ನೀರಿನ ಆಳದಲ್ಲಿ ಊಹೆಗೆ ನಿಲುಕದ ಅದೆಷ್ಟೋ ಜಲಚರಗಳಿವೆ. ಆಮೆ, ಮೀನು, ಆಕ್ಟೋಪಸ್, ಮೊಸಳೆ ಇನ್ನೂ ಸಾವಿರಾರು ಪ್ರಬೇಧಗಳಿವೆ. ಅದರಲ್ಲೂ ಮೀನು ನೀರನ್ನೇ ಆವರಿಸಿರುವ ದೊಡ್ಡ ಸಂಕುಲ. ಮೀನುಗಳಲ್ಲಿ ಎಷ್ಟು ವಿಧಗಳಿವೆ ಅನ್ನೋದನ್ನ ಲೆಕ್ಕ ಹಾಕೋಕೆ ಸಾಧ್ಯವಿಲ್ಲ. ಅಷ್ಟೊಂದು ವಿಸ್ತಾರವಾಗಿದೆ ಈ ಮತ್ಸ್ಯಲೋಕ. ಸಿಹಿ ನೀರಿನಲ್ಲಿರುವ ಮೀನು, ಉಪ್ಪು ನೀರಲ್ಲಿ ವಾಸಿಸುವ ಮೀನು ಹೀಗೆ ಮೀನಿನ ವಾಸ ಸ್ಥಳ ಕೂಡ ಬೇರೆಬೇರೆಯದ್ದಾಗಿರುತ್ತದೆ. ಪ್ರಪಂಚದಾದ್ಯಂತ ಮೀನು ಮಾರುಕಟ್ಟೆ (Fish Market) ಹೆಮ್ಮರವಾಗಿ ಬೆಳೆದಿದೆ. ಮೀನುಗಳಲ್ಲಿ ಈ ಮೇಲೆ ಹೇಳಿದಂತೆ ಸಾವಿರಾರು ಪ್ರಕಾರಗಳಿವೆ. ದೊಡ್ಡದು, ಚಿಕ್ಕದು ಅಂತಾ ಗಾತ್ರದಲ್ಲೂ ವ್ಯತ್ಯಾಸ ಇದೆ. ಅಂತೆಯೇ ಈ ಮೀನುಗಳಲ್ಲಿ (Fish) ಚಿನ್ನ, ಡೈಮಂಡ್ (Diamond) ಅಷ್ಟೇ ಬೆಲೆಬಾಳುವ ಮೀನುಗಳು ಸಹ ಇವೆ.
ಕೋಟಿ ಬೆಲೆಬಾಳುವ ಮೀನು!
ಹೌದು ಮೀನುಗಳಲ್ಲೂ ಸಹ ಅತ್ಯಂತ ದುಬಾರಿಯಾಗಿರುವ ಮೀನೊಂದಿದೆ. ಇದು ಸಾವಿರ, ಲಕ್ಷ ಬೆಲೆ ಬಾಳುವುದಲ್ಲ ಬದಲಿಗೆ ಕೋಟಿ ಕೋಟಿ ರೂಪಾಯಿ ಬೆಲೆಬಾಳುವ ಮೀನು ಇದು. ಅರೇ! ಕೋಟಿಗೆ ಬೆಲೆಬಾಳುವ ಮೀನು ಒಂದಿದೆಯೇ ಎಂದು ನಿಮಗೆ ಒಂದು ಕ್ಷಣ ತಲೆ ಗಿರ್ ಅನ್ನಬಹುದು ಆದರೆ ಇದು ನಿಜ ಕಣ್ರೀ. ಇತ್ತೀಚೆಗೆ ಮಾರಾಟವಾದ ಮೀನೊಂದರ ಬೆಲೆ ಬರೋಬ್ಬರಿ ಎರಡು ಕೋಟಿ ರೂಪಾಯಿ. ಅದ್ಯಾವದಪ್ಪಾ ಕೋಟಿ ಬೆಲೆ ಬಾಳುವ ಮೀನು ಅಂತೀರಾ ಇಲ್ಲಿದೆ ನೋಡಿ ವಿವರ.
ವಿಶ್ವದ ದುಬಾರಿ ಮೀನು ಬ್ಲೂಫಿನ್ ಟೂನಾ ಮೀನು
ವಿಶ್ವದ ಅತ್ಯಂತ ದುಬಾರಿ ಮೀನು ಎಂದರೆ ಅದು ಬ್ಲೂಫಿನ್ ಟೂನಾ ಮೀನು. ಜಪಾನಿನಲ್ಲಿ ಗುರುವಾರ ನಡೆದ ಹೊಸ ವರ್ಷದ ಹರಾಜಿನಲ್ಲಿ ಬ್ಲೂಫಿನ್ ಟೂನಾ ಮೀನು 2 ಕೋಟಿ ರೂ.ಗೂ ಹೆಚ್ಚು ಬೆಲೆಗೆ ಮಾರಾಟವಾಗಿದೆ. ವರ್ಷದ ಮೊದಲ ಮಾರಾಟವು ಕಳೆದ ವರ್ಷದ ಬೆಲೆಗಿಂತ ಎರಡು ಪಟ್ಟು ಹೆಚ್ಚಾಗಿದೆ ಎಂದು ವ್ಯಾಪಾರಿ ಮೂಲಗಳು ತಿಳಿಸಿವೆ.
ಬ್ಲೂಫಿನ್ ಟೂನಾ ಮೀನು
Asahi.com ವೆಬ್ಸೈಟ್ನ ಪ್ರಕಾರ ಬ್ಲೂಫಿನ್ ಟೂನಾ ಮೀನಿನಲ್ಲಿ ಎರಡು ಪ್ರಕಾರಗಳಿವೆ. ಒಂದು ಪೆಸಿಫಿಕ್ ಬ್ಲೂಫಿನ್ ಟೂನಾ ಮತ್ತೊಂದು ಅಟ್ಲಾಂಟಿಕ್ ಬ್ಲೂಫಿನ್ ಟೂನಾ ಮೀನು. ಎಲ್ಲಾ ಟೂನಾ ಜಾತಿಗಳಲ್ಲಿ, ಈ ಎರಡು ಜಾತಿ ಮೀನುಗಳು ದೊಡ್ಡದಾಗಿದೆ.
ಗಾತ್ರದಲ್ಲಿ ದೊಡ್ಡ ಮೀನು
ಈ ಬ್ಲೂಫಿನ್ ಟೂನಾ ಮೀನುಗಳು ನಾಲ್ಕು ಮೀಟರ್ಗಳಷ್ಟು ದೊಡ್ಡದಾಗಿರುತ್ತವೆ ಮತ್ತು ಸುಮಾರು 600 ಕಿಲೋಗಳಷ್ಟು ಒಂದು ಮೀನು ತೂಗುತ್ತವೆ.
ಟೂನಾ ಜಾತಿಯ ಮೀನು ಗಾತ್ರದಲ್ಲಿ ಮಾತ್ರವಲ್ಲದೇ ವೇಗವಾಗಿ ಸಹ ಈಜುತ್ತದೆ. ಇದರ ಬಣ್ಣ ಕೂಡ ಸುಂದರವಾಗಿದೆ. ಸಾಮಾನ್ಯವಾಗಿ ಟೂನಾ ಬೆಳ್ಳಿ ಬಣ್ಣದಲ್ಲಿದ್ದರೆ ಬ್ಲೂಫಿನ್ ಟೂನಾ ಮೀನುಗಳು ಕಪ್ಪು ಬಣ್ಣದಲ್ಲಿರುತ್ತವೆ.
ಅದಕ್ಕೆ ಇವುಗಳನ್ನು ಕಪ್ಪು ವಜ್ರ ಅಂತಾನೂ ಕರೆಯಲಾಗುತ್ತದೆ. ಈ ಮೀನುಗಳು ಸುಮಾರು ನಲವತ್ತು ವರ್ಷ ಜೀವಿತಾವಧಿ ಹೊಂದಿವೆ. ಹೆಚ್ಚಿನ ಬೇಡಿಕೆಯಿಂದಾಗಿ ಇವುಗಳನ್ನು ಸಾಕಷ್ಟು ಪ್ರಮಾಣದಲ್ಲಿ ಹಿಡಿಯಲಾಗುತ್ತದೆ.
ಅದಕ್ಕಾಗಿಯೇ ಅಟ್ಲಾಂಟಿಕ್ ಟೂನಾ ಮೀನು ಅವನತಿಯ ಹಂತದಲ್ಲಿದೆ. ವೆಬ್ಸೈಟ್ನ ಪ್ರಕಾರ, ಈ ಮೀನುಗಳು ಬೆಳೆಯುತ್ತಿರುವಾಗ ಅವುಗಳನ್ನು "ಮೆಜಿ" ಅಥವಾ "ಯೋಕೋವಾ" ಎಂದು ಕರೆಯಲಾಗುತ್ತದೆ.
ಇದನ್ನೂ ಓದಿ: ಟ್ರಿಪ್ ಹೋದ ಹುಡುಗಿ ಮೇಲೆ ಮಂಗಗಳ ಅಟ್ಯಾಕ್; ಗರ್ಲ್ ಶಾಕ್, ಮಂಕಿ ರಾಕ್!
ಈ ಮೀನು ತಿನ್ನಲು ಕೂಡ ಅಷ್ಟೇ ರುಚಿಯಾಗಿರುತ್ತಂತೆ. ಇದನ್ನು ತೆಳುವಾಗಿ ಕತ್ತರಿಸಿ ತುಂಡು ಮಾಡಿ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ.
ಜಪಾನ್ನಲ್ಲಿ ಈ ಮೀನು ತುಂಬಾ ಪ್ರಸಿದ್ಧಿ ಹೊಂದಿದ್ದು ಹೆಚ್ಚಿನ ಬೇಡಿಕೆಯ ಮೀನಾಗಿದೆ. Smithsonian.org ಬ್ಲೂಫಿನ್ ಟೂನಾವನ್ನು ವಿಶ್ವದ 'ಅತ್ಯಂತ ಬೆಲೆಬಾಳುವ ಮೀನು' ಎಂದು ವರದಿ ಮಾಡಿದೆ.
ದಶಕಗಳ ಹಿಂದೆ, ಬ್ಲೂಫಿನ್ ಟೂನಾ ಮೀನುಗಳನ್ನು ಸಮುದ್ರದ ಆಳಕ್ಕೆ ಪ್ರಾಣಿಗಳ ಆಹಾರವಾಗಿ ಎಸೆಯಲಾಗುತ್ತಿತ್ತು. ಆದರೆ 1970 ರ ದಶಕದ ಕೆಲ ಬದಲಾವಣೆಗಳ ನಂತರ ಜಪಾನ್ನಲ್ಲಿ ಈ ಮೀನಿಗೆ ಬೇಡಿಕೆ ಬಂತು. ಅಲ್ಲದೇ ಬೀಫ್ ಮಾಂಸ ಅಲ್ಲಿ ಆ ವೇಳೆ ಜನಪ್ರಿಯತೆಯನ್ನು ಗಳಿಸಿದ ನಂತರ ಬ್ಲೂಫಿಶ್ ಟೂನಾ ಬೇಡಿಕೆ ಹೆಚ್ಚಾಯಿತು.
ಈ ಮೀನು ಏಕೆ ದುಬಾರಿಯಾಗಿದೆ?
ಯುರೋಪಿನಾದ್ಯಂತ ಬ್ಲೂಫಿನ್ ಟೂನಾಮೀನಿನ ಬೆಲೆ ಭಾರಿ ದುಬಾರಿಯಾಗಿದೆ. ಹಾಗೆಯೇ ಇಲ್ಲಿ ಈ ಮೀನಿಗೆ ಗಾಳ ಹಾಕುವುದು; ಮಾರಾಟ ಮಾಡುವುದು ಅಷ್ಟು ಸುಲಭದ ಮಾತಲ್ಲ. ಏಕೆಂದ್ರೆ, ಈ ಮೀನನ್ನು ಹಿಡಿಯುವುದು ಹಾಗೂ ಮಾರಾಟ ಮಾಡುವುದು ಬ್ರಿಟನ್ನಲ್ಲಿ ಸಂಪೂರ್ಣವಾಗಿ ಕಾನೂನುಬಾಹಿರವಾಗಿದೆ.
ಈ ಮೀನು ಜಪಾನ್ ದೇಶಗಳಲ್ಲಿ ಮೂಲಭೂತ ಪೂರೈಕೆ ಮತ್ತು ಬೇಡಿಕೆ ಹೊಂದಿದೆ. ಬ್ಲೂಫಿನ್ ಟೂನಾ ಮೀನನ್ನು ಪ್ರಪಂಚದಾದ್ಯಂತದ ಉನ್ನತ ದರ್ಜೆಯ ರೆಸ್ಟೋರೆಂಟ್ಗಳಲ್ಲಿ ಖಾದ್ಯವಾಗಿ ತಯಾರಿಸುತ್ತಿರುವುದರಿಂದ ಈ ಮೀನುಗಳಿಗೆ ಭಾರಿ ಬೇಡಿಕೆ ಇದೆ.
ಈ ಬೇಡಿಕೆಯ ಪೂರೈಕೆಯಿಂದಲೂ ಸಹ ಮೀನುಗಳ ಸಂತತಿ ಕಡಿಮೆಯಾಗುತ್ತಿದೆ. ಜಪಾನ್ನಿಂದ ಬ್ಲೂಫಿನ್ ಟೂನಾವನ್ನು ಖರೀದಿಸಲು ಅಮೇರಿಕನ್ ಮಂದಿ ನೂರಾರು ಡಾಲರ್ಗಳನ್ನು ವ್ಯಯಿಸುತ್ತಾರೆ. ಈ ಎಲ್ಲಾ ಕಾರಣಗಳಿಂದ ಈ ಮೀನುಗಳು ಮಾರುಕಟ್ಟೆಯಲ್ಲಿ ದುಬಾರಿಯಾಗಿವೆ.
ಈ ವರ್ಷದ ಮೊದಲ ಮೀನಿಗೆ ಸಿಕ್ತು ಎರಡು ಕೋಟಿ ರೂಪಾಯಿ
ಉತ್ತರ ಅಮೆರಿಕಾದ ಒಮಾಹಾ ಸಮುದ್ರದಲ್ಲಿ ಮೀನುಗಾರರ ಬಲೆಯಲ್ಲಿ ಬೃಹತ್ ಬ್ಲೂಫಿನ್ ಮೀನು ಇತ್ತೀಚೆಗೆ ಸಿಕ್ಕಿದ್ದು, 212 ಕೆಜಿ ಇರುವ ಮೀನು ಬರೋಬ್ಬರಿ 2 ಕೋಟಿಗೆ ಹರಾಜಾಗಿದೆ.
ಒಮಾಹಾದಿಂದ ಬರುವ ಟೂನಾ ಮೀನುಗಳನ್ನು ವಿಶ್ವದಲ್ಲೇ ಅತ್ಯುತ್ತಮವೆಂದು ಪರಿಗಣಿಸಲಾಗಿದ್ದು, ಇವುಗಳನ್ನು 'ಕಪ್ಪು ವಜ್ರಗಳು' ಎಂದು ಸಹ ಕರೆಯಲಾಗುತ್ತದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ಲೂ ಫಿನ್ ಟೂನಾ ಮೀನುಗಳಿಗೆ ಭಾರೀ ಬೇಡಿಕೆ ಇದೆ. ಈ ಒಂದು ಮೀನಿನ ಬೆಲೆ ಜಪಾನ್ ನಲ್ಲಿ ಎರಡು ಕೋಟಿ ರೂಪಾಯಿ ಆಗಿದೆ.
ಈ ಮೀನಿಗೆ ಏಕಿಷ್ಟು ಬೆಲೆ?
ಒಮಾಹಾದಲ್ಲಿ ಸಿಗುವ ಮೀನು ಇದಕ್ಕಿಂತ ಸರಾಸರಿ ದೊಡ್ಡದಾಗಿರುತ್ತವೆ. ಆದರೆ ಹೊಸ ವರ್ಷದ ದಿನದ ಹಿಂದೆ ಸಿಕ್ಕ ಮೀನು ಅಷ್ಟು ಕೆಜಿ ತೂಗದಿದ್ದರೂ ಸಹ ಮೀನನ್ನು ಕೊಳ್ಳಲು ಖರೀದಿದಾರರು ಮುಗಿಬಿದ್ದಿದ್ದರು.
ಅದರಲ್ಲೂ ಜಪಾನ್ ಜನ ಈ ಮೀನನ್ನು ವರ್ಷಪೂರ್ತಿ ಸಂಗ್ರಹಿಸಿಟ್ಟುಕೊಳ್ಳಲು ಎದುರು ನೋಡುತ್ತಿರುತ್ತಾರೆ. ಹಾಗಿದ್ದಲ್ಲಿ ಇಷ್ಟು ದೊಡ್ಡ ಮೀನು ಸಿಕ್ಕಿರುವಾಗ ಎಷ್ಟು ಬೇಕಾದರೂ ಪಾವತಿಸಿ ತೆಗೆದುಕೊಳ್ಳುವ ಬಗ್ಗೆ ಯೋಚಿಸುತ್ತಾರೆ.
ಹೀಗಾಗಿ ಜಪಾನ್ನಲ್ಲಿ ವರ್ಷದಲ್ಲಿ ಸಿಗುವ ಮೊದಲ ಮೀನು ಭಾರಿ ಬೆಲೆಗೆ ಮಾರಾಟವಾಗುತ್ತದೆ. ಕೆಲವು ಕಂಪನಿಗಳು ತಮ್ಮ ಬ್ರ್ಯಾಂಡ್ ಅನ್ನು ಪ್ರಚಾರ ಮಾಡಲು ಸಹ ಹೆಚ್ಚಿನ ಹಣ ನೀಡಿ ಮೀನನ್ನು ಖರೀದಿಸುತ್ತಾರೆ.
ಈ ಹಿಂದೆಯೂ ಕೋಟಿ ಕೋಟಿ ಬೆಲೆಗೆ ಸೇಲ್ ಆಗಿದೆ ಬ್ಲೂಫಿನ್ ಟೂನಾ ಮೀನು
ಈ ಹಿಂದೆ ಕೂಡ ಈ ಬ್ಲೂಫಿನ್ ಟೂನಾ ಮೀನು ಇದಕ್ಕಿಂತ ಹೆಚ್ಚಿನ ಬೆಲೆಯಲ್ಲಿ ಮಾರಾಟವಾಗಿದೆ. 2019 ರಲ್ಲಿ 'ಟೂನಾ ಕಿಂಗ್' ಎಂದು ಕರೆಯಲ್ಪಡುವ ಸುಶಿ ಚೈನ್ ಮಾಲೀಕ ಕಿಯೋಶಿ ಕಿಮುರಾ ಅವರು ಮೀನಿಗಾಗಿ 2.4 ಕೋಟಿ ರೂ. ಪಾವತಿಸಿದ್ದರು.
2018 ರಲ್ಲಿ, ಆ ವರ್ಷದ ಮೊದಲ ಟೂನಾ ಮೀನು 2.6 ಕೋಟಿಗೆ ಮಾರಾಟವಾಗಿತ್ತು. ಇನ್ನೂ ದುಬಾರಿ ಅಂದರೆ 2013ರಲ್ಲಿ 220 ಕಿಲೋ ತೂಕದ ಮೀನು 14 ಕೋಟಿ ರೂ.ಗೆ ಮಾರಾಟವಾಗಿತ್ತು.
ಈ ವರ್ಷದ ಮೊದಲ ಟೂನಾ ಮೀನನ್ನು ಜಪಾನ್ನಲ್ಲಿ ಸುಶಿ ರೆಸ್ಟೋರೆಂಟ್ಗಳನ್ನು ನಡೆಸುತ್ತಿರುವ ಒನೊಡೆರಾ ಗ್ರೂಪ್ 2 ಕೋಟಿ 20 ಲಕ್ಷ ರೂಪಾಯಿಗಳಿಗೆ ಸ್ವಾಧೀನಪಡಿಸಿಕೊಂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ