ಮದುವೆ (Marriage) ಅನ್ನೋದು ಹೆಣ್ಣಿನ ಬಾಳಲ್ಲಿ ಮಹತ್ವದ ಘಟ್ಟ. ಗೊತ್ತಿಲ್ಲದವರ ಮಧ್ಯೆ ಹೋಗಿ ಅವರಲ್ಲೊಬ್ಬಳು ಅನ್ನೋ ಹಾಗೆ ಬದುಕುವುದು ಕಷ್ಟವೇ. ಆದರೆ ನಮ್ಮಲ್ಲಿ ಪ್ರತಿ ಹೆಣ್ಣಿಗೂ ಅದು ಅನಿವಾರ್ಯ. ಗಂಡನ ಮನೆಗೆ ಹೋಗಿ ಬಾಳುವುದು ಇಲ್ಲಿನ ಸಂಪ್ರದಾಯ. ಹೀಗೆ ಗಂಡನ ಮನೆಯ ದೀಪ ಬೆಳಗಲು ಹೋಗುವಂಥ ಹೆಣ್ಣಿನ ಅದೃಷ್ಟ ಚೆನ್ನಾಗಿದ್ದರೆ ಅಲ್ಲಿ ಅಪ್ಪ ಅಮ್ಮನಂಥದ್ದೇ ಅತ್ತೆ ಮಾವ, ಬೆಂಬಲ ನೀಡುವ ಗಂಡ ಸಿಗುತ್ತಾರೆ. ಅಷ್ಟಕ್ಕೂ ಇಂದು ಕಾಲ ಬದಲಾಗಿದೆ. ಹೆಣ್ಣು ಸ್ವಾವಲಂಭಿಯಾಗುತ್ತಿದ್ದಾಳೆ. ಅದರೊಂದಿಗೆ ಆಕೆಯ ಆದ್ಯತೆಗಳೂ ಬದಲಾಗುತ್ತಿವೆ. ಬರೀ ಮನೆ- ಸಂಸಾರ- ಗಂಡ, ಮಕ್ಕಳು ಎಂದೆನ್ನದೇ ತನ್ನ ಕಾಲ ಮೇಲೆ ನಿಲ್ಲಲು ಹೆಣ್ಣು ಪ್ರಯತ್ನಿಸುತ್ತಿದ್ದಾಳೆ. ಮಧ್ಯಪ್ರದೇಶದ (Madhya Pradesh) ಹೆಣ್ಣುಮಗಳು ಕೂಡ ಇಂಥದ್ದೇ ಸ್ವಾವಲಂಬಿಯಾಗುವತ್ತ ಹೆಜ್ಜೆ ಇಟ್ಟಿದ್ದಾಳೆ.
ಹೌದು, ಈ ಹುಡುಗಿಯ ಅದೃಷ್ಟ ಚೆನ್ನಾಗಿತ್ತು. ಜೀವನದ ಕನಸನ್ನು ನನಸಾಗಿಸಲು ಜೊತೆಯಾಗಿ ನಿಲ್ಲುವ ಪತಿ ಸಿಕ್ಕಿದ್ದಾರೆ. ಹಾಗೆಯೇ ಸೊಸೆಗೆ ಬೆಂಬಲವಾಗಿ ನಿಲ್ಲುವ ಅತ್ತೆ ಸಿಕ್ಕಿದ್ದಾರೆ. ಮದುವೆಯ ದಿನವೇ ಹೋಗಿ ಪರೀಕ್ಷೆ ಬರೆಯಲು ಗಂಡ ಹಾಗೂ ಗಂಡನ ಮನೆಯವರು ಬೆಂಬಲ ನೀಡಿದ್ದಾರೆ.
ಮದುವೆ ಎಂದರೆ ಶಾಸ್ತ್ರ ಸಂಪ್ರದಾಯಗಳು ಹಲವಾರು ಇರುತ್ತವೆ. ಅಂಥದ್ರಲ್ಲಿ ಸೊಸೆಯಾದವಳನ್ನು ಪರೀಕ್ಷೆಗೆ ಕಳುಹಿಸಿ ಶಾಸ್ತ್ರಕ್ಕಾಗಿ ಸುಮಾರು 5 ಗಂಟೆಗಳ ಕಾಲ ಗಂಡ ಹಾಗೂ ಅತ್ತೆ ಕಾದು ಕುಳಿತಿದ್ದರು.
ಇದನ್ನೂ ಓದಿ: ನಾನ್‌ವೆಜ್ ಮಾಡುವಾಗ ಅಡುಗೆ ಕೋಣೆ ಕಿಟಕಿ ಮುಚ್ಚಿ! ಪಕ್ಕದ ಮನೆಗೆ ಸಸ್ಯಹಾರಿ ಕುಟುಂಬ ಬರೆದ ಪತ್ರ ಫುಲ್ ವೈರಲ್
ವಿದಾಯಿ ಶಾಸ್ತ್ರದ ದಿನವೇ ಇತ್ತು ಪರೀಕ್ಷೆ!
ಮಧ್ಯಪ್ರದೇಶದ ಸತ್ನಾದ ವಶಿಷ್ಠ ಮುನಿ ತ್ರಿಪಾಠಿ ಅವರ ಪುತ್ರಿ ಶಿವಾನಿ ತ್ರಿಪಾಠಿ ಅವರ ವಿವಾಹವು ಸತ್ಯನಾರಾಯಣ ಪಯಾಸಿ ಅವರ ಪುತ್ರ ಅಭಿಷೇಕ್ ಪಯಾಸಿ ಅವರೊಂದಿಗೆ ಮೇ 10 ರಂದು ನಡೆದಿದೆ. ನಂತರ 'ವಿದಾಯಿ' ಶಾಸ್ತ್ರವು ಮೇ. 11 ರಂದು ನಡೆಯಬೇಕಿತ್ತು. ಆದರೆ ಶಿವಾನಿ ಅವರ ಎಂಪಿ ಟ್ರೇಡ್ ಕ್ಲಾಸ್ 2 ಪೇಪರ್ ಕೂಡ ಅದೇ ದಿನ ಇತ್ತು.
ಶಿವಾನಿ ಪರೀಕ್ಷೆಯನ್ನು ಬರೆಯುವ ಇಚ್ಛೆಯನ್ನು ಪತಿ ಹಾಗೂ ಪತಿಯ ಮನೆಯವರ ಮುಂದೆ ವ್ಯಕ್ತಪಡಿಸಿದ್ದಳು. ಆದರೆ ಇದಕ್ಕೆ ಯಾವುದೇ ತಕರಾರು ತೆಗೆಯದ ಅತ್ತೆಯ ಮನೆಯವರು ಆಕೆಯನ್ನು ಬೆಂಬಲಿಸಿದರು. ಶಿವಾನಿ ನಿರ್ಧಾರಕ್ಕೆ ಬೆಂಬಲವಾಗಿ ನಿಂತರು. ನಂತರದಲ್ಲಿ ಶಿವಾನಿ ತನ್ನ ಪರೀಕ್ಷಾ ಕೇಂದ್ರದಿಂದ ಹಿಂತಿರುಗಿದ ನಂತರ ಅವರು 'ವಿದಾಯಿ' ಸಮಾರಂಭವನ್ನು ನಡೆಸುವುದೆಂದು ತೀರ್ಮಾನಿಸಲಾಯಿತು.
ವಧುವಿಗಾಗಿ ತಾಳ್ಮೆಯಿಂದ ಕಾದ ಪತಿ
ಮಾಧ್ಯಮದ ಪ್ರಕಾರ, ಕೆಂಪು ಬಣ್ಣದ ಸೀರೆಯುಟ್ಟು, ಒಡವೆ ತೊಟ್ಟು ವಧುವಿನ ಅಲಂಕಾರದಲ್ಲಿದ್ದ ಶಿವಾನಿ ಪರೀಕ್ಷೆಗೆ ಹಾಜರಾಗಿದ್ದರು. ವಧುವಿನ ಅಲಂಕಾದಲ್ಲಿ ಮದುವೆಯ ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ನಂತರ ಪರೀಕ್ಷಾ ಹಾಲ್‌ಗೆ ಧಾವಿಸಿದ್ದು, ಪರೀಕ್ಷೆ ಬರೆದಿದ್ದಾರೆ. ಈ ವೇಳೆ ಆಕೆಯ ಪತಿ ಮತ್ತು ಅತ್ತೆ ಸುಮಾರು ಐದು ಗಂಟೆಗಳ ಕಾಲ ತಾಳ್ಮೆಯಿಂದ ಕಾಯುತ್ತಿದ್ದರು.
ಇನ್ನು ವರದಿಗಳ ಪ್ರಕಾರ, ಶಿವಾನಿ ತನ್ನ ಅತ್ತೆಯ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ. ಪತಿ ಕೂಡ ಶಿವಾನಿ ಆಸೆಗೆ ಬೆಂಬಲ ಸೂಚಿಸಿದ್ದು, ಅಂತಹ ಅವಕಾಶಗಳು ಮತ್ತೆ ಮತ್ತೆ ಬರುವುದಿಲ್ಲ. ಆದ್ದರಿಂದ ಪರೀಕ್ಷೆಗೆ ಹಾಜರಾಗಬೇಕು ಎಂದು ಹೇಳಿದ್ದರು. ಅದಕ್ಕಾಗಿಯೇ ಮೊದಲು ಪರೀಕ್ಷೆ ಮತ್ತು ನಂತರ ವಿದಾಯಿ ಎಂದು ನಾವೆಲ್ಲರೂ ಒಪ್ಪಿಕೊಂಡಿದ್ದೇವೆ ಎಂದು ಅವರು ಹೇಳಿದ್ದಾರೆ.
ಅನೇಕ ಸಂದರ್ಭಗಳಲ್ಲಿ ಗಂಡನಾದವನು ಹಾಗೂ ಗಂಡನ ಮನೆಯವರು ಹೊಸತರಲ್ಲಿ ಇಷ್ಟೇ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಬೆಂಬಲ ನೀಡುತ್ತಾರೆ. ಆದರೆ ಕಾಲಾನಂತರ ಅವರ ನಿರೀಕ್ಷೆಗಳು ಬದಲಾಗುತ್ತದೆ. ಬರೀ ಪರೀಕ್ಷೆಗೆ ಮಾತ್ರವಲ್ಲದೇ ಆಕೆಯ ವೃತ್ತಿ ಹಾಗೂ ಬದುಕಿನಲ್ಲಿಯೂ ಹೀಗೆಯೇ ಬೆಂಬಲ ನೀಡಿದರೆ ಆ ಹೆಣ್ಣುಮಗಳ ಬಾಳು ಬಂಗಾರವಾಗುವುದರಲ್ಲಿ ಸಂಶಯವೇ ಇಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ