ಪಾಟ್ನಾ: ಮೊನ್ನೆ ನಾವು ಸಾಮಾಜಿಕ ಮಾಧ್ಯಮದಲ್ಲಿ (Social Media) ತುಂಬಾನೇ ವೈರಲ್ ಆಗಿರುವ ಒಂದು ಪೋಸ್ಟ್ ನೋಡಿದ್ದೆವು. ಅದರಲ್ಲಿ ಒಬ್ಬ ವರ (Groom) ಮದುವೆ ನಡೆಯುವ ಸಂದರ್ಭದಲ್ಲಿ ಪರೀಕ್ಷಾ ಕೇಂದ್ರಕ್ಕೆ (Exam Centre) ಹೋಗಿ ಪರೀಕ್ಷೆ ಬರೆದು ಬಂದಿರುವ ಘಟನೆ ಬಗ್ಗೆ ಇತ್ತು.ಆ ವರ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿದ್ದರೆ, ವಧು (Bride) ಮತ್ತು ಆಕೆಯ ಪೋಷಕರು ಪರೀಕ್ಷಾ ಕೇಂದ್ರದ ಹೊರಗೆ ವರನು ಪರೀಕ್ಷೆ ಬರೆದು ಮುಗಿಸಿ ಹೊರ ಬರುವುದನ್ನು ಕಾಯುತ್ತಾ ನಿಂತಿದ್ದರು. ಇಷ್ಟೇ ಅಲ್ಲದೆ ಎಷ್ಟೋ ವಯಸ್ಸಿಗೆ ಬಂದ ಹುಡುಗಿಯರಿಗೆ ಮದುವೆ ಮಾಡಿಸುವ ಮೂಲಕ ಅವರ ಪೋಷಕರು ಅವರ ಶಿಕ್ಷಣಕ್ಕೆ ಬ್ರೇಕ್ ಹಾಕಿದರೆ, ಮದುವೆಯಾದ ನಂತರ ಮತ್ತು ಮಕ್ಕಳಾದ ನಂತರ ಸಹ ಅನೇಕರು ತಮ್ಮ ಶಿಕ್ಷಣವನ್ನು (Education) ಮುಂದುವರೆಸಿ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು (Graduate And Post Graduate) ಪಾಸ್ ಮಾಡಿ ಕೆಲಸ ಗಿಟ್ಟಿಸಿಕೊಂಡ ಅನೇಕ ಉದಾಹರಣೆಗಳು ನಮ್ಮಲ್ಲಿವೆ ಅಂತ ಹೇಳಬಹುದು.
ಒಟ್ಟಿನಲ್ಲಿ ಹೇಳುವುದಾದರೆ ಶಿಕ್ಷಣವು ಈಗಿನ ದಿನಗಳಲ್ಲಿ ತುಂಬಾನೇ ಮುಖ್ಯವಾಗಿದೆ ಅಂತ ಹೇಳಬಹುದು. ಇಲ್ಲಿಯೂ ಸಹ ಇನ್ನೊಂದು ಇಂತಹದೇ ಘಟನೆ ಬೆಳಕಿಗೆ ಬಂದಿದೆ ನೋಡಿ.
ಮಗುವಿಗೆ ಜನ್ಮ ನೀಡಿದ ಕೆಲವು ಗಂಟೆಗಳ ನಂತರ ಪರೀಕ್ಷೆ ಬರೆದ ತಾಯಿ
ಹತ್ತನೇ ತರಗತಿ ಬೋರ್ಡ್ ಪರೀಕ್ಷೆ ಬರೆಯುವುದು ಎಷ್ಟು ಕಷ್ಟದ ಕೆಲಸ ಅಂತ 22 ವರ್ಷದ ರುಕ್ಮಿಣಿ ಕುಮಾರಿಯನ್ನು ನೀವು ಕೇಳಿದರೆ ಅದು ಸರಿಯಾಗಿ ಗೊತ್ತಾಗುತ್ತದೆ.
ಏಕೆಂದರೆ ಒಂದು ಕಡೆ ಪರೀಕ್ಷೆಗೆ ವರ್ಷ ಪೂರ್ತಿ ಓದಿದ್ದನ್ನು ನೆನಪು ಮಾಡಿಕೊಂಡು ಪ್ರಶ್ನೆ ಪತ್ರಿಕೆಯಲ್ಲಿರುವ ಪ್ರಶ್ನೆಗಳಿಗೆ ಉತ್ತರ ಬರೆಯುವುದು ಮತ್ತು ಇನ್ನೊಂದು ಕಡೆ ಮೂರು ಗಂಟೆಗಳ ಹಿಂದೆ ಮಗುವಿಗೆ ಜನ್ಮ ನೀಡಿದ ಆ ಹೆರಿಗೆ ನೋವು.
ಹೌದು.. ನೀವು ಸರಿಯಾಗಿಯೇ ಓದಿದ್ದೀರಿ.. ಪರೀಕ್ಷಾ ಹಾಲ್ ಗೆ ಬಂದು ವಿಜ್ಞಾನ ವಿಷಯದ ಪರೀಕ್ಷೆಯನ್ನು ಬರೆದು ಮತ್ತೆ ಆಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಹೋಗಿದ್ದಾರೆ ಎಂದು ವರದಿಯಾಗಿದೆ.
ಬಿಹಾರದ ಬಂಕಾ ಜಿಲ್ಲೆಯ ರುಕ್ಮಿಣಿ ತನ್ನ ಶಿಕ್ಷಣವನ್ನು ಪೂರ್ಣಗೊಳಿಸಲು ಮತ್ತು ಉತ್ತಮ ಉದ್ಯೋಗವನ್ನು ಪಡೆಯಲು ಬಯಸಿದ್ದರಿಂದ ತಮ್ಮ ಹೆರಿಗೆಯಾದ ಕೆಲವೇ ಗಂಟೆಗಳಲ್ಲಿ ಹೆರಿಗೆಯ ನೋವು ಇದ್ದರೂ ಸಹ ಪರೀಕ್ಷಾ ಹಾಲ್ ಗೆ ಹೋಗಿ ಪರೀಕ್ಷೆಯನ್ನು ಬರೆದು ಬಂದಿದ್ದಾರೆ.
ಹೆರಿಗೆ ಆಗುವ ಹಿಂದಿನ ದಿನ ಗಣಿತ ಪರೀಕ್ಷೆಯನ್ನು ಬರೆದಿದ್ದರಂತೆ ರುಕ್ಮಿಣಿ
ಮಂಗಳವಾರ ಬಿಹಾರ ಮಂಡಳಿಯ ಗಣಿತ ಪರೀಕ್ಷೆಯನ್ನು ತೆಗೆದುಕೊಂಡಿದ್ದರು ಮತ್ತು ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿತು. ಆದರೆ ಅವರು ಮರುದಿನ ತನ್ನ ಪರೀಕ್ಷೆಯನ್ನು ಬರೆಯಲು ನಿರ್ಧರಿಸಿ ಬೆಳಿಗ್ಗೆ ಹೆರಿಗೆಗೂ ಮುಂಚೆ ಪರೀಕ್ಷಾ ಕೊಠಡಿಗೆ ಬಂದಿದ್ದರು.
ರಾತ್ರಿ ಹೆರಿಗೆ ನೋವು ಪ್ರಾರಂಭವಾದಾಗ, ಮರುದಿನ ವಿಜ್ಞಾನ ಪರೀಕ್ಷೆ ತೆಗೆದುಕೊಳ್ಳುವ ನಿರ್ಧಾರದ ಬಗ್ಗೆ ರುಕ್ಮಿಣಿ ತನ್ನ ಕುಟುಂಬ ಮತ್ತು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ಹೆರಿಗೆ ನೋವು ಅಸಹನೀಯವಾಗುತ್ತಿದ್ದಂತೆ, ಅವಳು ಅಧಿಕಾರಿಗಳಿಗೆ ತಿಳಿಸಿದಳು. ತಕ್ಷಣ ರುಕ್ಮಿಣಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಾರ್ಮಲ್ ಡೆಲಿವರಿ ಮೂಲಕ ಆರೋಗ್ಯವಂತ ಗಂಡು ಮಗುವಿಗೆ ಜನ್ಮ ನೀಡಿದ ನಂತರ, ರುಕ್ಮಿಣಿ ಆರೋಗ್ಯ ಮತ್ತು ಶಿಕ್ಷಣ ಅಧಿಕಾರಿಗಳನ್ನು ಪರೀಕ್ಷೆಗೆ ಕುಳಿತುಕೊಳ್ಳಲು ಅವಕಾಶ ನೀಡುವಂತೆ ವಿನಂತಿಸಿಕೊಂಡಳು. ವಿದ್ಯಾರ್ಥಿನಿಯ ಮನವಿಗೆ ಒಪ್ಪಿದ ಅಧಿಕಾರಿಗಳು ತರಾತುರಿಯಲ್ಲಿ ಮಂಜೂರು ಮಾಡಿದರು.
ರುಕ್ಮಿಣಿ ಅನೇಕ ಮಹಿಳೆಯರಿಗೆ ಉದಾಹರಣೆಯಾಗಿದ್ದಾರೆ ಎಂದ ಶಿಕ್ಷಣ ಅಧಿಕಾರಿ
ಬಂಕಾದ ಕಟೋರಿಯಾ ಬ್ಲಾಕ್ ನಲ್ಲಿರುವ ಅಂಬೇಡ್ಕರ್ ರೆಸಿಡೆನ್ಷಿಯಲ್ ಹೈಸ್ಕೂಲ್ ನ ವಿದ್ಯಾರ್ಥಿನಿಯಾಗಿರುವ ರುಕ್ಮಿಣಿ ಅವರ ಪರೀಕ್ಷಾ ಕೇಂದ್ರ ಸ್ಥಳೀಯ ಎಂಎಂಕೆಜಿ ಇಂಟರ್ ಕಾಲೇಜಿನಲ್ಲಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿದ ಆಸ್ಪತ್ರೆಯ ಡಾ.ಭೋಲಾನಾಥ್ ನಮಗೆ ತುರ್ತು ಕರೆ ಬರುತ್ತಿದ್ದಂತೆ ಹೆರಿಗೆ ಕೊಠಡಿಯನ್ನು ಸಿದ್ಧಪಡಿಸಿದ್ದೆವು ಎಂದು ತಿಳಿಸಿದರು.
ಬಂಕಾ ಶಿಕ್ಷಣ ಅಧಿಕಾರಿ ಪವನ್ ಕುಮಾರ್ ಮಾತನಾಡಿ, ಇಂತಹ ಕಷ್ಟದ ಸಮಯದಲ್ಲೂ ಶಿಕ್ಷಣದ ಮಹತ್ವದ ಬಗ್ಗೆ ಅರಿತಿರುವ ರುಕ್ಮಿಣಿ ಅವರು ಅನೇಕ ಮಹಿಳೆಯರಿಗೆ ಉದಾಹರಣೆ ಆಗಿದ್ದಾರೆ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ