• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • ವಿಶ್ವವಿಖ್ಯಾತ ಚನ್ನಪಟ್ಟಣದ ಗೊಂಬೆಗಳು ಈಗ ಹೈ-ಫೈ, ಇವುಗಳೊಳಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಳವಡಿಸಿದ ಬೆಂಗಳೂರಿನ ಸಂಸ್ಥೆ !

ವಿಶ್ವವಿಖ್ಯಾತ ಚನ್ನಪಟ್ಟಣದ ಗೊಂಬೆಗಳು ಈಗ ಹೈ-ಫೈ, ಇವುಗಳೊಳಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಳವಡಿಸಿದ ಬೆಂಗಳೂರಿನ ಸಂಸ್ಥೆ !

ಎಲೆಕ್ಟ್ರಾನಿಕ್ಸ್​ ಅಳವಡಿಸಿರುವ ಚನ್ನಪಟ್ಟಣದ ಗೊಂಬೆಗಳು

ಎಲೆಕ್ಟ್ರಾನಿಕ್ಸ್​ ಅಳವಡಿಸಿರುವ ಚನ್ನಪಟ್ಟಣದ ಗೊಂಬೆಗಳು

ಶತಮಾನಗಳಿಂದ ಒಂದೇ ಬಗೆಯಲ್ಲಿ ತಯಾರಾಗ್ತಿರೋ ಚನ್ನಪಟ್ಟಣದ ಗೊಂಬೆಗಳು ಇದೇ ಮೊದಲ ಬಾರಿಗೆ ಹೈ ಟೆಕ್ ಸ್ಪರ್ಶ ಪಡೆದುಕೊಳ್ತಿವೆ. ಮಾರುಕಟ್ಟೆಯಲ್ಲಿ ಸದ್ಯ ಲಭ್ಯವಿರುವ ಯಾವುದೇ ವಿದೇಶೀ ಆಟಿಕೆಗಳಿಗೆ ಸ್ಪರ್ಧೆಯೊಡ್ಡುವಷ್ಟರಮಟ್ಟಿಗೆ ಇವು ಬದಲಾಗ್ತಿವೆ. ಚನ್ನಪಟ್ಟಣದ ಗೊಂಬೆಗಳಿಗೆ ಈಗ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸಹಾಯ ಸಿಕ್ಕಿದೆ.

ಮುಂದೆ ಓದಿ ...
  • Share this:

ಬೆಂಗಳೂರು (ಏಪ್ರಿಲ್ 06): ಚನ್ನಪಟ್ಟಣದ ಮರದ ಗೊಂಬೆಗಳು ಎಲ್ರಿಗೂ ಚಿರಪರಿಚಿತ. ಶತಮಾನಗಳಿಂದ ಜನರನ್ನು ಮನಸ್ಸನ್ನು ಗೆದ್ದಿರುವ ಚನ್ನಪಟ್ಟಣದ ಗೊಂಬೆಗಳು ಅಂದಿನಿಂದ ಇಂದಿನವರೆಗೂ ಒಂದೇ ರೀತಿ ಇವೆ. ಸಾಂಪ್ರದಾಯಿಕವಾಗಿ ಹಾಲೆ ಮರಗಳನ್ನು ಬಳಸಿ ಈ ಗೊಂಬೆಗಳನ್ನು ಮಾಡುತ್ತಿದ್ರು. ಆದ್ರೆ ಇತ್ತೀಚೆಗೆ ಲಭ್ಯವಿರುವ ನಾನಾ ಬಗೆಯ ಮರಗಳನ್ನು ಬಳಸಲಾಗುತ್ತದೆ. ಇವುಗಳಿಗೆ ಬಳಸುವ ಬಣ್ಣಗಳಲ್ಲಿ ಹಾನಿಕಾರಕ ರಾಸಾಯನಿಕಗಳು ಇಲ್ಲದೇ ಇರುವುದರಿಂದ ಮಕ್ಕಳಿಗೆ ನಿಶ್ಚಿಂತೆಯಿಂದ ಆಡಲು ನೀಡಬಹುದು ಎನ್ನುವುದು ಇವುಗಳ ಮತ್ತೊಂದು ವಿಶಿಷ್ಟತೆ.


ಶತಮಾನಗಳಿಂದ ಒಂದೇ ಬಗೆಯಲ್ಲಿ ತಯಾರಾಗ್ತಿರೋ ಚನ್ನಪಟ್ಟಣದ ಗೊಂಬೆಗಳು ಇದೇ ಮೊದಲ ಬಾರಿಗೆ ಹೈ ಟೆಕ್ ಸ್ಪರ್ಶ ಪಡೆದುಕೊಳ್ತಿವೆ. ಮಾರುಕಟ್ಟೆಯಲ್ಲಿ ಸದ್ಯ ಲಭ್ಯವಿರುವ ಯಾವುದೇ ವಿದೇಶೀ ಆಟಿಕೆಗಳಿಗೆ ಸ್ಪರ್ಧೆಯೊಡ್ಡುವಷ್ಟರಮಟ್ಟಿಗೆ ಇವು ಬದಲಾಗ್ತಿವೆ. ಚನ್ನಪಟ್ಟಣದ ಗೊಂಬೆಗಳಿಗೆ ಈಗ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸಹಾಯ ಸಿಕ್ಕಿದೆ.


ಉದಾರಣೆಗೆ ರೈಲಿನ ಮರದ ಗೊಂಬೆಯನ್ನೇ ತೆಗೆದುಕೊಳ್ಳೋಣ. ಈ ರೈಲು ಸ್ವಲ್ಪ ಸ್ಪೆಷಲ್. ಮರದ ಈ ಪುಟಾಣಿ ರೈಲಿನೊಳಗೆ ಒಂದು ಪುಟ್ಟ ಎಲೆಕ್ಟ್ರಾನಿಕ್ ಡಿವೈಸ್ ಅಳವಡಿಸಲಾಗಿದೆ. ಅದರಲ್ಲಿರೋ ಸ್ವಿಚ್ ಆನ್ ಮಾಡಿದ್ರೆ ಮೇಲೊಂದು ದೀಪ ಹೊತ್ತಿಕೊಂಡು ಥೇಟ್ ರೈಲು ಓಡುವ ಚುಕುಬುಕು ಸದ್ದು ಕೇಳುತ್ತೆ. ಇದೇ ರೀತಿ ಪ್ರಾಣಿಗಳಿಗೂ ಅವುಗಳ ಕೂಗನ್ನು ಹೋಲುವ ದನಿಯನ್ನು ಹೊರಡಿಸೋ ಡಿವೈಸ್ ಗಳನ್ನು ಅಳವಡಿಸಲಾಗಿದೆ.


ಇದೆಲ್ಲಾ ಶುರುವಾದದ್ದು ಈಗೊಂದೆರಡು ವರ್ಷಗಳ ಹಿಂದೆ ಗೆಳೆಯರ ಗುಂಪೊಂದು ಚನ್ನಪಟ್ಟಣಕ್ಕೆ ತೆರಳಿದ್ದಾಗ. ಅಲ್ಲೇ ತಯಾರಾಗುವ ಗೊಂಬೆಗಳನ್ನು ಮಾರುವ ನೂರಾರು ಅಂಗಡಿಗಳ ಸಾಲು ಚನ್ನಪಟ್ಟಣದಲ್ಲಿದೆ. ಆ ಅಂಗಡಿಗಳಲ್ಲಿ ಚೈನಾ ಗೊಂಬೆಗಳನ್ನು ನೋಡಿ ಈ ಎಲೆಕ್ಟ್ರಾನಿಕ್ ಡಿಸೈನರ್ಗಳಿಗೆ ಭಾರೀ ಬೇಸರವಾಗಿತ್ತು. ಅದರ ಬಗ್ಗೆ ಅಂಗಡಿಯವನ್ನು ಕೇಳಿದಾಗ, “ಚೈನಾ ಗೊಂಬೆಗಳು ಹಾಡುತ್ತವೆ, ಮಕ್ಕಳಿಗೆ ಇಷ್ಟವಾದ ರೈಮ್ಸ್ ನುಡಿಸುತ್ತವೆ ಎಂದು ಜನರೆಲ್ಲಾ ಅವನ್ನೇ ಇಷ್ಟಪಡುತ್ತಾರೆ, ಜೊತೆಗೆ ಬೆಲೆಯೂ ಕಡಿಮೆ…ಹಾಗಾಗಿ ನಮಗೆ ಲಾಭ ಹೆಚ್ಚು​” ಎಂದು ಹೇಳಿದ್ದಾರೆ. ಅದನ್ನು ಕೇಳಿ ಮರಳಿದ ಎಂಬೆಡೆಸ್ ಇಂಜಿನಿಯರಿಂಗ್ ಸೊಲ್ಯೂಶನ್ಸ್ (e2-s) ತಾವೇ ಇದಕ್ಕೊಂದು ಉಪಾಯ ಕಂಡುಹಿಡಿಯೋಕೆ ನಿರ್ಧರಿಸಿದ್ರು.


ಇಲ್ಲಿನ ಗೊಂಬೆ ತಯಾರಕರು ಶತಮಾನಗಳಿಂದ ಒಂದೇ ಬಗೆಯ ಗೊಂಬೆ ತಯಾರಿಸ್ತಿದ್ದಾರೆ. ಇವುಗಳಿಗೆ ಸ್ವಲ್ಪ ವಿಭಿನ್ನ ರೂಪ ಕೊಡುವ ಆಲೋಚನೆ ಮಾಡಿತು ಈ ತಂಡ. ಹಾಗಂತ ಇದೇನು ಭಾರೀ ಸುಲಭದ ಕೆಲಸ ಎಂದುಕೊಳ್ಳಬೇಡಿ. ಚನ್ನಪಟ್ಟಣದ ಗೊಂಬೆಗಳಿಗೆ ಅದೆಷ್ಟು ಬೇಡಿಕೆ ಇರುತ್ತದೆ ಎಂದರೆ ಗೊಂಬೆ ತಯಾರಿಕರಿಗೆ ಸ್ವಲ್ಪವೂ ಬಿಡುವು ಇರೋದಿಲ್ಲ. ಸಮಯ ಸಾಲೋದಿಲ್ಲ ಎಂದು ಅನೇಕ ಬಾರಿ ಆರ್ಡರ್​​ಗಳನ್ನು ಅವರು ಒಪ್ಪಿಕೊಳ್ಳುವುದೇ ಇಲ್ಲ. ಅಷ್ಟರಮಟ್ಟಿಗೆ ಅವರದ್ದು ನಿರಂತರ ಕೆಲಸ. ಇಷ್ಟರ ನಡುವೆ ಅವರ ಮನವೊಲಿಸಿ, ಎಲೆಕ್ಟ್ರಾನಿಕ್ ಡಿವೈಸ್​​ಗಳನ್ನು ಅಳವಡಿಸೋಕೆ ಅಗತ್ಯ ಬದಲಾವಣೆಗಳನ್ನು ಮಾಡಿಕೊಂಡುವಂತೆ ಒಪ್ಪಿಸುವುದು ಸುಲಭದ ವಿಚಾರ ಆಗಿರಲಿಲ್ಲ ಎನ್ನುತ್ತಾರೆ ಎಂಬೆಡೆಸ್ ಇಂಜಿನಿಯರಿಂಗ್ ಸೊಲ್ಯೂಶನ್​ನ ವ್ಯವಸ್ಥಾಪಕ ನಿರ್ದೇಶಕ ವಿಜಯ್ ಆನಂದ್.


ತಯಾರಕರ ಬಳಿ ತಮ್ಮ ಡಿವೈಸ್ ಫಿಟ್ ಮಾಡೋಕೆ ಅಗತ್ಯವಾದ ಕಟ್ ಗಳನ್ನು ಮಾಡಿಸಿಕೊಂಡು ಅದರೊಳಗೆ ಯಶಸ್ವಿಯಾಗಿ ಅಳವಡಿಸಿ ಅವರಿಗೇ ತೋರಿಸಿದ್ದಾರೆ. ಇದನ್ನು ನೋಡಿ ಖುಷಿಪಟ್ಟ ಕೆಲವು ಗೊಂಬೆ ತಯಾರಕರು ತಮಗೂ ಒಂದಷ್ಟು ಮಾದರಿಗಳನ್ನು ಮಾರಾಟ ಮಾಡಲು ನೀಡುವಂತೆ ಕೇಳಿಕೊಂಡಿದ್ದಾರೆ. ಈಗಂತೂ ಚೈನಾ ವಸ್ತುಗಳ ಆಮದಿನ ಮೇಲೆ ನಿಷೇಧವಿದೆ. ದೇಸೀ ಕೈಗಾರಿಕೆಗೆ ಉತ್ತೇಜನ ಸಿಗುವ ವಾತಾವರಣವಿದೆ. ಇಂಥಾ ಸಂದರ್ಭದಲ್ಲಿ ಹೀಗೆ ಸಂಪೂರ್ಣವಾಗಿ ನಮ್ಮ ನೆಲದಲ್ಲೇ ತಯಾರಾದ ಅಂತಾರಾಷ್ಟ್ರೀಯ ಗುಣಮಟ್ಟದ ಈ ಗೊಂಬೆಗಳು ಚನ್ನಪಟ್ಟಣದ ಕಲಾವಿದರಿಗೆ ಹೊಸಾ ಮಾರುಕಟ್ಟೆಯನ್ನೇ ಸೃಷ್ಟಿಸಿಕೊಡುವ ಸಾಧ್ಯತೆಯಿದೆ. ಟಿಪ್ಪು ಸುಲ್ತಾನನ ಕಾಲದಲ್ಲಿ ಜನ್ಮತಾಳಿದ ಚನ್ನಪಟ್ಟಣದ ಮರದ ಗೊಂಬೆಗಳು ಈಗ ಸೈಬರ್ ಯುಗದಲ್ಲಿ ಹೊಸಾ ರೂಪ ಪಡೆದುಕೊಂಡಿವೆ.

First published: