Breast Milk- Umbilical Cordನಲ್ಲಿ ಆಭರಣ ತಯಾರಿಸುವ ಬೆಂಗಳೂರಿನ ಮಹಿಳೆ

ಮಗುವಿನೊಂದಿಗಿನ ಪ್ರತಿಯೊಂದು ನೆನಪುಗಳನ್ನು ಅವಿಸ್ಮರಣೀಯವನ್ನಾಗಿಸುವುದಕ್ಕಾಗಿ ನಮಿತಾ ಹೊಕ್ಕುಳಬಳ್ಳಿ, ಹಾಲು ಹಲ್ಲುಗಳು, ಮಗುವಿನ ಎಳೆಯ ಉಗುರು ಹಾಗೂ ಕೂದಲಿನಿಂದ ಬೇರೆ ಬೇರೆ ಆಕರ್ಷಕ ಆಭರಣಗಳನ್ನು ತಯಾರಿಸಿ ಪೆಂಡೆಂಟ್‌ಗಳ ರೂಪದಲ್ಲಿ ಇಲ್ಲವೇ ಸ್ಮಾರಕಗಳ ರೂಪದಲ್ಲಿ ಕುಟುಂಬದವರಿಗೆ ತಯಾರಿಸಿಕೊಡುತ್ತಾರೆ.

ನಮಿತಾ ನವೀನ್ ಮಾಡಿರುವ ಕೀ ಚೈನ್​

ನಮಿತಾ ನವೀನ್ ಮಾಡಿರುವ ಕೀ ಚೈನ್​

  • Share this:
ಮಾತೃತ್ವ ಎನ್ನುವುದೇ ತಾಯಿ ಹಾಗೂ ಮಗುವಿನ ನಡುವೆ ಅವಿನಾಭಾವ ಸಂಬಂಧ ಏರ್ಪಡಿಸುತ್ತದೆ. ಜೊತೆಗೆ ಮಗುವಿನ ಆಗಮನ ಕುಟುಂಬಕ್ಕೆ ಹೊಸ ಉತ್ಸಾಹ, ಹರ್ಷವನ್ನು ನೀಡುತ್ತದೆ. ಅದೆಷ್ಟೋ ಕುಟುಂಬಗಳು ಮಗುವಿನ ಆಗಮನವನ್ನು ಸ್ಮರಣೀಯವನ್ನಾಗಿ ಮಾಡಲು ಬೇರೆ ಬೇರೆ ಚಟುವಟಿಕೆಗಳನ್ನು ನಡೆಸುತ್ತಾರೆ. ಮಗುವಿನ ಕೈ ಕಾಲುಗಳ ಪ್ರತಿ ತೆಗೆದು ಅದನ್ನು ಫ್ರೇಮ್ ಮಾಡುವುದು, ನವಜಾತ ಕಂದಮ್ಮನಿಂದ (New Born Baby) ಹಿಡಿದು ಅದರ ಪ್ರತಿಯೊಂದು ಚಲನವಲನಗಳನ್ನು ಫೋಟೋಗಳಲ್ಲಿ ಸೆರೆಹಿಡಿಯುವುದು ಹೀಗೆ ತಂದೆ ತಾಯಂದಿರು, ಕುಟುಂಬಸ್ಥರು ಮಗುವಿನ ಪ್ರತಿಯೊಂದು ಕ್ಷಣಗಳನ್ನು ತಮ್ಮ ಜೀವನದಲ್ಲಿ ಅವಿಸ್ಮರಣೀಯವನ್ನಾಗಿಸಲು ಹಲವಾರು ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ.

ಇಂದಿನ ಆಧುನಿಕ ಯುಗದಲ್ಲಿ ಹೊಸ ಹೊಸ ನವೀಕರಣ ಸರ್ವೇ ಸಾಮಾನ್ಯವಾದುದು. ಇದೇ ರೀತಿ ಮಗುವಿನೊಂದಿಗಿನ ಅತ್ಯಪೂರ್ಣ ಕ್ಷಣಗಳನ್ನು ಹಿಡಿದಿಡಲು ಹೊಸ ಹೊಸ ಪ್ರಯೋಗಗಳನ್ನು ನಡೆಸಲಾಗುತ್ತಿದೆ ಎಂದೂ ಹೇಳಬಹುದು. ಮಗುವಿನ ಆಗಮನ ಅತ್ಯಂತ ಖುಷಿ ನೀಡುವುದು ಆ ಮಗುವಿನ ತಾಯಿಗೆ. 9 ತಿಂಗಳು ತನ್ನ ಒಡಲಿನಲ್ಲಿ ತನ್ನ ಕರುಳಬಳ್ಳಿ ಹೊತ್ತು ಹೆತ್ತು ತನ್ನ ಜೀವ ನೀಡಿ ಭೂಮಿಗೆ ತರುತ್ತಾಳೆ.




ಹೀಗಾಗಿಯೇ ಮಗುವಿಗೆ ತಾಯಿ ಹಾಗೂ ತಾಯಿಗೆ ಮಗು ಎಂದರೆ ಅದೇನೋ ಅಟ್ಯಾಚ್‌ಮೆಂಟ್ ತುಸು ಹೆಚ್ಚೇ ಇರುತ್ತದೆ. ಬೆಂಗಳೂರಿನ ನಮಿತಾ ನವೀನ್ ತಾಯಿ ಮಗುವಿನ ಬಾಂಧವ್ಯ ಇನ್ನಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಎದೆಹಾಲಿನಿಂದ ತಯಾರಿಸಿದ ಆಭರಣಗಳನ್ನು ರೂಪಿಸುವ ಹೊಸ ಉದ್ಯಮದಲ್ಲಿ ಅದೃಷ್ಟ ಪರೀಕ್ಷಿಸಿಕೊಳ್ಳುತ್ತಿದ್ದಾರೆ.

ಮಗುವಿನೊಂದಿಗಿನ ಪ್ರತಿಯೊಂದು ನೆನಪುಗಳನ್ನು ಅವಿಸ್ಮರಣೀಯವನ್ನಾಗಿಸುವುದಕ್ಕಾಗಿ ನಮಿತಾ ಹೊಕ್ಕುಳಬಳ್ಳಿ, ಹಾಲು ಹಲ್ಲುಗಳು, ಮಗುವಿನ ಎಳೆಯ ಉಗುರು ಹಾಗೂ ಕೂದಲಿನಿಂದ ಬೇರೆ ಬೇರೆ ಆಕರ್ಷಕ ಆಭರಣಗಳನ್ನು ತಯಾರಿಸಿ ಪೆಂಡೆಂಟ್‌ಗಳ ರೂಪದಲ್ಲಿ ಇಲ್ಲವೇ ಸ್ಮಾರಕಗಳ ರೂಪದಲ್ಲಿ ಕುಟುಂಬದವರಿಗೆ ತಯಾರಿಸಿಕೊಡುತ್ತಾರೆ.

ನಮಿತಾ ಯಾವುದರಿಂದ ಆಭರಣಗಳನ್ನು ತಯಾರಿಸುತ್ತಾರೆ?

ನಮಿತಾ ತಮ್ಮ ಮೊದಲನೆಯ ಕಂದಮ್ಮನಿಗೆ ಜನ್ಮನೀಡಿದ ಸಮಯದಲ್ಲೇ ಈ ಯೋಚನೆ ಅವರ ತಲೆಗೆ ಹೊಳೆದಿತ್ತು. ಮಗುವಿಗೆ ಹಾಲುಣಿಸುವುದರಿಂದ ಆರಂಭಿಸಿ ಮಗುವಿನ ಪ್ರತಿಯೊಂದು ಕ್ಷಣಗಳನ್ನು ಅಮೂಲ್ಯವಾಗಿ ಸೆರೆಹಿಡಿಯುವ ನಿಟ್ಟಿನಲ್ಲಿ ಆಕೆ ಆಭರಣಗಳು ಹಾಗೂ ಸ್ಮರಣಿಕೆಗಳ ತಯಾರಿಗೆ ತೊಡಗಿದರು. ನಮಿತಾ ಎದೆಹಾಲಿನಿಂದ ಮಾತ್ರವಲ್ಲದೆ ಹೊಕ್ಕುಳಬಳ್ಳಿ ಮಗುವಿನ ಉಗುರು, ಕೂದಲು, ಹಲ್ಲುಗಳಿಂದ ಕೂಡ ಗ್ರಾಹಕರಿಗೆ ಬೇಕಾದ ರೀತಿಯಲ್ಲಿ ಪೆಂಡೆಂಟ್, ಸ್ಮಾರಕಗಳನ್ನು ತಯಾರಿಸಿ ಕೊಡುತ್ತಾರೆ.

ನಮಿತಾ, ಮಮ್ಮಾಸ್ ಮಿಲ್ಕಿಟೇಲ್ ಜ್ಯುವೆಲ್ಲರಿ ಎಂಬ ಸ್ಥಾಪನೆ ಹುಟ್ಟುಹಾಕಿದ್ದು ಆಕೆಯ ನೆನಪುಗಳನ್ನು ಜೋಪಾನವಾಗಿಸುವ ಉದ್ಯಮ ಹೊಸ ರೂಪದಲ್ಲಿ ಪರಿಚಯಿಸಲ್ಪಟ್ಟಿದೆ. ಸುದ್ದಿಮಾಧ್ಯಮಕ್ಕೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡ ನಮಿತಾ ಹೆಚ್ಚಿನ ತಾಯಂದಿರು ತಮ್ಮ ಮಗುವಿನ ಮೊದಲ ನವಿರಾದ ಉಗುರುಗಳನ್ನು ಜೋಪಾನವಾಗಿ ಪೆಟ್ಟಿಗೆ ಅಥವಾ ಕಾಗದದಲ್ಲಿ ತೆಗೆದಿಡುತ್ತಾರೆ. ಆದರೆ ಎಷ್ಟೋ ಸಲ ಇದು ಕಳೆದುಹೋಗುತ್ತದೆ. ಅದೇ ಉಗುರುಗಳನ್ನು ಪೆಂಡೆಂಟ್, ಉಂಗುರ, ಕಿವಿಯೋಲೆ, ಸ್ಮಾರಕಗಳ ರೂಪದಲ್ಲಿ ನಿಮ್ಮ ಬಳಿ ಇರಿಸಿಕೊಳ್ಳುವುದು ಅತ್ಯಂತ ಸುಂದರ ರೂಪವಾಗಿದೆ. ನಾನು ಹೊಕ್ಕುಳಬಳ್ಳಿ, ಕೂದಲು, ಹಾಲು ಹಲ್ಲುಗಳಿಂದ ಕೂಡ ಇದೇ ರೀತಿಯಾಗಿ ಬೇರೆ ಬೇರೆ ಆಭರಣಗಳು, ಸ್ಮಾರಕಗಳನ್ನು ಕೂಡ ತಯಾರಿಸಿ ನೀಡುತ್ತೇನೆ ಎಂದು ತಿಳಿಸಿದ್ದಾರೆ.

ಗ್ರಾಹಕರ ಮಾತು: ನಮಿತಾರಿಂದ ಆಭರಣ ಮಾಡಿಸಿಕೊಂಡಿರುವ ಸುಧಾ ಆನಂದ್ ಕೂಡ ನಮಿತಾ ಕೈಚಳಕವನ್ನು ಅತಿಯಾಗಿ ಮೆಚ್ಚಿಕೊಂಡಿದ್ದಾರೆ. ತಮ್ಮ ಕಂದನ ಹೊಕ್ಕುಳ ಬಳ್ಳಿ ಹಾಗೂ ಎದೆಹಾಲಿನಿಂದ ಆಭರಣಗಳನ್ನು ತಯಾರಿಸಿ ತಮ್ಮೊಂದಿಗೆ ಜೋಪಾನವಾಗಿ ಇರಿಸಿಕೊಂಡಿರುವುದಾಗಿ ಹೇಳುತ್ತಾರೆ. ತನ್ನ ಮಗುವಿನ 18ನೇ ಹುಟ್ಟುಹಬ್ಬಕ್ಕೆ ಇದನ್ನು ಉಡುಗೊರೆಯಾಗಿ ನೀಡಿ ಮಗುವಿಗೆ ಸೋಜಿಗವನ್ನುಂಟು ಮಾಡಬೇಕು ಎಂಬುದು ಸುಧಾ ಯೋಜನೆಯಾಗಿದೆ.

ಇದನ್ನೂ ಓದಿ: Health Tips: ನೂರ್ಕಾಲ ಆರೋಗ್ಯವಾಗಿ ಬದುಕಲು ಈ 5 ಆಹಾರಗಳನ್ನು ಸೇವಿಸಿ..!

ತಾಯಿಯಾಗುವುದು ನನ್ನ ಹಲವಾರು ವರ್ಷಗಳ ಕನಸಾಗಿತ್ತು. ಹೀಗಾಗಿ ತಾಯ್ತನದ ಮೌಲ್ಯವನ್ನು ನಾನು ಅರಿತಿರುವೆ. ಇದೊಂದು ಬೆಲೆಕಟ್ಟಲಾಗದ ಅಮೂಲ್ಯ ಕ್ಷಣ ಎಂದು ಬಣ್ಣಿಸಿರುವ ಸುಧಾ, ಎಳೆಯ ಕಂದಮ್ಮನ ಪ್ರತಿಯೊಂದು ಸ್ಮರಣೆಗಳನ್ನು ಜೋಪಾನವಾಗಿ ನಮ್ಮ ಬಳಿ ಇರಿಸಿಕೊಳ್ಳುವುದೇ ಜೀವನದ ಅತಿದೊಡ್ಡ ಆನಂದ ಎಂದು ತಿಳಿಸಿದ್ದಾರೆ. ನಮಿತಾ ಕೂಡ ಎಳೆಯ ವಯಸ್ಸಿನಿಂದಲೇ ಕರಕುಶಲ ತಯಾರಿಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಇದೀಗ ಈ ಉದ್ಯೋಗ ಆರಂಭಿಸಿ 5 ವರ್ಷಗಳೇ ಕಳೆದಿದ್ದು ಯುವ ತಾಯಂದಿರೇ ಆಕೆಯ ಗ್ರಾಹಕರಾಗಿದ್ದಾರೆ.

ತಮ್ಮ ಕೆಲಸದ ಬಗ್ಗೆ ಹೆಮ್ಮೆ: ತಮ್ಮ ಆಭರಣಗಳ ತಯಾರಿಯ ನೆನಪುಗಳನ್ನು ಬಿಚ್ಚಿಡುವ ನಮಿತಾ ಇತ್ತೀಚೆಗೆ ಮುಂಬೈಯಲ್ಲಿ ನೆಲೆಸಿರುವ ಪೋಷಕರಿಗೆ ಉಂಗುರ ತಯಾರಿಸಿಕೊಟ್ಟಿರುವುದಾಗಿ ತಿಳಿಸಿದ್ದಾರೆ. ಮಗುವಿನ ಹೊಕ್ಕುಳಬಳ್ಳಿಯಿಂದ ಈ ಉಂಗುರ ತಯಾರಿಸಿರುವುದಾಗಿ ಹೇಳಿರುವ ನಮಿತಾ, ಪೋಷಕರ ಕಣ್ಣಲ್ಲಿ ಆ ಆನಂದ ನೋಡಿ ನಾನು ಮಾಡುತ್ತಿರುವ ಕೆಲಸದ ಬಗ್ಗೆ ನನಗೆ ಹೆಮ್ಮೆಯುಂಟಾಯಿತು ಎಂದು ಹೇಳುತ್ತಾರೆ.

ಪೆಂಡೆಂಟ್, ಆಭರಣ ತಯಾರಿಕೆ ವಿಧಾನ: ಎದೆಹಾಲಿನಿಂದ ಆಭರಣ ಇಲ್ಲವೇ ಸ್ಮಾರಕ ತಯಾರಿಸುವ ಮುನ್ನ ಕೆಲವೊಂದು ಹಂತಗಳನ್ನು ಅನುಸರಿಸಬೇಕಾಗುತ್ತದೆ ಎಂದು ನಮಿತಾ ತಿಳಿಸುತ್ತಾರೆ. ಎದೆಹಾಲನ್ನು 1 ದಿನ ಶೇಖರಿಸಿಡಬೇಕಾಗುತ್ತದೆ, ನಂತರ ರಾಸಾಯನಿಕ ಬಳಸಿಕೊಂಡು ಅದನ್ನು ಗಟ್ಟಿಮಾಡುತ್ತೇವೆ. ನಂತರ ಪೂರ್ತಿಯಾಗಿ ಒಣಗಲು ಅದನ್ನು ಪುನಃ ಪುಡಿ ಪುಡಿ ಮಾಡಲಾಗುತ್ತದೆ. ಈ ಹಂತಗಳು ಅತಿ ಮುಖ್ಯವಾದುದು, ಪ್ರತಿಯೊಂದು ಹಂತವನ್ನು ಅನುಸರಿಸಲೇಬೇಕು, ಇದರಿಂದ ಪ್ರತಿಯೊಂದನ್ನು ಕಸ್ಟಮೈಸ್ ಮಾಡಲು ಸಾಧ್ಯವಾಗುತ್ತದೆ ಎಂದು ನಮಿತಾ ತಿಳಿಸುತ್ತಾರೆ.

ಬೆಲೆ: ನಮಿತಾ ತಯಾರಿಸುವ ಆಭರಣಗಳ ಬೆಲೆ ಚಿನ್ನ ಹಾಗೂ ಬೆಳ್ಳಿಯದ್ದಾದರೆ 1,300 ರೂಗಳಿಂದ 3,500 ರೂಗಳವರೆಗೆ ದೊರೆಯುತ್ತದೆ. ಇನ್ನು ಗ್ರಾಹಕರ ಬೇಡಿಕೆಗಳಿಗೆ ಅನುಗುಣವಾಗಿ ತಯಾರಿಸುವ ವಿನ್ಯಾಸಗಳು, ತೂಕ ಹಾಗೂ ವಿನ್ಯಾಸ ಶುಲ್ಕಗಳನ್ನು ಆಧರಿಸಿ ಬೆಲೆ ನಿರ್ಧರಿಸಲಾಗುತ್ತದೆ ಎಂದು ತಿಳಿಸುತ್ತಾರೆ.

ಪತಿಯ ನೆರವು: ತಮ್ಮ ಪತಿಯ ನೆರವಿನಿಂದ ನಮಿತಾ ಈ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದಾರೆ. ಹೊಕ್ಕುಳಬಳ್ಳಿಯ ಆಭರಣಗಳಿಗೆ ಹೆಚ್ಚಿನ ಬೇಡಿಕೆ ಇದೆ ಎಂದು ತಿಳಿಸುವ ನಮಿತಾ ದೇಶಾದ್ಯಂತ ಹೆಚ್ಚಿನ ಗ್ರಾಹಕರನ್ನು ಹೊಂದಿದ್ದಾರೆ. ಹೊಕ್ಕುಳಬಳ್ಳಿಯನ್ನು ಪುಡಿ ಮಾಡಿ ಅದನ್ನು ಆಭರಣ ಇಲ್ಲವೇ ಪೆಂಡೆಂಟ್ ರೂಪದಲ್ಲಿ ತಯಾರಿಸಲಾಗುತ್ತದೆ. ಗ್ಲಾಸ್‌ಬಾಲ್‌ನಲ್ಲಿ ಹೊಕ್ಕುಳ ಬಳ್ಳಿಯ ತುಂಡನ್ನು ಇರಿಸಿ ಬೇರೆ ಬೇರೆ ವಿನ್ಯಾಸದಲ್ಲಿ ಇದರಿಂದ ಪೆಂಡೆಂಟ್ ಹಾಗೂ ಸ್ಮಾರಕಗಳನ್ನು ನಮಿತಾ ತಯಾರಿಸಿಕೊಡುತ್ತಾರೆ.
Published by:Anitha E
First published: