಗೂ ಪತಿಯಿಂದ ಸ್ವತಂತ್ರರಾಗಿ ವಿಮಾ ಪಾಲಿಸಿಯನ್ನು ಮಾಡಬಹುದು. ವರಮಾನವನ್ನು ಆಕೆಯ ಪ್ರತ್ಯೇಕ ಆಸ್ತಿಯೆಂದು ಪರಿಗಣಿಸಲಾಗುತ್ತದೆ. ಆದರೆ ಈ ಪಾಲಿಸಿಯು ಆಕೆಗೆ ಸಾಲಗಾರರಿಂದ ರಕ್ಷಣೆಯನ್ನು ನೀಡುತ್ತದೆಯೇ ಎಂಬುದಕ್ಕೆ ಯಾವುದೇ ಸ್ಪಷ್ಟ ಉಲ್ಲೇಖವಿಲ್ಲ. ಈ ವಿಮೆಯನ್ನು ಮಹಿಳಾ ಚಂದಾದಾರರ ಸಾಲಗಳನ್ನು ತೀರಿಸಲು ಬಳಸಲಾಗುತ್ತದೆಯೇ ಎಂಬುದು ಒಂದು ಪ್ರಶ್ನೆಯಾಗಿದೆ. ತಾಂತ್ರಿಕವಾಗಿ ಗಮನಿಸುವುದಾದರೆ ವರಮಾನವನ್ನು ಪ್ರತ್ಯೇಕ ಆಸ್ತಿಯೆಂದು ಪರಿಗಣಿಸುವುದಾದಲ್ಲಿ ಇದನ್ನು ಸಾಲವನ್ನು ತೀರಿಸಲು ಬಳಸಬಹುದಾಗಿದೆ ಎಂದು ಅಯ್ಯರ್ ಹೇಳುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ